ವಿವೇಕರ ಕಥಾಲೋಕ-4

ವಿವೇಕರ ಕಥಾಲೋಕ-4

ಬರಹ

ಮೊದಲ ನಾಟಕ : ಸಕ್ಕರೆ ಗೊಂಬೆ(1999)

ಸಕ್ಕರೆ ಗೊಂಬೆ ನಾಟಕವನ್ನು ಗಮನಿಸಿದರೆ ವಿವೇಕರ ಹುಲಿಸವಾರಿ ಸಂಕಲನದ ಎಲ್ಲಾ ಕಥೆಗಳನ್ನು ಇದೊಂದೇ ಮೀರಿಸುವಂತಿದೆ. ಕಾರ್ಪೋರೇಟ್ ಜಗತ್ತು ಮತ್ತು ಅದು ತನ್ನ ತೆಕ್ಕೆಯೊಳಗಿರುವ ಮಧ್ಯಮವರ್ಗ ಮತ್ತು ಮೇಲ್ವರ್ಗದವರ ಹಾಗೂ ಈ ಕಾರ್ಪೊರೇಟ್ ಸಂಸ್ಕೃತಿಯ ತೀರಾ ಹೊರಗಿನ ವಲಯದಲ್ಲೇ ಒಂದು ಬದುಕನ್ನು ನಡೆಸುತ್ತಿರುವ ಕೆಲವು ವರ್ಗದವರ ದಿನನಿತ್ಯದ ಎಲ್ಲವನ್ನೂ ಹೇಗೆ ಮತ್ತು ಎಷ್ಟು ಪ್ರಭಾವಿಸಿದೆ ಎನ್ನುವುದನ್ನು ಇಲ್ಲಿ ಹೆಚ್ಚು ಸಂತುಲಿತ ಮನೋಭಾವದ ಗಮನಿಸುವಿಕೆ ಇದೆ. ಸ್ಥೂಲವಾಗಿ ಕಂತು ಕಥೆ ಮಾರುಕಟ್ಟೆಯ ಸೆಳೆತ ಹಳ್ಳಿಯ ಬದುಕನ್ನು ಹೇಗೆ ತಲ್ಲಣಗೊಳಿಸಬಲ್ಲದು ಎಂಬುದನ್ನು ಹೇಳಿದರೆ, ಪ್ರತ್ಯಕ್ಷ ಕಥೆ ತೀರಾ ಅಂತರಂಗದ್ದಾಗಬಹುದಾದ ಗಂಡು ಹೆಣ್ಣು ಸಂಬಂಧ, ಕೊನೆಗೆ ಕಾಮವನ್ನು ಕೂಡ ಅದು ತನ್ನ ಪ್ರಭಾವಳಿಯ ಒಳಗೆ ಸೆಳೆದುಕೊಳ್ಳುವ ಆಘಾತಕಾರಿ ಚಿತ್ರ ನೀಡುತ್ತದೆ. ಹುಲಿ ಸವಾರಿ ಕಾರ್ಪೋರೇಟ್ ಜಗತ್ತಿನ ಆಂತರಿಕ ವರ್ಗವನ್ನು ಹೇಗೆ ಮಾರುಕಟ್ಟೆಯೇ ಆವರಿಸಿಕೊಂಡು ಅವರ ಚಿಂತನಾ ಶೈಲಿ, ಬದುಕಿನ ಆದ್ಯತೆಗಳನ್ನು ಬದಲಿಸಬಲ್ಲದು ಎಂಬುದರತ್ತ ಹೆಚ್ಚು ಗಮನ ನೀಡಿದೆ. ಆದರೆ ಸಕ್ಕರೆಗೊಂಬೆ ಈ ಎಲ್ಲ ಬಗೆಯ ಮನುಷ್ಯರನ್ನು ಕೇವಲ ಮನುಷ್ಯರನ್ನಾಗಿಯೇ ಗ್ರಹಿಸುತ್ತ ಅವರ ಮನುಷ್ಯತ್ವವನ್ನು ಈ ಕಾರ್ಪೋರೇಟ್ ಸಂಸ್ಕೃತಿ ಹಲವು ಪಾತಳಿಗಳಲ್ಲಿ ಹೇಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂಬುದನ್ನೇ ಸೂಕ್ಷ್ಮವಾಗಿ ಸೂಚಿಸುವಂತಿದೆ.

ಇಲ್ಲಿ ಬರುವ ಮುತ್ಯಾನ ಪಾತ್ರ ಗಮನಿಸಿ. ಇದು ಈ ನಾಟಕದ ಒಂದಾನೊಂದು ಆಯಾಮವನ್ನು ಸೂಚಿಸುವ ಬಹು ಮುಖ್ಯಪಾತ್ರ. ಅದೇ ರೀತಿ ನಂದಕುಮಾರನ ಪಾತ್ರ ಕೂಡ ತುಂಬ ನಾಜೂಕಾದದ್ದು. ಎಲ್ಲ ನಾಟಕೀಯತೆಯನ್ನು ಹೊಂದಿರುವಂಥದ್ದು. ಈತ ಬೇಕಾದಾಗ ಬೇಕಾದ ಹಾಗೆ ಕಾಣಿಸಿಕೊಳ್ಳಬಲ್ಲ ಸಾಧ್ಯತೆಯನ್ನು ಉಳಿಸಿಕೊಂಡಿರುವುದೇ ಈ ನಾಟಕದ ಮಹತ್ವದ ಅಂಶ. ಪಾರ್ಶ್ವವಾಯುವಿನಿಂದ ಓಡಾಡಲಾರದ, ಮಾತನಾಡಲಾರದ ಈತ ನ್ಯಾಯಾಲಯದ ಒಂದು ದೃಶ್ಯದಲ್ಲಿ ಮಾತಿಲ್ಲದೆ ನಿಂತು ತನ್ನ ಹಿಯರಿಂಗಿಗೆ ಸಾಕ್ಷಿಯಾಗುವ ಪ್ರಸಂಗವಿದೆ. ಅಲ್ಲಿ ಬರುವ ಆತನ ಮೇಲಿನ ಮಗನ ಆರೋಪಗಳು, ಅವನದೇ ಆದ ದೃಷ್ಟಿಕೋನದ ಸಮರ್ಥನೆ ಏನೇ ಇದ್ದರೂ ಈ ದೃಶ್ಯದ ಪರಿಕಲ್ಪನೆ ಬಹಳ ಕುತೂಹಲಕರ ಮತ್ತು ಅದರ ನಾಟಕೀಯತೆಗಾಗಿಯೇ ಅದು ಇಷ್ಟವಾಗುವಂಥದ್ದು. ಹಾಗೆಯೇ ನಾಟಕ ಅನೇಕ ಕಡೆಗಳಲ್ಲಿ ಸೂಚ್ಯವಾಗಿಯೇ ನಂದಕುಮಾರನ ಕಬಂಧ ಬಾಹುಗಳು ಎಲ್ಲೆಲ್ಲೂ ಚಾಚಿರುವುದನ್ನು ಕಾಣಿಸಿರುವ ರೀತಿ ಕೂಡ ಬಹಳ ಮೊನಚಾಗಿ, ಪ್ರೇಕ್ಷಕನನ್ನು ತಟ್ಟುವಂತೆ ಬಂದಿದೆ.

ಇನ್ನು ಡೈರೆಕ್ಟರುಗಳಲ್ಲಿ, ಅವರ ಮಾತುಕತೆ, ವ್ಯವಹಾರದಲ್ಲಿ ಮೇಲ್ನೋಟಕ್ಕೆ ಅಂಥ ವಿಶೇಷವೇನಿಲ್ಲ. ಆದರೆ ಅವರೆಲ್ಲ ಒಂದು ವರ್ಗದೊಳಗಿನ ಆಂತರಿಕ ಜಗತ್ತನ್ನು ನಮಗೆ ಕಾಣಿಸುತ್ತ ಇಡೀ ನಾಟಕ ಕೇವಲ ಕಾರ್ಪೊರೇಟ್ ಜಗತ್ತಿನ ಕುರಿತಾಗಿಲ್ಲ, ಅದು ಮನುಷ್ಯನ ಕುರಿತಾಗಿದೆ ಎನಿಸುವಂತೆ ಮಾಡುವುದು ಗಮನಾರ್ಹವಾಗಿದೆ. ಇಂಥ ಒಂದು ಆಯಾಮ ಈ ನಾಟಕಕ್ಕೆ ದಕ್ಕಿರುವುದು ಈ ಪಾತ್ರಗಳ ನಡೆ ನುಡಿಯ ಮೂಲಕವೇ.

ಹಾಗೆಯೇ ಇಲ್ಲಿ ಬರುವ ಶರ್ವಿಲಕನ ಗೀತೆ ಎಂಬ ಕಥೆಯ ಯಥೋಚಿತ ಬಳಕೆ. ಬಹುಷಃ ಇಡೀ ನಾಟಕದ ತಲ್ಲಣಗಳನ್ನು, ಆಘಾತಗಳನ್ನು ನಾಟಕದ ಈ ಅಂಕ ಅತ್ಯಂತ ಸುಪುಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಹಿಡಿದಿಟ್ಟಿದೆ. ನಾಟಕದ ಹೆಸರೇ ಸೂಚಿಸುವಂತೆ ಈ ಸಕ್ಕರೆಗೊಂಬೆಯ ಪ್ರಕರಣ ಕಾರ್ಪೊರೇಟ್ ಜಗತ್ತಿನ ಮೂಲಭೂತ ಸಿದ್ಧಾಂತವನ್ನು ಮತ್ತು ಅದರ ಅನಿವಾರ್ಯತೆಯನ್ನು ಜೊತೆಜೊತೆಯಾಗಿಯೇ ಪ್ರಸ್ತುತಪಡಿಸಿ ದಂಗುಬಡಿಸುವ ರೀತಿಯೇ ನಾಟಕದ ಯಶಸ್ಸನ್ನು ನಿರ್ಧರಿಸಿಬಿಟ್ಟಿರುವಂತಿದೆ. ಬೊಂಬೆ ಸಕ್ಕರೆಯದು. ಸಕ್ಕರೆಯನ್ನು ಸಮಾರಂಭದ ಕೊನೆಯಲ್ಲಿ ಎಲ್ಲರಿಗೂ ಹಂಚುವುದು ಇಲ್ಲಿನ ರಿಚ್ಯುಯಲ್, ಅದನ್ನು ಹಂಚಿಕೊಳ್ಳುವವರಿಗೆ, ಹಂಚಿಕೊಳ್ಳಲು ಉತ್ಸುಕರಾಗಿ ಕಾದು ನಿಂತವರಿಗೆ. ಅವರಿಗೆಲ್ಲ ಅದರ ಆಚೆ ಈ ರಿಚ್ಯುಯಲ್ ಕುರಿತು ಆಸಕ್ತಿ ಇಲ್ಲ. ಆದರೆ ಅದನ್ನು ಹಂಚುವವರು ಅದನ್ನು ಸಂಪಾದಿಸುವುದಕ್ಕೆ ಅನುಸರಿಸುವ ಒಂದು ರಿಚ್ಯುಯಲ್ ಕೂಡಾ ಇಲ್ಲಿ ಇದೆ. ಅದರ ಬಗ್ಗೆ ಕೂಡಾ ಸಂಪಾದನೆಯ, ವಿತರಣೆಯ ಹೊಣೆಹೊತ್ತವರಿಗೆ ಕುತೂಹಲವಿಲ್ಲ. ಹೀಗೆ ಈ ರಿಚ್ಯುಯಲ್‌ಗಳ ಬಗ್ಗೆ ಅದರ ಅಧ್ವರ್ಯುಗಳಿಗಾಗಲೀ, ಫಲಾನುಭವಿಗಳಿಗಾಗಲೀ ತಿಳಿದುಕೊಳ್ಳುವ ಕುತೂಹಲವೇ ಇಲ್ಲದಿರುವುದು ಮಹತ್ವದ ಅಂಶ. ಈ ರಿಚ್ಯುಯಲ್‌ನ ಮರ್ಮಗಳನ್ನು ಬಲ್ಲವರೇ ಬಲ್ಲರು. ಇದನ್ನು ಒಂದು ರೂಪಕದ ಮಾದರಿಯಲ್ಲಿ ತೆರೆದಿಡುವುದು ನಾಟಕದ ಕಲಾತ್ಮಕತೆಗೆ, ನಾಟಕೀಯತೆಗೆ ಜೊತೆಜೊತೆಯಾಗಿಯೇ ಪುಷ್ಟಿ ನೀಡಿದೆ ಮಾತ್ರವಲ್ಲ ನಾಟಕದ ಪರಿಣಾಮಕಾರತ್ವವನ್ನೂ ಹೆಚ್ಚಿಸಿದೆ. ನಾಟಕ ತೀವೃವಾಗಿ ತಟ್ಟುವಲ್ಲಿ ಎಷ್ಟು ಯಶಸ್ವಿಯಾಗಿದೆ ಎಂದರೆ ವಿವೇಕರ ಹುಲಿಸವಾರಿ ಸಂಕಲನದ ಎಲ್ಲಾ ಕತೆಗಳದ್ದು ಒಂದು ತೂಕವಾದರೆ ಈ ನಾಟಕದ್ದೇ ಇನ್ನೊಂದು ತೂಕ ಎನ್ನಬೇಕು.