ವಿವೇಕರ ಕಥಾಲೋಕ-3

ವಿವೇಕರ ಕಥಾಲೋಕ-3

ಬರಹ

ಮೂರನೆಯ ಕಥಾಸಂಕಲನ : ಹುಲಿಸವಾರಿ (1995)

ಹುಲಿಸವಾರಿ ಸಂಕಲನದ ಎಲ್ಲಾ ಕತೆಗಳೂ ವ್ಯಾವಹಾರಿಕ ಆಯಾಮವೊಂದು ಮನುಷ್ಯ ಸಂಬಂಧಗಳ ನಡುವೆ ನುಸುಳುವ, ಎಲ್ಲೋ ಭಾವನಾತ್ಮಕ ಸಂಬಂಧಗಳಿಗಿಂತ ವ್ಯವಹಾರವೇ ಮುಖ್ಯವಾಗುವ, ಸಾಮಾಜಿಕ ಸ್ತರದಲ್ಲಿ ಇದರಿಂದಾಗಿ ಮೌಲ್ಯಗಳು ಕುಸಿಯುವ ಮತ್ತು ಅಂತಿಮವಾಗಿ ಮನುಷ್ಯನೇ ತನ್ನ ಅಂತರಂಗದಲ್ಲಿ ಹೆಚ್ಚು ಹೆಚ್ಚು ಟೊಳ್ಳಾಗುತ್ತ ಹೋಗುವುದರ ಚಿತ್ರಣವಿದೆ. ವಿವೇಕರ ಇದುವರೆಗಿನ ಕಥಾಲೋಕಕ್ಕೆ ಹೋಲಿಸಿದರೆ ಇದು ತೀರಾ ಹೊಸತನ ಮತ್ತು ಹೆಚ್ಚು ಸಮಾಜಮುಖಿಯೂ ಸಮಕಾಲೀನ ವ್ಯಾವಹಾರಿಕ ಜಗತ್ತಿಗೆ ಸ್ಪಂದಿಸುವಂಥದೂ ಆಗಿರುವ ಕತೆಗಳನ್ನು ಹೊಂದಿರುವ ಸಂಕಲನ. ಕಂತು ಮತ್ತು ಜಾಮೀನು ಸಾಹೇಬ ಹಳ್ಳಿಯ ಹಿನ್ನೆಲೆಯನ್ನೇ ಹೊಂದಿದ್ದರೆ, ಹುಲಿಸವಾರಿ ಸಂಪೂರ್ಣವಾಗಿ ಕಾರ್ಪೊರೇಟ್ ಜಗತ್ತಿನ ಕಥೆ ಹೇಳುತ್ತದೆ. ಸಶೇಷ ಕಥೆ ಇವೆರಡನ್ನೂ ಸಂತುಲನಗೊಳಿಸುವ ಪ್ರಯತ್ನದಂತಿದೆ. ನೂಲಿನ ಏಣಿ ಮತ್ತು ಪ್ರತ್ಯಕ್ಷ ಕಥೆಗಳಲ್ಲಿ ಸುತ್ತಲಿನ ಸಮಾಜದ ಬದಲಾದ ರೀತಿನೀತಿ, ಮೌಲ್ಯಗಳು ಮನುಷ್ಯನ ಆಂತರಿಕ ಜಗತ್ತನ್ನು ಕೂಡ ಟೊಳ್ಳಾಗಿಸುತ್ತ ಸಾಗಿದ ಚಿತ್ರ ಇದೆ.

ಕಂತು ಬಹುಷಃ ವಿವೇಕರ ಅತ್ಯುತ್ತಮ ಕಥೆಗಳಲ್ಲಿ ಇನ್ನೊಂದು. ಇದು ಒಂದು ನೀಳ್ಗತೆಯಾಗಿದ್ದರೂ ಕಾದಂಬರಿಯ ಹರವು ಪಡೆದಿರುವುದು ಮತ್ತು ಅಂಥ ವಾತಾವರಣವನ್ನು ಸಶಕ್ತವಾಗಿ ನಿರ್ಮಾಣಮಾಡಿರುವುದು ಗಮನಾರ್ಹ. ಮಾವಿನೂರಿನಲ್ಲಿ ಸಂಪೂರ್ಣ ಸೂರ್ಯಗ್ರಹಣ ಕಾಣಲು ಸಿಗುತ್ತದೆ ಎಂಬ ಒಂದು ಸಂಗತಿ ಊರಿನ ಹಲವು ಹತ್ತು ಬಗೆಯ ಜನರನ್ನು ಮತ್ತು ಊರ ಸಹಜ ವಿದ್ಯಮಾನಗಳನ್ನು ಬಗೆಬಗೆಯಲ್ಲಿ ತಟ್ಟುವ ವಿವರಗಳಲ್ಲೇ ವಿವೇಕ ಊರಿನ ಚಿತ್ರ ಕಟ್ಟಿಕೊಡುತ್ತಾರೆ. ಮಾತ್ರವಲ್ಲ ಅದರಿಂದಲೇ ಅಲ್ಲಿ ಸುಪ್ತವಾಗಿರುವ ತಲ್ಲಣಗಳ ಅನುಭೂತಿಯನ್ನೂ ಓದುಗನಿಗೆ ತಲುಪಿಸುತ್ತಾರೆ. ಪೇಪರು ಹಂಚುವ ಬುಗುರಿ, ಸದಾನಂದ ಮಾಸ್ತರ, ಅವರ ಹೆಂಡತಿಯ ವಿಚಿತ್ರ ಮಾನಸಿಕ ಕಾಯಿಲೆ ಮತ್ತು ಅದಕ್ಕೂ ಗ್ರಹಗತಿಗಳಿಗೂ ಇದ್ದಿರಬಹುದಾದ ನಂಟು, ಈ ಮಾಸ್ತರರ ಅರೆಬರೆಯಾದ ವೈಜ್ಞಾನಿಕ ಅಧ್ಯಯನ ಮತ್ತು ಊರ ಜ್ಯೋತಿಷಿ ತರ್ಕಶಾಸ್ತ್ರಿಯೊಂದಿಗಿನ ಅವರ ಜಗಳ, ಊರಿನ ಮುಳುಗಡೆ ಸಾಧ್ಯತೆ ಮತ್ತು ಅದನ್ನು ವಿಧವಿಧವಾದ ಕಾರಣಗಳಿಗಾಗಿ ವಿರೋಧಿಸುವ, ಬೆಂಬಲಿಸುವ ಜಗನ್ನಾಥನಂಥ, ಗಂಗಾಧರನಂಥ ಮಂದಿ, ಗಂಗಾಧರನ ನಿಧಿಯ ಹುಡುಕಾಟ ಅವನ ಬದುಕನ್ನೇ ಆವರಿಸುವ ವಿಲಕ್ಷಣ ಬಗೆ, ಪಾಳುಭೂಮಿ ಖರೀದಿಸಿ ಮುಳುಗಡೆಯ ಪರಿಹಾರದಿಂದ ಲಾಭ ಮಾಡಲು ಹೊರಟ ಜಗನ್ನಾಥ, ಅವನ ಕಾಯಿಲೆ ಮತ್ತು ಸಾವು, ದಿವಾಳಿಯಂಚಿಗೆ ತಲುಪಿದ ಪಾಂಡುರಂಗ ಈ ಗ್ರಹಣ ಕಾಲದಲ್ಲಿ ಹಣ ಸಂಪಾದಿಸಲು ಕಂಡುಕೊಳ್ಳುವ ಮಾರ್ಗಗಳು, ಎಲ್ಲೋ ಯಾರೋ ಮರದ ಕೆತ್ತನೆಯ ಬಾಗಿಲು, ಹಳೆಯ ಕೆಲವು ವಸ್ತುಗಳನ್ನು ಖರೀದಿಸಿದ್ದೇ ಮನೆಯಲ್ಲಿದ್ದ ಸಾಮಾನನೆಲ್ಲ ಹೊರಗಿಟ್ಟು ವಿದೇಶೀಯರು ಅದನ್ನು ಖರೀದಿಸಬಹುದೇ ಎಂದು ಆಸೆಪಡುವ ಮಂದಿ, ಎಲ್ಲದಕ್ಕೂ ಕಳಸವಿಟ್ಟಂತೆ ಕಾಣಿಸುವ ಕಾವೇರಿಯ ಹುಚ್ಚು ಈ ಕಥೆಗೆ ಹಲವು ಆಯಾಮಗಳನ್ನೂ, ಸಹಜತೆಯನ್ನೂ ಏಕಕಾಲಕ್ಕೆ ಒದಗಿಸಿದೆ. ಹಾಗಾಗಿ ಇದು ಹಲವು ಸಾರ್ಥಕ ಪ್ರತಿಮೆಗಳ ವಿಶಿಷ್ಟ ಕತೆಯಾಗಿ ಓದುಗನನ್ನು ಗಾಢವಾಗಿ ಕಲಕುವ ಅಂತಃಶ್ಶಕ್ತಿ ಹೊಂದಿರುವ ಸವಾಲೊಡ್ಡುವ ಕಥೆ.

ಜಾಮೀನು ಸಾಹೇಬ ಮತ್ತು ಸಶೇಷ ಕಥೆಗಳು ಮಾನವೀಯತೆ, ಮನುಷ್ಯ ಸಂಬಂಧಗಳು ಮತ್ತು ಮನಸ್ಸಿನ ಭಾವವಲಯ ಎಲ್ಲವೂ ಒಂದು ಹಂತದಲ್ಲಿ ಲೆಕ್ಕಾಚಾರಗಳಾಗಿ, ಹಣ ಮತ್ತು ಕಾನೂನು (ಯಾಂತ್ರಿಕ ನಿಯಮ ಬದ್ಧತೆ)ಗಳಷ್ಟೇ ಆಗಿ ಇವು ಮತ್ತೆ ಬಯಸಿದರೂ ಹೊರಬರಲಾರದ ಚಕ್ರವ್ಯೂಹಗಳಾಗಿ ಬಿಡುವ ದುರಂತವನ್ನು ಧ್ವನಿಪೂರ್ಣವಾಗಿ ನಿರೂಪಿಸುತ್ತವೆ. ಈ ಕಥೆಗಳಲ್ಲಿ ವಿವೇಕ್ ಬಳಸಿಕೊಳ್ಳುವ ರೂಪಕಗಳು ವಿಶೇಷ ಗಮನಕ್ಕೆ ಅರ್ಹವಾಗಿವೆ. ನ್ಯಾಯಾಲಯದ ಮುಂದೆ ಆರೋಪಿಗಳಾಗಿ ಹಾಜರಾಗುವವರಿಗೆ ಜಾಮೀನು ನಿಲ್ಲುವುದೇ ಒಂದು ಹೊಟ್ಟೆಪಾಡಿನ ಮಾರ್ಗವಾಗುವುದು ಮತ್ತು ಅದು ವ್ಯವಹಾರವಾಗಿ ಕುದುರಿದಂತೆಲ್ಲ ಮನುಷ್ಯ ಸಂಬಂಧ, ಅಂತಃಕರಣಗಳನ್ನೂ ಮೀರಿ ಹಣದ ಲೆಕ್ಕಾಚಾರವಷ್ಟೇ ಉಳಿಯುವುದು ಒಂದು ಕತೆಯಾದರೆ, ದಿನದ ಲೆಕ್ಕ ತಾಳೆಯಾಗದೆ ಹನ್ನೆರಡು ರೂಪಾಯಿ ವ್ಯತ್ಯಾಸವಾಗಿರುವುದೇ ಹಗಲು ರಾತ್ರಿ ಚಿಂತೆಗೆ ಕಾರಣವಾಗುವುದನ್ನು ಹೇಳುತ್ತದೆ ಇನ್ನೊಂದು ಕಥೆ.

ಹುಲಿಸವಾರಿ ಕೂಡ ವಸ್ತು ಮತ್ತು ತಂತ್ರಗಳ ದೃಷ್ಟಿಯಲ್ಲಿ ಇವೇ ಕಥೆಗಳನ್ನು ಹೋಲುತ್ತದಾದರೂ ಅದು ಹೆಚ್ಚು ಪರಿಣಾಮಕಾರಿಯಾಗಿಯೂ, ಕಾರ್ಪೊರೇಟ್ ಜಗತ್ತಿನ ಹಿನ್ನೆಲೆಯಲ್ಲಿ ಈ ಎರಡು ಕತೆಗಳಿಗಿಂತ ಹೆಚ್ಚು ವಿಶಾಲವಾದ ವ್ಯಾಪ್ತಿಯುಳ್ಳದ್ದೂ ಆಗಿರುವುದರಿಂದ ಹೆಚ್ಚು ಸಾಮಾಜಿಕವಾದ ಆಯಾಮವನ್ನು ಹೊಂದಿದೆ. ಹುಲಿಸವಾರಿ ಕತೆಯಲ್ಲಿ ಕೂಡ ವಿವೇಕ್ ಬಳಸಿಕೊಳ್ಳುವ ರೂಪಕಗಳು ವಿಶಿಷ್ಟವಾಗಿವೆ. ಏಕಕಾಲಕ್ಕೆ ಧ್ವನ್ಯಾರ್ಥವನ್ನೂ ವಾಚ್ಯಾರ್ಥವನ್ನೂ ಹೊಂದಿರುವ ಇಲ್ಲಿನ ತರಬೇತಿಯ ಹಂತದ ಆಟಗಳು ಮತ್ತು ಅವುಗಳಿಗೆ ಭಿನ್ನವಾಗಿ ಸ್ಪಂದಿಸುವ ಉಚೆ, ಜೆಫ್ ಮತ್ತು ನಿರೂಪಕ, ಕಥೆಗೆ ನೀಡಿರುವ ಹುಲಿಸವಾರಿ ಎಂಬ ಹೆಸರು ಎಲ್ಲವೂ ಕಥೆಯ ಪರಿಣಾಮದ ತೀವೃತೆಯನ್ನು ಹೆಚ್ಚಿಸಿವೆ. ಜಾಗತೀಕರಣ ಮತ್ತು ತದನಂತರದ ಮಧ್ಯಮವರ್ಗದ ಕೊಳ್ಳುಬಾಕ ಸಂಸ್ಕೃತಿಯ ಫಲ-ಪರಿಣಾಮಗಳ ಕುರಿತು ಬಹಳಷ್ಟು ಕಥೆಗಳು ಇವತ್ತು ಬಂದಿವೆಯಾದರೂ ಈ ಕಥೆಗಳು 1992ರಲ್ಲಿ ಬಂದವು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡೇ ಇವುಗಳನ್ನು ನೋಡಬೇಕಾಗುತ್ತದೆ. ಅಲ್ಲದೆ ಇಲ್ಲಿ ಬದಲಾಗುವ ವ್ಯಕ್ತಿಗತ ಬದುಕಿನ ಹಲವು ಅಂಶಗಳು ಮತ್ತು ಅಂಥ ಬದಲಾವಣೆಗೆ ಕಥೆಗಾರರು ಸೂಚಿಸುವ ಕಾರಣಗಳು ಹೌದೋ ಅಲ್ಲವೋ ಎನ್ನುವಂತಿರುವುದು ಅನಿವಾರ್ಯವೇ ಆಗಿರುತ್ತದೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳಲು ನಾವು ಮತ್ತೆ ವಿವೇಕರ ಶರವಣ ಸರ್ವಿಸಸ್ ಕಥೆಯನ್ನೇ ಗಮನಿಸಬೇಕು. ಆದರೆ ಕಂತು ಕಥೆ ಈ ಮಿತಿಯನ್ನು ಮೀರಿ ನಿಲ್ಲುವುದು ವಿಶೇಷವಾಗಿದೆ. ಇಲ್ಲಿ ವಿವೇಕ್ ಏಕಕಾಲಕ್ಕೆ ಸಮಾಜದ ಬಿಡಿಬಿಡಿ ಘಟಕಗಳನ್ನೂ, ಒಟ್ಟಾರೆ ಊರಿನ ಬದುಕನ್ನೂ ಒಂದು ಇನ್ನೊಂದರ ಮೇಲೆ ಬೀರುವ ಪರಸ್ಪರ ಪರಿಣಾಮವನ್ನು ಸಮರ್ಥವಾಗಿ ಗ್ರಹಿಸುತ್ತ ತಮ್ಮ ಕಥಾನಕವನ್ನು ಬೆಳೆಸುತ್ತಾರೆ. ಹಾಗೆಯೇ ಹುಲಿಸವಾರಿ ಪೂರ್ತಿಯಾಗಿ ಕಾರ್ಪೊರೇಟ್ ಜಗತ್ತನ್ನೇ ಕುರಿತಿದ್ದಾದ್ದರಿಂದ ವ್ಯಕ್ತಿಗತ ನೆಲೆಯ ಬದಲಾವಣೆಗಳ ಕಾರ್ಯ ಕಾರಣ ಸಂಬಂಧದ ಅನಿಶ್ಚಯತೆಯ ಗೊಂದಲದಿಂದ ಬಚಾವಾಗಿದೆ. ಸಶೇಷ ಕಥೆ ತನ್ನ ರೂಪಕದಂಥ ಪ್ರತಿಮೆಯ ಹೊರತಾಗಿಯೂ ಆಳದಲ್ಲಿ ತಟ್ಟಬಲ್ಲ ಕಥೆಯಾಗಿಯೇ ಇವತ್ತಿಗೂ ಉಳಿದಿಲ್ಲ ಎನಿಸುತ್ತದೆ. ಮೇಲ್ನೋಟಕ್ಕೆ ನೂಲಿನ ಏಣಿ ಕಥೆ ಕೂಡ ಇದೇ ಸಾಲಿಗೆ ಸೇರುವುದಿಲ್ಲವೆ ಎನಿಸಿದರೂ ಹಾಗೆ ಹೇಳುವುದು ಸಾರಾಸಗಟು ದೃಷ್ಟಿಕೋನವಾಗುವ ಅಪಾಯವಿದೆ.

ಈ ಮಾತು ನೂಲಿನ ಏಣಿ ಕಥೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೆಚ್ಚು ಸ್ಪಷ್ಟವಾಗುತ್ತದೆ. ಇಲ್ಲಿ ಗಾಂಧಿವಾದ ಸ್ವಾತಂತ್ರ್ಯಾನಂತರ ನೆಹರೂವಾದದ ನೆರಳಿನಲ್ಲಿ ಕ್ರಮೇಣ ಶಿಥಿಲವಾಗುತ್ತ ಹೋದುದರ ಚಿತ್ರಣವಿದೆ. ಅದು ಒಂದು ಸ್ತರದಲ್ಲಿ ಹೇಗೆ ಅನಿವಾರ್ಯವಾಗಿತ್ತು ಎನ್ನುವುದನ್ನು ಕಾಣಿಸುತ್ತಲೇ ಅದರ ನೋವುಗಳನ್ನೂ ವಿವೇಕ್ ಮೀಟಿದ್ದಾರೆ. ಆದರೆ ಈ ಪ್ರಕ್ರಿಯೆಯಲ್ಲಿ ಸುಪ್ತವಾಗಿರುವ ಕ್ರೌರ್ಯವನ್ನು, ಕಳೆದುಕೊಳ್ಳುತ್ತಿರುವುದರ ಕುರಿತ ದ್ವಂದ್ವವನ್ನು ವಿವೇಕ್ ಬಹಳ ನವಿರಾಗಿ ಹಲವು ಆಯಾಮಗಳಲ್ಲಿ ಮುಟ್ಟುತ್ತಾರೆ. ಇಲ್ಲಿ ಬರುವ ವಿಶ್ವನಾಥ ಮತ್ತು ಅವನ ಸಾವಿನ ವಿಲಕ್ಷಣ ವಿವರಗಳಲ್ಲಿ ಚರಕ ಮತ್ತು ಯಂತ್ರದ ಪರಿಕಲ್ಪನೆಗಳು ಕೆಲಸ ಮಾಡುತ್ತವೆ. ಅದೇ ರೀತಿ ಮಕ್ಕಳಿಗೆ ನೀಡಿದ ಉನ್ನತ ವ್ಯಾಸಂಗದ ಕುರಿತು, ಅದರಿಂದಲೇ ಅವರು ತನ್ನಿಂದ ದೂರಾದರು ಎನ್ನುವ ಬಗ್ಗೆ ಒಳಗೊಳಗೇ ಕೊರಗುವ ವಿಶ್ವನಾಥನ ಗೊಂದಲಗಳಲ್ಲಿ, ನಾಗರಾಜ ಸರಕಾರಿ ನೌಕರಿಯಲ್ಲಿದ್ದು ಲಂಚದಿಂದ ದೊಡ್ಡಮನುಷ್ಯನಾಗುವ, ರಾಜಾರಾಮ ಕಿಣಿಯ ದುಡ್ಡುಮಾಡುವ ಕ್ರಮವನ್ನು ಜನಸಾಮಾನ್ಯರು ಸಹಜ ಎಂದು ಸ್ವೀಕರಿಸುವ ಪ್ರಕ್ರಿಯೆಯಲ್ಲೇ ಇರುವ ವೈರುಧ್ಯಗಳಲ್ಲಿ ವಿವೇಕ್ ನಮಗೆ ಸ್ವಾತಂತ್ರ್ಯಾನಂತರದ ಬದುಕಿನ ಆದ್ಯತೆಗಳು ಬದಲಾಗುತ್ತ ಬಂದ ಸಂದರ್ಭದ ಸಂಕೀರ್ಣ ಪಲ್ಲಟಗಳನ್ನು ಸೂಕ್ಷ್ಮವಾಗಿ ಕಾಣಿಸುತ್ತಾರೆ. ಈ ಕಥೆಯ ಕೊನೆಯಲ್ಲಿ ಬರುವ ಒಂದು ಮೆರವಣಿಗೆ ಮತ್ತು ಬಸ್ಸಿನಲ್ಲಿ ಕುಳಿತಿದ್ದ ಪಾಟೀಲರು ಅದಕ್ಕೆ ಸ್ಪಂದಿಸುವ ಒಂದು ತುಂಡು ಕ್ಷಣದಲ್ಲಿ ದಾಖಲಾಗುವ ವೈರುಧ್ಯ ವಿವೇಕರ ಸೂಕ್ಷ್ಮ ಅವಲೋಕನ ಪ್ರಜ್ಞೆಯನ್ನೂ, ಕತೆಗಾರಿಕೆಯ ಕುಸುರಿಕಲೆಯನ್ನೂ ತೆರೆದು ತೋರಿಸುತ್ತದೆ.

ಕಾರ್ಪೊರೇಟ್ ಜಗತ್ತನ್ನೂ, ಮನುಷ್ಯ ಸಹಜ ಮಾನವೀಯ, ಭಾವನಾತ್ಮಕ, ಸಂಬಂಧಗಳ ಒಂದು ಜಗತ್ತನ್ನೂ ಬೇರೆಯೇ ಒಂದು ಪಾತಳಿಯಲ್ಲಿ ಮುಖಾಮುಖಿಯಾಗಿಸಿದ ಮತ್ತು ಹಾಗೆ ಮಾಡಿ ಯಶಸ್ವಿಯಾದ ಕಥೆ ಪ್ರತ್ಯಕ್ಷ. ಹುಲಿಸವಾರಿ ಕಥೆಯನ್ನು ಈ ಕಥೆಯ ಎದುರಿಟ್ಟು ನೋಡಿದರೆ ತಾಂತ್ರಿಕವಾಗಿ ಹುಲಿರಾಯ ಹೆಚ್ಚನ್ನು ಸಾಧಿಸಿದ್ದರೂ ಪರಿಣಾಮಲ್ಲಿ ಪ್ರತ್ಯಕ್ಷ ಹೆಚ್ಚು ತಟ್ಟುವಂತೆ ಮೂಡಿಬಂದಿದೆ. ಇಲ್ಲಿ ಸಹಜವಾಗಿ ಎಂಬಂತೆ ಬರುವ ಗಂಡು ಹೆಣ್ಣು ಸಂಬಂಧಗಳು ಈ ಕಾರ್ಪೊರೇಟ್ ಜಗತ್ತಿನ ವಿದ್ಯಮಾನಗಳ ಒಂದಂಗವೇ ಆಗಿರಬಹುದೇ ಎಂಬ ಅನುಮಾನ ಬರುವಂತೆ ಕಾಣಿಸಿಕೊಳ್ಳುವುದರಲ್ಲೇ ಕಥೆಯ ಯಶಸ್ಸು ಇದೆ. ಈ ಕಾರಣದಿಂದಾಗಿಯೋ ಏನೋ ಕೌಶಿಕನಂಥ, ರೇಖಾಳಂಥ ಪಾತ್ರಗಳು ಬಹಳ ಕಾಲ ಮನಸ್ಸಿನಲ್ಲಿ ನಿಲ್ಲುತ್ತವೆ ಮಾತ್ರವಲ್ಲ ಆಳದಲ್ಲಿ ವಿಚಿತ್ರ ಭಯವನ್ನೂ ಹುಟ್ಟಿಸುತ್ತವೆ! ಅದೇ ಸವಿತಾ ಪಾತ್ರ ರೇಖಾ ಪಾತ್ರಕ್ಕೆ ಅನೇಕ ಬಗೆಯಲ್ಲಿ ಸಂವಾದಿಯಾಗಿದ್ದರೂ ಅದನ್ನು ಮನಸ್ಸು ಸ್ವೀಕರಿಸುತ್ತದೆ. ರೇಖಾ ಮತ್ತು ಸವಿತಾ ಬದುಕಿನಲ್ಲಿ ದೀಪಕನನ್ನು ಮುಖಾಮುಖಿಯಾಗುವ ವಿಧಾನದಲ್ಲೇ ಈ ವ್ಯತ್ಯಾಸ ಇರುವುದು ಗಮನಾರ್ಹ. ಒಂದು ಮನುಷ್ಯ ಸಂಬಂಧಗಳ ಪಾತಳಿಯಲ್ಲಿ ವ್ಯವಹರಿಸುತ್ತಿದ್ದರೆ ಇನ್ನೊಂದು ವ್ಯವಹಾರದ ಮಟ್ಟದಲ್ಲಿ ನಡೆಯುತ್ತಿರುತ್ತದೆ. ಇಲ್ಲಿನ ವಿಪರ್ಯಾಸವೆಂದರೆ, ಮಾನವೀಯ ಸಂಬಂಧದ ನೆಲೆಯಲ್ಲಿ ವ್ಯಾವಹಾರಿಕ ಭೀತಿಯಿದೆ ಮತ್ತು ವ್ಯಾವಹಾರಿಕ ಸಂಬಂಧದ ನೆಲೆಯಲ್ಲಿ ಮಾನವೀಯ ಸೆಲೆಗಳೇ ಬತ್ತಿಹೋಗಿವೆ. ವಿವೇಕ್ ಇದನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

85ರಲ್ಲಿ ಬಂದ ಅಂಕುರದಲ್ಲಿ ವಿವೇಕರು ಮನುಷ್ಯ ಸಂಬಂಧಗಳನ್ನು ಬದುಕಿನ ಪ್ರಧಾನ ಅಂಗವಾದ ಕಾಮದ ನೆಲೆಯಲ್ಲಿ ಗುರುತಿಸುತ್ತ ಹೋದರು. ಏಳು ವರ್ಷಗಳ ಬಳಿಕ 92ರಲ್ಲಿ ಬಂದ ಲಂಗರು ಕಥಾಸಂಕಲನದಲ್ಲಿ ಮನುಷ್ಯ ಸಂಬಂಧಗಳ ತಲ್ಲಣ-ಪಲ್ಲಟಗಳೇ ಪ್ರಧಾನ ಧಾರೆಯಾಗಿತ್ತು. ಹಣ, ಆಸ್ತಿ, ಕಾಮ, ವೃದ್ಧಾಪ್ಯದ ಹಿನ್ನೆಲೆಯಿದ್ದರೂ ವಿವೇಕರ ಪ್ರಧಾನ ಕಾಳಜಿಯಿದ್ದುದು ಮನುಷ್ಯ ಸಂಬಂಧಗಳಲ್ಲಿ ಅನಿಸುತ್ತದೆ. ಹಾಗಾಗಿ ಇಲ್ಲಿ ಅವರು ಮನುಷ್ಯ ಯಾಕೆ ಸಂಬಂಧಗಳ ಬಗ್ಗೆ ಇಷ್ಟು ಚಂಚಲನಾಗುತ್ತಾನೆ ಎಂಬುದರ ಜಾಡನ್ನೇ ಅರಸಿಹೊರಟಂತೆ ಕಂಡರೆ ಅಚ್ಚರಿಯಿಲ್ಲ. ಆದರೆ ಆನಂತರ ಮೂರೇ ವರ್ಷಗಳ ಅಂತರದಲ್ಲಿ 95ರಲ್ಲಿ ಬಂದ ಹುಲಿರಾಯ ಸಂಕಲನದಲ್ಲಿ ಪೂರ್ತಿಯಾಗಿ ಆಧುನಿಕತೆ ಮತ್ತು ವ್ಯಾವಹಾರಿಕ ಮೋಹಗಳೇ ವಿಜೃಂಭಿಸಿವೆ. ವಿಚಿತ್ರವೆಂದರೆ ಈ ಸಂಕಲನದ ಕಥೆಗಳ ಮಿತಿ ಕೂಡ ಇದೇ ಆಗಿರುವುದು. ಬಹುಷಃ ವಿವೇಕರಿಗೂ ಇದು ಅರಿವಾಗಿರಬೇಕೆನಿಸುತ್ತದೆ. 2001ರಲ್ಲಿ ಬಂದ ಕಾದಂಬರಿ ಇನ್ನೂ ಒಂದು ಗಮನಿಸಿದಾಗ 1990ರಲ್ಲಿ ವಿವೇಕ್ ಬರೆದ ನಿಲುಕು ಮತ್ತು 2003ರಲ್ಲಿ ಬರೆದ ಕತೆ ಮತ್ತೊಬ್ಬನ ಸಂಸಾರ ಎರಡೂ ಅವರನ್ನು ಇನ್ನೂ ಅಷ್ಟಿಷ್ಟು ಕಾಡುತ್ತಿರುವುದರ ಅರಿವಾಗುತ್ತದೆ. ಇದರ ಹೊರತಾಗಿಯೂ 2005ರ ಸಂಕಲನ ಮತ್ತೊಬ್ಬನ ಸಂಸಾರ ವಿವೇಕರ ಕಥಾಜಗತ್ತಿನ ಸಂಪೂರ್ಣ ಭಿನ್ನವಾದ, ಹೊಸತೇ ಮಜಲನ್ನು ತೆರೆದು ತೋರುತ್ತದೆ ಎಂಬುದು ಕೂಡ ಈ ಎಲ್ಲ ಹಿನ್ನೆಲೆಯಲ್ಲಿ ಕುತೂಹಲಕರ.