ನಿನ್ನಿಂದಲೇ ಕನಸೊಂದು ಶುರುವಾಗಿದೆ...

ನಿನ್ನಿಂದಲೇ ಕನಸೊಂದು ಶುರುವಾಗಿದೆ...

ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು 'ಮಿಲನ' ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ. ಯಾಕೆಂದರೆ, ಐವತ್ತು ವಸಂತಗಳಿಗೂ ಹೆಚ್ಚು ಬದುಕನ್ನು ಕಂಡಿದ್ದರೂ, ಬದುಕನ್ನು ಗಾಢವಾಗಿ ಪ್ರೀತಿಸುವುದರೊಂದಿಗೆ ತಮ್ಮ ಹೃದಯವನ್ನು ಇನ್ನೂ ಚಿರಯೌವ್ವನದಿಂದ ಇರಿಸಿಕೊಂಡಿರುವ ಈ ಅರೆಶತಮಾನದ ತರುಣ, ಯುವಹೃದಯಗಳಲ್ಲಿ ಕನಸಿನ ಬೀಜವನ್ನೇ ಬಿತ್ತಿದ್ದಾರೆ.

ಈಗಿನ ಪೀಳಿಗೆಯ ಲಕ್ಷಾಂತರ ಮಂದಿ ಕನ್ನಡ ಯುವಕ-ಯುವತಿಯರು ಪ್ರೇಮಪಾಶದಲ್ಲಿ ಸಿಲುಕಿದ್ದರೂ, ಅವರೆಲ್ಲರ ಕನಸುಗಳಿಗೆ, ಅಮೂರ್ತ ಭಾವನೆಗಳ ಸ್ಫೂರ್ತಿಸೆಲೆಯಾಗಿ, ಮೂರ್ತರೂಪವಾಗಿ ನಿಂತಿರುವುದು ಇವರ ಗೀತೆಗಳೇ.

ಜಯಂತರು ಮೊನ್ನೆ ತಾನೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಂದೇ ಈ ಲೇಖನವನ್ನು ಸಿದ್ಧಪಡಿಸಿದರೂ, ಕಾರಣಾಂತರಗಳಿಂದ ಇದನ್ನು ಪ್ರಕಟಿಸಲಾಗಲಿಲ್ಲ. ಈ ಶುಭ ಸಂದರ್ಭದಲ್ಲಿ ಅವರ ಗೀತೆಗಳ ಅಸಂಖ್ಯಾತ ಪ್ರೇಮಿಗಳಲ್ಲಿ ಒಬ್ಬನಾಗಿ ಅವರಿಗೆ ಸುಖ, ಶಾಂತಿ, ನೆಮ್ಮದಿಗಳೊಂದಿಗೆ, ಅವರ ಸಾಹಿತ್ಯಕೃಷಿಯಲ್ಲಿ ಮತ್ತಷ್ಟು ಕಲಾತ್ಮಕತೆ, ಮಾಧುರ್ಯತೆ, ರಮ್ಯತೆ ಹಾಗೂ ಎಲ್ಲಾ ...'ತೆ'ಗಳನ್ನು ಹೆಚ್ಚಿಸಲಿ ಎಂದು ಕೋರುತ್ತ ಅವರು ಇಲ್ಲಿಯವರೆಗಿನ ತಮ್ಮ ಜೀವನದ 'ಸಾಹಿತ್ಯಪಾದದಲ್ಲಿ ಬಿಟ್ಟ ಹೆಜ್ಜೆ'ಯ ಮೇಲೆ ನಡೆಯುವ ಪ್ರಯತ್ನ ಈ ನನ್ನ ಶುಭಾಶಯ ಲೇಖನ.

ಜಯಂತರ 'ತೂಫಾನ್ ಮೇಲ್' ಕಥಾ ಸಂಕಲನ, ಕೆಲವು ಕವನಗಳು, ಲೇಖನಗಳು ಹಾಗೂ ಚಿತ್ರಗೀತೆಗಳನ್ನು ಓದಿದ್ದರೂ, ಅವರ ಸಾಹಿತ್ಯದ ಕುರಿತ ಒಳನೋಟಗಳನ್ನು ಇಲ್ಲಿ ನೀಡಲಾಗುತ್ತಿಲ್ಲ. ಅವರ ಕುರಿತ ಮುಂದಿನ ಲೇಖನದಲ್ಲಿ ಆ ಪ್ರಯತ್ನ ಮಾಡುತ್ತೇನೆ. ಇದು ಕೇವಲ ಅವರು ಇಲ್ಲಿಯವರೆಗೂ ನಡೆದುಬಂದ ಹಾದಿಯ ಕಿರುನೋಟವಷ್ಟೆ.

ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರ 'ಚಿಗುರಿದ ಕನಸು' ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿ ತೆರೆ ಕಂಡ ಕನ್ನಡದ ಪ್ರತಿಭಾವಂತ ನಿರ್ದೇಶಕರಲ್ಲೊಬ್ಬರಾದ ನಾಗಾಭರಣ ನಿರ್ದೇಶಿಸಿ, ಶಿವರಾಜ್ ಕುಮಾರ್ ಅಭಿನಯಿಸಿದ ಚಿತ್ರಕ್ಕೆ ಸಂಭಾಷಣೆಯಲ್ಲದೆ, ಗೀತೆರಚನೆಯನ್ನು ಕೂಡ ಮಾಡುವುದರೊಂದಿಗೆ ತಮಗೆ ಬಹುಪ್ರಿಯವಾದ ಚಲನಚಿತ್ರಪ್ರಪಂಚಕ್ಕೆ ಅಡಿಯಿಟ್ಟ ಜಯಂತ, ಇಲ್ಲಿಯವರೆಗೆ, ಗಿರೀಶ್ ಕಾಸರವಳ್ಳಿಯವರ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ದ್ವೀಪ, ಸುನೀಲ್ ಕುಮಾರ್ ದೇಸಾಯಿವರ ರಮ್ಯ ಚೈತ್ರ ಕಾಲ, ಚಂದ್ರಶೇಖರ್‌ರ ಪೂರ್ವಾಪರದಂತಹ ಸದಭಿರುಚಿಯ ಚಿತ್ರಗಳಿಗೆ ಚಿತ್ರಕತೆ, ಸಂಭಾಷಣೆಯನ್ನು ರಚಿಸಿರುವುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಇಂತಹ ಬಹುಮುಖ ಪ್ರತಿಭೆ ಮುಂಬೈಯಲ್ಲಿ 23 ವರ್ಷಗಳ ಕಾಲ ಬಯೊ ಕೆಮಿಸ್ಟ್ ಆಗಿ ಸೇವೆ ಸಲ್ಲಿಸಿದ್ದಾರೆಂದರೆ ಎಂಥವರಿಗೂ ವಿಸ್ಮಯವೇ!

ವೃತ್ತಿಪ್ರವೃತ್ತಿಗಳೆರಡೂ ಬೇರೆಬೇರೆಯಾದರೂ, ತಮ್ಮ ತಂದೆ ಸಾಹಿತಿ ಗೌರೀಶ ಕಾಯ್ಕಿಣಿಯವರಿಂದ ಬಳುವಳಿಯೇನೋ ಎಂಬಂತೆ ಸಾಹಿತ್ಯ ಸರಸ್ವತಿಯ ಕೃಪೆಯನ್ನು ವರದಾನವಾಗಿ ಪಡೆದಿದ್ದರೂ, ಅವರಿಂದ ಹೊರತಾದ ಅಸ್ಮಿತೆಯನ್ನು ಪಡೆದು ಈ ಪೀಳಿಗೆಯ ಪ್ರಮುಖ ಸೃಜನಶೀಲ ಲೇಖಕರ ಸಾಲಿನಲ್ಲಿ ನಿಂತಿರುವ ಜಯಂತ, ಸಾಹಿತ್ಯ ಲೋಕದಲ್ಲಿ ಕೇವಲ ಕವಿಯಾಗಿ ಮಾತ್ರವಲ್ಲದೆ, ಪ್ರತಿಭಾವಂತ ಕತೆಗಾರರಾಗಿಯೂ ಹೆಸರಾಗಿರುವುದಕ್ಕೆ ಅವರ ಕಥಾಸಂಕಲನಗಳಾದ ತೂಫಾನ್ ಮೇಲ್, ಬಣ್ಣದ ಕಾಲು, ಮುಂತಾದವು ಸಾಕ್ಷಿ. ಇದಲ್ಲದೆ, ನಾಟಕಕಾರರಾಗಿ(ಸೇವಂತಿ, ಜತೆಗಿರುವನು ಚಂದಿರ, ಇತಿ ನಿನ್ನ ಅಮೃತ), ಈಗ್ಗೆ 2-3 ವರ್ಷಗಳ ಹಿಂದೆ ಈ ಟಿವಿ ಕನ್ನಡ ವಾಹಿನಿಯಲ್ಲಿ ಜ್ಞಾನಪೀಠ ಪುರಸ್ಕೃತರೂ, ಕನ್ನಡದ ಸಾಹಿತ್ಯ ಲೋಕದ ದಿಗ್ಗಜರಾದ ಕರ್ನಾಟಕ ರತ್ನ ಕುವೆಂಪು, ವರಕವಿ ಬೇಂದ್ರೆ ಹಾಗೂ ಕಡಲ ತೀರದ ಭಾರ್ಗವ ಶಿವರಾಮ ಕಾರಂತರ ಜೀವನ ಚರಿತ್ರೆಯನ್ನು ಸರಣಿ ರೂಪದಲ್ಲಿ ಯಶಸ್ವಿಯಾಗಿ ಕಿರುತೆರೆಗೆ ತಂದ ಕೀರ್ತಿಗೆ ಪಾತ್ರರು. 7-8 ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪ್ರಿಯರಿಗೆ ರಸದೌತಣ ನೀಡುತ್ತಿದ್ದ 'ಭಾವನಾ' ಮಾಸಿಕದ ಸಂಪಾದಕರಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕೈಯಾಡಿಸಿ ತಾನು ಕೈಗೊಂಡ ಎಲ್ಲಾ ಕೆಲಸಗಳಲ್ಲೂ ಛಾಪನ್ನೊತ್ತಿದ್ದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿ.

ಇನ್ನು ಚಿತ್ರ ಸಾಹಿತ್ಯಕ್ಕೆ ಸಂಬಂಧಿಸಿದಂತೆ, ಈ ಮೊದಲೇ ಹೇಳಿದ ಹಾಗೆ, 'ಚಿಗುರಿದ ಕನಸು'ವಿನಿಂದ ಇವರ ಚಿತ್ರಗೀತಕೃಷಿ ಆರಂಭಗೊಂಡಿತಾದರೂ, ಮೊದಲ ಸೂಪರ್ ಹಿಟ್ ಗೀತೆ 'ಮುಂಗಾರು ಮಳೆ'ಯ 'ಅನಿಸುತಿದೆ ಯಾಕೋ ಇಂದು'ವಿನಂತಹ ಅತ್ಯಧ್ಬುತ ಗೀತೆಯನ್ನು ನೀಡುವುದರ ಮೂಲಕ ಏಕತಾನತೆಯ ಹಾದಿಯಲ್ಲಿ ಸಾಗಿದ್ದ ಕನ್ನಡ ಚಿತ್ರಸಾಹಿತ್ಯಕ್ಕೆ ಹೊಸ ತಿರುವು ನೀಡುವುದರೊಂದಿಗೆ, ಈಗ 'ಮುಂಗಾರು ಕವಿ' ಎಂಬ ಅಭಿದಾನಕ್ಕೆ ಪಾತ್ರರು. ಮಿಲನದ 'ನಿನ್ನಿಂದಲೇ ನಿನ್ನಿಂದಲೇ', 'ಮಳೆ ನಿಂತು ಹೋದ ಮೇಲೆ' ಗೆಳೆಯದ 'ಈ ಸಂಜೆ ಯಾಕಾಗಿದೆ',ಯಂತಹ ಅತ್ಯಂತ ಮಧುರ ಗೀತೆಗಳ ಪಟ್ಟಿಗೆ ಈಗ ಮತ್ತೊಮ್ಮೆ ಗಾಳಿಪಟದ 'ಮಿಂಚಾಗಿ ನೀನು ಬರಲು...' ಗೀತೆಯಲ್ಲಿ ಎಲ್ಲಾ ಋತುಗಳನ್ನು ಪ್ರೇಮಿಯ ವರ್ಣನೆಯಲ್ಲಿ ತರುವುದರೊಂದಿಗೆ, ಮಧುರ ಗೀತೆಗಳ 'ಸರದಾರ'ರಾಗಿದ್ದಾರೆ.

ಈಗ ಮುಂಗಾರು ಮಳೆಯ ಅಭೂತಪೂರ್ವ ಯಶಸ್ಸಿಗೆ ಬಹುಮುಖ್ಯ ಕಾರಣಕರ್ತರಾದ ಜಯಂತ, ಸಂಗೀತ ನಿರ್ದೇಶಕ ಮನೋಮೂರ್ತಿ ಹಾಗೂ ಗಾಯಕ ಸೋನು ನಿಗಾಂ ಜತೆಗೂಡಿ ಸುಮಾರು 10 ಹಾಡುಗಳ ಮಧುರಗೀತೆಗಳ ಆಲ್ಬಂನ್ನು ಸಧ್ಯದಲ್ಲೇ ಹೊರತರಲಿದ್ದು, ಇದು ಕೂಡ ಮುಂಗಾರುಮಳೆಯಷ್ಟೇ ಯಶಸ್ಸು, ಕೀರ್ತಿಯನ್ನು ತರಲಿ ಎಂದು ಅವರ ಅಭಿಮಾನಿಗಳೆಲ್ಲ ಹಾರೈಸೋಣ.

ಜಯಂತರ ಈ ಸಾಹಿತ್ಯ ಯಾತ್ರೆ ನಿರಂತರವಾಗಿ ಸಾಗಲಿ ಎಂದು ಸದಾ ಹಾರೈಸುತ್ತ ಮತ್ತೊಮ್ಮೆ ಮಗದೊಮ್ಮೆ ಕೋರುವೆ ಶುಭಾಶಯ.

Rating
No votes yet

Comments