ಅವ್ವನಿಗಾಗಿ

ಅವ್ವನಿಗಾಗಿ

ಅವ್ವನಿಗಾಗಿ

ನಾ ಮೆಚ್ಚಿ ಬರೆವ ಈ ಕವನ
ನನ್ನವ್ವನಿಗೆ ಮುಡಿಪು
ತನ್ನೆದೆಯನುಣಿಸಿ ಎನಗೆ
ಆಕೆ ತುಂಬಿಕೊಟ್ಟ ಭಾವನೆಗಳಲಿ ಮಿಂದೊಮ್ಮೆ
ನಾ ಕವನವಾಗುವಾಸೆ ಅವಳಿಗಾಗಿ
ಅವಳು ನನಗೆ ಕೊಟ್ಟ ಪ್ರೀತಿಗಾಗಿ

ನನ್ನಳುವು ಕಿವಿಗಪ್ಪಳಿಸಲು
ಓಡಿಬಂದು ನನ್ನನೆತ್ತಿ
ತನ್ನೆದೆಗಪ್ಪಿ ಮುತ್ತನಿಟ್ಟವಳು
ಜೋಗುಳವ ಪೊರೆದು
ನನ್ನ ಪವಡಿಸಿದವಳು
ನಾ ಕವನವಾಗುವಾಸೆ ಅವಳಿಗಾಗಿ
ನನ್ನಮ್ಮ ನನಗಿಟ್ಟ ಮುತ್ತಿಗಾಗಿ

ನನ್ನ ನಗುವಿನಲಿ
ತಾನು ನಕ್ಕು, ನೋವ ಮರೆತವಳು
ನಾನಾಡದೆ ಹೇಳಿದ ಮಾತುಗಳ
ತಪ್ಪದೆ ಅರ್ಥೈಸಿದ ಏಕಳು
ನನಗಾಗಿ ತನ್ನ ಸುಖಗಳನು ತೊರೆದು
ನನ್ನ ಜೀವನವಾದವಳು
ನಾ ಕವನವಾಗುವಾಸೆ, ಅವಳಿಗಾಗಿ
ಅವಳು ಕೊಟ್ಟ ಈ ಜೀವಕ್ಕಾಗಿ

ಇಂದು ನಾನಿಲ್ಲಿ ದೂರ ತೀರದಲಿ
ಬೆಳೆದಿಹೆನು ನಾನೀಗ
ದುಡಿಯವೆನು ನಾ
ಜವಾಬ್ದಾರಿಗಳು ನನ್ನೆಗಲಲ್ಲಿ
ನೆನಪಾಗುವಳು ನನ್ನವ್ವ
ನಾ ಕವನವಾಗುವಾಸೆ ಅವಳಿಗಾಗಿ
ಅವಳು ಕೊಟ್ಟ ಈ ಬಾಳಿಗಾಗಿ

ನೆನಪಾದಾಗಲೆಲ್ಲ ನನ್ನವ್ವ
ಮನದ ತುಂಬ ದುಗುಡ
ತುಂಬಿ ಬರುವ ಕಣ್ಣುಗಳು
ಕಳೆದುಕೊಂಡಿಹೆನು ನಾನು ಏನೆಲ್ಲವ
ಕೈ ತುತ್ತು, ಸಿಹಿಮುತ್ತು ಮತ್ತವಳ ಒಡಲು
ಓಡಿ ಅವಳ ಮಡಿಲ ಸೇರುವ ತವಕ
ಮಡಿಲಲ್ಲಿ ಮುಖವಿಟ್ಟು ಪವಡಿಸುವಾಸೆ
ಮನಬಿಚ್ಚಿ ನನ್ನ ಕನಸುಗಳ ಹೇಳುವಾಸೆ
ಹೀಗೆ ಇನ್ನದೆಷ್ಟೋ ಆಸೆಗಳು
ಹೇಳಲಾಗದ ಆ ಆಸೆಗಳಿಗೆ ಭಾವನೆಗಳಿಟ್ಟವಳು ನೀನು
ನಾ ಕವನವಾಗುವಾಸೆ ನಿನಗಾಗಿ ನನ್ನವ್ವ
ನನ್ನಲ್ಲಿ ನೀ ತುಂಬಿದ ಈ ಭಾವಗಳಿಗಾಗಿ

-- ಅರುಣ ಸಿರಿಗೆರೆ

Rating
No votes yet

Comments