ಕರ್ನಾಟಕದ ರಕ್ಷಣೆ ಯಾರಿಂದ?

ಕರ್ನಾಟಕದ ರಕ್ಷಣೆ ಯಾರಿಂದ?

ಬರಹ

ಕರ್ನಾಟಕದ ರಕ್ಷಣೆ ಯಾರಿಂದ?

ಸಮಾಜವಾದಿ ಗೆಳೆಯ ಶ್ರೀನಿವಾಸ ಕುಮಾರ್ ಇನ್ನಿಲ್ಲ ಎಂದರೆ ನಂಬುವುದು ಕಷ್ಟ. ಇನ್ನೂ ಮಧ್ಯ ವಯಸ್ಸಿನಲ್ಲಿದ್ದ ಅವರು ಮೊನ್ನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಶ್ರೀನಿವಾಸ ಕುಮಾರ್ ಮೂಲತಃ ತುಮಕೂರು ಜಿಲ್ಲೆಯವರಾದರೂ ಉದ್ಯೋಗ ನಿಮಿತ್ತ ದೂರದ ಚಾಮರಾಜ ನಗರದಲ್ಲಿ ನೆಲೆಸಿದ್ದು, ಅಲ್ಲಿ ಅಪೂರ್ವ ಡಿಸಿಲ್ವ, ಬಿ.ರಾಜೇಶ್ ಮುಂತಾದ ಯುವ ಗೆಳೆಯರೊಡಗೂಡಿ ಸಮಾಜವಾದಿ ಅಧ್ಯಯನ ಕೇಂದ್ರವೆಂಬುದೊಂದನ್ನು ಕಟ್ಟಿಕೊಡಿದ್ದರು, ಅದರಡಿಯಲ್ಲಿ ಅವರು ತಮ್ಮ ಮಿತಿಗಳಲ್ಲೇ ಅನೇಕ ರೀತಿಯ ಸಮಾಜವಾದಿ ಚಟುವಟಿಕಗಳಲ್ಲಿ ತೊಡಗಿಕೊಂಡಿದ್ದರು: ತಮ್ಮ ಗೆಳೆಯರನ್ನು ಅಂತರ್ಜಾತಿ ಹಾಗೂ ಅಂತರ್ಧಮೀಯ ಮದುವೆಗಳಿಗೆ ಪ್ರೋತ್ಸಾಹಿಸಿ, ಸ್ಥಳೀಯವಾಗಿ ಅದನ್ನೊಂದು ಸಣ್ಣ ಚಳುವಳಿಯಾಗಿ ರೂಪಿಸಿದ್ದರು. ಸಮಾಜವಾದಿ ಸಾಹಿತ್ಯವನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನೂ ಅವರು ಮಾಡಿದ್ದರು. ಕಂಪ್ಯೂಟರ್ ನಿರ್ವಹಣೆಯಲ್ಲಿ ಪರಿಣತಿ ಹೊಂದಿದ್ದ ಶ್ರೀನಿವಾಸ ಕುಮಾರ್, ಇತ್ತೀಚಿನ ದಿನಗಳಲ್ಲಿ ಲೋಹಿಯಾ ಕುರಿತ ವೆಬ್ - ಸೈಟೊಂದನ್ನು ಸ್ಥಾಪಿಸುವ ಸಾಹಸದಲ್ಲಿ ತೊಡಗಿದ್ದರು. ಅದಕ್ಕಾಗಿ ನನ್ನಿಂದ ಲೋಹಿಯಾ ಸಂಪಾದಕತ್ವದ ಹಳೆಯ 'ಮ್ಯಾನ್ಕೈಂಡ್' ಸಂಚಿಕೆಗಳನ್ನು ತರಿಸಿಕೊಂಡಿದ್ದರು. ಈ ಕೆಲಸ ಎಷ್ಟು ಪೂರ್ಣವಾಗಿದೆಯೋ ತಿಳಿಯದು. ಸರಳ ಸಜ್ಜನರಾಗಿದ್ದ ಶ್ರೀನಿವಾಸಕುಮಾರ್, ಬಹಳಷ್ಟು ಸಮಾಜವಾದಿಗಳ ಕಾರ್ಯಶೈಲಿಗೆ ವಿರುದ್ಧವಾಗಿ, ಎಲೆ ಮರೆಯ ಕಾಯಿಯಂತೆ ಕೆಲಸ ಮಾಡಿ ಕಣ್ಮರೆಯಾಗಿದ್ದಾರೆ. ಈ ಕಾಲದಲ್ಲಿ ಸಮಾಜವಾದಿ ಎನಿಸಿಕೊಳ್ಳಲು ಸಾಕಷ್ಟು ಧೈರ್ಯ ಹಾಗೂ ಬದ್ಧತೆ ಬೇಕು. ಅಂತಹ ಅಪರೂಪದ ಧೈರ್ಯ, ಬದ್ಧತೆಗಳಿದ್ದ ಶ್ರೀನಿವಾಸ ಕುಮಾರ್‍ರ ಸಾವು ಅವರ ಗೆಳೆಯರಲ್ಲಿ ಅಪಾರ ದುಃಖವನ್ನುಂಟು ಮಾಡಿರುವುದು ಸಹಜವೇ. ಆದರೆ, ಕನಿಷ್ಟ ಅವರ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸುವುದೇ ಆ ಚೇತನಕ್ಕೆ ಈ ಗೆಳೆಯರು ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.

ಈ ಕಾಲ ಶ್ರೀನಿವಾಸ ಕುಮಾರ್ರಂತಹವ ತಾತ್ವಿಕ ಬದ್ಧತೆಯಿದ್ದವರು ಬೆಳಕಿಗೆ ಬರುವ ಕಾಲವಲ್ಲ. ಏನಿದ್ದರೂ, ಪ್ರಮೋದ್ ಮುತಾಲಿಕ ಅಥವಾ ನಾರಾಯಣ ಗೌಡರಂತಹ ಬೀದಿ ಬಂಟರು ಮೆರೆಯುವ ಕಾಲ. ಇತ್ತೀಚೆಗೆ ರೈಲ್ವೇ ನೇಮಕಾತಿಯ ವಿರುದ್ಧ ಬೆಂಗಳೂರಿನಲ್ಲಿ ನಡೆದ ಮತ್ತು ರಾಜ್ಯದ ಹಲವು ಕಡೆ ಪ್ರತಿಧ್ವನಿಸಿದ ಪ್ರತಿಭಟನೆಯನ್ನೇ ನೋಡಿ. ವಸೂಲಾತಿ ಮೂಲಕ ಅಪಾರ ಆಸ್ತಿ ಸಂಗ್ರಹ ಹಾಗೂ ಅನೇಕ ರೀತಿಯ ದುಂಡಾವರ್ತಿಯ ಆರೋಪಗಳನ್ನು ತಮ್ಮ ಮಾಜಿ ಸಹಚರರಿಂದಲೇ ಎದುರಿಸುತ್ತಿರುವ ಟಿ.ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ, ರೈಲ್ವೇ ಇಲಾಖೆ ತನ್ನ ನೇಮಕಾತಿ ಪ್ರಕ್ರಿಯೆಯನ್ನು ಅಮಾನತ್ತಿನಲ್ಲಿಡಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿ ಇಂದು ಒಂದು ಸಾರ್ವಜನಿಕ ಮಾನ್ಯತೆ ಹಾಗೂ ಗೌರವಾನ್ವಿತತೆಗಳನ್ನು ಗಳಿಸಿಕೊಳ್ಳುವಂತಾಗಿದೆ. ಹೋದ ವಾರದ ಸಂಪಾದಕೀಯದಲ್ಲಿ ರೇಷ್ಮೆಯವರು ಹೇಳಿದಂತೆ, ಇದಕ್ಕೆ ಕಾರಣ ನಮ್ಮ ರಾಜಕೀಯ ನಾಯಕತ್ವದ ವೈಫಲ್ಯವೇ ಆಗಿದೆ. ನಮ್ಮದು ಪ್ರಾತಿನಿಧಿಕ ಪ್ರಜಾಪ್ರಭುತ್ವ ವ್ಯವಸ್ಥೆ. ಅಂದರೆ, ಜನರ ಅಧಿಕೃತ ಪ್ರತಿನಿಧಿಗಳು ಜನರ ಹಿತಾಸಕ್ತಿಗಳನ್ನು ಸಂರಕ್ಷಿಸುವ ವ್ಯವಸ್ಥೆ. ಆದರೆ ಇಂದು ಈ ಅಧಿಕೃತ ಜನ ಪ್ರತಿನಿಧಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿ, ಅನಧಿಕೃತ ಜನ ಪ್ರತಿನಿಧಿಗಳಿಗೆ ರಾಜ್ಯ ವ್ಯವಸ್ಥೆಯನ್ನು ವಹಿಸಿಕೊಡುತ್ತಿದ್ದಾರೆ.

ನಮ್ಮ ಪ್ರಜಾಪ್ರಭುತ್ವದಲ್ಲಿ ಅನಧಿಕೃತ ಜನ ಪ್ರತಿನಿಧಿಗಳಿಗೆ ಜಾಗವಿಲ್ಲವೆಂದಲ್ಲ. ಜನರ ಹಿತಾಸಕ್ತಿಗಳು ಧಕ್ಕೆಗೊಳಗಾದಾಗಲೆಲ್ಲ ಆ ಬಗ್ಗೆ ಜಾಗೃತಿ ಮೂಡಿಸಲು ಅನಧಿಕೃತ ಜನಸಂಘಟನೆಗಳು ಅಗತ್ಯ. ಅವುಗಳ ಪ್ರತಿನಿಧಿಗಳು ಅಥವಾ ನಾಯಕರೆನಿಕೊಂಡವರು ಅಧಿಕೃತ ಪ್ರತಿನಿಧಿಗಳ ಮೇಲೆ ಒತ್ತಡ ಹಾಕಿ ಅವರ ಮೂಲಕ ತಮ್ಮ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳುವಂತಹ ಕಾರ್ಯಾಚರಣೆಗಳಲ್ಲಿ ತೊಡಗುವುದು ಒಂದು ಕ್ರಿಯಾಶೀಲ ಪ್ರಜಾಪ್ರಭುತ್ವದ ಲಕ್ಷಣ. ಆದರೆ ಇಂದು ಕಂಡುಬರುತ್ತಿರುವುದೇನೆಂದರೆ, ಅನಧಿಕೃತ ಜನ ಪ್ರತಿನಿಧಿಗಳೇ ನೇರವಾಗಿ ವ್ಯವಸ್ಥೆಗೆ ಸವಾಲು ಹಾಕಿ ವ್ಯವಸ್ಥೆಯಿಂದ ಪ್ರತಿಸ್ಪಂದನವನ್ನೂ, ಆ ಮೂಲಕ ಮಾನ್ಯತೆಯನ್ನೂ ಪಡೆಯುತ್ತಿರುವುದು! ಇದು, ನಮ್ಮಲ್ಲಿ ಪ್ರಾತಿನಿಧಿಕ ಪ್ರಜಾಪ್ರಭುತ್ವ ವ್ಯವಸ್ಥೆ ಸೋಲುತ್ತಿರುವ, ಅರಾಜಕತೆಗೆ ದಾರಿ ಮಾಡಿಕೊಡುತ್ತಿರುವ ಸೂಚನೆಯಷ್ಟೇ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಂದು ಒಂದು ಕಡೆಯಿಂದ ಕಾರ್ಪೋರೇಟ್‌ಶಾಹಿ ತನ್ನ ಧನಮದದ ಮೂಲಕ ಬೆದರಿಕೆ ಹಾಕುತ್ತಿದ್ದರೆ, ಇನ್ನೊಂದು ಕಡೆ ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಜನಸಾಮಾನ್ಯರ ಅನಧಿಕೃತ ಪ್ರತಿನಿಧಿಗಳು ತಮ್ಮ ದುಂಡಾವೃತ್ತಿಯ ಮೂಲಕ ಬೆದರಿಕೆ ಹಾಕುತ್ತಿದ್ದಾರೆ.

ಮೊನ್ನೆ ವಿಶ್ವಬ್ಯಾಂಕಿನ ಆರ್ಥಿಕ ಸಲಹೆಗಾರರೆಂದು ಹೇಳಲಾದ ಬಾಲಸುಬ್ರಹ್ಮಣ್ಯಂ ಎಂಬುವವರು ಕರ್ನಾಟಕವನ್ನು ಭಾರತದಲ್ಲೇ ಅತ್ಯಂತ ಭ್ರಷ್ಟ ರಾಜ್ಯವೆಂದು ಕರೆದಿದ್ದಾರೆ. ಇದಕ್ಕೂ, ರಾಜ್ಯದಲ್ಲಿ ಇಂದು ಅನೇಕ ರೀತಿಯ ಅಸಂಖ್ಯಾತ ವೇದಿಕೆಗಳು, ಸೇನೆಗಳು, ದಳಗಳು, ಅಭಿಮಾನಿ ಸಂಘಗಳು ತಲೆ ಎತ್ತುತ್ತಿರುವುದಕ್ಕೂ ಸಂಬಂಧವಿದ್ದಂತೆ ತೋರುತ್ತದೆ. ನಮ್ಮ ಶಾಸಕಾಂಗ, ಕಾರ್ಯಾಂಗಗಳೆರಡೂ ಭ್ರಷ್ಟತೆಯ ಭಾರದಲ್ಲಿ ಕುಸಿದು ಬಿದ್ದು, ನ್ಯಾಯಾಂಗ ಅದನ್ನು ಅಸಹಾಯಕವಾಗಿ ನೋಡುವಂತಹ ಸ್ಥಿತಿ ಉಂಟಾದಾಗ ಖಾಸಗಿ ದಳಗಳು - ಒಳ್ಳೆಯದು, ಕೆಟ್ಟದು ಎರಡಕ್ಕೂ - ಹುಟ್ಟಿಕೊಳ್ಳುವುದು ಸಹಜವೇ ಆಗಿದೆ . ಕಾರ್ಪೋರೇಟ್‌ಶಾಹಿ ತನ್ನ ಮಾನವ ಸಂಪನ್ಮೂಲ ವಿಭಾಗದ ಮೂಲಕ ಸ್ವೋಪಜ್ಞವಾದ ಹೆಸರುಗಳಲ್ಲಿ ಖಾಸಗಿ ದಳಗಳನ್ನು ರಚಿಸಿಕೊಂಡು ಅವುಗಳ ಮೂಲಕ ತುಂಬಾ ನಾಜೂಕಾಗಿ (ಅಥವಾ ನಾಜೂಕಯ್ಯಗಳಾಗಿ?) ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಕೊಳ್ಳತೊಡಗಿದ್ದರೆ, ಸಾಮಾನ್ಯ ಜನತೆ ತಮ್ಮದೇ ಬೀದಿ ಹೋರಾಟದ ಅನಧಿಕೃತ ದಳ, ಸೇನೆ, ವೇದಿಕೆ, ಸಂಘಗಳ ಮೂಲಕ ದೊಂಬಿ, ಗಲಭೆ, ಪ್ರತಿಭಟನೆ, ಮೆರವಣಿಗೆಗಳನ್ನು ಏರ್ಪಡಿಸಿಕೊಂಡು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಕೊಳ್ಳತೊಡಗಿದ್ದಾರೆ. ಇದರಲ್ಲಿನ ಮುಖ್ಯ ಅಪಾಯವೆಂದರೆ, ಆ ನಾಜೂಕುತನದಲ್ಲಿನ ಜಾಣ ಸುಳ್ಳು, ಮೋಸ, ತಟವಟ, ಆಮಿಷ ಅಥವಾ ಈ ದೊಂಬಿ - ಮೆರವಣಿಗೆಗಳಲ್ಲಿನ ಹಿಂಸಾಚಾರ, ಸಾರ್ವಜನಿಕ ಜೀವನದ ಅಸ್ತವ್ಯಸ್ತತೆಗಳಿಗಿಂತ ಹೆಚ್ಚಾಗಿ, ಅವು ಸೃಷ್ಟಿಸುವ ದೊಡ್ಡ ಪ್ರಚಾರ - ಗೊಂದಲಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯೆಂಬುದೇ ಖಾಸಗಿ ಹಿತಾಸಕ್ತಿಯಾಗಿ ಮಾರ್ಪಾಡಾಗುವುದು. ನಮ್ಮ ಕಾರ್ಪೋರೇಟ್ ಸಂಸ್ಥೆಗಳ ಬರೀ ಬೆಂಗಳೂರು ಕೇಂದ್ರಿತ ಅಭಿವೃದ್ಧಿ ಬೇಡಿಕೆಗಳನ್ನು ನೋಡಿದರೆ ಅಥವಾ ಕರ್ನಾಟಕ ರಕ್ಷಣಾ ವೇದಿಕೆಯ ಬ್ಯಾನರ್ಗಳ ತುಂಬಾ ವ್ಯಾಪಿಸಿರುವ ಅದರ ನಾಯಕ ಮಣಿಗಳ ಮುಖಾರವಿಂದಗಳನ್ನು ನೋಡಿದರೆ ಇದು ವೇದ್ಯವಾದೀತು.

ಅಂದ ಮಾತ್ರಕ್ಕೆ ನಾನು ಕರ್ನಾಟಕ ರಕ್ಷಣಾ ವೇದಿಕೆಯ ಇತ್ತೀಚಿನ ಹೋರಾಟದ ಮಹತ್ವವನ್ನು ಅಲ್ಲಗೆಳೆಯುತ್ತಿಲ್ಲ. ಈ ಹೋರಾಟದ ಮೂಲಕ ಅದು ಗಳಿಸಿಕೊಂಡಿರುವ ಕೀರ್ತಿಗೆ ಅದು ನಿಜವಾಗಿಯೂ ಬಾಧ್ಯವೇ ಆಗಿದೆ. ಆದರೆ, ಭಾರತದ ಸ್ವತಂತ್ರ ಪ್ರಜೆಗಳಾಗಿ ಕನ್ನಡಿಗರ - ಕರ್ನಾಟಕದವರ ಹಕ್ಕುಗಳನ್ನು ಎತಿ ಹಿಡಿಯಲು ಎಷ್ಟೆಲ್ಲ ವೇದಿಕೆಗಳನ್ನು ನಮ್ಮ ಪ್ರಜಾಪ್ರಭುತ್ವ ಕಲ್ಪಿಸಿ ಕೊಟ್ಟಿದ್ದರೂ - ಸಂಸತ್ತು, ರಾಜ್ಯ ಶಾಸನ ಸಭೆ, ನ್ಯಾಯಾಂಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಇತ್ಯಾದಿಗಳು - ಕನ್ನಡಿಗರು ಯಾವಾಗಲೂ ಸಾರ್ವಜನಿಕ ಜೀವನವನ್ನು ಅಸ್ತವ್ಯಸ್ತಗೊಳಿಸುವ ದುಂಡಾವರ್ತಿಯ ಮೂಲಕವೇ ಮತ್ತು ಅನ್ಯ ಭಾಷಿಕ ಸಮುದಾಯಗಳ ವಿರುದ್ಧ ಕಹಿ ಹುಟ್ಟಿಸುತ್ತಲೇ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಉಂಟಾಗಿರುವ ಬಗ್ಗೆ ನಮಗೆ ವಿಷಾದವೂ ಉಂಟಾಗಬೇಕು. ರಕ್ಷಣಾ ವೇದಿಕೆಯ ಹೋರಾಟ ದೊಡ್ಡ ಸುದ್ದಿಯಾಗಿ ಸಾರ್ವಜನಿಕರ ಗಮನ ಸೆಳೆದ ಮೇಲೇ ಅಲ್ಲವೇ, ಈ ಎಲ್ಲ ಅಧಿಕೃತ ವೇದಿಕೆಗಳ ಸದಸ್ಯರು ಹೋರಾಟದಲ್ಲಿ ತಾವೂ ಇದ್ದೇವೆ ಎಂದು ಮುಖ ತೋರಿಸ ಹೊರಟದ್ದು? ಕನ್ನಡದ ಜನಸಮುದಾಯ ಭಾರತವೆಂಬ ಒಕ್ಕೂಟದ ಒಂದು ಭಾಗವಾಗಿರುವುದು ತಮ್ಮ ಕುಲ ಅಸ್ಮಿತೆಯನ್ನು ಕಳೆದುಕೊಳ್ಳುವುದಕ್ಕಲ್ಲ; ಬದಲಿಗೆ ಅದನ್ನು ಇನ್ನಷ್ಟು ಸಂಪನ್ನಗೊಳಿಸಿಕೊಳ್ಳುವ ಮೂಲಕ ಈ ಒಕ್ಕೂಟವನ್ನು ಬಲಗೊಳಿಸಲು. ನಮ್ಮ ರಾಷ್ಟ್ರೀಯ (ಸ್ವಾತಂತ್ರ್ಯ) ಹೋರಾಟ ಹಾಗೂ ಕರ್ನಾಟಕ ಏಕೀಕರಣ ಹೋರಾಟಗಳು ನಡೆದದ್ದು ಈ ಆಶಯದೊಂದಿಗೇ. ಹೀಗಾಗಿಯೇ ನಮ್ಮ ಸಂವಿಧಾನ ಈ ರಾಷ್ಟ್ರವನ್ನು ಸಾಂಘಿಕ ಸ್ವರೂಪದ ರಾಷ್ಟ್ರವನ್ನಾಗಿ ಘೋಷಿಸಿ, ಎಲ್ಲರಿಗೂ ತಮ್ಮ ಭಾಷೆ, ಸಂಸ್ಕೃತಿಗಳನ್ನು ಉಳಿಸಿಕೊಂಡು ಬೆಳೆಸುವ ಹಕ್ಕುಗಳನ್ನು ನೀಡಿರುವುದು.

ಇದು ಸಾಧ್ಯವಾಗುವುದು ಎಲ್ಲ ಭಾಷೆ - ಸಂಸ್ಕೃತಿಗಳ ಜನರಿಗೂ ರಾಷ್ಟ್ರ ಜೀವನವನ್ನು ಕಟ್ಟುವ ಸಮಾನಾವಕಾಶಗಳು ಲಭ್ಯವಿರುವ ವಾತಾವರಣವಿದ್ದಾಗ. ಆದರೆ, ಏಕೀಕರಣ ಸಮಯದಲ್ಲೇ ಕರ್ನಾಟಕದ 'ಅಖಿಲ ಭಾರತೀಯ' ನಾಯಕರ ತಲೆಕೆಳಗಾದ ರಾಷ್ಟ್ರೀಯತೆಯಿಂದಾಗಿ ಅನೇಕ ಕನ್ನಡ ಪ್ರದೇಶಗಳನ್ನು ಕಳೆದುಕೊಂಡ ರಾಜ್ಯ, ನಂತರದ ವರ್ಷಗಳಲ್ಲಿ ಈ ತಲೆಕೆಳಗಾದ ರಾಷ್ಟ್ರೀಯತೆಯಿಂದಾಗಿಯೇ ಹುಟ್ಟಿದ ಸ್ವಾರ್ಥ, ಅಧಿಕಾರ ಲಾಲಸೆ ಹಾಗೂ ಜಾತಿ ಹಿತಾಸಕ್ತಿಗಳನ್ನಾಧರಿಸಿದ ಜನದೂರವಾದ ರಾಜಕಾರಣ ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನೇ ಕಳೆದುಕೊಂಡು, ಸಾಮಾನ್ಯ ಕನ್ನಡಿಗರನ್ನು ಭಾರತದ ಅಸಹಾಯಕ ಪ್ರಜೆಗಳನ್ನಾಗಿ ಮಾಡಿ ಕೂರಿಸಿದೆ. ಇದರ ಜೊತೆಗೆ, ಅನೇಕ ಐತಿಹಾಸಿಕ ಕಾರಣಗಳಿಂದಾಗಿ ತಮ್ಮ ಸಾಂಸ್ಕೃತಿಕ ಅಸ್ಮಿತೆಯ ಬಗೆಗೆ ಅಷ್ಟು ಕಾಳಜಿ ಇಲ್ಲದ ಕನ್ನಡಿಗರ ಒಂದು ದೊಡ್ಡ ಜನಸಮೂಹದ ನಿರಭಿಮಾನವೂ ಸೇರಿ, ಕರ್ನಾಟಕವನ್ನು ಸಾಂಸ್ಕೃತಿಕ ಬೇರು ಕಳೆದುಕೊಳ್ಳುತ್ತಿರುವ ಒಂದು ಆಧುನಿಕ ಪೆಡಂಭೂತವನ್ನಾಗಿ ಪರಿವರ್ತಿಸುತ್ತಿದೆ. ಹೀಗೆ ಬೇರೆ ರಾಜ್ಯಗಳ ಭಾಷಾ ಸಮುದಾಯಗಳ ನಾಯಕತ್ವಕ್ಕೆ ಹೋಲಿಸಿದರೆ, ಒಂದು ಸಾಂಸ್ಕೃತಿಕ ಅರಿವೇ ಇಲ್ಲದಂತೆ ತೋರುವ ಕರ್ನಾಟಕದ ರಾಜಕೀಯ ನಾಯಕತ್ವ ತನ್ನ ಉಳಿವಿಗಾಗಿ ಪೋಷಿಸುತ್ತಿರುವ ಭ್ರಷ್ಟಾಚಾರ, ಕುಟುಂಬವಾದ, ಜಾತಿವಾದ, ಜಾಗತಿಕವಾದಗಳ ಸುಳಿಯಲ್ಲಿ ಈ ರಾಜ್ಯ ಭಾರತದ ರಾಜಕಾರಣದಲ್ಲಿ ತನ್ನ ಲಂಗರುಗಳನ್ನು ಕಳೆದುಕೊಂಡು ಆತ್ಮವಿಲ್ಲದ ದೇಹದಂತೆ ಎದ್ದೆದ್ದು ಬೀಳುತ್ತಿದೆ. ಇದರ ರಾಜಧಾನಿ ಬೆಂಗಳೂರು ಎಲ್ಲ ಪ್ರಾದೇಶಿಕ ಪರಿಮಳವನ್ನೂ ಕಳೆದುಕೊಂಡು ಮಿರಿ ಮಿರಿ ಮಿಂಚುವ ಕಾಗದದ ರಾಕ್ಷಸ ಹೂವಿನಂತೆ, ಜಾಗತಿಕವಾದದ ಗಾಳಿಗೆ ಸಿಕ್ಕಿ ಹೇಗೆ ತೊನೆದಾಡುತ್ತಿದೆ ನೋಡಿ. ಈ ನರ್ತನವನ್ನು ಕಂಡು, ಕರ್ನಾಟಕದ ಎಲ್ಲ ಪಟ್ಟಣ - ನಗರಗಳೂ ಇಂತಹ ಕಾಗದದ ಹೂಗಳಾಗಲು ಹೇಗೆ ಹಾತೊರೆಯುತ್ತಿವೆ ನೋಡಿ.

ಇಂತಹ ವಾತಾವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವೀರಾವೇಶದ ಹಾರಾಟ - ಹೋರಾಟಗಳೆಲ್ಲವೂ ಅಲ್ಪಕಾಲಿಕ ಹಾಗೂ ಅಲ್ಪ ತೃಪ್ತ ಮಾತ್ರವಾಗಿರಬಲ್ಲವು. ಏಕೆಂದರೆ, ಇಂತಹ ಸೇನೆಗಳು ಭಾವನಾತ್ಮಕ ನೆಲೆಯಲ್ಲಿ ಮಾತ್ರ ಕೆಲಸ ಮಾಡಬಲ್ಲವಾಗಿದ್ದು, ಭಾವಾವೇಶ ಇಳಿದೊಡನೆ ಅವು ಹಿನ್ನೆಲೆಗೆ ಸರಿದು ತಮ್ಮ ದೈನಂದಿನ ವ್ಯವಹಾರಗಳಲ್ಲಿ ತೊಡಗುತ್ತವೆ. ಏಕೆಂದರೆ, ಇಂದಿನ ಜಾಗತೀಕರಣದ ಬಿರುಗಾಳಿಯನ್ನು ತಡೆಯುವಷ್ಟು ಅವುಗಳ ಬುಡ ಭದ್ರವಿರುವುದಿಲ್ಲ. ಬಿಹಾರದ ಲಾಲೂ ಪ್ರಸಾದ್ ಯಾದವ್ ಹಾಗೂ ಕರ್ನಾಟಕದ ಕೆ.ಎಚ್.ಮುನಿಯಪ್ಪ ಅಥವಾ ತೇಜಸ್ವಿನಿ ಈಗ ಎತ್ತಿ ಹಿಡಿಯುತ್ತಿರುವುದಾದರೂ ನಮ್ಮ ಹೊಸ ರಾಷ್ಟ್ರೀಯತೆಯ ಹೊಸ ಆದರ್ಶವಾಗಿರುವ ಜಾಗತೀಕರಣ ಪ್ರತಿಪಾದಿಸುತ್ತಿರುವ ಮುಕ್ತ ಸ್ಪರ್ಧೆಯನ್ನೇ! ಯಾರು ಎಲ್ಲಿಗೆ ಬೇಕಾದರೂ ಹೋಗಿ ಅಥವಾ ಬಂದು ಸ್ಪರ್ಧಿಸಿ 'ಗೆಲ್ಲ'ಬಹುದು. ಆದರೆ ಈ ಸ್ಪರ್ಧೆ ನಾವು ಒಪ್ಪಿಕೊಂಡ ಒಕ್ಕೂಟದ ಪರಿಕಲ್ಪನೆಗೇ ಧಕ್ಕೆ ತರುವಂತಿದ್ದರೆ? ರಾಜಕೀಯ ಬಲಶಾಲಿಗಳು ಈ ಒಕ್ಕೂಟದ ಆಶಯವನ್ನೇ ವಿಕೃತಗೊಳಿಸಿದ್ದರೆ? ಇದರಿಂದಾಗಿ ಕೆಲ ಸಮುದಾಯಗಳು ಸದಾ ಅನ್ಯಾಯಕ್ಕೇ ಒಳಗಾಗುವಂತಹ ಸ್ಥಿತಿ ನಿರ್ಮಾಣವಾಗಿದ್ದರೆ?

ಇಂತಹ ಮೂಲಭೂತ ಪ್ರಶ್ನೆಗಳನ್ನು ಕೇಳಬಲ್ಲ ಪ್ರಬುದ್ಧತೆ ಕರ್ನಾಟಕ ರಕ್ಷಣಾ ವೇದಿಕೆಯಂತಹ ಸಂಘ ಸಂಸ್ಥೆಗಳಿಗೆ ಬಂದಲ್ಲಿ ಮಾತ್ರ ಅವು ನಿಜವಾಗಿ ಕನ್ನಡ - ಕರ್ನಾಟಕವನ್ನು ರಕ್ಷಿಸಬಲ್ಲವು. ಆದರೆ ಅವುಗಳ ಇಂದಿನ ನಾಯಕತ್ವವನ್ನು ನೋಡಿದರೆ ಅದು ಸಾಧ್ಯವಿಲ್ಲದಂತೆ ತೋರುತ್ತದೆ. ಏಕೆಂದರೆ, ಕನ್ನಡದ ಮಕ್ಕಳಿಗೆ ಬಾಲ್ಯದಲ್ಲೇ ಕನ್ನಡ ಭಾಷೆ, ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸುವಂತಹ ಶಿಕ್ಷಣ ಕ್ರಮ ಮತ್ತು ಅದಕ್ಕಾಗಿ ಕನ್ನಡ ಮಾಧ್ಯಮ ಶಾಲಾ ಶಿಕ್ಷಣವನ್ನು ಕಡ್ಡಾಯ ಮಾಡುವಂತೆ ಒತ್ತಾಯಿಸುವ ಮೂಲಕ ಮಾತ್ರ ಕನ್ನಡಿಗರ ಲೌಕಿಕ ಅಭ್ಯುದಯಕ್ಕಾಗಿ ಅವರನ್ನು ನಿಜವಾದ ಅರ್ಥದಲ್ಲಿ ಜಾಗೃತಗೊಳಿಸಲು ಸಾಧ್ಯ ಎಂಬ ಎಂಬ ಮೂಲಭೂತ ಅರಿವೇ ಅವಕ್ಕೆ ಇಲ್ಲವಾಗಿದೆ. ಇತ್ತೀಚೆಗೆ ಸರ್ಕಾರ ಒಂದನೇ ತರಗತಿಯಿಂದಲೇ ಕನ್ನಡದ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಆಜ್ಞೆ ಹೊರಡಿಸಿದಾಗ, ಮೊದಲು ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಿ; ನಂತರ ಎಲ್ಲಿಂದಲಾದರೂ ಇಂಗ್ಲಿಷ್ ಕಲಿಸಿ ಎಂದು ಹೇಳುವ ಕನ್ನಡ ನೈತಿಕತೆಯನ್ನು ಎಷ್ಟು ಕನ್ನಡ ಸಂಘಟನೆಗಳು ಪ್ರದರ್ಶಿಸಲು ಸಾಧ್ಯವಾಯಿತು?

ಹಾಗಾಗಿಯೇ ಆರೇಳು ತಿಂಗಳುಗಳ ಹಿಂದೆ ರೈಲ್ವೇ ಇಲಾಖೆ ರೇಲ್ವೇ ಟಿಕೆಟ್ಟಿನಿಂದ ಕನ್ನಡವನ್ನು ತೆಗೆದು ಹಾಕಿದಾಗ, ಇಲ್ಲಿಂದ ಅನ್ಯ ರಾಜ್ಯಗಳಿಗೆ ಹೋಗುವ ಅಥವಾ ಬರುವ ರೈಲುಗಳಿಂದ ಕನ್ನಡದ ಫಲಕಗಳನ್ನು ಹಿಂತೆಗೆದುಕೊಂಡಾಗ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡ ಚಳುವಳಿಕಾರರು ಒಂದೆರಡು ದಿನ ತಕ ತಕ ಕುಣಿದು ಆಮೇಲೆ ಸುಮ್ಮನಾದವು. ರೇಲ್ವೇ ಟಿಕೆಟ್ಟಿನಿಂದ ಕನ್ನಡ ಶಾಶ್ವತವಾಗಿ ಹೋಗಿಯೇ ಹೋಯಿತು. ಅದಕ್ಕಾಗಿ ಕಣ್ಣೀರು ಸುರಿಸುವವರು ಯಾರೂ ಇಲ್ಲ - ಬಹುಶಃ ಮೊನ್ನೆ ಶಿವಮೊಗ್ಗದಿಂದ ರೈಲು ಹತ್ತಿ, ಯಾವ ಊರಿಗೆ ಟಿಕೆಟ್ ಕೊಟ್ಟಿದ್ದಾರೆ ನೋಡಿ ಹೇಳಿ ಎಂದು ನನ್ನ ಬಳಿ ಟಿಕೆಟ್ ಕೊಟ್ಟು ಯಾಚಿಸಿದ ಮುದುಕರೊಬ್ಬರ ಮುಖದಲ್ಲಿ ನಾನು ಕಂಡ - ತನ್ನ ದೇಶದಲ್ಲೇ ತಾನು ಪರದೇಶಿಯಾಗುವ - ಆಳದ ವಿಷಾದದ ಹೊರತಾಗಿ.

ಹೇಳಿ, ಯಾವ ಪ್ರಜಾಪ್ರಭುತ್ವವಿದು? ಯಾರಿಗೆ ಬಂದಿರುವುದು ಸ್ವಾತಂತ್ರ್ಯ? ಮುಗಿದಿದೆಯೇ ನವ್ಮು ಪಾರತಂತ್ರ್ಯ? ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದವರೇ ಅದನ್ನು ಭಕ್ಷಿಸತೊಡಗಿದಾಗ, ಪಾರತಂತ್ರ್ಯ ಹಿಂದಿರುಗಿ ಬರಲು ಒಂದಲ್ಲ ಒಂದು ವೇಷದಲ್ಲಿ ಕಾದು ನಿಂತಿರುತ್ತದೆ... ಇದನ್ನು ಕನ್ನಡಿಗರಿಗೆ ಮನವರಿಕೆ ಮಾಡಿಕೊಡುವುದಾದರೂ ಯಾರು? ಹೇಗೆ?

ಅಂದಹಾಗೆ: ಈಗ ಧರ್ಮಕ್ಕೂ ಅಧ್ಯಾತ್ಮಿಕತೆಗೂ ಸಂಬಂಧವಿಲ್ಲ. ಧರ್ಮವೆಂದರೆ ಅರ್ಥ ಕಳೆದುಕೊಂಡ ಕಟ್ಟಳೆ, ಪರಮ ಮೌಢ್ಯ, ಚಿನ್ನ - ವಜ್ರಗಳ ವ್ಯವಹಾರ, ನಿರ್ಲಜ್ಜ ಭಕ್ತ ಬಲ ಪ್ರದರ್ಶನ; ಸಿಂಹಾಸನಾರೋಹಣ, ಪೂಜಾ ಅಧಿಕಾರ, ಅದರಿಂದ ಗಿಟ್ಟುವ ದಾನ ದಕ್ಷಿಣೆ ಇತ್ಯಾದಿಗಳ ರಾಜಕಾರಣವೆಂಬುದನ್ನು ನಮ್ಮ ಹಿಂದುತ್ವದ ಧಾರ್ಮಿಕ ವಕ್ತಾರರಾದ ಪೇಜಾವರರು ಸಾಬೀತು ಪಡಿಸಿದ್ದಾರೆ. ಹಾಗಾಗಿಯೇ ಅವರು ಆಗಾಗ್ಗೆ ದೆಹಲಿ - ಮಧ್ಯ ಪ್ರದೇಶ - ರಾಜಸ್ಥಾನಗಳ ಕಡೆಗೆ ಹೋಗಿ ಧರ್ಮ ಬೇರೆಯಲ್ಲ, ರಾಜಕಾರಣ ಬೇರೆಯಲ್ಲ ಎಂದು ತಮ್ಮ ರಾಜಕೀಯ ಶಿಷ್ಯ - ಶಿಷ್ಯೆಯರಿಗೆ ಉಪದೇಶಿಸಿ ಬರುವುದು ಎಂದು ಕಾಣುತ್ತದೆ!