ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೧

ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೧

ಪ್ರತಿಯೊಬ್ಬರ ಮನಸ್ಸು ತನ್ನದೇ ಆದ ಲೋಕದಲ್ಲಿ ಅಲೆದಾಡುತ್ತ ತನ್ನಷ್ಟಕ್ಕೆ ತಾನು
ಸಂತೃಪ್ತಿ ಹೊಂದಲು ಪರಿತಪಿಸುತ್ತಿರುತ್ತದೆ. ನಮ್ಮ ಚಿಂತನಾ ಪ್ರಪಂಚವೇ
ನಮ್ಮನ್ನಾವರಿಸಿಬಿಟ್ಟಿರುತ್ತದೆ. ಎಷ್ಟೋ ಸಲ ನಮ್ಮ ಚಂತನಾ ಪ್ರಪಂಚ ಎಷ್ಟೊಂದು
ಚಿಕ್ಕದೆಂಬುದರ ಪರಿವೇ ಇರುವುದಿಲ್ಲ. ನಮ್ಮ ಚಿಂತನಾ ಲೋಕವನ್ನು ಬಿಟ್ಟು, ಹೊರಗಿರುವ
ಜಗತ್ತಿನ ಉದ್ದಗಲಗಳನ್ನು ಅಳೆಯುವ ಚಪಲ ಬಹಳ ದಿನಗಳಿಂದ ನನ್ನಲ್ಲಿತ್ತು. ಅವಕಾಶ
ಸಿಕ್ಕಿರಲಿಲ್ಲ. ಹೊಸ ವರ್ಷದ ಹೊಸ್ತಿಲಲ್ಲೇ ಆ ಆಸೆ ಈಡೇರಬಹುದು ಅಂತ ಊಹೆ ಕೂಡ
ಮಾಡಿರಲಿಲ್ಲ. ಒಂದು ವಾರ ಕೆಲಸದಿಂದ ರಜೆ ಗಿಟ್ಟಿಸಿಕೊಂಡು ಆದಷ್ಟು ಊರುಗಳಿಗೆ
ಭೆಟ್ಟಿಕೊಟ್ಟೆ. ಹೋದಲ್ಲೆಲ್ಲ ಹೊಸ ಹೊಸ ಅನುಭವ, ನನ್ನ ಜಗತ್ತು ಎಷ್ಟೊಂದು ಚಿಕ್ಕದೆಂಬ
ನಾಚಿಕೆ ದಿನೆ ದಿನೆ ಹೆಚ್ಚುತ್ತ ಹೋಯಿತು. ಊಹಿಸಲಾರದಂತಹ ಸನ್ನಿವೇಷಗಳು ನನ್ನನ್ನು
ದಿಙ್ಞೂಡನನ್ನಾಗಿಸಿಬಿಟ್ಟವು. ಉಳಿದವರಿಗಿಂತ ನಾನೆಷ್ಟು ಅದೃಷ್ಟವಂತನೆಂಬ ಅರಿವು ನನ್ನ
ಚಿಂತನಾ ಲೋಕವನ್ನು ಬಡಿದೆಬ್ಬಿಸಿದ್ದು ಉಂಟು. ಹತ್ತು ದಿನಗಳ ಅಲೆದಾಟ
ಅವಿಸ್ಮರಣೀಯವಾದರೂ, ಅಪೂರ್ವ ಅನುಭವ ಸಿಕ್ಕಿದ್ದು ಮೈಲಾಪುರದ ಜಾತ್ರೆಯಲ್ಲಿ .

ನಾನು,
ಕಾಕಾ(ಚಿಕ್ಕಪ್ಪ, ಕನ್ನಡ ಉಪನ್ಯಾಸಕ) ಮತ್ತು ಕಾಕಾನ ಸ್ನೇಹಿತ, ಲೋಕನಾಥ ಸರ್.
ಜಾತ್ರೆಗೆ ಹೋಗುವ ಮೊದಲೇ ಕಾಕಾನಿಂದ ಜಾತ್ರೆಗೆ ಸಂಬಂಧ ಪಟ್ಟ ಎಲ್ಲ ವಿಷಯಗಳನ್ನು
ತಿಳಿದುಕೊಂಡಿದ್ದೆ. ಮೈಲಾಪುರದ (ಬೆಟ್ಟದ ಮೇಲಿರುವ) ದೇವರಾದ "ಮಲ್ಲಯ್ಯ /
ಮೈಲಾರಲಿಂಗ", ಅಲ್ಲಿ ಬರುವಂತಹ ಜನ, ಅಲ್ಲಿ ನಡೆಯು ಎಲ್ಲ ಚಟುವಟಿಕೆಳು, ಅದರ ಐತಿಹಾಸಿಕ
ಹಿನ್ನೆಲೆ, ಉದ್ದೇಶ, ಜನರ ನಂಬಿಕೆ ಇತ್ಯಾದಿ. ಸಮಯಕ್ಕೆ ಸರಿಯಾಗಿ, ಕಿಕ್ಕಿರಿದ
ಬಸ್ಸಿನಲ್ಲಿ ಮೈಲಾಪುರ ತಲುಪಿದೆವು. ಎಲ್ಲಿ ನೋಡಿದರಲ್ಲಿ ಕುಂಕುಮ, ಭಂಡಾರ (ಅರಶಿಣ,
ಹಳದಿ ಬಣ್ಣ) ದ್ದೆ ವೈಭವ, ಜಾತ್ರೆಯ ಒಳಹೊಕ್ಕರೆ ಸಾಕು ಹಣೆಯ ಮೇಲೆ ಭಂಡಾರದ
ತಿಲಕವಿಡುವವರು ಸಾವಿರಾರು ಜನ. ಬೆಟ್ಟ ಹತ್ತುವಾಗಲಂತು ಜೈ ಕಾರ ಹಾಕುತ್ತ ಭಂಡಾರ
ಚೆಲ್ಲುವವರು ಸಹಸ್ರಾರು ಮಂದಿ. ಕಾಕಾನಂತಹ ಕೆಲವರು ಆ ಭಂಢಾರದ ಬಣ್ಣಕ್ಕೆ ಹೆದರಿ
ಕಳಗಿನಿಂದಲೇ ನಮಸ್ಕರಿಸಿ ಬಂದ ದಾರಿ ಹಿಡಿಯುವುದುಂಟು. ನನಗಂತೂ ಪ್ರತಿಯೊಂದನ್ನೂ
ಅನುಭವಿಸುವ ಅವಸರ. ಕಾಕಾ ಮತ್ತು ಅವನ ಗೆಳೆಯನನ್ನು ಬೆಟ್ಟದ ಕೆಳಗೇ ಬಿಟ್ಟು ನಾನೊಬ್ಬನೇ
ಹೋಗಲು ನಿರ್ಧರಿಸಿದೆ. ಬೆಟ್ಟ ಹತ್ತುತ್ತ ಹತ್ತುತ್ತ ನಾನು ನೋಡಿದ ಪ್ರತಿಯೊಂದು
ಚಿತ್ರವೂ ಹೃದಯ ಹಿಂಡಿತು. ಜಗತ್ತಿನಲ್ಲಿ ಇನ್ನೂ ಹೀಗು ಉಂಟೆ ಅನಿಸಿತು. ನನಗೆ
ಗೊತ್ತಿಲ್ಲದೆ ಕಣ್ಣೀರಿನ ಹನಿ ಕೆಳಗೆ ಬಿತ್ತು. ನನಗನಿಸಿದ್ದನ್ನು ಚಿತ್ರಗಳ ಮೂಲಕ
ನಿಮ್ಮೊಂದಿಗೆ ಹಂಚಿಕೊಳ್ಳಲು ಪ್ರಯತ್ನಪಡುತ್ತಿದ್ದೇನೆ, ಅನಿಸಿದ್ದನ್ನು ಅಕ್ಷರಗಳಲ್ಲಿ
ಹಿಡಿದಿಡಲು ಸಾಧ್ಯವಾಗುತ್ತಿಲ್ಲ. ಪ್ರಯತ್ನ ಪಟ್ಟಿದ್ದೇನೆ.

ಬೆಟ್ಟದ
ತಳದಿಂದ ತುದಿಯವರೆಗೂ ಸಾಲಾಗಿ ನಿಂತಿದ್ದ ಭಿಕ್ಷುಕರ ದಂಡು ನನ್ನನ್ನು ಅತ್ಯಂತ
ನಮ್ರತೆಯಿಂದ ಸ್ವಾಗತಿಸಿತು. ಭಿಕ್ಷೆ ಹಾಕುತ್ತ ಹಾಕುತ್ತ ನನ್ನಲ್ಲಿದ್ದ ಚಿಲ್ಲರೆ
ದುಡ್ಡು ಖಾಲಿಯಾಯಿತು. ಮುಂದೆ ನಿಂತಿದ್ದ ಅಜ್ಜಿಯೊಬ್ಬಳು, "ಮಗ, ಧರ್ಮ ಮಾಡು" ಅಂದಳು.
"ಅಜ್ಜಿ, ಚಿಲ್ಲರೆ ಇಲ್ಲ, ಎಲ್ಲಾ ಕೊಟ್ಟು ಖಾಲಿಯಾಯಿತು" ಅಂದೆ. "ನೋಟ ಇದ್ರ ಕೊಡು, ನಾ
ಚಿಲ್ಲರ್ ರೊಕ್ಕ ಕೊಡ್ತಿನಿ" ಅಂದಳು! ತಕ್ಷಣ ಮುಂಬಯಿ ಶಹರದಲ್ಲಿ ಇನ್ ಕಮ್ ಟ್ಯಾಕ್ಸ್
(Income Tax) ಕಟ್ಟುವ ಭಿಕ್ಷುಕನೊಬ್ಬನ ನೆನಪಾಯಿತು! ಮುಗುಳ್ನಕ್ಕು, "ನಿನ್ನಷ್ಟು
ಶ್ರೀಮಂತ ನಾನಲ್ಲವಾ ತಾಯಿ" ಅಂತ ಅವಳಿಗೆ ನಮಸ್ಕರಿಸಿ, ಒಂದು ಫೋಟೊ ಕ್ಲಿಕ್ಕಿಸಿ
ಮುನ್ನಡೆದೆ.

ಸ್ವಲ್ಪ
ಮುಂದೆ ಹೋಗಿ ಅತ್ತಿತ್ತ ನೋಡಿದೆ, ಒಬ್ಬ ಹುಡುಗ ಭಿಕ್ಷೆಯಲ್ಲಿ ಸಿಕ್ಕ ರೊಕ್ಕ
ಎಣಿಸುತ್ತಿದ್ದ. ಅವನಿಗೆ ಗೊತ್ತಿಲ್ಲದ್ದೆ ಈ ಫೋಟೊ ತೆಗೆದೆ. ಅವನು ದುಡ್ದು ಕೊಡು ಅಂತ
ಸಿಕ್ಕಾಪಟ್ಟೆ ಕಾಡಿದ. ಆದರೂ ತಾಳ್ಮೆಯಿಂದ ಅವನನ್ನು ಮಾತನಾಡಿಸಿದೆ. ಅವನು ಆವಾಗಾವಾಗ
ಶಾಲೆಗೆ ಹೋಗುವುದನ್ನು ಕೇಳಿ ಸ್ವಲ್ಪ ಸಮಾಧಾನವಾಯಿತು. ಎಲ್ಲಾದರೂ ಜಾತ್ರೆಯಿದ್ದರೆ
ಸಾಲ್ಕೈದು ದಿನ ಶಾಲೆಗೆ ಚಕ್ಕರ್. ಅವನು ತೊಟ್ಟ ಬಟ್ಟೆ ಶಾಲೆಯ ಸಮವಸ್ತ್ರ (uniform)!
"ನಿನ್ನ ಹತ್ರ ಇಷ್ಟೊಂದು ರೊಕ್ಕ ಇದೆಯಲ್ಲ, ಏನ್ ಮಾಡ್ತಿ ಅದನ್ನ" ಅಂತ ಕೆಳಿದೆ.
"ಫಸ್ಟು ಒಂದು ಜೋಡಿ ಅರಿಬಿ (ಬಟ್ಟೆ) ತೊಗೊತಿನಿ, ರೊಕ್ಕ ಉಳಿತು ಅಂದ್ರ ಒಂದು ಹೊಸ
ಕಂಪಾಸ್ (geometry box) ತೊಗೋತಿನಿ" ಅಂದ! ನನಗಾದ ಸಂತಸಕ್ಕೆ ಪಾರವೇ ಇರಲಿಲ್ಲ.
ಅವನೇನಾದರು ಇನ್ನು ಸ್ವಲ್ಪ ಕಷ್ಟ ಪಟ್ಟರೆ, ವಿದ್ಯಾವಂತನಾಗಿ ತನ್ನ ಮನೆಯ ಎಲ್ಲಾ
ಕಷ್ಟಗಳನ್ನು ದೂರ ಮಾಡುತ್ತಾನೆಂಬುದರಲ್ಲಿ ಸಂದೇಹವೇ ಇಲ್ಲ. ನನ್ನಲ್ಲಿದ್ದ ಒಂದು ಪೆನ್
(pen) ಕೊಡಲು ಹೋದೆ, "ಸಾರ್, ಪೆನ್ ಬ್ಯಾಡ, ರೊಕ್ಕ" ಅಂದ. ಚಿಲ್ಲರೆ ಇಲ್ಲಪಾ, ಇದೆ
ಇಟ್ಕೊ ಅಂತ ಹೇಳಿ ಮುನ್ನಡೆದೆ.

ಬಲಕ್ಕೆ
ತಿರುಗಿ ನೋಡಿದಾಗ ಅಲ್ಲಿ ಯಾವುದೋ ಊರಿಂದ ಬಂದ ಜಾತ್ರೆಯ ದಂಡು ಅಡುಗೆಯ ಕಾರ್ಯಕ್ರಮ
ಶುರು ಹಚ್ಚಿಕೊಂಡಿತ್ತು. ಅತ್ತಿತ್ತ ತಿರುಗಾಡಿ ವಾಪಸ್ ಬೆಟ್ಟದ ಮೆಟ್ಟಿಲಿನ ಕಡೆ
ಬರುವಾಗ ಚಿತ್ರದಲ್ಲಿನ ಈ ಹುಡಿಗಿಯರನ್ನು ಫೋಟೊ ತೆಗೆಯಲಾ ಅಂತ ಕೇಳಿದಾಗ, ಒಬ್ಬ ಹುಡುಗಿ
(ಎಡಕ್ಕಿರುವವಳು) "ಬ್ಯಾಡ" ಅಂತ ಮುಖ ಮುಚ್ಚಿಕೊಳ್ಳುತ್ತಿದ್ದಳು. ಓಹೋ! ಅಂತ ಹೊರಡುವ
ಹಾಗೆ ನಾಟಕ ಮಾಡಿದೆ, ಅವಳು ತಿರುಗಿ ನೋಡುವಷ್ಟರಲ್ಲಿ ಈ ಫೋಟು ಕ್ಲಿಕ್ಕಿಸಿದೆ! ಎಂತಹ
ಫೋಟೊಗ್ರಾಫಿ skill ಅಂತಿರ ನಂದು!

ನಾಲ್ಕೈದು
ಮೆಟ್ಟಿಲು ಮುಂದೆ ಹೋದೆ. ಚಿತ್ರದಲ್ಲಿರುವ ಒಬ್ಬ ಜೋಗಪ್ಪ (a transgender) ಯಾವುದೋ
ಚಿಂತಯಲ್ಲಿ ಮಗ್ನನಾಗಿದ್ದ(ಳು). ಫೋಟೊ ಕ್ಲಿಕ್ ಮಾಡುವಷ್ಟರಲ್ಲಿ ನನ್ನ ಕಡೆ
ತಿರುಗಿದ(ಳು). Picture perfect! ಜೋಗಪ್ಪ ಸವದತ್ತಿ ಎಲ್ಲಮ್ಮನ ಭಕ್ತ. ಸಾಮಾನ್ಯವಾಗಿ
ಅವನನ್ನು "ಜೋಗ್ಯಾ, ಅಕ್ಕಲಗ್ಯಾ ಜೋಗ್ಯಾ" ಎಂಬ ಹೆಸರಿನಿಂದ ಕರೆಯುವುದು ವಾಡಿಕೆ.
ಊರಿಂದ ಊರಿಗೆ ಸುತ್ತಾಡಿ, (ಕೈಯಲ್ಲಿ ಹಿಡಿದ) ತಂಬೂರಿ ಬಾರಿಸುತ್ತ ಭಿಕ್ಷೆ ಬೇಡಿಯೇ
ಜೀವನ ಸಾಗಿಸಬೇಕು. ಆ ರೀತಿ ಮಾಡಿದಾಗಲೇ ಸವದತ್ತಿ ಎಲ್ಲಮ್ಮನಿಗೆ ತನ್ನ ಭಕ್ತಿ
ಮುಟ್ಟುವುದು ಎಂಬ ನಂಬಿಕೆ. ಬೆಂಗಳೂರಿನಂತಹ ನಗರಗಳಲ್ಲಿ LesBITನಂತಹ (a new
helpline for lesbians, bisexuals and transgenders in Bangalore city,
LesBit helpline number is 080-23439124[source]) ಸಮಾಜ ಸೇವಕ ಸಂಸ್ಥೆಗಳು (NGOs),
ಜೋಗಪ್ಪನಂತವರ ಏಳ್ಗೆಗಾಗಿ ದುಡಿಯುತ್ತಿರುವುದು ಮಾನವೀಯತೆ ದೃಷ್ಟಿಯಿಂದ ಅತ್ಯಂತ
ಸಮಾಧಾನಕರ ವಿಷಯ. ಆದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಸಾವಿರಾರು ಜೋಗಪ್ಪಗಳ ಬದುಕು
ಇನ್ನೂ ಶೋಚನೀಯವಾಗಿದೆ. ಅವರೂ ಮನುಶ್ಯರು, ಅವರಿಗೂ ನಮ್ಮಂತೆ ಒಂದು ಬದುಕಿದೆ, ಅವರಿಗೂ
ತಮ್ಮದೆ ಆದ ವಿಚಾರಗಳಿವೆ ಎಂಬ ಭಾವನೆ ಜನರಲ್ಲಿ ಕಿಂಚಿತ್ತೂ ಇಲ್ಲ. ಅವರನ್ನು ಕೀಳು
ದೃಷ್ಟಿಯಿಂದ ನೋಡುವುದು ತಪ್ಪು ಎಂಬುದು ಯಾರ ಅರಿವಿಗೂ ಬರುವುದಿಲ್ಲ. ಮೈಲಾಪುರದಂತಹ
ಜಾತ್ರೆಗಳಲ್ಲಿ ಇವರನ್ನು ಕಂಡು ಮೂಗು ಮುರಿಯುವರೆಷ್ಟು ಜನ? ಅವರನ್ನು ಕಂಡು
ಹಿಯಾಳಿಸುವವರೆಷ್ಟು ಜನ? ಅವರ ಲಿಂಗವನ್ನು ಕುರಿತು ಚೇಷ್ಟೆ ಮಾಡುವವರೆಷ್ಟು ಜನ?
ಯಾರಿಗೂ ಲೆಕ್ಕ ಸಿಗದು. ಇದೆಲ್ಲವನ್ನು ಸಹಿಸಿಕೊಂಡು, ಭಕ್ತಿಯೇ ಶ್ರೇಷ್ಟ,
ಭಕ್ತಿಯಿಂದಲೇ ಬದುಕಿನ ಮುಕ್ತಿ ಎಂದು ನಂಬಿರುವ ಜೋಗಪ್ಪನ ಜೀವನ ಕೀಳೆಂದು
ನಿಮಗನಿಸುವುದೇ?

ಚಿತ್ರದಲ್ಲಿರುವ
ಅಜ್ಜ ಸಹ ಒಬ್ಬ ಜೋಗಪ್ಪ. ಆದರೆ ಇವನು ಮೊದಲಿನ ಜೋಗಪ್ಪನಿಗಿಂತ ಭಿನ್ನ. ಇವನು
ತುಳಜಾಪುರದ ಅಂಬಾ ಭವಾನಿಯ ಭಕ್ತ, ಹೆಂಗಸರ ಬಟ್ಟೆ ಹಾಕುವವನನಲ್ಲ. ಕೆಂಪು ಅಂಗಿ,
ಒಮ್ಮೊಮ್ಮೆ ಧೋತಿ, ಕೊರಳಲ್ಲಿ ಕವಡೆಯ ಸರ, ಕೈಯಲ್ಲಿ ಬುಟ್ಟಿ ಇವನ ಸಾಮಾನ್ಯ ವೇಶ.
ಬುಟ್ಟಿಯಲ್ಲಿ ಅಂಬಾ ಭವಾನಿಯ ಮೂರ್ತಿಯಿದೆ (ಚಿತ್ರದಲ್ಲಿ ಕಾಣುತ್ತಿಲ್ಲ). ದೇವರ
ಹೆಸರಿನಲ್ಲಿ ಭಿಕ್ಷೆ ಬೇಡುತ್ತ ಜೀವನ ಕಳೆಯುವುದೇ ಇವನ ಉದ್ಯೋಗ. ಭಕ್ತಿಯಿಂದಲೇ "ಈ
ಪಾಪಿ ಜೀವನದ" ಮುಕ್ತಿ ಎಂಬ ಬಲವಾದ ನಂಬಿಕೆ ಇವನದು.


ಗೊರವರ
ಮಧ್ಯದಲ್ಲಿ ನಾನು! ಈ ಚಿತ್ರದ ಹಿಂದೆ ಅತ್ಯಂತ ಕುತೂಹಲಕರವಾದ ಕಥೆಯಿದೆ. ಮೈಲಾಪುರದ
ದೇವರಾದ ಮಲ್ಲಯ್ಯ, ಹಿಂದೆ, ಗಂಗೆಮಾಳಮ್ಮ ಎನ್ನುವಳನ್ನು ಪ್ರೀತಿಸುತ್ತಿದ್ದ. ಒಂದು
ರೀತಿಯ affair ಅನ್ಕೋಬಹುದು! ಅವರಿಬ್ಬರ ಪ್ರೇಮ ನಿಷ್ಕಳಂಕವಾದುದಂತೆ. ಆದರೆ
ಗಂಗೆಮಾಳಮ್ಮನ ಮನೆಯವರು ಮಲ್ಲಯ್ಯನ ಜೊತೆ ಗಂಗೆಮಾಳಮ್ಮನನ್ನು ಮದುವೆ ಮಾಡಲು
ನಿರಾಕರಿಸಿದರು. ಅದಕ್ಕೆ ಮಲ್ಲಯ್ಯ ಮತ್ತು ಗಂಗೆಮಾಳಮ್ಮ ಗುಪ್ತವಾಗಿ ಮದುವೆಯಾಗಲು
ತೀರ್ಮಾನಿಸಿದರು. ಅವರು ಗುಪ್ತವಾಗಿ ಮದುವೆಯಾಗುವಾಗ ಗಂಗೆಮಾಳಮ್ಮನ ಸಹೋದರರು ಆಯುಧಗಳ
ಸಮೇತ ಮದುವೆಯನ್ನು ತಡೆಯಲು ಬಂದರಂತೆ. ಭಕ್ತಿಯ ಸ್ವರೂಪಳಾದ ಗಂಗೆಮಾಳಮ್ಮ ಅವರಿಗೆ
"ನಾಯಿಯಂತೆ ಬದುಕಿರಿ" ಎಂಬ ಶಾಪವಿತ್ತಳು. ಶಾಪಕ್ಕೆ ತುತ್ತಾದ ಸಹೋದರರು, ನಾಯಿಯಂತಹ
ಗುಣಗಳನ್ನು ಪಡೆದುಕೊಂಡರು. ಬೊಗಳುವುದು, ನಾಯಿಯಂತೆ ಶಬ್ದ ಮಾಡುವುದು, ಒಂದೇ
ತಟ್ಟೆಯಲ್ಲಿ ತಿನ್ನುವುದು ಇತ್ಯಾದಿ. ಪುರಾಣದ ಈ ಸನ್ನಿವೇಶವನ್ನು ಅಮರವಾಗಿಸಲು
ಗಂಗೆಮಾಳಮ್ಮನ ಸಹೋದರರ ವಂಶಸ್ಥರಾದವರು, ಇಂದಿಗೂ ಸಹ ನಾಯಿಯಂತಹ ಬದುಕನ್ನು
ಸಾಗಿಸುತ್ತಿದ್ದಾರೆ! ಹೀಗೆ ಮಾಡಿದಾಗ ಮಾತ್ರ ಗಂಗೆಮಾಳಮ್ಮನ ಮದುವೆ ತಡೆದ ತಮ್ಮ
ಪೂರ್ವಜರ ತಪ್ಪಿಗೆ ಕ್ಷಮೆ ಸಿಕ್ಕುವುದೆಂಬ ಬಲವಾದ ನಂಬಿಕೆ. ಇವರನ್ನು ಉತ್ತರ
ಕರ್ನಾಟಕದಲ್ಲಿ "ವಗ್ಯಾಗಳು" ಎಂದೂ, ದಕ್ಷಿಣ ಕರ್ನಾಟಕದಲ್ಲಿ "ಗೊರವರು" ಎಂದು
ಕರೆಯುವುದುಂಟು. ಚಿತ್ರದಲ್ಲಿರುವ ಗೊರವನ ಕೈಯಲ್ಲಿ (ಕೆಳಗಿನ ಚಿತ್ರ, ಎಡಗೈಯಲ್ಲಿ) ರುವ ತಾಮ್ರದ ತಟ್ಟೆಯನ್ನು
"ಪಾನಪಾತ್ರೆ" ಎಂದು ಕರೆಯುವರು. ಅವರು ಪಾನಪಾತ್ರೆಯಲ್ಲೇ ಭಿಕ್ಷೆ ಬೇಡುವುದು, ಅದರಲ್ಲೇ
ಊಟ ಮಾಡುವುದು, ಎಲ್ಲಾದರು ಚಹಾ ಕುಡಿಯಬೇಕಾದರೂ ಪಾನಪಾತ್ರೆಯಲ್ಲೇ!!



ನೋಡಲು
ತುಂಬಾ ಕುತೂಹಲಕಾರಿಯಾದ ಗೊರವರ ವೇಷ ಭೂಷಣ ನನ್ನನ್ನು ಹಲವಾರು ಚಿಂತನೆಗಳಿಗೆ ಗುರಿ
ಮಾಡಿತು. ಯಾವುದೋ ಕಾಲದಲ್ಲಿ ನಡೆದ ಘಟನೆಗೆ (ನಡೆದಿತ್ತೋ ಇಲ್ಲವೋ ಯಾರಿಗೆ ಗೊತ್ತು?
ಅಥವ ಪುರಾಣದಲ್ಲಿ ಯಾವುದೋ ಕವಿ ಹಾಗೆ ಬರೆದ ತಪ್ಪಿಗೆ) ವೈಜ್ಞಾನಿಕ ಯುಗದಲ್ಲಿ ಇಂದಿಗೂ
ಇವರ ಪರದಾಟ ತಪ್ಪಿದ್ದಲ್ಲ. ಅವರ ಬದುಕಿನ ಬಗ್ಗೆ ಯಾರಿಗೂ ಕರುಣೆಯಿಲ್ಲವೆ? ಮೈಲಾಪುರದ
ಮಲ್ಲಯ್ಯನಿಗೂ ಇಲ್ಲವೆ? ಜಾನಪದ ಸಂಸ್ಕೃತಿಯನ್ನು ರಕ್ಷಿಸುವ ಭರದಲ್ಲಿರುವ ಸರಕಾರ ಮತ್ತು
ಹಲವಾರು ಸಂಸ್ಥೆಗಳು ಇವರ ಬದುಕಿಗಾಗಿ ಏನಾದರು ಮಾಡಬಾರದೇ? ನಮ್ಮ ನಿಮ್ಮಂತೆ ಬದುಕುವ
ದಾರಿಯನ್ನು ಕಲ್ಪಿಸಿಕೊಡಬಾರದೇ? ಜಗತ್ತಿನಲ್ಲೇ ಅತ್ಯಂತ ಶ್ರೀಮಂತವಾಗಿರು ಸಂಸ್ಕೃತಿಯ
ಹಿಂದೆ ಇಂತಹ ಘೋರವಾದ ಬಡತನವಿದೆ ಎಂಬ ಸತ್ಯ ಅರಿಯುವುದು ಯಾವಾಗ??

ಮುಂದುವರೆಯುವುದು.....

Rating
No votes yet