ಬಹುರೂಪಿ, ಅನಂತಮೂರ್ತಿ ಹಾಗೂ ಗೆಲಿಲಿಯೊ

ಬಹುರೂಪಿ, ಅನಂತಮೂರ್ತಿ ಹಾಗೂ ಗೆಲಿಲಿಯೊ

ಭಾಗ-1

ಬಹುರೂಪಿ ಎಂದಾಕ್ಷಣ ನನ್ನ ನೆನಪು 2-3 ವರ್ಷಗಳ ಹಿಂದಕ್ಕೆ ಸರಿಯುತ್ತದೆ. ಆಗ ಬಹುರೂಪಿಯ ಭಾಗವಾದ ವಿಚಾರ ಸಂಕಿರಣವೊಂದು ಆಗ ನಾನು ಕೆಲಸ ಮಾಡುತ್ತಿದ್ದ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ ನಡೆದಿತ್ತು. ನೋಡುಗನಾಗಿ ನಾನು ಕೂಡ ಭಾಗವಹಿಸಿದ್ದ ಆ ಕಾರ್ಯಕ್ರಮವದಲ್ಲಿ ದೇಶ ವಿದೇಶಗಳ ಹೆಸರಾಂತ ನಾಟಕಕಾರರು, ರಂಗಭೂಮಿಗೆ ಒಂದಲ್ಲ ಒಂದು ರೀತಿ ಸಂಬಂಧಿಸಿದವರೆಲ್ಲ ಸೇರಿದ್ದರು. ನನಗೆ ತಿಳಿದಿದ್ದಂತೆ ಲಕ್ಷ್ಮೀ ಚಂದ್ರಶೇಖರ್, ಪ್ರಕಾಶ್ ಬೆಳವಾಡಿ, ಎಂಎಸ್ ಸತ್ಯು, ಚಿದಂಬರರಾವ್ ಜಂಬೆ ಹಾಗೂ ನಮ್ಮ ಸಂಸ್ಥೆಯವರೇ ಆದ ಹಿರಿಯ ನಾಟಕಕಾರ ಲಿಂಗದೇವರು ಹಳೆಮನೆ ಮುಂತಾದವರು ಅಲ್ಲಿ ನೆರೆದಿದ್ದರು.

ಆಂಗ್ಲ ಸಾಹಿತ್ಯದ ವಿದ್ಯಾರ್ಥಿಯಾಗಿ, ಷೇಕ್ಸ್ ಪಿಯರ್, ಮಾರ್ಲೊ, ಷಾ ಮುಂತಾದ ವಿಶ್ವವಿಖ್ಯಾತ ನಾಟಕಕಾರರ ಶ್ರೇಷ್ಟ ಕೃತಿಗಳನ್ನು ಓದಿದ್ದು ಬಿಟ್ಟರೆ, ರಂಗಭೂಮಿಗೂ ನನಗೂ ಅಂತಹ ಹೇಳಿಕೊಳ್ಳುವಂತಹ ಸಂಬಂಧವೇನೂ ಇಲ್ಲ. ಆದರೆ, ಆಸಕ್ತಿ ಜೀವಂತ ಇದ್ದುದರಿಂದಾಗಿ ಪ್ರತಿವರ್ಷವೂ ನಡೆಯು ಬಹುರೂಪಿಯ ಈ ವರ್ಷದ ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಛೆ ಇದ್ದೇ ಇತ್ತು. ಜನವರಿ 12 ರಿಂದ 18ರವರೆಗೆ ನಡೆದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಕಡೆಯ ದಿನದ ಸಮಾರಂಭದಲ್ಲಾದರೂ ಭಾಗವಹಿಸುವ ಆಸೆಯಿಂದ 18ರ ಸಂಜೆ ಏನು ಕಾರ್ಯಕ್ರಮಗಳಿರಬಹುದು ಎಂದು ನೋಡಿದಾಗ ನನ್ನ ಅದೃಷ್ಟವೆಂಬಂತೆ ನನ್ನ ನೆಚ್ಚಿನ ಸಾಹಿತಿ ಅನಂತಮೂರ್ತಿಯವರು ಸಮಾರೋಪ ಸಮಾರಂಭದ ಮುಖ್ಯ ಭಾಷಣಕಾರರಾಗಿದ್ದರು. ಅವರನ್ನು ಇದುವರೆಗೂ ನೋಡದಿದ್ದ ನನಗೆ, ಅವರ ಮಾತುಗಳನ್ನು ಕೇಳಿರದ ನನಗೆ ಅಂತಹ ಅವಕಾಶ ದೊರೆತದ್ದು ನನಗೆ ಅತೀವ ಸಂತೋಷ ತಂದಿತ್ತು. ಅವಕಾಶ ದೊರೆತಲ್ಲಿ ನಾನು ಚೆನ್ನೈನಿಂದ ಮೈಸೂರಿಗೆ ಬಂದ 3-4 ದಿನಗಳಲ್ಲೇ ಕೊಂಡುಕೊಂಡು, ಕೆಲವೇ ದಿನಗಳಲ್ಲಿ ಓದಿ ಮುಗಿಸಿದ್ದ ಅವರ ಇತ್ತೀಚಿನ ಪುಸ್ತಕ 'ಮಾತು ಸೋತ ಭಾರತ'ಕ್ಕೆ ಹಸ್ತಾಕ್ಷರ ಹಾಕಿಸಿಕೊಳ್ಳೋಣವೆಂದು ನನ್ನ ಚೀಲದೊಳಗೆ ಇಟ್ಟುಕೊಂಡು ಹೊರಟೆ.

ನನ್ನ ಗೆಳೆಯನೊಬ್ಬ ನನ್ನ ಜೊತೆ ಅಲ್ಲಿಗೆ ಬರುತ್ತೇನೆಂದು ಹಿಂದಿನ ದಿನವೇ ತಿಳಿಸಿದ್ದರಿಂದ, ಅವನಿಗಾಗಿ ಕಾದುಕಾದು ಸಾಕಾಯಿತು. ಕಡೆಗೆ ನಾನೊಬ್ಬನೇ ಹೋಗೋಣವೆಂದು ತೀರ್ಮಾನಿಸಿ ಬಸ್ಸು ಹತ್ತಿ ಕುಳಿತಾಗ 5.20ಕ್ಕೆ ಅವನ ಕರೆ ಬಂದಿತು. ನಾನು 5.40ಕ್ಕೆ ಬಸ್ ನಿಲ್ದಾಣ ತಲುಪಿದೆನಾದರೂ, ಯಾವಾಗಲೂ ತಡವಾಗಿಯೇ ಬರುವ 'ಲೇಟ್ ಲತೀಫ್' ಗೆಳೆಯ ಬಂದಾಗ 6.30. ಅನಂತಮೂರ್ತಿಯವರ ಭಾಷಣ ಈ ವೇಳೆಗಾಗಲೇ ಮುಗಿದಿರುತ್ತದೆಂಬ ಅನುಮಾನ ನನಗೆ. ಆದರೂ ನಾನೂ, ಅವನೂ ಬಸ್ಸು ಹಿಡಿದರೆ ತಡವಾಗಬಹುದೆಂದು ನಡೆದೇ ಹೊರಟೆವು. ನಮ್ಮ ದುರಾದೃಷ್ಟಕ್ಕೆ ಕಲಾಮಂದಿರದ ಬಳಿಯ ರೈಲು ಕೆಳಸೇತುವೆ ದುರಸ್ತಿ ಕೆಲಸ ನಡೆಯುತ್ತಿದ್ದುದರಿಂದ ನಾವು ಆ ಬದಿ ತಲುಪಲು ಚಾರಣ ಮಾಡಬೇಕಾಯಿತು. ಅಂತೂ ಇಂತೂ ಕಾರ್ಯಕ್ರಮ ನಡೆಯುತ್ತಿದ್ದ ವನರಂಗ ತಲುಪಿದೆವು. ಆದರೆ, ನಿರೀಕ್ಷೆಯಂತೆ ಅನಂತಮೂರ್ತಿಯವರ ಭಾಷಣ ಮುಗಿದಿತ್ತು. ಲೇಖಕಿ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಭಾಷಣ ಆರಂಭವಾಗಿತ್ತು. ಆದರೆ, ನನ್ನ ಸಾಹಿತ್ಯಿಕ ನಾಯಕ ಅನಂತಮೂರ್ತಿಯವರನ್ನು ಕಣ್ತುಂಬ ಕಾಣುವ ಭಾಗ್ಯ ನನ್ನದಾಗಿತ್ತು. ಅದಷ್ಟೆ ನನ್ನ ಪಾಲಿಗೆ ದೊರಕಿದ್ದು. ಅವರ ಭಾಷಣದ ಸಂಗ್ರಹರೂಪವನ್ನು ಮರುದಿನದ ಪತ್ರಿಕೆಯಲ್ಲಿ ಓದಿಕೊಂಡೆ.
.....

Rating
No votes yet