ವಿವೇಕರ ಕಥಾಲೋಕ-5
ಮೊದಲ ಕಾದಂಬರಿ : ಇನ್ನೂ ಒಂದು (2001) ಇಲ್ಲಿ ಆಧುನಿಕ ಜಗತ್ತಿನ ಜಾಹೀರಾತು ಕ್ಷೇತ್ರದಲ್ಲಿ ಕೆಲಸಮಾಡುವ ಮನೋಹರ್, ಸ್ವಾತಿ, ಕೀಟಶಾಸ್ತ್ರಜ್ಞ ಎಂ.ಆರ್.ಕಶ್ಯಪ್, ಸ್ವಾತಿಯ ಹಿಂದೆ ಬೀಳುವ ಶಂಕರ್, ಸ್ವಾತಿಯ ಅಮ್ಮ ನಿರುಪಮಾ ಮತ್ತು ಇವರ ನಗರ ಜೀವನದ ವಿವರಗಳು ಒಂದೆಡೆ, ಕಾಶೀಶನ ಬಾಲ್ಯ, ನಿಗೂಢವಾಗಿ ಕಾಣುವ ಚಂಪಾ, ಯಶವಂತ ಚಿಕ್ಕಪ್ಪ ಮತ್ತು ಅವಳ ಸಂಬಂಧ, ಗೋವಾದ ಕಾಡಿನಂಚಿನ ಊರು, ಅಲ್ಲಿ ಸಿಗುವ ಲೋಲಾ, ಕಾಶೀಶನ ಯಶವಂತ ಚಿಕ್ಕಪ್ಪ, ಅವನ ಹೆಂಡತಿ ಮತ್ತು ಮಗಳಿಗೆ ಸುರುವಾದ ಚಂಪಾ ಚಿಂತೆಯೊಂದಿಗೇ ಮೇಲೆದ್ದು ಬರುವ ಮದುವೆ ಸೀರೆಯ ಗಲಾಟೆಗಳು, ವಸಂತ ನಡೆಸುವ ಕಾಶೀಶನ ಶೋಧ, ದಿನೂ ಅಂಕಲ್ ತೆರೆದಿಡುವ ಪುಟಗಳು, ಚಂದ್ರಹಾಸನ ಆಸ್ತಿ ಸಮಸ್ಯೆ, ಇವೆಲ್ಲ ಇನ್ನೊಂದೆಡೆ. ಇದನ್ನು ಹೀಗೆ ನೋಡುವಂತೆ ಮಾಡುವುದು ಒಂದು ಜಗತ್ತಿನಿಂದ ಇನ್ನೊಂದಕ್ಕೆ ಯಾವುದೇ ಹೆಜ್ಜೆಗುರುತುಗಳನ್ನು ಉಳಿಸದೇ ಪಲಾಯನ ಮಾಡಿರಬಹುದಾದ ಒಂದು ಪಾತ್ರ; ಅದು ಈ ಕಶ್ಯಪ್ ಇರಬಹುದೆ ಎಂಬ ಅನುಮಾನ. ಅದು ನಿಜವೆಂತಲೂ, ಇದ್ದಿರಲಾರದು ಎಂತಲೂ ಇಬ್ಬಗೆಯಲ್ಲಿ ಕಾಣಿಸುತ್ತ ಇರುವಾಗಲೂ ಕಾದಂಬರಿ ಈ ಎರಡೂ ಪಾತಳಿಯ ವಿವರಗಳನ್ನು ಕಟ್ಟಿಕೊಡುತ್ತ ಹೌದಾಗಿದ್ದರೂ ಅಲ್ಲವಾಗಿದ್ದರೂ ಓದುಗ ಕಂಡುಕೊಳ್ಳಬಹುದಾಗಿದ್ದ ಸತ್ಯದ ಬಳಿಗೇ ಅವನನ್ನು ಕೊಂಡೊಯ್ಯುವುದೇ ಈ ಕಾದಂಬರಿಯ ವೈಶಿಷ್ಟ್ಯವಾಗಿದೆ.
ಈ ಎರಡೂ ಲೋಕಗಳು ಕೇವಲ ಬದಲಾದ ಜೀವನ ಕ್ರಮ, ಆದ್ಯತೆಗಳು, ಮನೋಧರ್ಮಗಳನ್ನು ಮಾತ್ರ ಬಿಂಬಿಸುತ್ತಿಲ್ಲ; ತನ್ನ ಹಿಂದಿನದನ್ನು ಇರಲೇ ಇಲ್ಲ ಎಂಬ ಮಟ್ಟದಲ್ಲಿ ನಿರಾಕರಿಸುವ, ಸಂಪೂರ್ಣವಾಗಿ ಅದನ್ನು ತೊಡೆದೇ ಹಾಕುವ ಪ್ರವೃತ್ತಿಯನ್ನು ಹಿಂದಿನದರಲ್ಲಿ ಇರಬಹುದಾದ ಕೊರತೆಗಳು ಅಥವಾ ಆಧುನಿಕತೆಯಲ್ಲಿ ಇರಬಹುದಾದ ಸವಲತ್ತುಗಳು ಹುಟ್ಟಿಸಬಹುದೇ ಎಂಬ ಒಂದು ಅನುಮಾನ ಮತ್ತು ಇಂಥ ಆಮಿಷವನ್ನು ಒಡ್ಡಬಲ್ಲ ಮೋಹಕತೆ, ಅದೆಷ್ಟೇ ಸವಲತ್ತುಗಳನ್ನು ಒದಗಿಸಲಿ, ಆಧುನಿಕ ಜೀವನ ಕ್ರಮದಲ್ಲಿ ಇರುವುದೇ ಆದಲ್ಲಿ ಅದು ಇವತ್ತು ನಮಲ್ಲಿ ಹುಟ್ಟಿಸುವ ಅಸುಖ, ಅಂಥ ಅಸುಖದ ಭಾವಕ್ಕೆ ಇದ್ದಿರಬಹುದಾದ ಅಸ್ಪಷ್ಟ ಕಾರಣಗಳು - ಇದನ್ನು ಈ ಕಾದಂಬರಿ ಅಧ್ಭುತವಾಗಿ ತಟ್ಟಿದೆ.
ಕಶ್ಯಪ್ ತಾನು ಕಾಶೀಶನೇ ಹೌದೆಂದು ಒಪ್ಪಿದ್ದರೆ ಎಂಬ, ಒಪ್ಪಲಿ, ಒಪ್ಪುತ್ತಾನೆ ಎಂಬ ಒಂದು ನಿರೀಕ್ಷೆಯನ್ನು ವಿವೇಕ್ ಓದುಗನಲ್ಲಿ ಹುಟ್ಟಿಸುವ ಹಾಗೆ ಇಲ್ಲಿ ಶೋಧ ಮತ್ತು ಕಥಾನಕದ ನಡೆ ಇದೆ. ಅದಕ್ಕೂ ಹೆಚ್ಚಾಗಿ, ಅದೊಂದರಿಂದಲೇ ಅಂಥ ಮಹಾನ್ ವಿದ್ಯಮಾನವೇನೂ ಘಟಿಸಲು ಕಾದುಕುಳಿತಿಲ್ಲ ಎಂಬುದು ನಿಜವಾದರೂ ಕಶ್ಯಪ್ ಮತ್ತೆ ತಾನು ಅಂಕೋಲೆಯ ಕಾಶೀಶನೇ ಎಂಬುದನ್ನು ಒಪ್ಪುವ ಪ್ರಕ್ರಿಯೆಯೇ ದಿನೂ ಅಂಕಲ್, ಚಂದ್ರಹಾಸ, ಚಂಪಾ ಮತ್ತು ಇಷ್ಟೆಲ್ಲ ಶೋಧದ ಬೆನ್ನು ಹಿಡಿದ ಮನೋಹರ ಎಲ್ಲರ ಬದುಕಿಗೂ ತರಬಲ್ಲ ಒಂದು ಸಮಾಧಾನ, ಸಂತುಲನ ಏನಿದೆ ಅದು ಸಣ್ಣ ಸಂಗತಿಯಲ್ಲ. ಅದನ್ನು ಓದುಗನ ಅನುಭವವಾಗಿಸುತ್ತಾರೆ ವಿವೇಕ್.
ಇದರ ಒತ್ತಿಗೇ ವಿವೇಕರ ಈ ಕಾದಂಬರಿ ಇನ್ನೂ ಕೆಲವು ಪಾತಳಿಗಳಲ್ಲಿ ಕೆಲಸ ಮಾಡಿದೆ. ಒಂದು, ಸ್ವಾತಿಯ ವೈಯಕ್ತಿಕತೆ ಅಥವಾ ಖಾಸಗೀತನದ ಇಚ್ಛೆ, ಅದರ ಪರಿಕಲ್ಪನೆಯ ಸೂಕ್ಷ್ಮಗಳನ್ನು ವಿವೇಕ್ ಕಟ್ಟಿಕೊಟ್ಟ ವಿನ್ಯಾಸ, ವಿವರಗಳಲ್ಲಿ ಅದನ್ನು ಅವರು ಹಿಡಿದಿಟ್ಟ ರೀತಿ ಅನನ್ಯವಾಗಿದೆ. ಸ್ವಾತಿಯ ತಾಯಿ ಒಂದು ಘಟ್ಟದಲ್ಲಿ ಅವಳ ನೋಟ್ ಬುಕ್ಕು, ಡ್ರಾ, ಟೇಬಲ್ಲು ಎಲ್ಲ ಹುಡುಕುವುದು, ಮಗಳ ಬದುಕಿನಲ್ಲಿ ಇದ್ದರೂ ಇದ್ದಿರಬಹುದಾದ ನಿಗೂಢ ವಲಯಗಳನ್ನು ಪ್ರವೇಶಿಸಲು, ಅದನ್ನು ತಿಳಿದುಕೊಳ್ಳಲು ಬಯಸುವುದು, ಮತ್ತೆ ಮುಂದೆ ಇದೇ ಸ್ವಾತಿ ಶಂಕರನನ್ನು ಅಂಥದೇ ಪರೀಕ್ಷೆಗೆ ಒಡ್ಡುವುದು ಕುತೂಹಲಕರವಾಗಿದೆ. ಇವರು ಹುಡುಕುವುದೇನನ್ನು ಮತ್ತು ಸ್ವಾತಿ ಮುಚ್ಚಿಡಲು ಬಯಸುವುದಾದರೂ ಏನನ್ನು ಎಂಬ ಪ್ರಶ್ನೆಗೆ ಏನೂ ಇಲ್ಲ ಎಂಬ ಉತ್ತರ ಒಂದು ಇರುವುದನ್ನು ಗಮನಿಸಿದರೆ ಇದರ ನಿಜವಾದ ಅರ್ಥ ನಮಗಾಗಲು ಸಾಧ್ಯ. ಇದು ಆಘಾತಕಾರಿಯಾದರೂ ನಿಜ. ಪುಟ 62-63ರಲ್ಲಿ ಬರುವ ಈ ಪ್ಯಾರಾ ಗಮನಿಸಿ:
"ಒಂದು ರಾತ್ರಿ ನಿರುಪಮಾ ನೃತ್ಯ ಕಾರ್ಯಕ್ರಮದಿಂದ ಸುಸ್ತಾಗಿ ಹಿಂತಿರುಗಿ ಬಂದಾಗ ಅವಳ ಮೋರೆಯ ಮೇಲೆ ಆಯಾಸವೂ, ಯಾವುದೋ ನಿರರ್ಥಕತೆಯ ಭಾವವೂ ಇದ್ದ ಹಾಗೆ ಸ್ವಾತಿಗೆ ಅನಿಸಿತು. ಮುಖದ ಮೇಕಪ್, ಕಣ್ಣಿನ ಕಾಡಿಗೆ, ಬಿಗು ಕಳೆದುಕೊಂಡ ಮೋರೆಯ ಚರ್ಮ ಕಂಡು ಸ್ವಾತಿಗೆ ಅಮ್ಮನ ಒಂಟಿತನ ಫಕ್ಕನೆ ಅರಿವಿಗೆ ಬಂದಂತಾಯಿತು. ನೃತ್ಯಕ್ಕೆ ಬಳಸುವ ವಿಶೇಷ ಸೀರೆಯನ್ನು ಕೂಡ ಬದಲಾಯಿಸದೇ ಆವತ್ತು ಅವಳು ಹಿಂತಿರುಗಿದ್ದಳು. ಬಂದವಳೇ ಸೋಫಾದ ಮೇಲೆ ಕುಸಿದು ಕೂತಳು. ಕೂತು ನೀರು ಕುಡಿದಳು. ಅಮ್ಮನನ್ನು ಮಾತಿಗೆಳೆಯಲು ಸ್ವಾತಿ 'ಈವತ್ತು ಯಾವುದು ಮಾಡಿದೆಯಮ್ಮ?' ಅಂದಳು. 'ಕಂಡೆಯ ಕೃಷ್ಣನ.....' ಎಂದು ಅವಳಂದಾಗ ಹಿಂದೊಮ್ಮೆ ಆ ನೃತ್ಯವನ್ನು ತಾನು ನೋಡಿದ್ದು ಸ್ವಾತಿಗೆ ನೆನಪಾಯಿತು. ಮುದ್ರೆ, ಭಂಗಿ, ಅಂಗಚಲನೆ ಎಲ್ಲವೂ ಇದ್ದರೂ ತನ್ನ ಅಮ್ಮ ಯಾವ ಭಾವೋದ್ದೀಪನವೂ ಇಲ್ಲದೇ, ಈ ವಯಸ್ಸಿನಲ್ಲಿ, ಕೃಷ್ಣನನ್ನು ಹುಡುಕುವ ನೃತ್ಯ ಮಾಡುವುದರ ಬಗ್ಗೆ ಅಯ್ಯೋ ಅನಿಸಿತು. ಕಣ್ಣುಗಳನ್ನು ಅರಳಿಸಿ ಕಂಡೆಯಾ ಕಂಡೆಯಾ ಅನ್ನುತ್ತ ರಂಗಮಂಚದ ತುದಿಯಿಂದ ತುದಿಗೆ ಹೋಗುವ ದೃಶ್ಯ ಕಲ್ಪಿಸಿ ಸಂಕಟವಾಯಿತು. ಇಂಥದ್ದನ್ನೆಲ್ಲ ಮಾಡುವುದನ್ನು ಬಿಡು ಎಂದು ಹೇಳಲು ಬಾಯಿಬಿಡುವಷ್ಟರಲ್ಲಿ ಅವಳು 'ಈವತ್ತಿನದು ಚೆನ್ನಾಗಿತ್ತೆಂದು ಬಹಳ ಜನ ಹೇಳಿದರು' ಅಂದಳು. ಯಾರು ಯಾರು ತನ್ನನ್ನು ಹೊಗಳಿದರೆಂಬುದನ್ನು ಹೇಳತೊಡಗಿದಳು. ಆ ಕ್ಷಣ ಸ್ವಾತಿಗೆ ತಮ್ಮ ನಡುವಿನ ಕಂದರ ಎದುರೇ ಕಂಡಂತಾಯಿತು. ಅವಳು ಈ ನಿಖರ ಮುದ್ರೆ ಭಂಗಿಗಳಲ್ಲಿ ಬಂದಿಯಾಗಿದ್ದಾಳೆ, ತಾನು ಕಟ್ಟಿಕೊಂಡ ಜಗತ್ತನ್ನು ಒಡೆದು ಬರಲು ಸಾಧ್ಯವಾಗದಷ್ಟು ದೂರ ಹೋಗಿದ್ದಾಳೆ ಎಂದೂ ಅನಿಸಿತು."
ಎರಡನೆಯದಾಗಿ, ಕಟ್ಟಿಕೊಂಡ ಸುಳ್ಳು ಜಗತ್ತೊಂದನ್ನು ಈ ರೀತಿಯಾಗಿ ವಿವೇಕ ಸ್ಪರ್ಶಿಸುವಾಗಲೇ ಅತ್ತ ಕಶ್ಯಪ್ - ಕಾಶೀಶರ, ಯಶವಂತ-ಯಶೋದ-ಚಂಪಾರ ಒಂದು ಜಗತ್ತನ್ನೂ, ದಿನೂ ಅಂಕಲ್-ಚಂದ್ರಹಾಸರ ಒಂದು ಜಗತ್ತನ್ನೂ ಚಿತ್ರಿಸುತ್ತಾರೆ. ಸತ್ಯ ಎಂದು ಕಾಣಿಸುವ ಸುಳ್ಳುಗಳ ಮತ್ತು ಸುಳ್ಳೆಂದು ಕಾಣಿಸುವ ಸತ್ಯವೇ ಇರಬಹುದಾದ ಸೂಕ್ಷ್ಮಗಳ ಒಂದು ನವಿರು ಹಂದರ ಕಾದಂಬರಿಯುದ್ದಕ್ಕೂ ನಮಗೆ ಸಿಗುವುದು ಗಮನಾರ್ಹ. ಇದನ್ನು ಅತ್ಯಂತ ಕಲಾತ್ಮಕವಾಗಿ ಕಟ್ಟಿಕೊಡುವ ಭಾಗ ಪುಟ 106-107ರಲ್ಲಿ ಬರುತ್ತದೆ.
"ಒಂದಕ್ಕೊಂದು ಸಂಬಂಧವಿಲ್ಲದ ಹಾಗೆ ತೋರುವ, ಆದರೂ ಒಳಗೆಲ್ಲೋ ಸಂಬಂಧ ಇರುವ ಸಾಲುಗಳನ್ನು ಓದುತ್ತ ಸ್ವಾತಿಗೆ ಸುಸ್ತಾಯಿತು. ಶಂಕರ ಯಾವುದನ್ನು ಮೊದಲು ಓದಿದ, ಯಾವ ಕ್ರಮದಲ್ಲಿ ಓದಿದ? ಓದುವ ಕ್ರಮ ಬೇರೆಯಾದರೆ ಇದೆಲ್ಲ ಬೇರೆಯದೇ ಗ್ರಹಿಕೆಯನ್ನು ಕೊಡುತ್ತದಲ್ಲವೇ? ಈ ಪುಸ್ತಕಗಳ ಬದಲು ಬೇರೆ ಯಾವುದೋ ಕೆಲವನ್ನು ಎತ್ತಿ ಅಲ್ಲಿ ಗೆರೆ ಎಳೆದದ್ದನ್ನು ಓದಿದ್ದರೆ ಹೇಗೆ ಕಾಣಿಸುತ್ತಿತ್ತು? ಇನ್ನೊಬ್ಬರನ್ನು ಮುಟ್ಟಲು ಎಷ್ಟೇ ಪ್ರಯತ್ನಿಸಿದರೂ, ಘಟನೆ ಮತ್ತು ಮಾತುಗಳ ಸಂಯೋಜನೆಯಲ್ಲಿ, ನಮ್ಮ ಕೈಮೀರಿದ ಗಳಿಗೆಗಳಲ್ಲಿ ಉಂಟಾಗುವ ಏರುಪೇರುಗಳಿಂದ ಎಲ್ಲವೂ ಬೇರೆಯಾಗಿ ಕಾಣಿಸಿಬಿಡಬಹುದು. ಎಲ್ಲರೂ ತಮತಮಗೆ ತೋಚಿದ ರೀತಿಯಲ್ಲಿ, ಕ್ರಮದಲ್ಲಿ ಓದುತ್ತಾರೆ. ತನ್ನ ಅಮ್ಮನೂ ಹೀಗೇ ಯಾವುದೋ ಕೆಲವು ಎಳೆಗಳನ್ನು ಹಿಡಿದು ತನ್ನೊಳಗೆ ಹೋಗಲು ನೋಡಿದಳೆಂದು ಸ್ವಾತಿಗೆ ಅನಿಸಿತು."
ಮೂರನೆಯದಾಗಿ, ಕಥಾನಕದ ಚೌಕಟ್ಟಿನಲ್ಲೇ ಬದುಕನ್ನು ಗ್ರಹಿಸುವ ಮತ್ತು ಹಾಗೆ ಗ್ರಹಿಸಿದ್ದನ್ನು ಇನ್ನೊಂದು ಜೀವಿಗೆ ವಿವರಗಳಲ್ಲಿ, ಭಾಷೆಯಲ್ಲಿ ತಲುಪಿಸುವ ಹಂತದ ಸಂಕಟಗಳನ್ನು ಸೂಕ್ಷ್ಮವಾಗಿ ತೆರೆದಿಡುವುದರ ಜೊತೆಗೇ ಸ್ವತಃ ವಿವೇಕರ ಬರವಣಿಗೆಯ ಕುರಿತ ಗ್ರಹಿಕೆಗಳನ್ನು ನಮಗೆ ಕಾಣಿಸಬಲ್ಲ ಒಂದು ಮಾತೂ ಪುಟ 101ರಲ್ಲಿ ನಮಗೆ ಸಿಗುತ್ತದೆ.
"ನೆನಪುಗಳನ್ನು ಹೇಗೆ ಗ್ರಹಿಸಿದ್ದೇವೆ ಅನ್ನುವುದೂ ಮುಖ್ಯ. ನನಗೆ ನನ್ನ ಅಮ್ಮನ ಜೊತೆ ಒಂದು ವಿಚಿತ್ರ ಸಂಬಂಧ ಇತ್ತು. ಅದು ಏನು ಅನ್ನುವುದು ನಾವಿಬ್ಬರೂ ಅದನ್ನು ಗ್ರಹಿಸಿದ ರೀತಿಯಲ್ಲಿ ನೋಡಿದಾಗ ಮಾತ್ರ ಅರ್ಥಪೂರ್ಣ ಅನಿಸುತ್ತದೆಯೇ ಹೊರತು ಬರೀ ನಡೆದದ್ದನ್ನು ಹೇಳಿದಾಗ ಅಲ್ಲ."
ಇನ್ನೂ ಒಂದು ಕಾದಂಬರಿಯ ಕೊನೆಯ ಸಾಲು ಕೂಡ ಇಡೀ ಕಥಾನಕಕ್ಕೆ ಹೊಸ ಆಯಾಮ ದೊರಕಿಸಿಕೊಡಲು, ಅದನ್ನು ನೋಡಬಹುದಾದ ಇನ್ನೊಂದೇ ಪಾತಳಿಯನ್ನು ಸೃಷ್ಠಿಸಿಕೊಡಲು ಯತ್ನಿಸುತ್ತದೆ. ಆದಾಗ್ಯೂ ಈ ಕಾದಂಬರಿ ಕನ್ನಡ ಸಾರಸ್ವತ ಲೋಕದಲ್ಲಿ ಹೆಚ್ಚಿನ ಚರ್ಚೆಗೆ ಭಾಜನವಾಗಲಿಲ್ಲ ಎನ್ನುವುದು ಕನ್ನಡ ಕಾದಂಬರಿ ಸಾಹಿತ್ಯ ಇಂಥ ಲಂಘನಕ್ಕೆ ಇನ್ನೂ ಸಿದ್ಧವಾಗಿರಲಿಲ್ಲವೇನೋ ಅನಿಸುವಂತೆ ಮಾಡಿದೆ.