ಕೃತಜ್ಞತಾ ದಿನಾಚರಣೆ

ಕೃತಜ್ಞತಾ ದಿನಾಚರಣೆ

೧೬೧೯ರ ಡಿಸೆಂಬರ್ ತಿಂಗಳು. ಹೊಸ ಬದುಕನ್ನರಸುತ್ತ ಇಂಗ್ಲೆಂಡಿನಿಂದ ಹೊರಟ ಕೆಲವು ಕುಟುಂಬಗಳನ್ನು ಹೊತ್ತ ನಾವೆಯೊಂದು ಅಮೇರಿಕೆಯ ದಡ ಮುಟ್ಟಿತು. ಛಳಿಗಾಲ. ನೂರಾರು ತಲೆಮಾರುಗಳಿಂದ ಅಲ್ಲಿಯೆ ಬಾಳಿ ಬದುಕಿದ್ದ ವಾಂಪನೊಅಗ್ ಜನಾಂಗದ ಅಮೇರಿಕೆಯ ಆದಿವಾಸಿಗಳು ಬಿಳಿಯರನ್ನು ಬರಮಾಡಿಕೊಂಡು ಅವರ ನೆರವಿಗೆ ಬಂದರು. ತಾವು ಬೆಳೆದ ಜೋಳ ಕೊಟ್ಟರು. ಜೊತೆಯಲ್ಲಿ ಬೇಟೆಯಾಡಿದರು. ಬಿಳಿಯರ ಧಾನ್ಯ ಇಲ್ಲಿ ಬೆಳೆಯದು. ವಾಂಪನೊಅಗ್ ಬಿತ್ತಲು ಬೀಜ ಕೊಟ್ಟರು, ಜಾಗ ಮಾಡಿಕೊಟ್ಟರು. ಹೊಸ ನೆಲದಲ್ಲಿ ಬದುಕುವ ಬಗೆ ಕಲಿಸಿಕೊಟ್ಟರು. ೧೬೨೧ರ ಕುಯ್ಲಿನಲಿ ಬಿಳಿಯರಿಗೆ ಕೈತುಂಬ ಬೆಳೆ ಬಂದಿತು. ಹೊಸ ನಾಡಿನಲ್ಲಿ ಬದುಕುವ ಜಾಡು ತಿಳಿದಿತ್ತು. ಇನ್ನು ಯಾವ ಭಯವೂ ಇಲ್ಲ. ಬಿಳಿಯರು ನಿಜವಾಗಿ ದಡ ಮುಟ್ಟಿದರು. ದೇವರಿಗೆ ಕೃತಜ್ಞತೆ ಹೇಳಿಕೊಳ್ಳಲು ಹಬ್ಬ ಮಾಡಿದರು.

ಬಿಳಿಯರು ತಳವೂರಿ ದಶಕಗಳು ಕಳೆದವು. ವಾಂಪನೊಅಗ್ ದೊರೆ ಮಸಸ್ವಾ ಕಾಲವಾಗಿ ಅವನ ಮಗ ಮೆಟಕೊಮೆಟ್ ಗಾದಿಯೇರಿದ್ದ. ಯಾವುದೊ ಸಣ್ಣ ಮಾತಿಗೆ ಜಗಳ ಹೊತ್ತಿಕೊಂಡಿತು. ಬಿಳಿಯರು ಬಂದೂಕುಗಳನ್ನು ಹೊತ್ತು ನಡೆದರು. ಮೆಟಕೊಮೆಟ್‌ನ ಜನರನ್ನು ಕೊಚ್ಚಿ ಕೊಂದರು. ಅವನ ಮಡದಿ ಮಕ್ಕಳನ್ನು ಗುಲಾಮಗಿರಿಗೆ ಮಾರಿದರು. ಮೆಟಕೊಮೆಟ್‌ನ ತಲೆಯನ್ನು ಕೋಲಿನ ತುದಿಗೆ ಸಿಗಿಸಿ ಮೆರವಣಿಗೆ ಮಾಡಿದರು. ಆದಿವಾಸಿಗಳ ಭಯ ತೊಲಗಿದ್ದಕ್ಕೆ ದೇವರಿಗೆ ಕೃತಜ್ಞತೆ ಹೇಳಿಕೊಳ್ಳಲು ಹಬ್ಬ ಮಾಡಿದರು.

ಕಾಲ ಉರುಳಿತು. ಇಂಗ್ಲೆಂಡಿನಿಂದ ಬಂದವರು ತಾಯ್ನಾಡಿನ ಕೊಂಡಿ ಕಳಚಿದರು. ಈಗ ಇದು ತಮ್ಮದೆ ದೇಶವೆಂದರು. ಪಡುದಿಗಂತದತ್ತ ಹರಡಿದ್ದ ನೆಲದತ್ತ ಅರಳುಗಣ್ಣು ಹಾಯಿಸಿದರು. ಕುದುರೆಯೇರಿ ಗಾಡಿಗಳಲ್ಲಿ ತುಂಬಿ ಹೊರಟರು. ಕಂಡ ನೆಲ ತಮ್ಮದೆಂದರು. ಪ್ರೇರೀ ಬಯಲನ್ನು ತಡೆಯಿಲ್ಲದೆ ಮೇಯುತ್ತಿದ್ದ ಲೆಕ್ಕವಿಲ್ಲದಷ್ಟು ಕಾಡೆಮ್ಮೆಗಳನ್ನು ನೂರೇ ವರ್ಷಗಳಲ್ಲಿ ವಿನಾಶದ ಅಂಚಿಗೆ ತಳ್ಳಿದರು. ಎತ್ತರದ ಬೆಟ್ಟದ ಸಾಲನ್ನು ದಾಟಿ ಪಡುಸಮುದ್ರದ ಅಂಚಿನವೆರೆಗೆ ನೆಲವನ್ನು ಆಕ್ರಮಿಸಿದರು. ಎದುರಿಸಿದ ಆದಿವಾಸಿಗಳನ್ನು ತರಿದರು. ಉಳಿದವರನ್ನು ಅವರವರ ನೆಲೆಯಿಂದ ಎಬ್ಬಿಸಿ ಕಾಯ್ದಿರಿಸಿದ ಕೆಲಸಕ್ಕೆ ಬಾರದ ನೆಲದಲ್ಲಿ ಮರುವಸತಿ ಮಾಡಿಕೊಟ್ಟರು.

ದೇವರಿಗೆ ಕೃತಜ್ಞತೆ ಹೇಳಿಕೊಳ್ಳಲು ಆಗಾಗ ಹಬ್ಬ ಮಾಡುವ ಪರಿಪಾಠವಿತ್ತಾದರೂ ಆಚರಣೆಯಲ್ಲಿ ಒಮ್ಮತವಿರಲಿಲ್ಲ. ಕಡೆಗೊಮ್ಮೆ ನವೆಂಬರ್ ತಿಂಗಳಿನ ನಾಲ್ಕನೆಯ ಗುರುವಾರವನ್ನು ಕೃತಜ್ಞತಾ ದಿನವೆಂದು ಕರೆದು ದೇಶದಾದ್ಯಂತ ಹಬ್ಬ ಮಾಡುವುದೆಂದು ಕಾನೂನಾಯಿತು. ಈಗ ವರ್ಷ ವರ್ಷವೂ ಹಬ್ಬ ಜೋರಾಗಿ ನಡೆಯುತ್ತದೆ. ಲೆಕ್ಕವಿಲ್ಲದಷ್ಟು ಟರ್ಕಿ ಬಾತುಕೋಳಿಗಳು ಊಟದ ಮೇಜಿನ ಮೇಲೆ ತಮ್ಮ ಬಾಳ ಗುರಿಯನ್ನು ಮುಟ್ಟುತ್ತವೆ. ಒಂದೆರಡನ್ನು ಸ್ವಯಂ ರಾಷ್ಟ್ರಾಧ್ಯಕ್ಷರೆ ಕ್ಷಮಾದಾನ ನೀಡಿ ಬದುಕಲೀಯುತ್ತಾರೆ. ತಿಂಗಳೊಳಗಾಗಿ ಕ್ರಿಸ್ಮಸ್ ಹಬ್ಬ. ಎಲ್ಲರಿಗೂ ಈಗಲಿಂದಲೆ ಉಡುಗೊರೆ ಕೊಳ್ಳುವ ಆತುರ. ಹಬ್ಬದ ಮರುದಿವಸ ಮುಂಜಾನೆ ಐದಕ್ಕೆಯೆ ಅಂಗಡಿಗಳ ಕದ ತೆರೆದು ಮಾರಾಟಕ್ಕೆ ತೊಡಗುತ್ತಾರೆ. ಅಗ್ಗದ ಬೆಲೆಯಲ್ಲಿ ತಗ್ಗಿನ ಬೆಲೆಯಲ್ಲಿ ಪೈಪೋಟಿಯ ಮೇಲೆ ಮಾರಾಟ; ಬಿಲಿಯಗಟ್ಟಲೆ ಡಾಲರುಗಳ ಕೈಬದಲು; ಅಂಗಡಿಕಾರರಿಗೆ ಛಳಿಗಾಲದಲ್ಲಿಯೂ ಸುಗ್ಗಿ.

ಈಗ ಥ್ಯಾಂಕ್ಸ್‌ಗಿವಿಂಗ್ ಎಂದರೆ ಟರ್ಕಿ, ಅಂಗಡಿ, ರಿಯಾಯಿತಿ. ನಾಲ್ನೂರು ವರ್ಷಗಳ ಹಿಂದಿನ ನೆನಪು ಯಾರಿಗೂ ಇದ್ದಂತಿಲ್ಲ. ಕೊಟ್ಟು ಕೆಟ್ಟು ಕಾಡುಪಾಲಾದ ಅಮೇರಿಕೆಯ ಆದಿವಾಸಿಗಳನ್ನು ಕೇಳುವವರಿಲ್ಲ. ನವೆಂಬರ್ ತಿಂಗಳ ನಾಲನೆಯ ಗುರುವಾರ ಅವರಲ್ಲಿ ಶೋಕಾಚರಣೆಯ ದಿವಸವೆಂದು ಬಹುಶಃ ಯಾರಿಗೂ ತಿಳಿದಿಲ್ಲ.

ವೆಂ.

Rating
No votes yet

Comments