ಇದು ತಪ್ಪಲ್ವಾ....

ಇದು ತಪ್ಪಲ್ವಾ....

ಮೊನ್ನೆ ಭಾನುವಾರ.

ಮದುವೆಯೊಂದಕ್ಕೆ ಹೋಗಿದ್ದೆ. ಅಲ್ಲಿಗೆ ಅಕ್ಕನ ಮಗನೂ ಬಂದಿದ್ದ.ಆತ ಇನ್ನೂ ೩ ನೇ ತರಗತಿ.ಮಕ್ಕಳಲ್ವಾ ನನಗೂ ಪ್ರೀತಿ.ಹಾಗಾಗಿ ಆತನಿಗೂ ನನ್ನಲ್ಲಿ ಹರಟುವುದೆಂದರೆ ಖುಷಿ.ಮೊನ್ನೆ ಆತ ಹರಟುತ್ತಾ ಕೇಳಿದ "ಮಾವ ಮೊನ್ನೆ ದೀಪಿಕಾ ಯುವರಾಜನೊಂದಿಗಿದ್ದಿರಬಹುದಾ?". ನನಗೆ ನಿಜವಾಗಲೂ ಆ ಬಗ್ಗೆ ಅಷ್ಟೊಂದು ಆಸಕ್ತಿಯಿದ್ದಿರಲಿಲ್ಲ. ಆದರೂ ಹುಡುಗ ಮತ್ತೆ ಮತ್ತೆ ಅದೇ ಸುದ್ದಿಗೇ ಬರುತ್ತಿದ್ದ.ನಾನು ಹಾರಿಕೆಯ,ಬಾಲಿಶವಾದ ಉತ್ತರ ನೀಡುತ್ತಲೇ ಬಂದೆ.ಮುಂದೆ ಆತನ ಪ್ರಶ್ನೆ ಹೀಗೆ ಬಂತು "ದೀಪಿಕಾ ಧೋನಿಗೆ ಮೋಸ ಮಾಡಿದ್ದು ಅಲ್ವಾ?".ಅದು ತಪ್ಪಲ್ವಾ? ಪೇಪರಲ್ಲಿ ಯಾಕೆ ಹೇಳುವುದಿಲ್ಲ ಅಂತ ನನ್ನಲ್ಲಿ ಕೇಳುತ್ತಲೇ ಹೋದ.ಆದರೆ ನಾನು ಇದಾವುದಕ್ಕೂ ಗಂಭೀರ ಉತ್ತರ ನೀಡುವ ಗೋಜಿಗೇ ಹೋಗಲಿಲ್ಲ. ಕೇವಲ ಹಾರಿಕೆಯ ಉತ್ತರ ನೀಡಿದೆ.

ಹುಡುಗನ ಈ ಪ್ರಶ್ನೆಯು ನನ್ನನ್ನು ಚಿಂತನೆಗೆ ಹಚ್ಚಿತು. ವಿಚಾರವನ್ನು ಮಂಥನ ನಡೆಸಿದಾಗ ೩ ನೇ ತರಗತಿಯ ಬಾಲಕನೊಬ್ಬ ಅಷ್ಟೊಂದು ಗಂಭೀರವಾಗಿ ಕ್ರಿಕೆಟ್ ಬಗ್ಗೆ,ಕ್ರಿಕೆಟ್ ತಾರೆಗಳ ಖಾಸಗೀ ಬದುಕಿನ ಬಗ್ಗೆ ಚಿಂತಿಸುತ್ತಾನೆಂದರೆ ಮಕ್ಕಳಿಗೆ ಕ್ರಿಕೆಟ್ ಬಗೆಗಿರುವ ನಂಟಿನ ಬಗ್ಗೆ ನಾವು ಗಂಭೀರವಾಗಿ ಗಮನಿಸಬೇಕಾಗಿದೆ.ಇಂದು ಕ್ರಿಕೆಟ್ ಜನಪ್ರಿಯ ಹಾಗೂ ಸಭ್ಯರ ಕ್ರೀಡೆ ಎಂಬ ಮಾತು ಸಮಾಜದಲ್ಲಿರುವುದು ಹೌದಾದರೂ ಮಕ್ಕಳ ಬಹುಪಾಲು ಸಮಯ ಕ್ರಿಕೇಟ್ ಮುಂದೆಯೇ ಕೆಟ್ಟು ಹೋಗುತ್ತಿದೆಯೇ? ಎಂದು ಚಿಂತಿಸಲು ಈಗ ಪರ್ವ ಕಾಲ.

ಈ ಮಾಂತ್ರಿಕ ಆಟದಿಂದಾಗಿ ಎಳೆಯ ಕಂದಮ್ಮಗಳ ಸಾಹಿತ್ಯದ , ಲವಲವಿಕೆಯ ದಾರಿ ಮುಚ್ಚಿಕೊಳ್ಳುತ್ತಿದೆಯೇ?. ಹಾಗೆಂದು ನನಗಂತೂ ಅನ್ನಿಸುತ್ತಿದೆ.ಬೆಳಗ್ಗೆದ್ದು ಕ್ರಿಕೇಟ್,ಕಾರ್ಟೂನ್ ನೆಟ್ ವರ್ಕ್ ಬಿಟ್ಟರೆ ಬೇರಾವುದೇ ಜಗತ್ತನ್ನು ಗಮನಿಸದ ಮಕ್ಕಳು ಮುಂದೆ ಈ ಸಮಾಜದಲ್ಲಿ ಕ್ರಿಕೇಟ್ ಭಾಷೆಯಲ್ಲೆ ಮಾತನಾಡಿಯಾರೇ ಎಂಬ ಆತಂಕ ನನ್ನಲ್ಲಿ ಮನೆ ಮಾಡಿದೆ. ಒಬ್ಬ ಚಿಕ್ಕ ಹುಡುಗ ಇಂದು ದೇಶ-ವಿದೇಶದ ಕ್ರಿಕೆಟ್ ತಾರೆಗಳ ಹೆಸರನ್ನು,ಅವರ ಖಾಸಗೀ ಬದುಕಿನ ಬಗ್ಗೆ ಹೇಳಿದಷ್ಟು ಸಲೀಸಾಗಿ ನಮ್ಮ ಆಸುಪಾಸಿನ ಸಂಗತಿಗಳ ಬಗ್ಗೆ ಹೇಳಲು ಶಕ್ತನಾಗುವುದಿಲ್ಲ ಅದೆಲ್ಲಾ ಬಿಡಿ ಪಾಠದ ಬಗ್ಗೆಯೂ ಹೇಳುದಿಲ್ಲ ಎಂದರೆ ನಮ್ಮ ಮಕ್ಕಳು ಎತ್ತ ಸಾಗುತ್ತಿದ್ದಾರೆ?.ಇದು ಮುಂದಿನ ಭವಿಷ್ಯಕ್ಕೆ ಸಹಕಾರಿಯಾದೀತೇ?.

ಭಾರತ ಸಂಸ್ಕೃತಿಯನ್ನು ನೋಡಿ. ಇಲ್ಲಿ ನಾಯಕರಾದವರು ಸರ್ವರಿಗೂ ಮಾರ್ಗದರ್ಶಕರಾಗಿರಬೇಕು.ಮಾರ್ಗದರ್ಶಕರಾಗಿದ್ದರು ಕೂಡಾ ಆದರೆ ಈಗ ಗಮನಿಸಿದರೆ ಬೆರಳೆಣಿಕೆಯ ನಾಯಕರ ದಾರಿಯನ್ನು ಬಿಟ್ಟರೆ ಬೇರೆ ಯವ ನಾಯಕರ ಹಾದಿ ಸರಿಯಾಗಿದೆ, ನಮ್ಮ ಎಳೆಯರಿಗೆ ಅವು ಹೇಗೆ ಮಾರ್ಗದರ್ಶಕವಾಗಿದೆ?. ಕ್ರಿಕೆಟ್ ತಾರೆಗಳನ್ನೆ ಗಮನಿಸಿ ಅವರ ಅಭಿಮಾನಿಗಳಿಗೆ ಅವರು ಹೇಗೆ ಮಾರ್ಗದರ್ಶಕರಾಗಿದ್ದಾರೆ? ಸಣ್ಣ ಹುಡುಗನಿಗೆ ಕೂಡ ತಾರೆಗಳ ಖಾಸಗಿ ಬದುಕು ಮುಖ್ಯವಾಗಿ ಬಿಡುತ್ತದೆ,ತಲೆ ಕೂದಲ ಅಲಂಕಾರದಿಂದ ಹಿಡಿದು ಪ್ರತಿಯೊಂದನ್ನು ಅನುಕರಿಸುವ ಅಭಿಮಾನಿಗಳಿರುವಾಗ ಸ್ವಲ್ಪ ಎಚ್ಚರವಿರಬೇಡವಾ?. ಸಾನಿಯಾ ಮಿರ್ಜಾ ಇರಬಹುದು, ತೆಂಡುಲ್ಕರ್ ,ಯುವರಾಜ್,ಧೋನಿ, ಅಥವಾ ಇನ್ನಾರೆ ಸ್ಟಾರ್ ಗಳಿರಬಹುದು ಎಳೆಯರಿಗೆ ಉತ್ತಮ ಮಾರ್ಗದರ್ಶರಾಗಿದ್ದರೆ ಚೆನ್ನಾಗಿತ್ತು.ಇಲ್ಲವಾದ್ರೆ ಚಿಕ್ಕ ಬಾಲಕರ ಮೇಲೂ ಪರಿಣಾಮ ಬೀರುವುದು ಅವರದೇ ಸಂಗತಿಗಳು.ಹಾಗಾಗಿ ನಾವು ಈಗಲೇ ಜಾಗೃತರಾಗಬೇಕು.

ನೋಡಿ ಕ್ರಿಕೆಟ್ ನಲ್ಲಿ ಎಷ್ಟೆಲ್ಲಾ ವಿವಾದಗಳು ನಡೆದವು.ಅದಕ್ಕೆಲ್ಲಾ ನಾವು ಎಷ್ಟು ಚರ್ಚಿಸಿದೆವು.ಏನಾದ್ರು ಫಲ ಸಿಕ್ಕಿತಾ?.ಆರಂಭದಲ್ಲಿ ಮ್ಯಾಚ್ ಬುಕ್ಕಿಂಗ್ ನಡೆದು ಹಲವು ವಿಚಾರಣೆಗಳು ನಡೆದ ನಂತರವೂ ಮತ್ತೆ ವಿವಿಧ ತಿರುವುಗಳು, ಮತ್ತೆ ವಿವಾದಗಳು,ಹೊಸ ಗೊಂದಲಗಳು ... ಬೇಡ.. ಮೊನ್ನೆ ಮೊನ್ನೆ ನಡೆದ ಮ್ಯಾಚ್ ನಲ್ಲಿ ಅಂಪೆರ್ರಿಂದಲೇ ಕೆಟ್ಟ ತೀರ್ಪು. ಅದಕ್ಕೆ ನಮ್ಮ ಜನ ರೊಚ್ಚಿಗೆದ್ದ ಪರಿ ನೋಡಿದರೆ ದಿಗಿಲು ಹುಟ್ಟಿಸುತ್ತದೆ.ಅಲ್ಲಿ ಅಂಪೆರ್ ಕೆಟ್ಟ ತೀರ್ಪು ನೀಡಿದ್ದು ತಪ್ಪು.ನಮ್ಮವರಿಗೆ ಮೋಸ ಆದದ್ದು ನಿಜ.ಅದಕ್ಕೆ ಹಾಗೆ ವಿರೋಧಿಸಬೇಕಾಗಿತ್ತಾ...? . ಅದೇ ನಮ್ಮ ದೇಶದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ , ಕಾಶ್ಮೀರದಲ್ಲಿ ನಡೆಯುವ ಮಾರಣ ಹೋಮಗಳ ಬಗ್ಗೆ ಬೇಡ ನಮ್ಮ ಆಸುಪಾಸಿನಲ್ಲಿ ನಡೆಯುವ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತೇವಾ..?

ಇಷ್ಟೆಲ್ಲಾ ಸಂಗತಿಗಳು ಕ್ರಿಕೇಟ್ ನಲ್ಲಿನಡೆಯುತ್ತಿರುವಾಗ ನಾವೆಲ್ಲಾ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ .ಯಾರಾದ್ರು ಸಿಕ್ರೆ ಮಾತನಾಡಲು ವಿಶ್ಯ ಇಲ್ದಿದ್ರೆ ಒಂದೆರಡು ಮಾತನಾಡಿ ಸುಮ್ಮನಿರುತ್ತೇವೆ.ಆದ್ರೆ ಮಕ್ಕಳು ನೋಡಿ ದಿನವಿಡೀ ಶಾಲೆ,ಮನೆ, ಎಲ್ಲೆಂದರಲ್ಲಿ ಅದೇ ಕ್ರಿಕೇಟ್ ಸುದ್ದಿಯನ್ನೇ ಮಾತನಾಡುತ್ತಿರುತ್ತಾರಲ್ಲಾ ಮೋಡಿಯ ಆಟ......ಅದು ನೋಡಿ!?. ಇದೆಲ್ಲಾ ನೋಡಿದ್ರೆ ನಾವೇ ಎಲ್ಲೋ ತಪ್ಪು ಮಾಡುತ್ತಿದ್ದೇವೆ ಅಂತ ಅನ್ಸಲ್ವಾ ನಿಮ್ಗೆ....?. ಏನಂತೀರಿ.....

Rating
No votes yet