ತನ್ನಂತೆ ಪರರು

ತನ್ನಂತೆ ಪರರು

ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ!

ಸರ್ವಜ್ಞನ ಈ ವಚನ ಬಹಳ ಜನರಿಗೆ ತಿಳಿದದ್ದೇ. ಆದರೆ ತನ್ನಂತೆ ಪರರು ಎಂದು ಬಗೆಯುವುದರಲ್ಲಿ ಮಾತ್ರ ಸ್ವಲ್ಪ ಹಿಂದೇಟು ಹಾಕುತ್ತೇವಷ್ಟೇ!

ಈ ರೀತಿ ಒಳ್ಳೆಯ ಮಾತುಗಳು ಎಲ್ಲಾ ಭಾಷೆಗಳಲ್ಲಿಯೂ ಬಂದಿರುವಂತಹವೇ. ಹೇಳುವ ಪರಿಯಲ್ಲಿ ತುಸು ವ್ಯತ್ಯಯವಿರಬಹುದಷ್ಟೇ. ಇವತ್ತು ಬೆಳಗ್ಗೆ ಸಂವೇದನೆ ಕಾರ್ಯಕ್ರಮದಲ್ಲಿ (ಉದಯ ಟಿವಿ) ಈಶ್ವರ ದೈತೋಟ ಅವರು ಮತ್ತೂರು ಕೃಷ್ಣಮೂರ್ತಿ ಅವರೊಡನೆ ಮಾತಾಡುತ್ತಿದ್ದರು. ಆಗ ಕೃಷ್ಣಮೂರ್ತಿ ಅವರು ಹೇಳಿದ ಒಂದು ಸುಭಾಷಿತಕ್ಕೂ, ಸರ್ವಜ್ಞನ ವಚನಕ್ಕೂ ಇರುವ ಹೋಲಿಕೆ ಕಂಡು ಬರೆಯೋಣವೆನ್ನಿಸಿತು.

ಅಯಂ ನಿಜ ಪರೋವೇತಿ ಗಣನಾ ಲಘುಚೇತಸಾಂ

ಉದಾರ ಚರಿತಾನಾಂ ತು ವಸುಧೈವ ಕುಟುಂಬಕಂ

अयं निज परोवेति गणना लघु चेतसाम्

उदार चरितानाम् तु वसुधैव कुटुम्बकम्

ಕನ್ನಡದಲ್ಲೇ ಹೇಳುವುದಾದರೆ,

ಇದು ನನದು ಇದು ಅವರದೆಂದೆಣಿಪರು ಕಿರುಬಗೆಯವರು*

ಉದಾರ ನಡತೆಯವರಿಗೋ ಜಗವೆಲ್ಲ ತಮದೆ ಪರಿವಾರ

ಸರ್ವಜ್ಞ ತನ್ನಂತೆ ಪರರನ್ನೂ ಬಗೆ ಎಂದರೆ, ಈ ಸಂಸ್ಕೃತ ಶ್ಲೋಕ ಉದಾರ ಮನೋಭಾವದವರಿಗೆ ಇಡೀ ಪ್ರಪಂಚವೇ ಸ್ವಂತ ಕುಟುಂಬದಂತೆ ಎನ್ನುತ್ತದೆ. ದೇಶ ಯಾವುದಾದರೇನು? ಭಾಷೆ ಯಾವುದಾದರೇನು? ಒಳ್ಳೇ ಮಾತು ಎಲ್ಲಿಂದ ಬಂದರೇನು? ನಲ್ನುಡಿಗಳಿಗೆ ಕಿವಿಗೊಡೋಣ ಅಲ್ಲವೇ?

-ಹಂಸಾನಂದಿ

*ಬಗೆ - ಅನ್ನುವುದಕ್ಕೆ ಮನಸ್ಸು ಎಂಬ ಅರ್ಥವೂ ಇದೆ

Rating
No votes yet

Comments