ವಿವೇಕರ ಕಥಾಲೋಕ-7

ವಿವೇಕರ ಕಥಾಲೋಕ-7

ಬರಹ

ಎರಡನೆಯ ನಾಟಕ : ಬಹುಮುಖಿ (2008) ( ಸದ್ಯದಲ್ಲೇ ಪ್ರಕಟವಾಗಲಿದೆ; ರಂಗಶಂಕರದಲ್ಲಿ ನಿರ್ದಿಷ್ಟ ದಿನಗಳಂದು ಪ್ರದರ್ಶಿಲ್ಪಡುತ್ತಿದೆ.)

ಈ ನಾಟಕ ಶರವಣ ಸರ್ವಿಸಸ್ ಕಥೆಯನ್ನು ನೆನಪಿಸುತ್ತದೆ ಮಾತ್ರವಲ್ಲ ಮೊದಲ ಓದಿಗೆ ಆ ಕಥೆಯ ಮೊನಚು, ಅದು ನೀಡುವ ಒಂದು ಗಾಢ ಅನುಭವ, ಅದರ appeal ಈ ನಾಟಕದ ಟೆಕ್ಸ್ಟ್‌ನಲ್ಲಿ ಮಿಸ್ಸಿಂಗ್ ಅಂತಲೇ ಅನಿಸಿದರೂ ಒಂದು ರಂಗಕೃತಿ ತನ್ನ ಟೆಕ್ಸ್ಟ್‌ನಲ್ಲೇ ಕೊಡಬೇಕಾದುದನ್ನೆಲ್ಲ ಕೊಟ್ಟುಬಿಟ್ಟರೆ ನಿರ್ದೇಶಕನಿಗೆ ಅದು ಸವಾಲಾಗುವುದು ಹೇಗೆ, ತನ್ನ ರಂಗಸಾಧ್ಯತೆಗಳನ್ನು ತೆರೆದುಕೊಳ್ಳುವುದು ಹೇಗೆ ಮತ್ತು ಅದನ್ನು ರಂಗದಲ್ಲಿ ನೋಡಬೇಕಾದರೂ ಯಾಕೆ ಅಂತ ಯೋಚಿಸಿದರೆ ಈ ತೀರ್ಮಾನ ಎಲ್ಲೋ ತಪ್ಪೆನಿಸುತ್ತದೆ. ಹಾಗಾಗಿ ಇದನ್ನು ಒಂದು ರಂಗಕೃತಿಯನ್ನಾಗಿಯೇ ನೋಡಬೇಕು. ವಿವೇಕರ ನಾಟಕಗಳು ತಕ್ಷಣವೇ ರಂಗ ಪ್ರಯೋಗದ ಭಾಗ್ಯವನ್ನೂ ಪಡೆದಿರುವುದರಿಂದ ಎರಡೂ ನಿಟ್ಟಿನಲ್ಲಿ ವಿವೇಕರ ನಾಟಕಗಳನ್ನು ಗಮನಿಸುವುದು ಕೂಡ ಸಾಧ್ಯವಾಗಿದೆ. ಹಿಂದೆ ವಿವೇಕರ ಸಕ್ಕರೆ ಗೊಂಬೆಯನ್ನು ನೀನಾಸಂ ತಂಡ ಕರ್ನಾಟಕದಾದ್ಯಂತ ಪ್ರದರ್ಶಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ಬಹುರೂಪಿ ಕೂಡ ರಂಗಶಂಕರದಲ್ಲಿ ಕೆಲವು ಪ್ರಯೋಗಗಳನ್ನು ಕಂಡಿದೆ.

ಇಲ್ಲಿನ ಸಂಜಯ ಕುರುಕ್ಷೇತ್ರದ ಸಂಜಯನ ಹಾಗೆಯೇ ವರದಿಗಾರ. ಅವನ ಮೂಲ ವ್ಯಕ್ತಿತ್ವವೇ ರೂಪಾಂತರಗೊಳ್ಳಬೇಕಾದ ತುರ್ತು ಹುಟ್ಟಿಸುವಂಥದು ಅವನ ನೌಕರಿ. ಅಥವಾ ಆ ನೌಕರಿ ಹಾಗಾಗಲು ಕಾರಣವಾದ ಒಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವನಿದ್ದಾನೆ. ಹಾಗಾಗಿ ಇಲ್ಲಿ ಫ್ಯಾಕ್ಟ್ ರಿಪೋರ್ಟ್ ಮಾಡುವ ಸಂಜಯ ‘ತಲೆಯ ಮೇಲೆ ಹೊಡೆದ ಹಾಗೆ’ ಸ್ಟೋರಿ ಕೊಡಬಲ್ಲ ಸಂಜಯನಾಗಿ ರೂಪಾಂತರಗೊಳ್ಳ ಬೇಕಾದ ಒಂದು ಒತ್ತಡವಿದೆ. ನಾಟಕದಲ್ಲಿ "ನೀನೀಗ ಬೇರೆಯೇ ಮನುಷ್ಯನ ತರ ಕಾಣುತ್ತಿದ್ದೀಯ" ಎನ್ನುವ ಒಂದು ಮಾತಾಗಿ ಬರುವ ಇದನ್ನು ಪ್ರೇಕ್ಷಕನ ಅನುಭವವಾಗಿಸುವ ಸವಾಲು ಸಣ್ಣದಲ್ಲ. ಇದನ್ನು ನಿರ್ದೇಶಕ ಗಮನಿಸದೇ ಹೋದರೆ, ಸಮರ್ಥವಾಗಿ ನಿಭಾಯಿಸದೇ ಹೋದರೆ ನಾಟಕದ ಉದ್ದೇಶ ಸಫಲವಾಗುವುದಿಲ್ಲ.

ಹಾಗೆಯೇ ಏಕಕಾಲಕ್ಕೆ ಶಕೀಲಾಳೂ ಶಕುಂತಳಾಳೂ ಆಗಬಲ್ಲ ವಿಶಿಷ್ಟ ಸಾಧ್ಯತೆಯೊಂದಿಗೇ ಕಾಣಿಸಿಕೊಳ್ಳುವ ಹುಡುಗಿ ತನ್ನ ಪ್ರಿಯಕರ ಶೇಖರ ತನ್ನೆಲ್ಲಾ ಸುಳ್ಳುಗಳೊಂದಿಗೇ ಸಿಕ್ಕಿಬಿದ್ದಾಗ ತಾನು ಸುಳ್ಳುಗಳ ಮೊರೆಹೋಗುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಅದೇ ಊರ್ಮಿಳಾ ಸಂಜಯನ ಜೊತೆ ಮತ್ತು ಸಂಪಾದಕನ ಜೊತೆ ಮುಖಾಮುಖಿಯಾಗುವ ಎರಡು ಬೇರೆ ಬೇರೆ ಸನ್ನಿವೇಶಗಳಲ್ಲಿ ಸತ್ಯ ಮತ್ತು ಸುಳ್ಳನ್ನು ಬೆರೆಸಿದಂತೆ ಬದುಕುತ್ತಿರುವುದನ್ನು ಕಾಣುತ್ತೇವೆ. ಇಂಥ ಸೂಕ್ಷ್ಮ ಸಂಭಾಷಣೆ, ನಾಟಕೀಯತೆಗಳನ್ನು ಬೆರೆಸಿ ವಿವೇಕ್ ನಾಟಕ ರಚಿಸುತ್ತಾರೆ. ಆದರೆ ಇಂಥ ಸೂಕ್ಷ್ಮಗಳನ್ನು ಸಚಿತ್ರ ಜೋಡಿಸಬಲ್ಲ, ಪ್ರೇಕ್ಷಕನಿಗೆ ಅಂಥ ಒಂದು ಒಳನೋಟವನ್ನೂ ರಂಗದಲ್ಲಿ ಕಾಣಿಸಬಲ್ಲ ಹದ ಸಾಧಿಸುವುದು ನಿರ್ದೇಶಕನ ಎದುರಿಗಿರುವ ಸವಾಲು.

ಇಲ್ಲಿನ ಶೇಖರ ಮಾತ್ರ ಬಹುಮುಖಿಯಲ್ಲ. ಇಲ್ಲಿನ ಹೆಚ್ಚಿನ ಪಾತ್ರಗಳು ಬಹುಮುಖಿಗಳು, ಮುಖವಾಡದ ಬದುಕುಗಳನ್ನು ಹೊಂದಿರುವವರು ಆಗಿರುವುದನ್ನು ಕಾಣುತ್ತೇವೆ. ಸದಾ ಮಫ್ತಿಯಲ್ಲಿರುವ ಇನ್ಸ್‌ಪೆಕ್ಟರ್, ಜಕ್ಕೂಜಿ, ಅಲ್ಲದೆ ಇಲ್ಲಿ ಬರುವ ಶ್ರೀಮಂತ ಹೆಂಗಸರು ಎಲ್ಲರೂ ಕೂಡ ಬಹುಮುಖಿಗಳೇ. ಈ ಶ್ರೀಮಂತ ಗೃಹಿಣಿಯರ ಖಾಲೀ ಕ್ಷಣಗಳ ಮುಹೂರ್ತ ತೊಡಗುವುದು ಹನ್ನೊಂದರಿಂದ ನಾಲ್ಕರವರೆಗೆ ಎನ್ನುವಲ್ಲೇ, ಜಕ್ಕೂಜಿಯ ಮೇಲೆ ಕೂಡಾ ಇವರಲ್ಲೊಬ್ಬಳಿಗೆ ಮನಸ್ಸಾಗುತ್ತದೆ ಎನ್ನುವುದರಲ್ಲೇ ಇದೆಲ್ಲದರ ನಾಟಕೀಯತೆ, ಕಪಟ ಎದ್ದು ಕಾಣುವಂತಿದೆ. ಇದನ್ನು ಪ್ರೇಕ್ಷಕನ ಅನುಭವವಾಗಿಸುವುದರಲ್ಲಿ ನಿರ್ದೇಶಕನಿಗೆ ಹೊಸ ಹೊಸ ಅವಕಾಶಗಳೂ ಕಾಣಿಸುತ್ತವೆ, ಮಿತಿಗಳೂ ಇವೆ.

ಗಂಭೀರವಾಗಿಯೇ ಇದೆ ಎನಿಸುವ ಈ ನಾಟಕದ ಟೆಕ್ಸ್ಟ್‌ನ್ನು ಹಾಸ್ಯದ ಸ್ತರದಲ್ಲಿ ರಂಗಕ್ಕೆ ತರುವುದು ಹೆಚ್ಚು ಪರಿಣಾಮಕಾರಿಯಾಗಬಹುದು ಎಂಬ ಸುಳಿವುಗಳು ಇಲ್ಲಿನ ಚುರುಕಾದ ಸಂಭಾಷಣೆಯಲ್ಲೇ ನಮಗೆ ಕಾಣುತ್ತದೆ. ಮುಖವಾಡಗಳ ಬಳಕೆ ಕೂಡ ಈಗ ರಂಗ ಪ್ರಯೋಗಗಳಲ್ಲಿ ಸಾಮಾನ್ಯವಾಗಿರುವ ಅಂಶವೇ. ನಾಟಕಗಳನ್ನು ರಂಗದ ಮೇಲೆ ನೋಡಿ ಸೂಕ್ಷ್ಮವಾಗಿ ಗಮನಿಸಿಕೊಂಡಿರುವವರಿಗೆ ಬಹುಷಃ ಹೀಗೆ ಬರೆಯುವ ವಿಶನ್ ದಕ್ಕುತ್ತದೆ. ಅಂಥ ವಿಶನ್ ವಿವೇಕ್‌ಗೆ ದಕ್ಕಿದೆ ಎನ್ನುವುದು ಈ ನಾಟಕವನ್ನು ಓದುವಾಗ ಮತ್ತೆ ಮತ್ತೆ ನಮ್ಮ ಗಮನಕ್ಕೆ ಬರುತ್ತದೆ.

ಇಲ್ಲಿ ಸಂಪಾದಕ ತನ್ನ ಒಂದು ವರದಿಗೆ ಮರುದಿನವೇ ಇತರ ಬೇರೆ ಬೇರೆ ಪತ್ರಿಕೆಗಳಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನು ಓದಿ ತಲೆಕಟ್ಟು ಕೂರುವ ಒಂದು ಸನ್ನಿವೇಶವಿದೆ. ಈ ಸನ್ನಿವೇಶವನ್ನು ರಂಗದಲ್ಲಿ ಹೆಚ್ಚು ಜೀವಂತಗೊಳಿಸುವ ಅಗತ್ಯವಿದೆ. ಅಂದರೆ ಮನುಷ್ಯನ ಬಹುಮುಖೀತನದಷ್ಟೇ ಸುದ್ದಿಯ ಬಹುರೂಪಿತನ ಕೂಡ ಆಘಾತಕಾರಿ ಮತ್ತು ಅಸಹ್ಯ ಹುಟ್ಟಿಸುವ ಮಟ್ಟದ್ದು. ಪಠ್ಯದಲ್ಲೇನೋ ಇದನ್ನು ಒಂದಾದ ಮೇಲೊಂದರಂತೆ ಸಂಪಾದಕನೇ ಓದುವ ಕ್ರಮದಲ್ಲಿ ಇದು ಬಂದಿದೆ. ರಂಗದಲ್ಲಿ ಬೇರೆ ಬೇರೆ ನಿರ್ದೇಶಕರು ಇದನ್ನು ಹೇಗೆಲ್ಲ ಜೀವಂತಗೊಳಿಸುತ್ತಾರೆ ಎಂಬ ಕುತೂಹಲವನ್ನು ಈ ಸನ್ನಿವೇಶ ಹುಟ್ಟಿಸುತ್ತದೆ.

ಕೆ.ವಿ.ಸುಬ್ಬಣ್ಣ ಒಂದು ಮಾತು ಹೇಳಿದ್ದರು, ನಾಟಕ ಅರ್ಥವಾಗುವುದು ಮುಖ್ಯವಲ್ಲ, ಅದು ಅನುಭವವಾದರೆ ಸಾಕು ಅಂತ. ಇದು ಗಹನವಾದ, ತುಂಬ ಮುಖ್ಯವಾದ ಮಾತು. ನಾಟಕ ನನಗೆ ನನ್ನೊಳಗೇ ಇರುವ ಆದರೆ ನಾನು ಸ್ಪಷ್ಟವಾಗಿ ಗುರುತಿಸದೇ ಹೋಗಿರಬಹುದಾದ ಅಷ್ಟೂ ಪಾತ್ರಗಳನ್ನು ವಿಶಿಷ್ಟ ನಾಟಕೀಯತೆಯ ಲೇಪದೊಂದಿಗೆ ನನಗೇ ಕಾಣಿಸುವ ಪ್ರಕ್ರಿಯೆ. ಅದರ ತಮಾಷೆಯೇ ಅದು. ಅದರ ಆಕರ್ಷಣೆಯೂ ಅದೇ. ಆಗಲೇ ಅದು ಅರ್ಥವಾಗುವ ಹಂತದಿಂದ ನುಸುಳಿ ನೇರ ಸುಪ್ತ ಮನಸ್ಸಿಗೇ ಲಗ್ಗೆ ಇಟ್ಟು ಅನುಭವವಾಗುವುದು ಸಾಧ್ಯವಾಗುವುದೂ. ನಾಟಕದ ವಸ್ತು ಹೆಚ್ಚು ಹೆಚ್ಚು ಮನುಷ್ಯನ ಅಂತರಂಗದ ನಿಶ್ಶಬ್ದಕ್ಕೆ ಸಂಬಂಧಿಸಿದಂತೆಲ್ಲ ರಂಗ ಕ್ರಿಯೆಯಲ್ಲಿ ಅದನ್ನು ಪ್ರತ್ಯಕ್ಷಗೊಳಿಸಿ ಅನುಭವವಾಗಿಸುವ ಸವಾಲು ಕಠಿಣದ್ದಾಗುತ್ತದೆ. ವಿವೇಕರು ಬಹುಮುಖಿಯಲ್ಲಿ ಎತ್ತಿಕೊಂಡಿರುವ ವಿಚಾರ ತುಂಬ ಸೂಕ್ಷ್ಮವಾದದ್ದು. ರಂಗಕ್ರಿಯೆಯ ಮುಖೇನ ಪ್ರೇಕ್ಷಕನಿಗೆ ಅದನ್ನು ತಲುಪಿಸುವ, ಅವನ ಅನುಭವವನ್ನಾಗಿಸುವ ಕ್ರಿಯೆ ಇನ್ನೂ ಹೆಚ್ಚು ಸೂಕ್ಷ್ಮವಾದದ್ದು ಮತ್ತು ಬಹಳ ಪರಿಶ್ರಮವನ್ನು ಬೇಡುವಂಥದ್ದು. ಹಾಗಾಗಿ ಇಲ್ಲಿನ ಸವಾಲು ದೊಡ್ಡದು.

ಒಬ್ಬ ಸಂಜಯ, ಒಬ್ಬ ಶೇಖರ, ಒಬ್ಬ ಜಕ್ಕೂಜಿ ಒಂದೆಡೆ ಇರುತ್ತ ಶಕೂನಂಥ ಪಾತ್ರವೊಂದು ಹಲವು ಆಯಾಮಗಳನ್ನು ನಾಟಕಕ್ಕೆ ಕೊಡುವ ಕಸು ಹೊಂದಿದೆ. ಕೆಂಪೇಗೌಡ ಅಥವಾ ಟಿಪ್ಪೂ ತರದ ಇತಿಹಾಸದ ಪಾತ್ರಗಳನ್ನು ತಮ್ಮ ಉದ್ದೇಶಕ್ಕೆ ವಿವೇಕ್ ಬಳಸಿರುವುದು ಅತ್ಯಂತ ಸಮಯೋಚಿತವೂ ಅಗತ್ಯವೂ ಆಗಿದೆ ಅನಿಸುತ್ತದೆ. ಕೊಲೆ, ಅಪಘಾತ, ದುರಂತಗಳನ್ನು ರಂಜಕವಾಗಿ ಬಳಸಿಕೊಳ್ಳುವ ಮಾಧ್ಯಮಗಳು ಕಣ್ಮುಂದೆ ಇರುತ್ತ ಬಹುಷಃ ಒಂದು ದುರಂತವನ್ನು ಅವರು ತಮ್ಮ ಉದ್ದೇಶಕ್ಕೆ ಬಳಸಿಕೊಂಡಿದ್ದರೆ ನಾಟಕಕ್ಕೆ ಇನ್ನೂ ಹೆಚ್ಚು ರಂಗು ಬರುತ್ತಿತ್ತು; ಹಲವು ರಸಗಳ ಅಭಿವ್ಯಕ್ತಿಗೆ ಅವಕಾಶ ತೆರೆಯುತ್ತಿತ್ತು ಮತ್ತು ರಂಗಕೃತಿಯಾಗಿಯೂ ನಾಟಕವಾಗಿಯೂ ಅದರ ಸವಾಲುಗಳು ಹೆಚ್ಚು ಸ್ಪಷ್ಟ ಮತ್ತು ಸರಳವಾಗುತ್ತಿದ್ದವು ಎಂಬುದು ನಿಜವಾದರೂ ಹಾಗೆ ಮಾಡದೆ ಇತಿಹಾಸವನ್ನು ಬಳಸಿಕೊಂಡಿರುವುದರ ಕುರಿತು ಕೊಂಚ ಯೋಚಿಸಬೇಕು.

ಇತಿಹಾಸವನ್ನು ಕೂಡ ಮನುಷ್ಯನ ಹೊಟ್ಟೆಪಾಡಿನ, ಓದುಗರ ಸುದ್ದಿಯ ಹಸಿವಿನ, ವರದಿಗಾರನ 'ತಲೆಮೇಲೆ ಹೊಡೆಯುವಂಥ ಸ್ಟೋರಿ'ಯೊಂದರ ಹಸಿವಿನ ಅಗತ್ಯಗಳಿಗೆ ಇಲ್ಲಿನ ಪಾತ್ರಧಾರಿಗಳಿಂದ ಬಳಸಿಕೊಳ್ಳಲ್ಪಡುವುದು, ಇತಿಹಾಸದ ವಿಪರ್ಯಾಸಗಳಿಗಾಗಿ ವರ್ತಮಾನದಲ್ಲಿ ಹೊಡೆದಾಡುತ್ತಿರುವ ಸಮಾಜದ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಚುಚ್ಚುಮದ್ದೇ. ಎಲ್ಲೋ ಮತ್ತೆ ವರದಿಗಾರನಿಗೂ ಈ ಬಗೆಯ ಬಳಕೆ ಅವನ ಹೊಟ್ಟೆಪಾಡಾಗಿರುವ ವಿಪರ್ಯಾಸವನ್ನು ಕೂಡ ನಾವು ಗಮನಿಸಬೇಕು. ಒಬ್ಬ ಜಕ್ಕೂಜಿ, ಒಬ್ಬ ಶೇಖರನ ಎಲ್ಲ ಕಪಟ ನಾಟಕದ ಹಿಂದೆ ಇರುವ ಒಂದು ಹೊಟ್ಟೆಪಾಡಿನ ಅನಿವಾರ್ಯತೆ ಮತ್ತು ಅದು ಈ ವ್ಯಕ್ತಿಗಳ ವೈಯಕ್ತಿಕ ಅನಿವಾರ್ಯತೆಗಿಂತ ಒಟ್ಟು ಸಮಾಜದ ಅಗತ್ಯವೇ ಆಗಿತ್ತೇನೋ ಎನ್ನುವಂಥ ಒಂದು ಸಮಷ್ಠಿಯ ಒತ್ತಡ ಕೂಡ ಶ್ರೀಮಂತ ವರ್ಗದಿಂದ, ಪತ್ರಿಕೆಗಳಿಂದ ನಿರ್ಮಿಸಲ್ಪಟ್ಟಿರುವುದನ್ನು ನಾಟಕ ಹಿಡಿದುಕೊಟ್ಟಿದೆ. ಇದು ಪಠ್ಯವಾಗಿ ನಾಟಕದ ಬಹುಮುಖ್ಯ ಯಶಸ್ಸು. ವ್ಯಕ್ತಿ ಮತ್ತು ಸಮಾಜದ ಜಂಟಿ ಅಗತ್ಯ ಈ ಭ್ರಷ್ಟತೆಯ ಹಿಂದೆ ಕೆಲಸ ಮಾಡಿರುತ್ತ ಇದಕ್ಕೆ ಸುಲಭ ಲಭ್ಯ ಅಸ್ತ್ರವಾಗಿ ಬಳಸಲ್ಪಡುವುದು ನಮ್ಮದೇ ಇತಿಹಾಸ ಎನ್ನುವ ಅಂಶ ‘ಬಹುಮುಖಿ’ಗೆ ಮನುಷ್ಯನ ಬಹುಮುಖಿತನಗಳನ್ನು ಹೇಳುವುದರಾಚೆಗೂ ಚಾಚಬಲ್ಲ ಬಹುಮುಖ ಆಯಾಮಗಳನ್ನು ಒದಗಿಸಿದೆ.