ಬಿ.ಎಸ್.ಪಿ: ದಲಿತ ಚಳುವಳಿಯ ತಾರ್ಕಿಕ ಅಂತ್ಯ?

ಬಿ.ಎಸ್.ಪಿ: ದಲಿತ ಚಳುವಳಿಯ ತಾರ್ಕಿಕ ಅಂತ್ಯ?

ಬರಹ

ಬಿ.ಎಸ್.ಪಿ: ದಲಿತ ಚಳುವಳಿಯ ತಾರ್ಕಿಕ ಅಂತ್ಯ?

`ದಲಿತ ಚಳುವಳಿ ಮುಂದೇನು?' ಎಂಬ ಶೀರ್ಷಿಕೆಯಡಿ ಈ ಲೇಖನವನ್ನು ಮೂರು ವರ್ಷಗಳ ಹಿಂದೆ ಬರೆದಾಗ, ದಲಿತ ಚಳುವಳಿಯ `ಜಾತಿ ಬಿಟ್ಟು ದೇಶ ಕಟ್ಟು' ಎಂಬ ಘೋಷಣೆಯನ್ನು ಕೈಬಿಟ್ಟು, `ದೇಶ ಬಿಟ್ಟು ಜಾತಿ ಕಟ್ಟು' ಎಂಬ ಘೋಷಣೆಯೊಂದಿಗೆ ಪರಿಶಿಷ್ಟ ಜಾತಿಗಳ ಜನರನ್ನು ಸಂಘಟಿಸುತ್ತಾ ಒಂದು ಅಂತರ್ಗಾಮಿ ರಾಜಕೀಯ ಶಕ್ತಿಯಾಗಿ ಮಾತ್ರ ಕ್ರಿಯಾಶೀಲವಾಗಿದ್ದ ಬಿ.ಎಸ್.ಪಿ ಇಂದು, ಅಂದು ತಾನು ಕೈ ಬಿಟ್ಟಿರುವುದಾಗಿ ಹೇಳಿಕೊಂಡಿದ್ದ ದೇಶಕ್ಕೆ ತನ್ನ ಅಭ್ಯರ್ಥಿಯನ್ನು ಪ್ರಧಾನಮಂತ್ರಿಯಾಗಿ ಸೂಚಿಸಬಲ್ಲ ಆತ್ಮ ವಿಶ್ವಾಸದೊಂದಿಗೆ ಕರ್ನಾಟಕದ ರಾಜಕಾರಣವನ್ನು ಏಕಾಕಿಯಾಗಿ - ಕೆಲವರ ಕಣ್ಣಿಗೆ ಬಿರುಗಾಳಿ ರೂಪದಲ್ಲೂ - ಪ್ರವೇಶಿಸಿದೆ. ಮೂಲ ದಲಿತ ಚಳುವಳಿಯೋ, ಹತ್ತು ಹಲವು ಪುಡಿ ನಾಯಕರ ಬಾಲಂಗೋಚಿಗಳಾಗಿ ಒಡೆದು ಹೋಗಿ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದೆ. ಹಾಗಾದರೆ ಇದರೊಂದಿಗೆ, ಕಳೆದ ಮೂರು ದಶಕಗಳಲ್ಲಿ ಅಪಾರ ಶ್ರದ್ಧೆ, ಶ್ರಮ ಹಾಗೂ ತಾತ್ವಿಕ ಮುನ್ನೋಟದೊಂದಿಗೆ ಕಟ್ಟಲ್ಪಟ್ಟಿದ್ದ ದಲಿತ ಚಳುವಳಿ ಹಾಗೂ ರಾಜಕಾರಣ ಅಂತಿಮವಾಗಿ ಕೊನೆಗೊಂಡಂತಾಗಿದೆಯೇ? ಅಥವಾ ಅದು ಬಿ.ಎಸ್.ಪಿ ಮೂಲಕ ಹೊಸ ರೂಪ - ದಿಕ್ಕುಗಳನ್ನು ಪಡೆಯಲಾರಂಭಿಸಿದೆಯೇ? ಈ ಪ್ರಶ್ನೆಗಳ ಹಾಗೂ ಎರಡೂ ರೈತಸಂಘಗಳು ಒಗ್ಗೂಡಿ, ದಲಿತ ಸಂಘರ್ಷ ಸಮಿತಿಗಳ ಸಹಕಾರದೊಂದಿಗೆ `ಸರ್ವೋದಯ ಕರ್ನಾಟಕ' ಪಕ್ಷವನ್ನು ಪುನರುಜ್ಜೀವನಗೊಳಿಸಲು ಈಗ ನಡೆಯುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ, ಹೊಸ ಶೀರ್ಷಿಕೆ ಹಾಗೂ ಕೊನೆಯಲ್ಲಿ ಹೊಸ ಸೇರ್ಪಡೆಯನ್ನು ಪಡೆದಿರುವ ಈ ಲೇಖನವನ್ನು, ಇಂದು ಇನ್ನೊಂದು (ಹೊಸ)ಓದಿಗೆ ಅರ್ಹ ಎಂದು ಭಾವಿಸಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.
*
ಸುಮಾರು 25-30 ವರ್ಷಗಳಿಂದ ದಲಿತ ಚಳುವಳಿಯೊಂದಿಗೆ ನನ್ನ ಸಂಪರ್ಕವಿದೆ. ಆದರೆ ಈಗ ಆ ಸಂಪರ್ಕವಿದೆಯೆಂದು ನಾನು ನಿಜವಾಗಿ ಹೇಳಲಾರೆ. ಯಾಕೆಂದರೆ, ಮುಖ್ಯವಾಗಿ ಈಗ ದಲಿತ ಚಳುವಳಿ ಎಂಬುದೇ ಎಲ್ಲೂ ಕಾಣುತ್ತಿಲ್ಲ. ಹಾಗೇನಾದರೂ ಅದು ಕಣ್ಣಿಗೆ ಕಾಣುವಂತಿದ್ದರೆ, ಈಗ ಬಹುಜನ ಸಮಾಜ ಪಕ್ಷದ ಸಂಘಟನೆಯ ರೂಪದಲ್ಲಷ್ಟೇ ಕಾಣುತ್ತಿದೆ. ಆದರೆ ಎರಡು - ಮೂರು ದಶಕಗಳಿಂದಲೂ ದಲಿತ ಚಳುವಳಿಯನ್ನು ಸಹಾನುಭೂತಿಯಿಂದ ಗಮನಿಸುತ್ತಾ ಬಂದಿರುವ ನನಗೆ, ಬಹುಜನ ಸಮಾಜ ಪಕ್ಷದ ಯುವ ಸಂಘಟಕರ ಶಿಸ್ತು, ಬದ್ಧತೆ, ಅಂಬೇಡ್ಕರ್ವಾದವೆಂದು ಹೇಳಲಾಗುವ ವಿಚಾರಧಾರೆಯ ಉಗ್ರ ಪ್ರತಿಪಾದನೆ ಮತ್ತು ಪೆರಿಯಾರ್, ಜ್ಯೋತಿಬಾ ಫುಲೆ, ಶಾಹು ಮಹಾರಾಜ್ ಹಾಗೂ ಇತ್ತೀಚೆಗೆ ನಾಲ್ವಡಿ ಕೃಷ್ಣರಾಜ ಒಡೆಯರರ ಉಲ್ಲೇಖಗಳ ಹೊರತಾಗಿಯೂ, ಅದನ್ನು ದಲಿತ ಚಳುವಳಿಯೆಂದು ಪರಿಗಣಿಸಲು ಸಾಧ್ಯವಾಗುತ್ತಿಲ್ಲ. ಏಕೆ? ಈ ಪ್ರಶ್ನೆಯ ಹಿಂದೆಯೇ ಅಡಗಿದೆ ಸ್ವಾತಂತ್ರ್ಯೋತ್ತರ ಕರ್ನಾಟಕ ಕಂಡ ಅತ್ಯಂತ ನಿಜವಾದ ಹಾಗೂ ವಿಶಿಷ್ಟವಾದ ಚಳುವಳಿ ಎನಿಸಿದ ದಲಿತ ಚಳುವಳಿಯ ದುರಂತ ಕಥೆ.

-2-
ಆಗ-

ದಲಿತ ಸಂಘರ್ಷ ಸಮಿತಿಯ ತಾತ್ವಿಕ ಉದಾರತೆಯ ಉತ್ತುಂಗ ಕಾಲದಲ್ಲಿ ನಿರೂಪಿಸಿರಬಹುದಾದ `ದಲಿತ' ಪದದ ಅರ್ಥ ವ್ಯಾಪ್ತಿಯ ಯಾವ ಅಳತೆಗೂ ಸಿಗದಂತಹ ಸಾಮಾಜಿಕ ಹಿನ್ನೆಲೆಯುಳ್ಳ ನನಗೆ ದಲಿತ ಚಳುವಳಿ, ನನ್ನ ಚಳುವಳಿ ಅನ್ನಿಸಿತ್ತು. ತಾತ್ವಿಕವಾಗಿ ಸಮಾಜವಾದಿ ಹಿನ್ನೆಲೆಗೆ ಸೇರಿದ ನನಗೆ ಅಂದಿನ ಆ ದಲಿತ ಚಳುವಳಿ ಲೋಹಿಯಾ ನಿಧನಾನಂತರ ಅವನತಿಗೊಂಡಿದ್ದ ಸಮಾಜವಾದಿ ಚಳುವಳಿಯ ಪುನರುಜ್ಜೀವಿತ ರೂಪವಾಗಿ ಕಂಡಿತ್ತು. ಅಸಮಾನತೆಗಳಿಂದ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನೊಂದಿರುವ ಎಲ್ಲ ಚಹರೆಯ `ದಲಿತ'ರ ಲೌಕಿಕ ಹಾಗು ಅಧ್ಯಾತ್ಮಿಕ ನೆಮ್ಮದಿಯ ಗುರಿ ಇಟ್ಟುಕೊಂಡಿದ್ದ ಸಮಾಜವಾದಿ ಚಳುವಳಿಯು ತನ್ನ ಮಧ್ಯಮ ಜಾತಿ - ವರ್ಗಗಳ ಚಹರೆಗಳನ್ನು ಮೀರಿ ಬೆಳೆಯಲಾಗದೆ ಸ್ಥಗಿತಗೊಂಡಿದ್ದ ಸಮಯದಲ್ಲಿ ಹುಟ್ಟಿದ್ದ ಕರ್ನಾಟಕ ದಲಿತ ಚಳುವಳಿ, ನಿಜವಾದ ಸಮಾಜವಾದಿ ಚಳುವಳಿಯಾಗಿ ಬೆಳೆಯುವ ಎಲ್ಲ ಲಕ್ಷಣಗಳನ್ನೂ ಪ್ರದರ್ಶಿಸತೊಡಗಿತ್ತು. ಈ ದಲಿತ ಚಳುವಳಿಯ ನಾಯಕರು ಎಂದೂ ಜಾತಿವಾದಿಗಳಾಗಿರಲಿಲ್ಲ. ಅವರು ಅಂಬೇಡ್ಕರ್ ಎಂದು ಮಾತನಾಡುತ್ತಿದ್ದರೂ, ಅವರ ಅಂಬೇಡ್ಕರರ ಹಿಂದೆ ಗಾಂಧೀಜಿ, ಲೋಹಿಯಾ, ಮಾರ್ಕ್ಸ್ ಎಲ್ಲರೂ ಇರುತ್ತಿದ್ದರು. ಹಾಗಾಗಿ ಅವರು ನಿಜವಾದ ಸಮಾಜವಾದಿ ಚಳುವಳಿಯ ನಾಯಕರಾಗಲು ಎಲ್ಲ ಅರ್ಹತೆ ಪಡೆದಿದ್ದರು. ಆ ಅರ್ಹತೆಯಲ್ಲಿ ಅಂಬೇಡ್ಕರರ ನೋವು ಮತ್ತು ಅವಮಾನ, ಗಾಂಧೀಜಿಯ ದುಃಖ ಮತ್ತು ವಿಷಾದ, ಲೋಹಿಯಾರ ಪ್ರತಿಭೆ ಮತ್ತು ಪ್ರತಿಭಟನೆ ಹಾಗೂ ಮಾರ್ಕ್ಸ್ ನ ಬುದ್ಧಿ ಮತ್ತು ಮುನ್ನೋಟ ಎಲ್ಲ ಸೇರಿದ್ದವು. ಅವರು ಈ ಎಲ್ಲ ಮಾನವೀಯ ಆಯಾಮಗಳೊಂದಿಗೆ ರಾಜ್ಯಾದ್ಯಂತ ಸಂಘಟನೆ ಕಟ್ಟಿದರು. ನಮ್ಮಂತಹವರು ಅವರನ್ನು ಟೀಕಿಸುತ್ತಾ, ವಿಮರ್ಶಿಸುತ್ತಾ, ಬೆಂಬಲಿಸುತ್ತಾ ನಮ್ಮ ಕೈಲಾದ ರೀತಿಯಲ್ಲಿ ಅವರೊಂದಿಗೆ ಕೈಜೋಡಿಸಿದೆವು. ಯಾಕೆಂದರೆ ಜಾತಿ ವ್ಯವಸ್ಥೆ ಮೂಲವಾದ ಎಲ್ಲ ಸಾಮಾಜಿಕ - ಆರ್ಥಿಕ ಪಾಪಗಳಿಂದ ನಮ್ಮೆಲ್ಲರ ಮುಕ್ತಿಯನ್ನೂ ದಲಿತ ಚಳುವಳಿಯ ಯಶಸ್ಸಿನಲ್ಲಿ ನಮ್ಮಂತಹವರು ಕಾಣತೊಡಗಿದ್ದರು. ಸಂಘಟನೆ ಕಟ್ಟುವಾಗ ಅವರು ಕಟ್ಟಿಕೊಂಡು ಹಾಡುತ್ತಿದ್ದ ಹಾಡುಗಳ ಮಾರ್ದವತೆಗೆ ಸೋಲದವನೇ ಪರಮಪಾಪಿ ಎಂದು ನನಗೆ ಆಗ ಎಷ್ಟೋ ಸಲ ಅನ್ನಿಸುತ್ತಿತ್ತು:

`ಕೊಲೆ ಸುಲಿಗೆ ನಾಡಿನಲ್ಲಿ ಕುಡಗೋಲು, ಅತ್ಯಾಚಾರ; ನಾಡಲ್ಲವೋ ಇದು, ವಿಷದ ಸಮುದ್ರ...!'

ಈಗ-

ಎಲ್ಲಿವೆ ಆ ಹಾಡುಗಳು? ಎಲ್ಲಿ ಹೋಯಿತು ಆ ವಿಷಾದ, ಪ್ರತಿಭಟನೆ, ಮಾರ್ದವತೆ?

-3-

1985ರ ಆಸುಪಾಸಿನಲ್ಲಿ ಇರಬೇಕು. ಕೆಮ್ಮಣ್ಣುಗುಂಡಿಯ ಮೋಡ - ಮಂಜುಗಳ ಮಧ್ಯೆ ಐದಾರು ದಿನಗಳ ದಲಿತ ಅಧ್ಯಯನ ಶಿಬಿರವೊಂದು ಏರ್ಪಾಡಾಗಿತ್ತು. ಎಂತಹ ಶಿಬಿರವದು! ಅಲ್ಲಿ ಕರ್ನಾಟಕದ ಅತ್ಯುತ್ತಮ ಮನಸ್ಸುಗಳು ಸೇರಿದ್ದವು! ಲೋಹಿಯಾರಾಗಲಿ, ಅಂಬೇಡ್ಕರರಾಗಲೀ ಅಂತಹ ಶಿಬಿರ ನಡೆಸಿರಲಾರರು... ಅಲ್ಲಿ ಊಟಕ್ಕೆ ಕೊರತೆಯಿತ್ತು, ವಸತಿಗೆ ಕೊರತೆಯಿತ್ತು; ವಿಚಾರಕ್ಕೆ, ವಿಶ್ವಾಸಕ್ಕೆ ಕೊರತೆಯಿರಲಿಲ್ಲ. ಅಲ್ಲಿ ನಾವೆಲ್ಲ ಹೊಚ್ಚ ಹೊಸ ಕರ್ನಾಟಕದ ಕನಸು ಕಂಡೆವು.

ಆದರೆ ಅದೇ ಕೊನೆ... ಮತ್ತೆ ಆ ಕನಸು ಕಾಣದಾಯಿತು... ಆ ಹೊತ್ತಿಗೆ ಸರಿಯಾಗಿ ರೈತ ಸಂಘ ತಲೆ ಎತ್ತಿತ್ತು. ಅದು ತಲೆ ಎತ್ತಿತ್ತಾದರೂ ಹೇಗೆಂದರೆ, ಇಡೀ ಕರ್ನಾಟಕ ಅದರ ಕೂಗಿಗೆ ದಂಗು ಬಡಿದಿತ್ತು. ಹಾಗೆ ಬಡಿದ ದಂಗು ದಲಿತ ಚಳುವಳಿಯನ್ನು ವಿಚಲಿತಗೊಳಿಸಿತ್ತು - ಎಷ್ಟರ ಮಟ್ಟಿಗೆ ಅಂದರೆ, ಆ ದಲಿತ ಚಳುವಳಿಯಲ್ಲಿದ್ದ ಪ್ರಮುಖ ನಾಯಕರೊಬ್ಬರು ದಲಿತ ಚಳುವಳಿಯನ್ನು ಮಟ್ಟ ಹಾಕಲೆಂದೇ ರೈತ ಚಳುವಳಿಯನ್ನು ಹುಟ್ಟು ಹಾಕಲಾಯಿತು ಎಂದು ಇಂದು ಕಾಲದೂರದಲ್ಲಿ ನಿಂತು, ಅರ್ಧ ವಿಷಾದ, ಅರ್ಧ ಸಿಟ್ಟಿನಿಂದ ಆರೋಪಿಸುವಷ್ಟು. ಈ ಆರೋಪಕ್ಕೆ ಇಂದು ಪುರಾವೆಗಳು ಸುಲಭಕ್ಕೆ ಸಿಗಲಾರವು. ಸಿಕ್ಕರೂ ಅವು ಇನ್ನಷ್ಟು ವಾದ - ವಿವಾದಗಳಿಗೆ ಕಾರಣವಾದಾವು. ಆದರೆ ಇಂದು ರೈತ ಚಳುವಳಿಯೊಂದಿಗೆ ಕೈ ಹಿಡಿದು ನಡೆಯಬಯಸಿರುವ ದಲಿತ ಚಳುವಳಿ ಹಾಗೂ ದಲಿತ ಚಳುವಳಿಯೊಂದಿಗೆ ಕೈಹಿಡಿದು ನಡೆಯಬಯಸಿರುವ ರೈತ ಚಳುವಳಿ ಈ ಆರೋಪಕ್ಕೆ ಪುರಾವೆಗಳನ್ನು ಹುಡುಕತೊಡಗುವುದರ ಬದಲಾಗಿ, ಈ ಆರೋಪದ ಹಿಂದಿರುವ ಕಹಿಯ ಮೂಲ ಯಾವುದು ಎಂಬುದನ್ನು ಮುಖ್ಯವಾಗಿ ಪರಿಶೀಲಿಸಬೇಕಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಈ ಚಳುವಳಿಗಳ ಪರ್ವ ಕಾಲದಲ್ಲಿ ನಡೆದ ಪರಸ್ಪರ ತಾತ್ವಿಕ ಮುಖಾಮುಖಿ ಅಮೃತವನ್ನು ಕಡೆಯದೆ ವಿಷವನ್ನೇಕೆ ಕಡೆಯುವಂತಾಯಿತು? ಎರಡೂ ಚಳುವಳಿಗಳನ್ನು ಒಗ್ಗೂಡಿಸಿ ಒಂದು ಗ್ರಾಮ ಚಳುವಳಿಯನ್ನಾಗಿ ರೂಪಿಸುವ ಅಂದಿನ ಆ ಪ್ರಯತ್ನದ ಸಂದರ್ಭದಲ್ಲಿ ಎರಡೂ ಚಳುವಳಿಗಳ ಕೆಲವೇ ಕೆಲವು ನಾಯಕರುಗಳ ಹೊರತಾಗಿ ಮಿಕ್ಕವರೆಲ್ಲರೂ ಈ ಎರಡೂ ಚಳುವಳಿಗಳ ಆಸಕ್ತಿಗಳೇ, ಕಾಳಜಿಗಳೇ, ಗುರಿಗಳೇ, ಕಾರ್ಯಕ್ರಮಗಳೇ ಬೇರೆ ಎಂಬಂತೆ ವರ್ತಿಸಿದುದರ ಹಿಂದಿನ ಕಾರಣವೇನು? ಈ ವಿಫಲ ಪ್ರಯತ್ನದ ನಂತರ ಕ್ರಮೇಣ ಈ ಎರಡೂ ಚಳುವಳಿಗಳು ಛಿದ್ರ - ವಿಚ್ಛಿದ್ರವಾಗುತ್ತ ಹೋದವು ಏಕೆ?

ಈ ಬಹುಮುಖ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಈ ಎರಡೂ ಚಳುವಳಿಗಳ ಹಿಂದೆ ಕೆಲಸ ಮಾಡುತ್ತಿದ್ದ ಕರ್ನಾಟಕದ ಸಮಾಜವಾದಿ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕರ್ನಾಟಕದ ಮಟ್ಟಿಗಾದರೂ ಸಮಾಜವಾದಿ ಚಳುವಳಿಯು ನಮ್ಮ ಸಮಾಜದ ಎಲ್ಲ ವಿಷಮತೆಗಳ ಮೂಲವನ್ನು ಜಾತಿಪದ್ಧತಿಯೊಳಗೇ ಇರುವ ವಿಷಮತೆಯಲ್ಲಿ ಗುರುತಿಸಿತ್ತು. ಆದರೆ ಅಂತಹ ಜಾತಿ ಪದ್ಧತಿಗೆ ಚಾರಿತ್ರಿಕವಾಗಿ ಎಲ್ಲರೂ ಸಮಾನ ಉತ್ತರಾಧಿಕಾರಿಗಳಾಗಿದ್ದು; ಹಾಗಾಗಿ ಅದನ್ನು ಎಲ್ಲರೂ ಸಮಾನ ಸಂಕಲ್ಪದೊಡನೆ ಕಿತ್ತು ಹಾಕಲು ಪ್ರಯತ್ನಿಸಿದಾಗ ಮಾತ್ರ ಅದು ಬುಡ ಸಮೇತ ನಾಶವಾಗಬಲ್ಲುದು ಎಂಬ ರಾಜಕೀಯ ವಿವೇಕವನ್ನು ಸಮಾಜವಾದಿ ಚಳುವಳಿ ತೋರಲೇ ಇಲ್ಲ. ಬದಲಾಗಿ ಈ ಜಾತಿ ಪದ್ಧತಿಯಿಂದಾಗಿ ಅನುಭವಿಸಿದ ಚಾರಿತ್ರಿಕ ಲಾಭ ನಷ್ಟಗಳ ಲೆಕ್ಕಾಚಾರವೇ ಸಮಾಜವಾದಿಗಳ ಜಾತಿ ವಿರೋಧಿ ಹೋರಾಟದ ನೀತಿ ಸಂಹಿತೆಯಾಗಿ ರೂಪುಗೊಂಡಿತ್ತು. ಜಾತಿ ಪದ್ಧತಿ ಕುರಿತಂತೆ ಲೋಹಿಯಾ ಅವರು ವಿಶ್ವಾತ್ಮಕ ಪರಿಭಾಷೆಯಲ್ಲಿ ಮಂಡಿಸಿದ್ದ ತತ್ವ ಮೀಮಾಂಸೆಯನ್ನು ವಿಚಾರ ಸಂಕಿರಣಗಳಿಗಷ್ಟೇ ಮೀಸಲಿಟ್ಟ ಸಮಾಜವಾದಿಗಳು ತಮ್ಮ ಜಾತಿ ವಿರೋಧಿ ಕಾರ್ಯಕ್ರಮಗಳಿಗೆ, ಬ್ರಾಹ್ಮಣ ವಿರೋಧವನ್ನೇ ಮುಖ್ಯ ನೆಲೆಯನ್ನಾಗಿ ಮಾಡಿಕೊಂಡರು. ಜಾತಿ ಪದ್ಧತಿಯ ಮೂಲದಲ್ಲಿ ಬ್ರಾಹ್ಮಣನಿರುವನೆಂದೂ, ಆ ಬ್ರಾಹ್ಮಣನನ್ನು `ನಿರ್ಮೂಲ' ಮಾಡಿದರೆ ಜಾತಿ ಪದ್ಧತಿ ನಾಶವಾಗುವುದೆಂಬ ಪೆರಿಯಾರ್ ಚಳುವಳಿಯಿಂದ ದತ್ತವಾದ ಸುಲಭ - ಸರಳವಾದ ಮತ್ತು ಕೇವಲ ಭಾವನಾತ್ಮಕವಾದ ನಿಲುವಿಗೆ ಸಮಾಜವಾದಿ ಚಳುವಳಿ ಬಲಿಯಾಯಿತು. ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿನ ಪೆರಿಯಾರ್ ಮೂಲದ `ವಿಚಾರವಾದಿ ಚಳುವಳಿ'ಯ ಬಹುತೇಕ ನಾಯಕರು ಸಮಾಜವಾದಿ ಚಳುವಳಿಯ ನಾಯಕರೇ ಆಗಿದ್ದುದು ಆಕಸ್ಮಿಕವೇನಲ್ಲ. ಇದು ಸಮಾಜವಾದವನ್ನು ಬ್ರಾಹ್ಮಣೇತರವಾದವನ್ನಾಗಿ ಕುಬ್ಜಗೊಳಿಸುವಲ್ಲಿ ಮಾತ್ರ ಯಶಸ್ವಿಯಾಯಿತು. ಇದರಿಂದಾದ ದೊಡ್ಡ ದುರಂತ ಎಂದರೆ ಸಮಾಜವಾದಿ ಚಳುವಳಿಯೊಳಗೆ ಜಾತಿ ಪದ್ಧತಿಯು, ಗಾಯಗೊಂಡ ಕ್ರೂರ ಮೃಗದಂತೆ ಅಡ್ಡಾಡುತ್ತಾ ಸಮಾಜವಾದಿಗಳನ್ನು ಘಾಸಿಗೊಳಿಸತೊಡಗಿತು. ಬ್ರಾಹ್ಮಣ ವಿರೋಧವು ಬ್ರಾಹ್ಮಣ ವಿರೋಧವಾಗಿ ಮಾತ್ರ ಉಳಿಯದೆ, ಪ್ರತಿಯೊಂದು ಕೆಳ ಜಾತಿಯೂ ತನ್ನ ಮೇಲಿನ ಪ್ರತಿಯೊಂದು ಜಾತಿಯನ್ನೂ ಶತ್ರು ಪಾಳೆಯದಂತೆ ನೋಡುವ ಪ್ರವೃತ್ತಿಗೆ ದಾರಿ ಮಾಡಿಕೊಟ್ಟಿತು. ಸಮಾಜವಾದಿ ಚಳುವಳಿ ಸಮಗ್ರ ನೋಟವನ್ನೇ ಕಳೆದುಕೊಂಡು ತನ್ನ ಮನಸ್ಸನ್ನು ಒಡೆದುಕೊಂಡಿತು. ಈ ಒಡಕುಗಳಲ್ಲೇ ದಲಿತ ಚಳುವಳಿ, ಹಿಂದುಳಿದ ವರ್ಗಗಳ ಚಳುವಳಿ, ಕನ್ನಡ ಚಳುವಳಿ ಹಾಗೂ ರೈತ ಚಳುವಳಿಗಳು ಹುಟ್ಟಿಕೊಂಡಿದ್ದು. ಗತಿಗೆಟ್ಟ ಕೆಲವು ಸಮಾಜವಾದಿಗಳು ಇವೆಲ್ಲವನ್ನೂ ಸಮಾಜವಾದಿ ಚಳುವಳಿಗಳು ಎಂದು ಗುರುತಿಸಿಕೊಂಡು ಹೆಮ್ಮೆಪಡುವುದುಂಟು...

-4-

ಈ ಎಲ್ಲ ವಿಪರ್ಯಾಸಗಳ ನಡುವೆ ನನ್ನಂತಹವರನ್ನು ಕಾಡುವ ಬಹುಮುಖ್ಯ ಪ್ರಶ್ನೆ ಎಂದರೆ, ಏನೆಲ್ಲ ಸಮಾಜವಾದಿ ಆಶಯಗಳನ್ನು ಹೇಳಿಕೊಂಡರೂ ಅಂತಿಮವಾಗಿ ಲೌಕಿಕವಾಗಷ್ಟೇ - ಬೆಳೆ ಬೆಲೆ ಬೇಡಿಕೆ ಸುತ್ತ - ಬೆಳೆದ ರೈತ ಚಳುವಳಿಯು ದಲಿತ ಚಳುವಳಿಯನ್ನು ಪರಸ್ಪರ ಆ ಐತಿಹಾಸಿಕ ಮುಖಾಮುಖಿಯಲ್ಲಿ, ತನ್ನ ದಾರಿಗೆ ಅಡ್ಡಬಿದ್ದಿದ್ದ ಆಂಜನೇಯನ ಬಾಲವನ್ನು ನೋಡಿ ಅಸಹನೆಗೊಂಡ ಭೀಮನಂತೆ ವರ್ತಿಸಿದ್ದು ಆಶ್ಚರ್ಯಕರವಲ್ಲವಾದರೂ; ನೋವು - ವಿಷಾದಗಳನ್ನು ತುಂಬಿಕೊಂಡೇ ಬೆಳೆದ ದಲಿತ ಚಳುವಳಿಯು ರೈತ ಚಳುವಳಿಯೊಂದಿಗೆ ಆಂಜನೇಯನಂತೆ ಹಿರಿಯನ ಮಾರ್ದವತೆಯೊಂದಿಗೆ ಏಕೆ ವರ್ತಿಸಲಾಗಲಿಲ್ಲ ಎಂಬುದು. ದಲಿತ ಸಂಘರ್ಷ ಸಮಿತಿಯು ರೈತ ಸಂಘದೊಂದಿಗೆ ಜಗಳಕ್ಕಿಳಿಯದೆ ಅದನ್ನು ಪಳಗಿಸುವ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನೇಕೆ ಪ್ರದರ್ಶಿಸಲಾಗಲಿಲ್ಲ? ನನ್ನ ಅನುಮಾನ, ತನ್ನೆಲ್ಲ ಹಾಡು - ಹೋರಾಟಗಳ ಹೊರತಾಗಿಯೂ ದಲಿತ ಚಳುವಳಿಗೆ ಆತ್ಯಂತಿಕವಾಗಿ ಜಾತಿ ಪದ್ಧತಿಯ ಭಯದಿಂದ ಬಿಡುಗಡೆ ಸಿಕ್ಕಿರಲಿಲ್ಲ. ಈಗಲೂ ಹಾಗಾಗಿಯೇ ಅದು ನಿರ್ಣಾಯಕ ಸಂದರ್ಭದಲ್ಲಿ, ರೈತ ಸಂಘದ ಆರ್ಭಟಕ್ಕೆ ತಲ್ಲಣಗೊಂಡು ಅದನ್ನು ಗುಮಾನಿಯಿಂದ ನೋಡುವಂತಾಯಿತು. ಇದು ಜಾತಿ ಪದ್ಧತಿಯ ಸಮಸ್ಯೆಯನ್ನು ಇಡಿಯಾಗಿ ಮುಖಾಮುಖಿಯಾಗಿಸಿಕೊಂಡು ಅದನ್ನು ಸಂಪೂರ್ಣವಾಗಿ ಪರಿಹರಿಸಿಕೊಳ್ಳುವಲ್ಲಿ ಗಂಭೀರ ಪ್ರಯತ್ನ ಮಾಡದ ಸಮಾಜವಾದಿ ಚಳುವಳಿಯ ಸೋಲೆಂದೇ ನಾನು ಗುರುತಿಸಬಯಸುವೆ. ಅರ್ಧಂಬರ್ಧ ಹೊಡೆದು ಹಾಕಲ್ಪಟ್ಟಿರುವ ಜಾತಿ ಪದ್ಧತಿಯೆಂಬ ಹಾವು, ಇಂದು ಟಿಸಿಲು ಟಿಸಿಲಾಗಿ ಒಡೆದು ಹೋಗಿ ಅಲ್ಲಲ್ಲಿ ಸಡಿಲ ಗುಂಪುಗಳಾಗಿ ಅಸ್ತಿತ್ವದಲ್ಲಿರುವ ಸಮಾಜವಾದಿ ಚಳುವಳಿಯನ್ನು ಆಗಾಗ - ನಿರ್ಣಾಯಕ ಸಂದರ್ಭಗಳಲ್ಲಿ - ಕಚ್ಚುತ್ತಾ, ಎಚ್ಚರ ತಪ್ಪಿಸುತ್ತಲೇ ಇದೆ. ಆದರೆ ಒರಟಾದ ಸಮಕಾಲೀನ ರಾಜಕಾರಣದಲ್ಲಿ ತಮ್ಮ ಸೂಕ್ಷ್ಮತೆಯನ್ನೇ ಕಳೆದುಕೊಂಡಂತಿರುವ ಸಮಾಜವಾದಿಗಳು, ಪ್ರತಿ ಬಾರಿ ಎಚ್ಚರ ತಪ್ಪಿದಾಗಲೂ ಬೇರೇನನ್ನೋ ಕಾರಣಗಳನ್ನು ಹುಡುಕುತ್ತಾ ಕ್ರಮೇಣ ಸ್ವತಃ ತಾವೇ ಕಳೆದು ಹೋಗುತ್ತಿದ್ದಾರೆ. ದಲಿತ - ರೈತ ಚಳುವಳಿಗಳು ಕಳೆದು ಹೋಗಿರುವುದೂ ಹೀಗೇ - ಎಚ್ಚರ ತಪ್ಪಿತಪ್ಪಿ, ದಿಕ್ಕೆಟ್ಟು ಅಲೆಯುತ್ತಿವೆ. ದಲಿತ ಚಳವಳಿಗೆ ರೈತ ಚಳುವಳಿಯೇ ದಿಕ್ಕು, ರೈತ ಚಳುವಳಿಗಳಿಗೆ ದಲಿತ ಚಳುವಳಿಯೇ ದಿಕ್ಕು ಎಂಬ ಅರಿವು ಮೂಡಿದಾಗ ಮಾತ್ರ ಇವೆರಡೂ ಒಂದಾಗಿ ಜನರ ಕಣ್ಣಿಗೆ ಕಾಣಿಸಬಲ್ಲವು. ಈ ಎರಡೂ ಚಳುವಳಿಗಳ ಮನಸ್ಸುಗಳು ಜಾತಿ ಪದ್ಧತಿಯ ಒಳ ಸುಳಿಗಳಿಂದ ಬಿಡುಗಡೆಗೊಂಡಾಗ ಮಾತ್ರ ಈ ಅರಿವು ಮೂಡಬಲ್ಲುದು. ಜಾಗತೀಕರಣದ ಸವಾಲುಗಳನ್ನು ಎದುರಿಸಲು ಒಗ್ಗಟ್ಟಾಗಿ ಹೊರಟಿರುವ ಈ ಚಳುವಳಿಗಳು ಈ ಒಗ್ಗಟ್ಟಾಗುವ ಕ್ರಮದಲ್ಲೇ ಈ ಬಿಡುಗಡೆಗೂ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಬೇಕು. ಇದಕ್ಕಾಗಿ ಎರಡೂ ಚಳುವಳಿಗಳಿಗೂ ಗಾಂಧಿ - ಲೋಹಿಯಾ - ಅಂಬೇಡ್ಕರ್ ಸಮಾನ ಹಾಗೂ ಸಾಮಾನ್ಯ ನಾಯಕರಾಗಬೇಕು.

-5-

ಈ ಹಿನ್ನೆಲೆಯಲ್ಲಿ ನೋಡಿದಾಗ ಬಹುಜನ ಸಮಾಜ ಪಕ್ಷದ ನಿಲುವು - ಸಂಘಟನೆಗಳ ಮಿತಿಗಳು ಗೊತ್ತಾಗುತ್ತವೆ. ದುರಂತವೆಂದರೆ ಸಮಾಜವಾದಿ ಚಳುವಳಿಗೆ ಯಾವ ಜಾತಿ ಪದ್ಧತಿ ಉರುಳಾಗಿ ಪರಿಣಮಿಸಿದೆಯೋ ಅದನ್ನೇ ಬಹುಜನ ಸಮಾಜ ಪಕ್ಷ ಆಭರಣವೆಂಬಂತೆ ಧರಿಸಿಕೊಳ್ಳುತ್ತಿರುವುದು. ಹಾಗೆ ನೋಡಿದರೆ ದಲಿತ ಚಳುವಳಿ ಎಚ್ಚರ ತಪ್ಪಿದುದರ ಒಂದು ಪರಿಣಾಮವಾಗಿಯೇ ಕರ್ನಾಟಕದಲ್ಲಿ ಬಹುಜನ ಸಮಾಜ ಪಕ್ಷದ ಸಂಘಟನೆ ಆರಂಭವಾಯಿತೆಂದು ಹೇಳಬೇಕು. ಜಾತಿ ಪದ್ಧತಿಯ ಚರಿತ್ರೆಯನ್ನೇ ತನ್ನ ಸಿದ್ಧಾಂತವನ್ನಾಗಿ ಸ್ವೀಕರಿಸಿ, ಆ ಕಹಿ ಚರಿತ್ರೆಯ ಮೇಲೇ ಬಹುಜನರ ಭವಿಷ್ಯವನ್ನು ನಿರ್ಮಿಸಹೊರಟಿರುವ ಈ ಸಂಘಟನೆಗೆ; ಮನುಷ್ಯ ಚರಿತ್ರೆಗೆ ಮಾತ್ರ ಸೇರಿದವನಲ್ಲ, ಅವನು ವರ್ತಮಾನದಲ್ಲೂ ಇರುತ್ತಾ ಅವೆರಡನ್ನೂ ಮೀರುವುದರಲ್ಲೇ ಭವಿಷ್ಯವನ್ನು ನಿರ್ಮಿಸುತ್ತಿರುತ್ತಾನೆ ಎಂಬ ಪ್ರಾಥಮಿಕ ಅರಿವೂ ಇದ್ದಂತಿಲ್ಲ. ನೆನಪುಗಳು - ಅವು ಕಹಿಯಾಗೇ ಇರಲಿ, ಸಿಹಿಯಾಗೇ ಇರಲಿ - ಅವುಗಳನ್ನಷ್ಟೇ ಆಧರಿಸಿ ಒಂದು ರಾಜಕೀಯ ತತ್ವಜ್ಞಾನವನ್ನು ರೂಪಿಸಲಾಗುವುದಿಲ್ಲ. ಹಾಗೆ ರೂಪಿಸ ಹೊರಟವರು ವರ್ತಮಾನದ ನಿಷ್ಠುರ ಹೆಜ್ಜೆಗಳ ತೊತ್ತಳದುಳಿತಕ್ಕೆ ಸಿಕ್ಕಿ ಭವಿಷ್ಯವನ್ನೇ ಕಾಣದ ದುರಂತಕ್ಕೀಡಾಗುವರು. ಹಾಲು ಕುಡಿದ ಮಕ್ಕಳೇ ಬದುಕುತ್ತಿಲ್ಲ. ಇನ್ನು ವಿಷ ಕುಡಿಯಲೆಳಸುವ ಮಕ್ಕಳು? ಹೀಗಿರುವಾಗ ಪ್ರಜ್ಞಾಪೂರ್ವಕವಾಗಿಯೇ ಒಂದು ಜನಸಮೂಹವನ್ನು ದುರಂತದೆಡೆಗೆ ಒಯ್ಯಲಾಗುತ್ತಿರುವ ಪ್ರಯತ್ನವನ್ನು ದಲಿತ ಚಳುವಳಿಯೆಂದೋ ಮತ್ತೊಂದು ಚಳುವಳಿಯೆಂದೋ ಹೇಗೆ ಕರೆಯಲಾದೀತು?

*

ಈಗ ಸೇರಿಸಿದ್ದು: ಕರೆಯಬೇಡಿ; ಹಾಗೆಂದು ಕರೆಯಲು ಯಾರು ಹೇಳಿದ್ದು ನಿಮಗೆ ಎನ್ನುತ್ತಾರೆ ಈಗ ಬಹುಜನ ಸಮಾಜ ಪಕ್ಷದ ನಾಯಕರು! ಏಕೆಂದರೆ, `ಜನಿವಾರ, ಕತ್ತಿ, ತಕ್ಕಡಿ - ಈ ಮೂರಕ್ಕೆ ಚಪ್ಪಲಿಯಿಂದ ಹೊಡಿ' ಎಂಬ ಪ್ರಚೋದಕ ಘೊಷಣೆ ಮೂಲಕ ಎರಡು ದಶಕಗಳ ಹಿಂದೆ ದ್ವಿಜೇತರ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯೇತರ) ಜಾತಿಗಳ ರಾಜಕೀಯ ಸಂಘಟನೆಗೆ ತೊಡಗಿದ ಬಿಎಸ್‌ಪಿ, ಇಂದು ತನ್ನನ್ನು ಇದ್ದಕ್ಕಿದಂತೆ ಸರ್ವಜನರ ಪಕ್ಷವೆಂದು ಹೇಳಿಕೊಳ್ಳತೊಡಗಿದೆ. ಮನುವಾದದ ವಿರುದ್ಧವಾದುದೆಂದು ಹೇಳಲಾದ ರಾಜಕೀಯ ತತ್ವಾದರ್ಶಗಳೊಂದಿಗೆ ಸಂಘಟನೆ ಆರಂಭಿಸಿದ ಈ ಪಕ್ಷವೀಗ ಚುನಾವಣಾ ರಾಜಕೀಯವೇ ನಿಜವಾದ ರಾಜಕಾರಣವೆಂಬ `ವಾಸ್ತವಿಕ ಸತ್ಯ'ಕ್ಕಷ್ಟೇ ತನ್ನನ್ನು ಮಿತಿಗೊಳಿಸಿಕೊಂಡು, ತನ್ನೆಲ್ಲ ತತ್ವಾದರ್ಶಗಳಿಗೂ ತಿಲಾಂಜಲಿ ನೀಡಿದೆ. ತಾನು ಏನು ಮಾಡಲು ಹೊರಟು, ಏನು ಮಾಡತೊಡಗಿದ್ದೇನೆ ಎಂಬ ಪರಿವೇ ಇಲ್ಲದ ಈ ಪಕ್ಷ, ಜನತೆಗೆ ಯಾವುದರ ಬಗೆಗೂ ಏನೂ ಹೇಳದೆ; ಸದ್ಯಕ್ಕೆ ತನ್ನ ನಾಯಕಿ ಮಾಯಾವತಿಯವರನ್ನು ರಾಷ್ಟ್ರದ ಪ್ರಧಾನ ಮಂತ್ರಿಯನ್ನಾಗಿ ಮಾಡುವ ಒಂದಂಶದ ಕಾರ್ಯಕ್ರಮವನ್ನು ತನ್ನ ಮುಂದಿಟ್ಟುಕೊಂಡಿದೆ. ಅದಕ್ಕಾಗಿ ಅದು ಮಾಡುತ್ತಿರುವ ರಾಜಕಾರಣದ ಮಾದರಿ ಮೊನ್ನೆ ಬೆಂಗಳೂರಿನ ಅದರ ಬೃಹತ್ ಸಮಾವೇಶದಲ್ಲಿ ಪ್ರದರ್ಶನಗೊಂಡಿತು.

ಮಾಯಾವತಿ ಚಿನ್ನದ (ಲೇಪನದ?) ಕಿರೀಟ ಧರಿಸಿ, ಚಿನ್ನದ ಕತ್ತಿ ಸ್ವೀಕರಿಸಿದರು! ಇದು ಜನಪ್ರಿಯ ರಾಜಕಾರಣದ ಒಂದು ಸಾಮಾನ್ಯ ವರಸೆ ಎಂದು ನಿರ್ಲಕ್ಷಿಸಬಹುದೆನ್ನುವ ಹೊತ್ತಿಗೆ ಅವರು ತಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆಯನ್ನು ಆ ಸಾರ್ವಜನಿಕ ಸಭೆಯಲ್ಲಿ, ಜಾತಿ - ಉಪಜಾತಿ ಆಧಾರದ ಮೇಲೆ ಸಮರ್ಥಿಸಿಕೊಳ್ಳುತ್ತಾ ಏಕಾಏಕಿ ಪ್ರಕಟಿಸಿ, ಎಲ್ಲರನ್ನೂ - ಬಹುಶಃ ಅವರ ಪಕ್ಷದ ಪದಾಧಿಕಾರಿಗಳು ಹಾಗೂ ಅಭಿಮಾನಿಗಳೂ ಸೇರಿದಂತೆ - ದಂಗು ಬಡಿಸಿದರು. ಇವರು ಈ ಚಿನ್ನದ ಕಿರೀಟ, ಕತ್ತಿಗಳ ಅಸಭ್ಯ ಹಾಗೂ ಎಡಗೈ - ಬಲಗೈ ಲೆಕ್ಕಾಚಾರದ ಭಂಡ ರಾಜಕಾರಣ ಮಾಡುತ್ತಲೇ ಸರ್ವಜಾತಿಗಳ ಬೆಂಬಲ ಕೇಳುವ ಧೈರ್ಯ ಮಾಡುತ್ತಾರೆಂದರೆ ಹಾಗೂ ಅದಕ್ಕೆ ನಮ್ಮ ಕೆಲವು ಹಿರಿಯ ರಾಜಕೀಯ ನಾಯಕರು ಸ್ಪಂದಿಸುತ್ತಾರೆಂದರೆ, ನಮ್ಮ ಇಂದಿನ ರಾಜಕಾರಣ ಎಷ್ಟು ನಿರ್ಲಜ್ಜಗೊಂಡಿರಬೇಕು! ಈ ನಿರ್ಲಜ್ಜ ರಾಜಕಾರಣದ ಪ್ರತೀಕವಾಗಿ ದಲಿತ ಮಹಿಳೆಯೊಬ್ಬರು ಒಡಮೂಡಿ ನಿಂತಿರುವುದು ಹಾಗೂ ಆಕೆಯ ಎದುರಿಗೆ ಒಂದು ಕಾಲದಲ್ಲಿ ರಾಜ್ಯದ ವಿಚಾರವಂತ ಜನತೆಯ ಸಾಮಾಜಿಕ ಆತ್ಮಸಾಕ್ಷಿಯಾಗಿ ಕೆಲಸ ಮಾಡಿದ ದಲಿತ ಚಳುವಳಿ ಇಂದು ದೀನವಾಗಿ, ಅಸಹಾಯಕವಾಗಿ ನಿಲ್ಲುವಂತಾಗಿರುವುದು ಕರ್ನಾಟಕದ ದಲಿತ ರಾಜಕಾರಣ - ಇದರಲ್ಲಿ ಎಲ್ಲ ಪಕ್ಷಗಳ ದಲಿತ ನಾಯಕರ ಪಾಲಿದೆ - ತಲುಪಿರುವ ದರಿದ್ರ ಸ್ಥಿತಿಯ ಸಂಕೇತವೇ ಆಗಿದೆ.

ಜಾತಿ ವಿನಾಶದ ಆದರ್ಶ ಹೊಂದಿದ್ದ ಸಮಾಜವಾದಿ ಚಳುವಳಿಯಿಂದ ಸ್ಫೂರ್ತಿ ಪಡೆದಿದ್ದ ಕರ್ನಾಟಕದ ದಲಿತ ಚಳುವಳಿ ಅದಕ್ಕೆ ತದ್ವಿರುದ್ಧವಾಗಿ; ಚಿನ್ನದ ಕತ್ತಿ, ಕಿರೀಟಗಳೊಂದಿಗೆ ಜಾತಿ ಸಮಾಜವನ್ನು ಪೋಷಿಸುವ ದಲಿತ ನೇತೃತ್ವದ ಪಕ್ಷವೊಂದಕ್ಕೆ ಜಾಗಬಿಟ್ಟು ಕೊಡುವಂತಾಗಿರುವುದು, ನಿಜವಾಗಿಯೂ ನಮ್ಮ ದಲಿತ ಚಳುವಳಿಯ ವೈಫಲ್ಯವೋ ಅಥವಾ ನಾವು ಇಷ್ಟರವರೆಗೆ ನಂಬಿಕೊಂಡು ಬಂದಿದ್ದ ಸಮಾಜವಾದಿ ತತ್ವದ ಶಿಥಿಲತೆಯೋ ಹೇಳಲಾಗದಷ್ಟು, ಇಂದಿನ ಕರ್ನಾಟಕದ ರಾಜಕಾರಣ `ಅತಿವಾಸ್ತವವಾದಿ'ತ್ವದಲ್ಲಿ ಮುಳುಗಿಹೋಗಿದೆ.