ಕಿಸೆಗೆ ಹಗುರವಾದ ಲ್ಯಾಪ್‍ಟಾಪ್ ಮಾರುಕಟ್ಟೆಗೆ

ಕಿಸೆಗೆ ಹಗುರವಾದ ಲ್ಯಾಪ್‍ಟಾಪ್ ಮಾರುಕಟ್ಟೆಗೆ

ಬರಹ

(ಇ-ಲೋಕ-58)(21/1/2008) mac book air

ಹಗುರವಾದ ಲ್ಯಾಪ್‍ಟಾಪ್ ರೂಪಿಸಲು ವಿಶ್ವದ ಇತರೆಡೆ ಪ್ರಯತ್ನಗಳು ನಡೆದಿರುವಂತೆ ಕಿಸೆಗೆ ಹಗುರವಾದ,ಸಾಮಾನ್ಯರ ಕೈಗೆಟಕುವ ಅಗ್ಗದ ದರದ ಲ್ಯಾಪ್‍ಟಾಪ್ ರೂಪಿಸಲು ನಮ್ಮ ದೇಶದ ಕಂಪೆನಿಗಳು ಪ್ರಯತ್ನಿಸುತ್ತಿವೆ.ಎಚ್ ಸಿ ಎಲ್ ಇನ್ಫೋಸಿಸ್ಟಮ್ಸ್ ಕಂಪೆನಿ ಈ ವರ್ಷದ ಗಣರಾಜ್ಯೋತ್ಸವದ ವೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿರುವ ಲ್ಯಾಪ್‍ಟಾಪ್ ಹದಿನಾಲ್ಕು ಸಾವಿರ ರುಪಾಯಿಗಳದ್ದು.ಇದರಲ್ಲಿ ಡಿವಿಡಿ ಡ್ರೈವ್ ಅನ್ನು ಕೈಬಿಡಲಾಗಿದ್ದು,ಹಾರ್ಡ್ ಡಿಸ್ಕ್ ಕೂಡಾ ಇಲ್ಲ.ಎರಡು ಜಿಬಿ ಸಾಮರ್ಥ್ಯದ ಫ್ಲಾಶ್ ಸ್ಮರಣಕೋಶ ಇದರಲ್ಲಿ ಅಳವಡಿಸಲಾಗಿದೆ.ನಿಸ್ತಂತು,ಕೇಬಲ್ ಸಂಪರ್ಕ ಒದಗಿಸಲಾಗಿದೆ.ನಿಸ್ತಂತು ಡಾಟಾ ಕಾರ್ಡ್ ಇರುವುದರಿಂದ ಮೊಬೈಲ್ ಕಂಪೆನಿಗಳು ನೀಡುವ ಸಾಧನ ಅಳವಡಿಸಿ ಅಂತರ್ಜಾಲ ಸಂಪರ್ಕ ಪಡೆದುಕೊಳ್ಳುವುದು ಸಾಧ್ಯ.ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ಲೀನಕ್ಸ್ ಅನ್ನು ಇದರಲ್ಲಿ ಸ್ಥಾಪಿಸಲಾಗಿದೆ.ಏಳಿಂಚು ಎಲ್ ಸಿ ಡಿ ತೆರೆ ಲಭ್ಯ.ಇದರ ದುಬಾರಿ ಆವೃತಿಯಲ್ಲಿ ಎಂಭತ್ತು ಜಿಬಿ ಹಾರ್ಡ್‍ಡಿಸ್ಕ್,ಉತ್ತಮ ಸಂಸ್ಕಾರಕ ಇದ್ದು,ವಿಂಡೋಸ್ ತಂತ್ರಾಂಶ ಹಾಕಬಹುದು.ಇದರ ಜತೆ ಬರುವ ಎಲ್ ಸಿ ಡಿ ತೆರೆ ಸ್ಪರ್ಶ ಸಂವೇದಿಯಾಗಿದ್ದು,ಕ್ಯಾಮರಾವನ್ನು ಒಳಗೊಂಡಿದೆ.ಬೆಲೆ ಮಾತ್ರಾ ಎರಡು ಪಟ್ಟಿಗೂ ಅಧಿಕ-ಮೂವತ್ತು ಸಾವಿರ ರೂಪಾಯಿಗಳು.ಹದಿನಾಲ್ಕು ಸಾವಿರ ರೂಪಾಯಿಗಳ ದರದ ಲ್ಯಾಪ್‍ಟಾಪ್‍ಗೆ ವಿದ್ಯಾರ್ಥಿಗಳು ಆಕರ್ಷಿತರಾಗಬಹುದು ಎನ್ನುವುದು ಕಂಪೆನಿಯ ಲೆಕ್ಕಾಚಾರ.ಆದರೆ ವಿಡಿಯೋ,ಆಡಿಯೋ ಕಡತಗಳ ದಾಸ್ತಾನು ಮಾಡುವ ಖಯಾಲಿ ಹೊಂದಿದ ವಿದ್ಯಾರ್ಥಿಗಳಿಗೆ ಇದರ ಸೀಮಿತ ಸ್ಮರಣ ಸಾಮರ್ಥ್ಯ ಅಡ್ಡಿ ಎನ್ನಿಸುವುದು ಖಂಡಿತ.
ಅತ್ತ ಮ್ಯಾಕ್‍ವರ್ಲ್ಡ್ ಪ್ರದರ್ಶನದಲ್ಲಿ ಆಪಲ್ ಕಂಪೆನಿಯ ಮುಖ್ಯಸ್ಥ ಸ್ಟೀವ್ ಜೋಬ್ಸ್ ಅಲ್ಟ್ರಾ ಸ್ಲಿಮ್ ಲ್ಯಾಪ್‍ಟಾಪ್ ಬಿಡುಗಡೆ ಮಾಡಿ ಸುದ್ದಿ ಮಾಡಿದರು.ಒಂದು ಬದಿ 0.16 ಅಂಗುಲ ಮತ್ತು ಮತ್ತೊಂದೆಡೆ 0.76 ಅಂಗುಲ ದಪ್ಪವಿರುವ ಮ್ಯಾಕ್‍ಬುಕ್ ಏರ್ ಡಿವಿಡಿ ಡ್ರೈವ್ ಒಳಗೊಂಡಿಲ್ಲವೆನ್ನುವುದು ಮುಖ್ಯ ಕೊರತೆ.ಬೆಲೆ ಹದಿನೆಂಟು ನೂರು ಡಾಲರು.ಬ್ಯಾಟರಿಯನ್ನು ಕಳಚಲು ಸಾಧ್ಯವಾಗದು ಎನ್ನುವುದು ಮತ್ತೊಂದು ತೊಂದರೆ.ಹಾರ್ಡ್‍ಡಿಸ್ಕ್ ಎಂಭತ್ತು ಗಿಗಾಬೈಟ್ ಸಾಮರ್ಥ್ಯದ್ದು.ಇದರ ಎಲ್ ಸಿ ಡಿ ತೆರೆ ಸುಸ್ಪಷ್ಟವಂತೆ.ಪಾದರಸ,ಆರ್ಸೆನಿಕ್ ಅಂಶವು ಈ ತೆರೆಯಲ್ಲಿ ಇಲ್ಲದ್ದರಿಂದ ಪರಿಸರಪ್ರಿಯ ಲ್ಯಾಪ್‍ಟಾಪ್ ಎಂದು ಪರಿಗಣಿಸಬಹುದು.ಆಪಲ್ ಕಂಪೆನಿಯು ಈ ಲ್ಯಾಪ್‍ಟಾಪ್ ತಯಾರಿಕೆಗೆ ಪಿವಿಸಿ ಇರುವ ಪಿಸಿಬಿ ಬಳಸಿಲ್ಲವೆನ್ನುವುದು ಇನ್ನೊಂದು ಹೆಗ್ಗಳಿಕೆ.ಇದರ್ಲ್ಲಿರುವ ಸಂಸ್ಕಾರಕ ತುಸು ನಿಧಾನದ್ದು ಎಂದು ವಿಶ್ಲೇಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಾರ್ಯಕಾರಿ ವ್ಯವಸ್ಥೆಯನ್ನೋ ಅಥವ ಇನ್ಯಾವುದೋ ತಂತ್ರಾಂಶ ಅನುಸ್ಥಾಪಿಸಲು ಡಿವಿಡಿ ಬಳಸಬೇಕಾದರೆ ಏನು ಮಾಡುವುದು ಎನ್ನುವುದು ನಿಮ್ಮ ಪ್ರಶ್ನೆಯೇ?ಯು ಎಸ್ ಬಿಗೆ ಅಳವಡಿಸಬಹುದಾದ ಡಿವಿಡಿ ಡ್ರೈವ್‍ಗೆ ನೀವು ಶರಣು ಹೋಗುವುದು ಒಂದು ಪರಿಹಾರ.ಅಲ್ಲವಾದರೆ,ಲ್ಯಾಪ್‍ಟಾಪಿನ ನಿಸ್ತಂತು ಸಂಪರ್ಕದ ಮೂಲಕ ಇನ್ನೊಂದು ಪಿಸಿಯ ಡಿವಿಡಿ ಡ್ರೈವ್ ಬಳಸಬಹುದು.ಪೈರ್‍‍ವಯರ್,ಈಥರ್‍ನೆಟ್ ಪೋರ್ಟುಗಳನ್ನೂ ಕೈಬಿಡಲಾಗಿದೆ.ಲ್ಯಾಪ್‍ಟಾಪ್ ತೆರೆದ ಕೂಡಾಲೇ ಚಾಲೂ ಆಗಿಬಿಡುತ್ತದೆ.
ನಾಯಿಮರಿ ಬೊಗಳುತ್ತಿರುವುದೇಕೆ?
ನಾಯಿಮರಿ ಬೊಗಳುತ್ತಿರುವುದೇಕೆ ಎಂದು ವಿಶ್ಲೇಷಿಸುವ ತಂತ್ರಾಂಶವೊಂದನ್ನು ಬುಡಾಪೆಸ್ಟಿನ ವಿಶ್ವವಿದ್ಯಾಲಯವೊಂದರ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.ಕಂಪ್ಯೂಟರಿನ ಮುಂದೆ ನಾಯಿ ಬೊಗಳುವುದನ್ನು ಕೇಳಿಸಿದರೆ,ನಾಯಿಯ ಮನಸ್ಥಿತಿ ಏನು ಎನ್ನುವುದನ್ನು ತಂತ್ರಾಂಶ ಗುರುತಿಸಲು ಶಕ್ತ.ಅದರ ಯಶಸ್ಸಿನ ಪ್ರಮಾಣ ಶೇಕಡಾ ನಲ್ವತ್ತಮೂರು.ಜನಸಾಮಾನ್ಯರು ಬೊಗಳುವಿಕೆ ಕೇಳಿ ನಾಯಿಯ ಮನಸ್ಥಿತಿ ಏನು ಎನ್ನುವುದನ್ನು ಹೇಳಿದಾಗ ಅವರ ಯಶಪ್ರಮಾಣ ನಲುವತ್ತು ಶೇಕಡಾ ಇರುತ್ತದಂತೆ.ಅಂದರೆ ತಂತ್ರಾಂಶ ಮನುಷ್ಯನಿಗಿಂತ ವಾಸಿ ಎಂದಾಯಿತಲ್ಲ.ತಂತ್ರಾಂಶವನ್ನು ಇನ್ನೂ ಅಭಿವೃದ್ಧಿ ಪಡಿಸಬಹುದಂತೆ.ತಂತ್ರಾಂಶ ಅಭಿವೃದ್ಧಿ ಪಡಿಸಲು ಒಂದು ನಿರ್ದಿಷ್ಟ ಜಾತಿ ನಾಯಿಯ ಆರು ಸಾವಿರ ಬೊಗಳುವಿಕೆಗಳನ್ನು ವಿಶ್ಲೇಷಿಸಲಾಯಿತಂತೆ!
ಕಡಿಮೆ ದರದಲ್ಲಿ ಕರೆ ಮಾಡಲು ಜಾಹೀರಾತು ಕೇಳಿ!
ಜನರಿಗೆ ಜಾಹೀರಾತು ತೋರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕಂಪೆನಿಗಳ ಹೊಯ್ದಾಟ ಹೊಸ ಎತ್ತರವನ್ನೇರಿದೆ.ಪತ್ರಿಕೆ ಓದುಗರಿಗೆ ಜಾಹೀರಾತು ತಲುಪಿಸಲು,ಸುದ್ದಿಯ ನಡುವೆ ಜಾಹೀರಾತು ನೀಡುವುದು,ಪುಟದ ಮೇಲ್ಭಾಗ ಜಾಹೀರಾತು ಪ್ರಕಟಿಸುವುದು,ಮುಖಪುಟವನ್ನೇ ಜಾಹೀರಾತುಮಯವಾಗಿಸುವುದು ಇತ್ಯಾದಿ ತಂತ್ರಗಳಿಗೆ ಕಂಪೆನಿಗಳು ಮೊರೆ ಹೋಗುವುದನ್ನು ನಾವು ನೋಡಿದ್ದೇವೆ.ಈಗ ನಮಗೆ ಜಾಹೀರಾತು ತಲುಪಿಸಲು ಇನ್ನೊಂದು ನವೀನ ಮಾರ್ಗವನ್ನು ಅರಸಲಾಗಿದೆ.ನಮ್ಮ ದೂರವಾಣಿ ಕರೆಗಳ ನಡುವೆಯೇ ಜಾಹೀರಾತನ್ನು ಕೇಳಿಸುವುದೇ ಆ ನೂತನ ಮಾರ್ಗ.ಕರೆ ಮಾಡಿದವನು ಉತ್ತರ ನಿರೀಕ್ಷಿಸುತ್ತಿರುವ ವೇಳೆ,ಜಾಹೀರಾತು ಕೇಳಿಬರುತ್ತದೆ!ಮಾತನಾಡುವ ವೇಳೆ ಜಾಹೀರಾತು ಕೇಳಿಸುವ ಪ್ರಯೋಗವೂ ನಡೆದಿದೆ.ಅಂತರ್ಜಾಲ ಕರೆಗಳ ಮಟ್ಟಿಗೆ ಇದರ ಪ್ರಯೋಗವನ್ನೀಗಲೇ ಮಾಡಲಾಗಿದೆ.ವೊಡೊವೋಕ್ಸ್ ಎನ್ನುವ ಕಂಪೆನಿ ಈ ವಿಧಾನದ ಮೂಲಕ ಕಳೆದ ವರ್ಷ ನಾಲ್ಕು ಮಿಲಿಯನ್ ಆದಾಯ ಗಳಿಸಿದೆ.ಈ ವರ್ಷ ಅದರ ಗುರಿ ನಲುವತ್ತು ದಶಲಕ್ಷ ಡಾಲರುಗಳು.
ಸ್ಪರ್ಶ ಸಂವೇದಿ ತೆರೆಯನ್ನು ಮುಟ್ಟಬೇಕಿಲ್ಲ!
ಸಾಮ್‍ಸಂಗ್ ಕಂಪೆನಿಯು ಮಾಲ್‍ನಂತಹ ಜನಭರಿತ ಪ್ರದೇಶಗಳಲ್ಲಿ ಬಳಸಬಹುದಾದ ಸ್ಪರ್ಶಸಂವೇದಿ ತೆರೆಯನ್ನು ಅಭಿವೃದ್ಧಿ ಪಡಿಸಿದೆ.ಐವತ್ತೇಳು ಇಂಚು ಎಲ್ ಸಿ ಡಿ ತೆರೆಯನ್ನಿದು ಹೊಂದಿದೆ.ಇದರ ಮುಂದೆ ಜನರಿದ್ದಾಗ ಅವರ ಅಂಗ ಚಲನೆ,ಕಣ್ಣೋಟವನ್ನು ಗ್ರಹಿಸಿ,ಅದಕ್ಕೆ ತಕ್ಕಂತೆ ಪ್ರದರ್ಶಿತವಾಗುವ ದೃಶ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನಿದು ಹೊಂದಿದೆ.ಹದಿನಾರು ಅಡಿ ದೂರವಿರುವವರ ಪ್ರತಿಕ್ರಿಯೆಯನ್ನೂ ತೆರೆ ಗ್ರಹಿಸಬಲ್ಲುದು.
*ಅಶೋಕ್‍ಕುಮಾರ್ ಎ

Udayavani ಅಶೋಕ್ ಪ್ರಪಂಚ