"ಗಾಳಿಪಟ" ಹಾರಿಸಬಹುದು.......!!!

"ಗಾಳಿಪಟ" ಹಾರಿಸಬಹುದು.......!!!

ಬರಹ

"ಗಾಳಿಪಟ" ಚಿತ್ರ ಈ ಮಟ್ಟಕ್ಕೆ ಸುದ್ದಿಯಾಗುತ್ತದೆ ಎಂದು ನಾನು ಖಂಡಿತ ಎಣಿಸಿರಲಿಲ್ಲ. ಯೋಗರಾಜ ಭಟ್ಟರ "ಮುಂಗಾರು ಮಳೆ" ದಾಖಲೆ ನಿರ್ಮಿಸಿದ ಚಿತ್ರವಾದ್ದರಿಂದ, ಅವರ ಮುಂದಿನ ಚಿತ್ರ "ಗಾಳಿಪಟ"ದ ಬಗ್ಗೆ ಕುತೂಹಲವಿದ್ದಿದ್ದು ಸಹಜವೇ.

"ಮುಂಗಾರು ಮಳೆ" ಚಿತ್ರದ ಕಥೆ, ಈ ಹಿಂದೆ ಬಂದಿದ್ದ ಹಲವು ಚಿತ್ರಗಳ ಕಥೆಗಳಿಗಿಂತ ಭಿನ್ನವಾಗಿರಲಿಲ್ಲ. ಆದರೆ, ನವಿರಾದ ನಿರೂಪಣೆ, ಚಿತ್ರಕಥೆ, ಸುಮಧುರ ಹಾಡುಗಳು ಹಾಗು ಚುರುಕು ಸಂಭಾಷಣೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಅಭೊತಪೂರ್ವ ಯಶಸ್ಸುಗಳಿಸಿತ್ತು.

"ಗಾಳಿಪಟ" ಚಿತ್ರದ ಕಥೆಯೂ ಕೂಡ ಇಂದಿನ ಯುವ ಜನಾಂಗವನ್ನು ಪ್ರತಿನಿಧಿಸುವ ಮೊವರು ಯುವಕರ ಸುತ್ತ ಹೆಣೆದ ಮಾಮುಲಿ ಪ್ರೇಮ ಕಥೆ. ಕಥೆ ಹಳತಾದರೂ, ಭಟ್ಟರು ಅದಕ್ಕೆ ನೀಡಿರುವ ಮಾಂತ್ರಿಕ ಸ್ಪರ್ಶದಿಂದ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

ಸಂಭಾಷಣೆಯೇ ಚಿತ್ರದ ಜೀವಾಳ. ಹಾಸ್ಯ ಸನ್ನಿವೇಶಗಳಲ್ಲಿ ಭಟ್ಟರ ಪಂಚಿಂಗ್ ಸಂಭಾಷಣೆ ಹಾಗು ಗಣೇಶ್ ರ ಟೈಮಿಂಗ್ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಸಹ್ಯಾದ್ರಿಯ ಸೊಬಗನ್ನು ಸೆರೆಹಿಡಿಯುವಲ್ಲಿ ಛಾಯಾಗ್ರಾಹಕ ರತ್ನವೇಲು ಯಶಸ್ವಿಯಾಗಿದ್ದಾರೆ. ಛಾಯಾಗ್ರಹಣ ಚಿತ್ರದ ಪ್ಲಸ್ ಪಾಯಿಂಟ್. ಹಾಡುಗಳು ಚಿತ್ರಕ್ಕೆ ಪೂರಕವಾಗಿವೆಯಾದರು, ಮನದಲ್ಲಿ ಉಳಿಯುವುದು ೨ ಹಾಡುಗಳು ಮಾತ್ರ.

ಚಿತ್ರದಲ್ಲಿ, ಎಲ್ಲರ ಅಭಿನಯ ಕಥೆಗೆ ತಕ್ಕಂತೆ ಮೂಡಿಬಂದಿದೆ. ಪಾತ್ರ ಪೋಷಣೆ ಸಹ ಎಲ್ಲೂ ಹಿಡಿತ ತಪ್ಪಿಲ್ಲ. ೨, ೩ ದ್ರುಶ್ಯಗಳಲ್ಲಿ ಕಾಣಿಸಿಕೊಂಡರು, ರಂಗಾಯಣ ರಘು ನಿಜಕ್ಕೂ ಪ್ರೇಕ್ಷಕರೆಲ್ಲರ ಮೆಚ್ಹುಗೆಗಳಿಸುತ್ತಾರೆ.

ಒಂದು ಚಿತ್ರದ ಕಥೆಗೆ ಪೂರಕವಾಗಿ ಹೇಗೆ ಉಪಕಥೆಗಳನ್ನು ಸೇರಿಸಬಹುದು ಎಂಬುದನ್ನು ಭಟ್ಟರು ಯಶಸ್ವಿಯಾಗಿ ಮಾಡಿತೋರಿಸಿದ್ದಾರೆ. ಚಿತ್ರದಲ್ಲಿ ಬರುವ "ಹಂದಿ ಬೇಟೆ"ಯ ಪ್ರಸಂಗ ಇದಕ್ಕೊಂದು ಉತ್ತಮ ಉದಾಹರಣೆ. ಕನ್ನಡ ಸಾಹಿತ್ಯದಲ್ಲಿ ಕಥೆಗಳಿಲ್ಲ ಎಂದು ಬೇಸರಿಸಿಕೊಳ್ಳುವವರು ಈ ಚಿತ್ರವನ್ನು ನೋಡಿ ಕಲಿಯುವುದಕ್ಕಿದೆ. ಭಟ್ಟರು ಸಾಹಿತ್ಯಾಸಕ್ತರಾಗಿರುವುದರಿಂದ ಇದು ಅವರಿಗೆ ಸಾಧ್ಯವಾಗಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥೆಯೊಂದನ್ನು, ಆ ಹಂದಿ ಬೇಟೆಯ ಪ್ರಸಂಗದಲ್ಲಿ ತೆರೆಯ ಮೇಲೆ ನೋಡಿದಂತಾಯಿತು.

ಅಲ್ಲದೆ, ಚಿತ್ರದಲ್ಲಿ ಬರುವ ರಾಧಾ ( ನೀತು ) ಪಾತ್ರಾ ಕೂಡ, ತೇಜಸ್ವಿಯವರ ’ಕಿರಗೂರಿನ ಗಯ್ಯಾಳಿಗಳು’ ಕಥೆಯ ಪಾತ್ರಾವನ್ನು ನೆನಪಿಸುತ್ತದೆ.

ಈ ರೀತಿ, ತಮ್ಮ ಕಲ್ಪನೆಯ ಕಥೆಗೆ, ಕನ್ನಡ ಸಾಹಿತ್ಯದ ನೆರವನ್ನು ಪಡೆದು ಚಿತ್ರವೊಂದನ್ನು ನಿರೂಪಿಸಿರುವುದು ನಿಜಕ್ಕೂ ಪ್ರಶಂಸನೀಯ ಬೆಳವಣಿಗೆ.

ಒಟ್ಟಾರೆ, "ಗಾಳಿಪಟ" ಪ್ರಯೋಗಾತ್ಮಕ, ಮನೋರಂಜನಾತ್ಮಕ ಚಿತ್ರ. ಕೊಟ್ಟ ದುಡ್ಡಿಗೆ ಮೋಸವಿಲ್ಲದ ಚಿತ್ರ. ಎರಡು ಗಂಟೆಗಳ ಕಾಲ ಕಣ್ಮನ ತಣಿಸುವ ದ್ರುಶ್ಯಗಳಿಂದ, ಹಾಸ್ಯದಿಂದ ನಿಮ್ಮ ನಿರೀಕ್ಷೆ ಹುಸಿ ಮಾಡುವುದಿಲ್ಲ.

ಒಮ್ಮೆ ನೀವು ಸಹ "ಗಾಳಿಪಟ" ಹಾರಿಸಿಬನ್ನಿ...

ನಮ್ಮ " ಗಾಳಿಪಟ" ಎತ್ತರಕ್ಕೆ, ಬಾನೆತ್ತೆರಕ್ಕೆ ಹಾರಲಿ.......... :-D