ಬಹುರೂಪಿ, ಅನಂತಮೂರ್ತಿ ಹಾಗೂ ಗೆಲಿಲಿಯೊ

ಬಹುರೂಪಿ, ಅನಂತಮೂರ್ತಿ ಹಾಗೂ ಗೆಲಿಲಿಯೊ

ಭಾಗ-1 ರಲ್ಲಿ ಬಹುರೂಪಿಯೊಂದಿಗಿನ ನನ್ನ ಸಂಬಂಧ ಹಾಗೂ ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ನನ್ನ ನೆಚ್ಚಿನ ಸಾಹಿತಿ, ಚಿಂತಕ ಡಾ.ಯು.ಆರ್.ಅನಂತಮೂರ್ತಿಯವರ ಭಾಷಣವನ್ನು ತಪ್ಪಿಸಿಕೊಂಡುದಕ್ಕೆ ನನಗಾದ ಬೇಸರವನ್ನು ವಿವರಿಸಿದ್ದೆ.

ಭಾಗ-2

ಈ ಸಮಾರೋಪ ಸಮಾರಂಭದ ನಂತರ, ಗೆಲಿಲಿಯೊ ನಾಟಕ ಪ್ರದರ್ಶನಗೊಳ್ಳಲಿದೆ. ಅದಕ್ಕೆ ವೇದಿಕೆ ಸಿದ್ಧಗೊಳಿಸಿಕೊಳ್ಳಬೇಕಾಗಿರುವುದರಿಂದ ನೋಡುಗರು ಹತ್ತು ನಿಮಿಷಗಳ ಕಾಲ ಹೊರಗಡೆ ಇದ್ದು, ನಾಟಕ ನೋಡಲು ಟಿಕೆಟ್ ಖರೀದಿಸಿ ಬರಬೇಕೆಂದು ಸೂಚನೆ ನೀಡಲಾಯಿತು. ಅದರಂತೆಯೇ, ನಾನು ಮತ್ತು ನನ್ನ ಗೆಳೆಯ ಇಬ್ಬರೂ ಹೊರಗೆ ನಡೆದವು. ಹೊರಗೆ ನನಗೊಂದು ಆಶ್ಚರ್ಯ ಕಾದಿತ್ತು. ನಾನು ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಾನು ಭಾಷೆಯ ಕುರಿತು ಬರೆದಿದ್ದ ಸುಮಾರು 15 ಪುಟಗಳಷ್ಟು ಧೀರ್ಘವಾದ ಲೇಖನವನ್ನು ತಾಳ್ಮೆಯಿಂದ ಓದಿ, ಅದರಲ್ಲಿನ ಲೋಪ ದೋಷಗಳನ್ನು ತಿದ್ದಿ, ಸಾಹಿತ್ಯ ಅಕಾಡೆಮಿ ಪ್ರಕಟಿಸುವ 'ಅನಿಕೇತನ'ಕ್ಕೆ ಕಳುಹಿಸುವಂತೆ ಹೇಳಿ ಪ್ರೋತ್ಸಾಹಿಸಿದ ಭಾಷಾತಜ್ಞ, ನಾಟಕಕಾರ ಶ್ರೀ ಲಿಂಗದೇವರು ಹಳೆಮನೆಯವರು ತಮ್ಮ ಕುಟುಂಬದೊಂದಿಗೆ ನಿಂತಿರುವುದನ್ನು ನೋಡಿದ ನಾನು ಮಾತನಾಡಿಸಿಕೊಂಡುಬರೋಣವೆಂದು ಹೇಳಿ ಅವರೆಡೆಗೆ ನಡೆದೆ. ನಾನು ಚೆನ್ನೈನಲ್ಲಿ ಕೆಲಸಕ್ಕೆ ಸೇರಿದ ನಂತರ ಮೊದಲ ಬಾರಿ ಮೈಸೂರಿಗೆ ಹಿಂದಿರುಗಿದ್ದಾಗ ಸಂಸ್ಥೆಗೆ ಭೇಟಿ ನೀಡಿದ್ದಾಗಷ್ಟೆ ಅವರನ್ನು ಭೇಟಿ ಮಾತನಾಡಿಸಿದ್ದು ಹೊರತುಪಡಿಸಿದರೆ, ಇಲ್ಲಿಯವರೆಗೂ ಅವರೊಂದಿಗೆ ಯಾವುದೇ ಸಂಪರ್ಕ ಸಾಧಿಸುವುದು ಸಾಧ್ಯವಾಗಿರಲಿಲ್ಲ. ಸುಮಾರು 10 ತಿಂಗಳ ನಂತರ ಅವರನ್ನು ನೋಡಿ, ಮಾತನಾಡಿಸಿದ ನನ್ನನ್ನು ಅವರು ತಮ್ಮ ಎಂದಿನ ನಗುಮುಖದಿಂದ ಮೊದಲಿನ ಪ್ರೀತಿ, ವಿಶ್ವಾಸದಿಂದಲೇ ಆತ್ಮೀಯವಾಗಿ ಮಾತನಾಡಿಸಿದರು. ನನಗೂ ಅವರನ್ನು ಕಂಡದ್ದು, ಮಾತನಾಡಿಸಿದ್ದು ನಿಜಕ್ಕೂ ಸಂತೋಷ ತಂದಿತು.

ಇದಾದ ನಂತರ...

ಈ ಭಾಗದಲ್ಲಿ ವಿಶ್ವವಿಖ್ಯಾತ ಜರ್ಮನ್ ನಾಟಕಕಾರ ಬರ್ಟೊಲ್ಟ್ ಬ್ರೆಕ್ಟ್ ರ ಸುಪ್ರಸಿದ್ಧ ನಾಟಕ ವಿಶ್ವದೆಲ್ಲೆಡೆ ಇಂದಿಗೂ ಒಂದಲ್ಲ ಒಂದು ನಾಡಿನಲ್ಲಿ, ಅಲ್ಲಿನ ಒಂದಲ್ಲ ಒಂದು ಭಾಷೆಯಲ್ಲಿ ಪ್ರದರ್ಶನಗೊಳ್ಳುತ್ತ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತ, ಬ್ರೆಕ್ಟ್ ರ ಆಶಯವನ್ನು ಸ್ಥಳೀಕರಿಸುತ್ತ, ಹೆಚ್ಚು ಹೆಚ್ಚು ಸಮಕಾಲೀನವಾಗುತ್ತ, ಪ್ರಸ್ತುತತೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಅಂತಹ ನಾಟಕವನ್ನು ನೋಡುವ ಭಾಗ್ಯ ನನ್ನದಾಗಿತ್ತು.

ಈ ನಾಟಕದ ಮತ್ತೊಂದು ವಿಶೇಷವೆಂದರೆ, ಹಿಂದಿಗೆ ಅನುವಾದಗೊಂಡಿದ್ದ ಈ ನಾಟಕವನ್ನು ನಮ್ಮ ನಾಡಿನವರೇ ಆದ ಅನುಭಾವಿ ಕವಿ, ನಾಟಕಕಾರ, ಅನುವಾದಕ ಸದ್ಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಎಚ್.ಎಸ್.ಶಿವಪ್ರಕಾಶರವರು ನಿರ್ದೇಶನ ಮಾಡಿರುವುದು. ಅವರ 'ಮಹಾಚೈತ್ರ' ನಾಟಕ ನನಗೆ ನೆನಪಿರುವ ಹಾಗೆ ವಿಶ್ವವಿದ್ಯಾಲಯವೊಂದರ ಪಠ್ಯವಾಗಿದ್ದಾಗ ನಾಡಿನಾದ್ಯಂತ ವಿವಾದ ಸೃಷ್ಟಿಸಿತ್ತು. ಅವರನ್ನು ಅಷ್ಟಾಗಿ ಓದಿಕೊಂಡಿಲ್ಲದಿದ್ದರೂ, ಅವರ ಬಿಡಿ ಲೇಖನಗಳನ್ನು, ಅನುವಾದಗಳನ್ನು ಇಷ್ಟಪಟ್ಟಿರುವ ನನಗೆ, ರೋಮಾಂಚನಗೊಳಿಸಿದ್ದು, ಅವರ 'ಸಮಗಾರ ಭೀಮವ್ವ' ಕವನ. ನಮ್ಮ ನಾಡಿನ ಸೂಫಿ ಸಂತರನ್ನೊಳಗೊಂಡಂತೆ ದೇಶ ವಿದೇಶಗಳ ಹಲವಾರು ಅನುಭಾವಿಗಳನ್ನು ಆಳವಾಗಿ ಓದಿಕೊಂಡಿರುವ ಅವರು, ಈಗ ಇರುವವರೊಂದಿಗೆ ಒಡನಾಟವನ್ನು ಇಟ್ಟುಕೊಂಡಿದ್ದಾರೆಂದು ಓದಿ ತಿಳಿದಿದ್ದೆ.

ನಾಟಕದ ಆರಂಭ
--------------
ವಿಶ್ವವಿಖ್ಯಾತ ಗಣಿತಜ್ಞ, ಖಗೋಳಶಾಸ್ತ್ರಜ್ಞನಾದ ಇಟಲಿಯ ಗೆಲಿಲಿಯೊ ಗೆಲಿಲಿ ಜೀವನವನ್ನು ಆಧರಿಸಿದ ನಾಟಕವನ್ನು ಅಭಿನಯಿಸಿದ ತಂಡ ದೆಹಲಿಯ ಜೆಎನ್‌ಯುನ ಬಹುರೂಪ್ ಆರ್ಟ್ ಗ್ರೂಪ್. ತಂಡದಲ್ಲಿದವರೆಲ್ಲ 25 ವರ್ಷದೊಳಗಿನವರೇ ಆಗಿದ್ದದ್ದು ಮತ್ತೊಂದು ವಿಶೇಷ.

ಭೂಮಿಯು ಗುಂಡಗಿದೆ. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ. ಚಂದ್ರ ಮತ್ತು ಭೂಮಿಗೆ ಯಾವುದೇ ವ್ಯತ್ಯಾಸವಿಲ್ಲ. ಚಂದ್ರನಲ್ಲಿಯೂ ಬೆಟ್ಟ ಗುಡ್ಡಗಳಿವೆ. ಅವನು ಯಾವ ಬೆಳಕನ್ನು ಉತ್ಪತ್ತಿ ಮಾಡುವುದಿಲ್ಲ. ಅವನು ಬೇರೊಂದು ಮೂಲದ ಬೆಳಕಿನಿಂದಷ್ಟೇ ಬೆಳಗುತ್ತಾನೆ. ಹೀಗೆ ಇನ್ನು ಹಲವಾರು ವೈಜ್ಞಾನಿಕ ಸತ್ಯಗಳನ್ನು ಜಗತ್ತಿಗೆ ಸಾಬೀತುಪಡಿಸುವುದರ ಮೂಲಕ ಜಗತ್ತನ್ನು ನಡೆಸುವವನು ದೇವರು, ಅವನ ಆಜ್ಞೆಯಂತೆ ಪ್ರಪಂಚ ನಡೆಯುತ್ತದೆ ಎನ್ನುವ ಮೂಢನಂಬಿಕೆಗಳನ್ನು ಹೊಂದಿದ್ದ ಸಂಪ್ರದಾಯಸ್ಥ ರೋಮನ್ ಕ್ಯಾಥೊಲಿಕ್ ಚರ್ಚನ್ನು ಎದುರು ಹಾಕಿಕೊಂಡ ಗೆಲಿಲಿಯೊ, ಕೋಪರ್ನಿಕಸ್‌ನಂತೆ ಆ ಸತ್ಯಕ್ಕಾಗಿ ತನ್ನ ಪ್ರಾಣ ಬಲಿಕೊಡಲು ಇಚ್ಛಿಸದಿದ್ದರೂ, ಅಧಿಕಾರ ವ್ಯವಸ್ಥೆಯೊಂದಿಗೆ ರಾಜಿಯಾಗಿ, ಫ್ಲೋರೆನ್ಸ್ ವಿಶ್ವವಿದ್ಯಾಲಯದಲ್ಲಿ ತಾನು ಗಣಿತ ಶಾಸ್ತ್ರ ಹಾಗೂ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ ಅದುವರೆಗೆ ಬೋಧಿಸಿದ್ದೆಲ್ಲವೂ ಸುಳ್ಳು ಎಂದು ಬಹಿರಂಗಪಡಿಸಿದನಾದರೂ, ತನ್ನ ಕೊನೆಯುಸಿರುವವರೆಗೆ ಸಂಕೋಲೆಗಳಲ್ಲಿ ಬಂಧಿಯಾಗಿದ್ದರೂ ಅದುಮಿಡಲಾಗದ ಸತ್ಯವನ್ನು ತನ್ನ ಪುತ್ರ ಆಂದ್ರಿಯ ಮೂಲಕ ಹೊರ ಜಗತ್ತಿಗೆ ತಿಳಿಸುವಲ್ಲಿ ಯಶಸ್ವಿಯಾಗುವುದರೊಂದಿಗೆ ಇಡೀ ನಾಟಕದಲ್ಲಿ ಪ್ರತಿಧ್ವನಿಸುವ "ಸತ್ಯ....... ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುವವರು ಅಪರಾಧಿಗಳು" ಎಂಬ ದರ್ಶನವನ್ನು ಜಗತ್ತಿಗೆ ಹೇಗೆ ಸಾರಿದನು ಎನ್ನುವುದನ್ನು ಮನಮುಟ್ಚುವಂತೆ ಅಭಿನಯಿಸಿದ ಯುವಕಲಾವಿದರು, ಅವರಿಂದ ಅಂತಹ ಅಭಿನಯವನ್ನು ಹೊರತೆಗೆದ ಶಿವಪ್ರಕಾಶರು ನೆರೆದಿದ್ದ ಎಲ್ಲ ಜನರ ಅಭಿನಂದನೆಗೆ ಪಾತ್ರರಾದರು.

ನನ್ನ ಜೀವಮಾನದಲ್ಲಿ ನಾನು ನೋಡಿದ ಮೊತ್ತಮೊದಲ ನಾಟಕವೇ ಚಿರಸ್ಮರಣೀಯವಾದದ್ದು ನನಗೂ ಅತೀವ ಹರ್ಷವನ್ನು ಉಂಟುಮಾಡಿತು.

Rating
No votes yet