ನನಗೆ ಹಿಡಿಸಿದ ಕವಿರಾಜಮಾರ್ಗದ ಒಂದಿಶ್ಟು ಸಾಲುಗಳು

ನನಗೆ ಹಿಡಿಸಿದ ಕವಿರಾಜಮಾರ್ಗದ ಒಂದಿಶ್ಟು ಸಾಲುಗಳು

ಬರಹ

(೧)
ಅಱಿವುಳ್ಳವರೊಳ್ ಬೆರಸದು
ದಱಿಂದಮರಿಯದರೊಳಪ್ಪ ಪರಿಚಯದಿಂದಂ
ನೆಱೆಯಿಂದ್ರಿಯಮಂ ಗೆಲ್ಲದು
ದಱಿಂದಮಕ್ಕುಂ ಜನಕ್ಕೆ ಪೀನಂ ಬೆಸನಂ
[ಅರಿವುಳ್ಳವರೊಂದಿಗೆ ಬೆರೆಯದಿರುವುದರಿಂದಲೂ, ದಡ್ಡರೊಂದಿಗೆ ಆಗುವ ಪರಿಚಯದಿಂದಲೂ, ಇಂದ್ರಿಯಗಳನ್ನು ಚೆನ್ನಾಗಿ ಗೆಲ್ಲದೆ ಇರುವುದರಿಂದಲೂ ಮಂದಿಗೆ ಹೆಚ್ಚು ಬೆಸನವು ಒದಗುತ್ತದೆ ]
ಪೀನಂ= ಹೆಚ್ಚು, ಬೆಸನ= ವ್ಯಸನ

(೨)
ಸಮಱುಗೆಯಿಲ್ಲದ ಮುಱಕಮು
ಮಮರ್ದಿರೆ ಕೆಯ್ಗೆಯ್ಯದೊಪ್ಪುವಂದಮುಮವಳಾ
ನೆವಮಿಲ್ಲದ ದರಹಸಮುಂ
ಸಮದಾಲಸಲಲಿತಗಮನಮುಂ ಸೊಗಯಿಸಗುಂ
[ಚೆನ್ನಾಗಿ ಕಾಣಬೇಕೆಂದು ಮೊಗಸದೆ ಸಹಜವಾಗಿರುವ ಮೊಗಬಗೆಯು, ಒಡವೆಗಳಿಂದ ಸಿಂಗರಿಸಿಕೊಳ್ಳದಿದ್ದರೂ ಒಪ್ಪುವ ಚೆಲುವೂ, ಕಾರಣವಿಲ್ಲದ ನಸುನಗೆಯೂ ಸೊಕ್ಕಿನಿಂದ ಮೆಲ್ಲಗೆ ಹಿತವಾಗಿರುವ ನಡಿಗೆಯೂ ಒಂದುಗೂಡಿರಲೂ 'ಸೊಗಸು'(ಸೊಗಯಿಸಗುಂ)]
ಸಮಱು= ಒಪ್ಪವಾಗಿಸಿದ, ಚನ್ನಾಗಿ, ಸರಿಮಾಡಿದ
ಅಮರ್= ಒಂದುಗೂಡಿದ
(೩)
ನುಡಿಸಿದನೆನ್ನಂ ನಲ್ಲಂ
ಬಿಡಿಸದನೆನ್ನಂತರಂಗದನುತಾಪಮನೊ
ಲ್ದುಡಿಸಿದನೊಳ್ಳುಳ್ಳುಡೆಯಂ
ತುಡಿಸಿದನೆನಗರಿಕೆಯಪ್ಪ ಮಣಿಭೂಷಣಮಂ

[ನುಡಿಸಿದನ್ ಎನ್ನಂ ನಲ್ಲಂ ಬಿಡಿಸಿದನ್ ಎನ್ ಅಂತರಂಗದ ಅನುತಾಪಮನ್ ಒಲ್ದುಡಿಸಿದನ್ ಒಳ್ಳೆ ಉಳ್ಳುಡೆಯಂ ತುಡಿಸಿದನ್ ಎನಗೆ ಅರಿಕೆಯಪ್ಪ ಮಣಿಭೂಷಣಮಂ]

ಕೊ.ಕೊ
(೧) ತುಂಬ ಒಳ್ಳೆಯ ಬುದ್ದಿ ಮಾತು. ಯಾವುದರಿಂದ ಹೆಚ್ಚು ತೊಂದರೆ ಅಂತ ಸಿರಿವಿಜಯ ನಾಲ್ಕು ಸಾಲುಗಳಲ್ಲಿ ಚೆನ್ನಾಗಿ ಹೇಳಿದ್ದಾನೆ. ಸಿರಿವಿಜಯನು ಬರೀ ಪಂಡಿತನಲ್ಲ ಅದಲ್ಲದೆ ಬದುಕನ್ನ ಚೆನ್ನಾಗಿ ಅರಿತವ ಅಂತ ಇದರಿಂದ ನಮಗೆ ಗೊತ್ತಾಗುತ್ತದೆ.
(೨) ಸಿರಿವಿಜಯನ ರಸಿಕ ಮನಸ್ಸು ದಿಟವಾದ ಚೆಲುವನ್ನು ನಮಗೆ ಹೀಗೆ ತೋರಿಸಿಕೊಟ್ಟಿದೆ
(೩) ತುಂಬ ರಸಿಕತನದಿಂದ ಕೂಡಿದೆ.