ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 1)

ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಮುಡುಕುತೊರೆ ಇತ್ಯಾದಿ.(ಭಾಗ 1)

"ಶಶಿ, ನಾವು ಒಂದು 8 ಜನ ಹಿಮವದ್‌ಗೋಪಾಲಸ್ವಾಮಿ ಬೆಟ್ಟ ಮತ್ತೆ ಬಂಡೀಪುರಕ್ಕೆ ಟ್ರಿಪ್‌ಗೆ ಹೋಗೋಣ ಅಂದ್ಕೊಂಡಿದ್ದೇವೆ. ನಿಂಗೆ ಬರೋಕಾಗುತ್ತಲ್ವ? ಒಬ್ರಿಗೆ ಒಂದು 700-800 ಬೇಕಾಗಬಹುದು. ಆಗುತ್ತಲ್ವ? ನಾಲ್ಕು ಬೈಕ್ ಅರೇಂಜ್ ಮಾಡಿದ್ದೀವಮ್ಮ" ಅಂಥ ನನ್ನ ಆತ್ಮೀಯ ಗೆಳೆಯ ರಾಜು ಅಂದು ಮಧ್ಯಾಹ್ನ ಒಂದೇ ಸಮನೆ ಹೇಳಿದ. ನಾನು ಸುಮ್ಮನೆ 'ಆಯ್ತು' ಅಂದೆ. "ನಿನ್ನನ್ನೂ ಸೇರಿ ಏಳು ಜನ ಆಗ್ತೀವಿ. ಇನ್ನೊಬ್ಬರನ್ನು ಅರೇಂಜ್ ಮಾಡು" ಅಂದ. ನಾನು ತಕ್ಷಣವೇ ಬೆಂಗಳೂರಿನಲ್ಲಿರುವ ನನ್ನ ಮತ್ತೊಬ್ಬ ಆತ್ಮೀಯ ಗೆಳೆಯ ವಿನಯ್‌ಗೆ ಕರೆ ಮಾಡಿ ಕೇಳಿದೆ. ಅವನು ಬರೋದಕ್ಕೇನೋ ಇಷ್ಟ ಇದೆ ಶಶಿ. ಆದ್ರೆ, ನಾಳೆ ಸ್ವಲ್ಪ ಕೆಲ್ಸ ಇದೆ. ಮತ್ಯಾವಗ್ಲಾದ್ರೂ ನೋಡೋಣ ಅಂದ.
ಆಗ ಚೆನ್ನೈನ ನನ್ನ ಗೆಳೆಯ ಸದ್ಯ ಮೈಸೂರಿನಲ್ಲಿ ಕೆಲಸದಲ್ಲಿರೋ ಜೋಮನ್ ನೆನಪಾಯ್ತು. ಆದ್ರೆ, ಮನೆಗೆ ಬರೋಕ್ಕೆ ಹಿಂಜರಿಯೋ ಅವನು ಇದಕ್ಕೆ ಬರ್ತಾನಾ ಅಂದ್ಕೊಂಡು ಸುಮ್ಮನಾದೆ.

ನಾನು ರಾಜುಗೆ ಬರ್ತೀನಿ ಅಂಥ ಹೇಳಿದವನು, ಕಡೆಗೆ ನನ್ನ ಹತ್ರ ಆಗ ಇದ್ದ ಹಣ ಮತ್ತೆ ನನ್ನದೇ ಆದ ಕೆಲವು reservationಗಳಿಂದಾಗಿ ನೇರವಾಗಿ ಕರೆ ಮಾಡಿ ಹೇಳೋಕಾಗ್ದೆ ಸಂದೇಶ ಕಳಿಸ್ದೆ. ಆದ್ರೆ, ಅದನ್ನು ನೋಡ್ದೆ ಇದ್ದ ರಾಜು ನಂಗೆ ಸಂದೇಶ ಕಳಿಸಿದ್ದ ಕಂಬಳಿ, ಹೊದಿಕೆ ಎಲ್ಲವನ್ನೂ ಪ್ಯಾಕ್ ಮಾಡ್ಕೊಂಡು ಬೆಳಗ್ಗೆ 5.30ಕ್ಕೆ ರೆಡಿಯಾಗಿರಪ್ಪ ಅಂತ. ನಾನು ಓಹೋ! ಇವನ್ಯಾಕೋ ನನ್ನ ಮೆಸೇಜ್ ನೋಡಿಲ್ಲಾಂತ ಅನ್ಸುತ್ತೆ ಅಂದುಬಿಟ್ಟು ಅವನಿಗೇ ಕರೆ ಮಾಡಿದೆ. ಹಿಂಗಿಂಗೆ ಕಣಯ್ಯ, ಸಾರಿ ನಂಗೆ ಬರೋಕಾಗೊಲ್ಲ ಅಂದೆ. ನನ್ನ ಹತ್ರ ಸಧ್ಯಕ್ಕೆ 1000 ರೂಪಾಯಿ ಇದೆ. ಸಂದರ್ಶನ, ಓಡಾಟ, ನನ್ನ ವೈಯುಕ್ತಿಕ ಖರ್ಚುಗಳಿಗೋಸ್ಕರ ಬೇಕಾಗುತ್ತೆ ನೀವೆಲ್ರೂ ಹೋಗಿದ್ದು ಬನ್ನಿ ಅಂದೆ. ಅದಕ್ಕೆ ಅವನು ನಿನಗೆ ಯಾವಾಗ ಆಗುತ್ತೋ ಆಗ್ಲೇ ಕೊಡು. ಆದ್ರೆ, ನೀನು ಬರ್ಲೇ ಬೇಕು ಅಂತ ಖಡಾಖಂಡಿತವಾಗಿ ಹೇಳಿದ. ನಾನು ಬೇರೇ ದಾರಿ ತೋಚದೆ confused ಆಗಿ 'ಆಯ್ತು' ಅಂದವನೆ ಅದಾಗ್ಲೇ ರಾತ್ರಿ 10.30 ಆಗಿದ್ರಿಂದ ನನ್ನ ಲಗ್ಗೇಜು ಪ್ಯಾಕ್ ಮಾಡ್ಕೊಂಡು ಮಲಗಿಕೊಂಡಾಗ ಮಧ್ಯರಾತ್ರಿ 12.

ಮಾರನೇ ದಿನ
----------
ನನ್ನ ತಂಗಿಗೆ ನಾನು ಟ್ರಿಪ್‌ಗೆ ಹೋಗೋ ಕುರಿತು ಹೇಳಿದ್ರಿಂದ ಅವಳು ಬೆಳಗ್ಗೆ ಬೇಗನೆ ಎದ್ದು ನೀರು ಕಾಯಿಸಿ, ನನ್ನನ್ನು 4.45ಕ್ಕೆ ಎಬ್ಬಿಸಿದಳು. ನಾನು ಎದ್ದವನೇ ಸ್ನಾನ ಮಾಡ್ಕೊಂಡು 5.15ಕ್ಕೆ ರೆಡಿಯಾದೆ. ಆದರೆ, ರಾಜು 5.45 ಆಯ್ತು. ಪತ್ತೇನೆ ಇಲ್ಲ. ಕಡೆಗೆ, ನಾನೇ ಕರೆ ಮಾಡಿದೆ. ಅದಕ್ಕೆ ಇನ್ನೇನೋ ಬರ್ತೀದೀನಿ ಅಂದ. ಆದ್ರೆ, ಅವನು ಬಂದಾಗ 6.15. ರಾಜು ಗೆಳೆಯ ತೇಜಸ್ವಿ ಮನೆಗೆ ಹೋದ್ವಿ. ಅಲ್ಲಿ ಅವನು ಮತ್ತು ರಾಜುವಿನ ಮತ್ತೊಬ್ಬ ಗೆಳೆಯ, ಅವನು ಪ್ರೀತಿಯಿಂದ 'ಡಾನ್' ಎಂದು ಕರೆವ ಶ್ರೀಧರ್ ನಮ್ಮ ಜತೆಗೂಡಿದರು.

ಸಂಗಡಿಗರ ಬಗ್ಗೆ:
-------------
ಕಳೆದ ತಿಂಗಳು ಬೆಂಗಳೂರಿಗೆ ಹೋಗಿದ್ದಾಗ ನಾನು ಮತ್ತು ರಾಜು ಒಂದು ರಾತ್ರಿ ಈ ಶ್ರೀಧರ್ ರೂಂಲ್ಲಿ ತಂಗಿದ್ದೆವು. ಅಲ್ಲಿಯೇ, ನಾನು, ರಾಜು ಒಟ್ಟಿಗೆ ಲೇಟೆಸ್ಟ್ ಬಾಂಡ್ ಫಿಲಂ, ಈ ಪೀಳಿಗೆಯ ಬಾಂಡ್, ಜೇಮ್ಸ್ ಬಾಂಡ್ ಡೇನಿಯಲ್ ಕ್ರೇಗ್‌ನ ಸೂಪರ್ ಹಿಟ್ ಚಿತ್ರ 'ಕೆಸಿನೊ ರಾಯಲ್' ನೋಡಿದ್ದು. ಈ ಡಾನ್ ಉರುಫ್ ಶ್ರೀಧರ್ ಕತೆ ಏನಪ್ಪಾ ಅಂದ್ರೆ, ಇವನು ಇಸ್ಕಾನ್‌ನ ಅಪ್ಪಟ ಭಕ್ತ. ಅದರಿಂದಾಗಿ, ಹೆಚ್ಚು ವಿವರಣೆ ಬೇಕಿಲ್ಲ. 'ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ' ಎನ್ನುವ ಕೆಟಗರಿಗೆ ಸೇರಿದವನಾದ ಇವನ ಬಗ್ಗೆ ಮುಂದೆ ಹೇಳೋದು ಸಾಕಷ್ಟು ಇರೋದ್ರಿಂದ ಇಷ್ಟುಸಾಕು.

ಇನ್ನು ಈ ತೇಜಸ್ವಿ ಬಗ್ಗೆ ಹೇಳೋದಾದ್ರೆ, ಅವನನ್ನು ಭೇಟಿ ಮಾಡಿದ್ದು ಇತ್ತೀಚೆಗಷ್ಟೆ. ಇದು ನನ್ನ ಅವನ ಮೂರನೇ ಭೇಟಿ. ಹುಟ್ಟಿರೋದು ಕನ್ನಡಿಗ ಕುಟುಂಬದಲ್ಲಾದ್ರೂ, ಇಂಗ್ಲೀಶ್ ತನ್ನ ತಾಯಿ ಭಾಷೆ ಅನ್ನೋ ಹಾಗೆ ಬಾಯಿ ತೆರೆದ್ರೆ ಸಾಕು ಇಂಗ್ಲೀಶ್ ಅಣಿಮುತ್ತು ಉದುರಿಸೋ 'ಕನ್ನಡದ ಕಂದ' ಅವನು.

ನಾವೆಲ್ಲಾ ಸೇರಿ, ಗನ್ ಹೌಸ್ ಹತ್ರ ರಾಜೂನ ಇನ್ನೊಬ್ಬ ಗೆಳೆಯ ಹರ್ಷನ್ನ ಕಾಯ್ತಾ ನಿಂತೆವು. ಅಷ್ಟೊತ್ತಿಗೆ ಅವನು ತನ್ನ ತಮ್ಮನ ಬೈಕಿನಲ್ಲಿ ಡ್ರಾಪ್ ತಗೊಂಡ. ರಾಜು ಒಬ್ಬನೇ ತನ್ನ ಹೀರೋ ಹೊಂಡಾ ಪ್ಯಾಶನ್ ಪ್ಲಸ್‌ನಲ್ಲಿ. ತೇಜಸ್ವಿಯ ಪಲ್ಸರ್‌ನಲ್ಲಿ ಹರ್ಷ, ಹರ್ಷನ ಸುಜುಕಿ ಫಿಯರೊದಲ್ಲಿ ನಾನು ಮತ್ತು ಡಾನ್ ಕೂತು, ನಂಜನಗೂಡು ಮಾರ್ಗವಾಗಿ ನಮ್ಮ ತಲುಪುದಾಣ ಹಿಮವದ್‌ಗೋಪಾಲಸ್ವಾಮಿ ಬೆಟ್ಟದೆಡೆ ಹೊರಟೆವು.

ಇದೇ ಮೊದಲ ಬಾರಿಗೆ ಗೆಳೆಯರೊಂದಿಗೆ ನಾನು ಈ ರೀತಿ ಟ್ರಿಪ್ ಹೊರಟಿರೋದು. ಅದಲ್ಲದೆ, ಬೈಕ್‌ನಲ್ಲಿ ಹೊರಟಿರೋದ್ರಿಂದ "ಏನೋ ಒಂಥರಾ..." ಅನ್ನಿಸ್ತಿತು.

.....

Rating
No votes yet