ಪೇಟೆ ಹಕ್ಕಿಯ ಹಾಡು.

ಪೇಟೆ ಹಕ್ಕಿಯ ಹಾಡು.

ಇಲ್ಲಾ.ನಾನು ನನ್ನ ಆತ್ಮಕತೆಯನ್ನು ಬರೆಯಲು ಸುರುಮಾಡಿಲ್ಲ.ಯಾರ ಲವ್ ಸ್ಟೋರಿನೂ ಅಲ್ಲ.ಇದು ಡಿಫರೆಂಟ್ ಆಗಿದೆ. ಇಲ್ಲಿ ಯಾವುದೇ ಡಬಲ್ ಮೀನಿಂಗ್ ಡಯಲಾಗ್ ಇಲ್ಲ. ಮಾಸ್ ಗೆ ಬೇಕಾದ ಹಾಸ್ಯ,ಫೈಟ್,ಟ್ರಾಜಿಡಿ ಎಲ್ಲಾ ಇದೆ. ಮನೆ ಮಂದಿಯೆಲ್ಲಾ ಕುಳಿತು ನೋಡ ಸ್ಸಾರಿ ಓದಬಹುದಾದ ಬ್ಲಾಗ್.ಅರ್ಧವಾಸಿ ಔಟ್ ಡೋರ್ ಶೂಟಿಂಗ್ ಇದೆ. ಕತೆ ಸುರುವಾಗುವುದು ಮಾತ್ರ ಇನ್‌ಡೋರ್‌ನಿಂದ. ಮೊದಲ ಸೀನು-“ ಬೆಡ್ರೂಮ್”. ಕಲಾತ್ಮಕವಾಗಿದೆ. ನೆನಪಿಡಿ ಕತೆಯ ಹೀರೋ ನಾನೇ. ನೋಡೋ(ಓದೋ)ನು ನೀನೇ ಎಂದ್ರಾ. ಬಿಡಿ. ಓದದೇ ನೋಡದೇ ವಿಮರ್ಶೆ ಮಾಡೋರು ಈ ಕಾಲದಲ್ಲಿ ಜಾಸ್ತಿ. ನಾನು ಅದಕ್ಕೆಲ್ಲಾ ಕ್ಯಾರ್ ಮಾಡೊಲ್ಲ.ಈಗ ನೋಡಿ-ಪೇಟೆ ಹಕ್ಕಿಯ ಹಾಡು..
ಬೆಳ್ಳಂಬೆಳಗ್ಗೆ ನಾನು ಸುಖನಿದ್ರೆಯಲ್ಲಿರುವಾಗ ಹಕ್ಕಿಯಂತಹ ಇನಿದನಿಯೊಂದು ನನ್ನ ಕಿವಿ ಬಳಿ ಉಲಿಯುತ್ತಿತ್ತು-
‘ಏಳೀ,ಕಾಫೀ ಆರೋಗುತ್ತೇ’. ಆಹಾ ಎಂತಹ ಮಧುರ ಸ್ವರವದು. ಈಗ......ಬಿಡಿ.
ಕಿಟಕಿ ಬಳಿ ಕಾಗೆ ಕಿರುಚಿದಾಗ್ಲೇ ಎಚ್ಚರವಾಗೋದು.ಪೇಟೆಯವರಿಗೆ ಹಕ್ಕಿಯೆಂದರೆ ಕಾಗೆಯೊಂದೆ.ಕಾಗೆ ಸ್ವರವನ್ನು (ಅದು ಬಹುಸಂಖ್ಯಾತವಾದುದರಿಂದಲೋ ಎನೋ)ಅಪಸ್ವರ ಎನ್ನುವರು.ಆಲಿಸಿನೋಡಿ,ಕೇಳುತ್ತಾ ಹೋದಹಾಗೆ ಕಾಗೆಸ್ವರನೂ ಇಂಪಾಗಿಯೇ ಕೇಳುವುದು.
ಕೋಗಿಲೆ ಸ್ವರ ಕೇಳಿ ಕುಣಿಯದ ಮನವಿಲ್ಲ.ಅದರ ಕುಹೂ ಕುಹೂ ದನಿಗೆ ನನ್ನ ಕುಹೂ ಕುಹೂ(ಕಾಗೆ)ಸ್ವರವನ್ನು ಸೇರಿಸುವ ಅಭ್ಯಾಸ ಈಗಲೂ ಬಿಟ್ಟಿಲ್ಲ.
ಗುಬ್ಬಿ,ಗಿಳಿ,ಇತರ ಹಕ್ಕಿಗಳ ಕಲರವ ಕೇಳಬೇಕಾದರೆ ಬೆಳಗ್ಗೆ ಬೇಗನೆ ಏಳಬೇಕು. ಇಲ್ಲಾ, ಮಲಗಿದ್ದಲ್ಲಿಂದಲೇ ಎಫ್.ಎಮ್.ರೇಡಿಯೋ ಆಫ್ ಮಾಡಿ ಹಕ್ಕಿ ದನಿಗೆ ಕಿವಿಕೊಡಬೇಕು. ಎಷ್ಟು ವಿಧದ ಹಕ್ಕಿ ಸ್ವರಗಳು.ಕೆಲವು ಕಾನ್ವೆಂಟ್ ಮಕ್ಕಳಂತೆ ಇಂಗ್ಲೀಷ್ ಶಬ್ದಗಳನ್ನು ಬಾಯಿಪಾಠ ಮಾಡುತ್ತಿವೆಯೋ ಎನಿಸುತ್ತದೆ.ಕೆಲವು ನನ್ನನ್ನು ಕರೆಯುತ್ತಿದೆಯೋ ಅನಿಸುತ್ತದೆ.
ಹೀಗೆ ಒಂದು ದಿನ ಒಂದು ಹಕ್ಕಿಯ ಕೂಗು ಎಲ್ಲಿಂದ ಬರುತ್ತಿದೆ ಎಂದು ಹುಡುಕುತ್ತಾ ಹೋಗಿ ಅದು ಇದ್ದ ಮರವನ್ನು ಪತ್ತೆ ಹಚ್ಚಿದೆ. ಕತ್ತೆತ್ತಿ, ಬಗ್ಗಿ, ಮರಕ್ಕೆ ಸುತ್ತು ಹಾಕಿ ಹುಡುಕುವುದರಲ್ಲಿ ಆ ಮರದ ಹಿಂದೊಂದು ಮನೆಯಿದೆ,ಅಲ್ಲಿ ಹೆಣ್ಣು ಮಕ್ಕಳಿರಬಹುದು ಎಂಬ ಯೋಚನೆಯೇ ಬರಲಿಲ್ಲ. ಮುಂದೆ.. .. ..
ಈಗ ಇಂಟರ್‌ವಲ್.
ಇಲ್ಲಿಂದ ನಂತರ ಪೇಟೆ ಹಕ್ಕಿಯ ಹಾಡಿನ ನಿಜ ಕತೆ ಸುರು-
ನಾನು ಪೇಪರ್ ತೆಗೆದುಕೊಳ್ಳುವ ಅಂಗಡಿಯೆದುರೊಂದು ಮರವಿದೆ.ಆ ಮರದಲ್ಲಿ ಅನೇಕ ಹಕ್ಕಿಗಳು ವಾಸಿಸುತ್ತವೆ. ಪೇಪರ್ ಅಂಗಡಿಯ ಪಕ್ಕದಲ್ಲೊಂದು ದೊಡ್ಡ ಬಿಲ್ಡಿಂಗ್ ಎದ್ದಿತು.ಸುತ್ತಲೂ ಗಾಜು,ಆ ಗಾಜಿನಲ್ಲಿ ಮರದ ಪ್ರತಿಬಿಂಬ ನೋಡಲು ಚೆನ್ನಾಗಿತ್ತು. ಒಂದು ದಿನ ಪುಟಾಣಿ ಹಕ್ಕಿ ಮರಿ ಮರದಿಂದ ಹಾರಿಬಂದು ಗಾಜಿಗೆ ಬಡಿದು (ಪ್ರತಿಬಿಂಬವನ್ನು ಮರವೆಂದು ತಿಳಿದಿತ್ತು ಕಾಣುತ್ತದೆ.)ಕೆಳಗೆ ಬಿತ್ತು. ಸಮೀಪದಲ್ಲಿದ್ದ ನಾಯಿಯನ್ನು ಓಡಿಸಿ ನಾನು ರಕ್ಷಣೆಗೆ ನಿಂತೆ. ಅಕ್ಕಪಕ್ಕದ ಮನುಷ್ಯಪ್ರಾಣಿಗಳು ಚಪ್ಪಲು ಕಾಲಿಂದ ಅದನ್ನು ತಳ್ಳುವುದು ನೋಡಲಾಗದೇ, ಪೇಪರ್ ಅಂಗಡಿಯವರಿಂದ ಒಂದು ಪ್ಲಾಸ್ಟಿಕ್ ಚೀಲ ತೆಗೆದುಕೊಂಡು ಮರಿಯನ್ನು ಅದರೊಳಗೆ ಸೇರಿಸಿ ಮನೆಗೆ ತಂದೆ. ನೀರು ಕುಡಿದ ಸ್ವಲ್ಪ ಹೊತ್ತಿಗೆ ಚೇತರಿಸಿತು.ಹಾರುತ್ತಿದ್ದರೆ ಪುನಃ ಮರದ ಬಳಿ ತಂದು ಬಿಡುತ್ತಿದ್ದೆ. ನೋವಿದ್ದುದರಿಂದ ಹಾರದೇ ಕುಪ್ಪಳಿಸುತ್ತಾ ರೂಮು ತುಂಬಾ ಓಡಾಡಿತು. ಈ ಹಕ್ಕಿ ಹೇಗೆ ಹಾಡುತ್ತದೋ ಎಂಬ ಕುತೂಹಲ ನಮಗೆಲ್ಲಾ.ಜತೆಗೆ ಅದರ ಆಹಾರದ ಬಗ್ಗೆ ಚಿಂತೆ ಸುರುವಾಯಿತು. ಇಂಟರ್‌ನೆಟ್‌ನಲ್ಲಿ ಹಕ್ಕಿ,ಅದರ ಆಹಾರದ ಬಗ್ಗೆ ಹುಡುಕಲು ಸುರುಮಾಡಿದೆ. ಹಕ್ಕಿಯೇ ಸೋಫಾದಡಿಗೆ ಹೋಗಿ ಏನೋ ಹುಳುವನ್ನು ತಿನ್ನುತ್ತಿದೆ ಎಂದು ಮನೆಯಾಕೆ ಕರೆದು ಹೇಳಿದಳು. (ಸೋಫಾದಡಿ ಕ್ಲೀನಾಗಿ ಇಟ್ಟುಕೊಳ್ಳದ ಬಗ್ಗೆ ಹೆಮ್ಮೆಯೆನಿಸಿತು.)ಇಲ್ಲಿಗೆ ನಮ್ಮ ಇನ್ನೊಂದು ಸಮಸ್ಯೆಯೂ ತೀರಿತು. ಇನ್ನು ಆ ಹಕ್ಕಿಯ ಹಾಡು ಕೇಳುವುದೊಂದೇ ಬಾಕಿ. ಹಕ್ಕಿಮರಿ ಕೆಲ ಕ್ಷಣಗಳ ನಂತರ ನನ್ನ ಬಳಿ ಬಂದು ಕೈಯಲ್ಲಿ ಮುದುಡಿ ಕುಳಿತು ಪ್ರಾಣಬಿಟ್ಟಿತು.
ಬೆಂಗಳೂರು ಪೂರ್ತಿ ತುಂಬುತ್ತಿರುವ ಈ ಗಾಜಿನ ಕಟ್ಟಡಗಳನ್ನು ನೋಡುವಾಗ ಹಕ್ಕಿ ಮರಿಯ ನೆನಪಾಗಿ ದುಃಖವಾಗುತ್ತದೆ.
=======================ಶುಭಂ======================

Rating
No votes yet

Comments