ನಾ ಮೆಚ್ಚಿದ ಪುಸ್ತಕ: "ಶ್ರೀ ಕರ್ನಾಟಕ ಭಕ್ತ ವಿಜಯ"
"ಶ್ರೀ ಕರ್ನಾಟಕ ಭಕ್ತ ವಿಜಯ", ಇದು ಕೇಶವದಾಸರು ೧೯೩೬ ರಲ್ಲಿ ಕರ್ನಾಟಕ ಭಕ್ತಿ ಪಂಥದ, ದಾಸ ಸಾಹಿತ್ಯದ ಬಗ್ಗೆ ಒಂದೂ ಗ್ರಂಥವಿಲ್ಲದ್ದನ್ನು ಮನಗಂಡು ಬಹಳಷ್ಟು ಶ್ರಮವಹಿಸಿ, ಮಾಹಿತಿ ಕಲೆಹಾಕಿ ಬರೆದ ಕೃತಿ. ಇದುವರೆಗೂ ಸುಮಾರು ೧೫ಕ್ಕೂ ಹೆಚ್ಚು ಮುದ್ರಣಗಳನ್ನು ಕಂಡು ಬಹಳ ಜನಪ್ರಿಯವಾಗಿರುವ ಕೃತಿ.
ಸುಮಾರು ೧ ವರ್ಷದ ಹಿಂದೆ ನನಗೆ ದೊರೆತ ಈ ಪುಸ್ತಕದಲ್ಲಿರುವ ಪ್ರತಿ ಮಾಹಿತಿಯನ್ನೂ ಓದಿ ರೋಮಾಂಚನಗೊಂಡಿದ್ದೇನೆ. ಓದಿದಷ್ಟೂ ಮತ್ತೊಮ್ಮೆ ಓದಬೇಕೆನಿಸುವ ಭಕ್ತಿರಸ. ಕ್ರಿ.ಶ.೯೦೦ ಷ್ಟು ಹಿಂದಿನಿಂದ ಪ್ರಾರಂಭವಾದ ಭಕ್ತಿ ಪಂಥದ ಮಹನೀಯರುಗಳ ಚರಿತ್ರೆಯನ್ನು ಸಮಗ್ರವಾಗಿ ವಿವರಿಸಿದ್ದಾರೆ. ಅಲ್ಲಿ ದಾಖಲಿಸಿರುವ ಕೆಲವು ಘಟನೆಗಳನ್ನು ಓದಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಕೆಲವು ಉದಾಹರಣೆಗಳು ಇಂತಿವೆ:
ಕನಕದಾಸರಿಗೆ ಹರಿದಾಸನಾಗಲು ಸ್ವಪ್ನದಲ್ಲಿ ಪ್ರೇರಣೆ. ಅವರಿಂದ ಸತತ ನಿರಾಕರಣೆ. ಕಡೆಗೂ ಅವರ ಮನ ಪರಿವರ್ತನೆಗೊಳ್ಳುವಂತಹ ಘ್ಹಟನೆಗಳು, ನಂತರ ಅವರ ಜೀವನದಲ್ಲಿ ನಡೆದ ಪವಾಡಗಳು.
ತಿರುಪತಿಗೆ ಹೋಗಿ ಅಲ್ಲಿ ಸರಿಯಾದ ಆದರಗಳು ಸಿಗದೆ ಭಗವಂತನನ್ನು ’ಗೋವಿಂದ ಶೆಟ್ಟಿ’ ಎಂದು ಭಕ್ತಿಯಿಂದ ಮೂದಲಿಸಿದ್ದು, ನಂತರ ನಡೆದ ವಿಸ್ಮಯ ಘ್ಹಟನೆಗಳು.
ಪುರಂದರದಾಸರ ಜೀವನದ ಘಟನೆಗಳು. ಕಲಗಚ್ಚನ್ನೇ ’ನಿನಗೆ ಅದೇ ನೈವೇದ್ಯ’ ಎಂದ ಮಾತ್ರಕ್ಕೆ ಮೂರ್ತಿಯ ಕಿರೀಟದಿಂದ ಕಲಗಚ್ಚು ಸುರಿಯುವುದು.
’ಫಲವಿದು ಬಾಳ್ದ್ಚುದಕೆ’ ಖ್ಯಾತಿಯ ಜಗನ್ನಾಥದಾಸರಿಗೆ ತಿರುಪತಿಯಲ್ಲಿ ಭಗವಂತನ ದರ್ಶನ. ಅವರ ಹಿಂದಿನ ಜನ್ಮದ ವ್ರುತ್ತಾಂತ. ಗೋಪಾಲದಾಸರಿಂದ ಆಯುಷ್ಯ ಧಾನ.
ವಾದಿರಾಜರ ಹಯಗ್ರೀವೋಪಾಸನೆ. ಧರ್ಮಸ್ಠಳ ಕ್ಶೇತ್ರ ಪ್ರತಿಷ್ಟಾಪನೆ - ಇವೂ ಕುತೂಹಲಕರವಾಗಿವೆ.
೧೪ನೇ ಶತಮಾನದ ಹರಿಭಕ್ತ ಶ್ರೀಪಾದರಾಜರು ಅವರ ಭಕ್ತರ ಕೋರಿಕೆಯಂತೆ ಮುಳಬಾಗಿಲಿನಲ್ಲಿಯೇ ರಾತ್ರಿಯಿಡೀ ಜಪ ಮಾಡಿ ಗಂಗೆಯನ್ನು ಅಲ್ಲಿಗೇ ತರಿಸುವುದು.
ಶ್ರೀ ಗುರು ರಾಘವೇಂದ್ರರ ಜೀವನ ಚರಿತ್ರೆ. ಭಕ್ತರಿಗೆ ಅವರು ಅನುಗ್ರಹ ಮಾಡಿದ ಘಟನೆಗಳು. ಬೃಂದಾವನಸ್ಥರಾದ ಮೇಲೂ ಬ್ರಿಟಿಷ ಅಧಿಕಾರಿಗೆ ಅಲ್ಲಿಂದಲೇ ಕಾಣಿಸಿಕೊಂಡದ್ದು.
ಹೀಗೆ ಹತ್ತು ಹಲವು ಮಹನೀಯರುಗಳು, ಅವರ ಜೀವನದ ಘಟನೆಗಳನ್ನೊಳಗೊಂಡಿದೆ ಈ ಪುಸ್ತಕ.
ಆಸಕ್ತರು ಈ ಪುಸ್ತಕವನ್ನೊಮ್ಮೆ ಓದಬಹುದು.