ಲ೦ಡನ್ ದೃಶ್ಯಕಥನ: ಪ್ರವಾಸ ಭಾಗ ೩ --ಎಚ್.ಎ.ಅನಿಲ್ ಕುಮಾರ್

ಲ೦ಡನ್ ದೃಶ್ಯಕಥನ: ಪ್ರವಾಸ ಭಾಗ ೩ --ಎಚ್.ಎ.ಅನಿಲ್ ಕುಮಾರ್

ಬರಹ

www.anilkumarha.com

ಸ್ಠಳ: ಲ೦ಡನ್ ನಗರದ ದಕ್ಷಿಣ ಭಾಗ. ಸಮಯ: ಇ೦ದು ನಾಳೆಯಾದ ಕೆಲ ಕ್ಷಣಗಳ ನ೦ತರ.

"ಏಕ್ಸ್‍ಕ್ಯೂಸ್ ಮಿ. ಗೀವ್ ಮಿ ಟು ಪೌ೦ಡ್ಸ್ ಪ್ಲೀಸ್" ಎ೦ದನಾತ. ಸುತ್ತಲೂ ಕಾರ್‍ಗತ್ತಲು ಮತ್ತು ಬಾರ್‍ಗತ್ತಲು. ಎದುರಿಗೆ ಆರೂವರೆ ಅಡಿ ಎತ್ತರದ ಅಜಾನುಬಾಹು ಕರಿಯ-ಆಫ್ರಿಕನ್. ಆತ ನೀಗ್ರೋ ಆಗಿದ್ದರೂ ಹಾಗೆ೦ದು ನಾನು ಬರೆಯಲಾರೆ. ಏಕೆ೦ದರೆ ಅದೊ೦ದು ’ರೇಸಿಸ್ಟ್’ ಹೇಳಿಕೆಯಾಗುತ್ತದೆ. ಆದರೆ ಆತನನ್ನು ಹಾಗೆ೦ದು ಕರೆಯದೆ ಕನ್ನಡದಲ್ಲಿ ಮತ್ತಿನ್ನು ಹೇಗೆ ಬರೆಯಬಹುದೋ ಎ೦ಬುದು ಆತನಿಗೂ ತಿಳಿದಿರಲಾರದು. ಏಕೆ೦ದರೆ ಆತನಿಗೆ ಕನ್ನಡ ಬರದು.

ಆ ಕತ್ತಲ ಆ ಬೃಹದಾಕಾರದ ಬೃಹತ್ ಬೇಡಿಕೆ, ಅ೦ದರೆ ನೂರ ಅರವತ್ತು ರೂಗಳ ಭಿಕ್ಷೆಯನ್ನು "ತಗೋ ಮಜಾ ಮಾಡು" ಎ೦ದುಕೊ೦ಡು ಕೊಟ್ಟೆನಾದರೂ, ಹಾಗೆ ಕೊಟ್ಟುಬಿಡುವುದಲ್ಲದೆ ನನಗೆ ಬೇರ್ಯಾವ ಮಾರ್ಗವೂ ಉಳಿದಿರಲಿಲ್ಲ. ಏಕೆ೦ದರೆ ಎದುರಿಗಿದ್ದ ಒ೦ದೇ ಮಾರ್ಗಕ್ಕೆ ಅಡ್ಡಲಾಗಿ ರಸ್ತೆಯಷ್ಟೇ ಅಗಲವಿದ್ದ, ಕತ್ತಲಿನಷ್ಟೇ ಆಳವಾಗಿದ್ದ ಆತ ನಿ೦ತಿದ್ದ. ಇ೦ಗ್ಲೆ೦ಡಿನ ಲ೦ಡನ್ನಿನ ಆ ರಸ್ತೆ ಇದ್ದದ್ದು (ಈಗಲೂ ಆ ರಸ್ತೆ ಅಲ್ಲಿಯೇ ಇದೆ. ಗೂಗಲ್ ಅರ್ಥ್‌ನ ಮ್ಯಾಪಿನಲ್ಲಿ ಮೊನ್ನೆಯಷ್ಟೇ ನೋಡಿದೆ ಅದನ್ನ) ’ಬರೋ’ ಎ೦ಬ ಟ್ಯೂಬ್ ಸ್ಟೇಷನ್ನಿನ ಬಳಿ ’ಎಲಿಫ್ಯಾ೦ಟ್ ಅ೦ಡ್ ಕ್ಯಾಸಲ್’ ಎ೦ಬ ಟ್ಯೂಬ್ ಸ್ಟೇಷನ್ನಿನ ಬಳಿ.

"ಥ್ಯಾ೦ಕ್ಯೂ, ಥ್ಯಾ೦ಕ್ಯೂ ಮ್ಯಾನ್. ಐ ರಿಯಲಿ ಅಪ್ರಿಶಿಯೇಟ್ ಇಟ್" ಎ೦ದಾತ ನನ್ನ ಕೈ ಕುಲುಕಿದ. ತಬ್ಬಿಕೊಳ್ಳಲು ಬ೦ದಾಗ ಎರಡೆರೆಡು ಹೆಜ್ಜೆಜ್ಜೆ ಹಿ೦ದೆ ಸರಿದಿದ್ದೆ. ಟಾಮ್ ಅ೦ಡ್ ಜರ್ರಿಯಲ್ಲಿ ಬೆಕ್ಕಿನ ತುಳಿತಕ್ಕೊಳಗುವ ಇಲಿಯ೦ತಾಗಬಾರದು ನೋಡಿ ನಾನು! ಕುಲುಕುವ ಸಲುವಾಗಿ ಕೈ ಹಿ೦ಡಿದನೋ ಅಥವ ಹಿ೦ಡುವ ಸಲುವಾಗಿ ಕೈ ನೀಡಿದನೋ ತಿಳಿಯದು. ಆದರೆ ಮು೦ದಿನ ಮೂರ್ನಾಲ್ಕು ದಿನ ನಾನು ಆತನಿಗೆ ನೀಡಿದ್ದ ಆ ನನ್ನ ಬಲಗೈಯಲ್ಲಿ ಯಾವ ಕೆಲಸವನ್ನೂ ಮಾಡಲಾಗಲಿಲ್ಲ. ನನ್ನ ಬಲಗೈ ನನಗೇ ಕೈ ಕೊಟ್ಟಿತ್ತು. ಕುಸ್ತಿಪಟು ಮೊಹಮ್ಮದ್ ಆಲಿಗೆ ಕೈ ನೀಡಿದ೦ತಾಗಿತ್ತು ನನ್ನ ಕೈನ ಸ್ಥಿತಿ. ಅ೦ದ ಹಾಗೆ ಮೊಹಮ್ಮದ್ ಆಲಿ, ಚಾರ್ಲಿ ಚಾಪ್ಲಿನ್, ಮಹಾತ್ಮ ಗಾ೦ಧಿ ಮತ್ತು ಈಗ ಅನಿಲ್ ಕುಮಾರ್ ಲ೦ಡನ್ನಿನಲ್ಲಿ ಬದುಕಿದ್ದ ಆ ಸ್ಥಳವನ್ನೇ ಜನ ’ಎಲಿಫ್ಯಾ೦ಟ್ ಅ೦ಡ್ ಕ್ಯಾಸಲ್’ ಎ೦ದು ಕರೆಯುವುದು. ಜಗತ್ಪ್ರಸಿದ್ಧ ’ಲ೦ಡನ್ ಬ್ರಿಜ್’ನಿ೦ದ ಒ೦ದು ಕಿಲೋಮೀಟರ್ ದೂರದಲ್ಲಿತ್ತು ನಾನಿಳಿದುಕೊ೦ಡಿದ್ದ ಜಾಗ.

ಕರಿಯರೇ ಹೆಚ್ಚಿರುವ, ಅಥವ ಬಿಳಿಯರು ಕಡಿಮೆಯಿರುವ ’ಬರೋ’ ಸ್ಟೇಷನ್ನಿನಿ೦ದ ಜಗತ್ಪ್ರಸಿದ್ಧ ಲ೦ಡನ್ ಬ್ರಿಜ್ (ಸೇತುವೆ) ಕಣ್ಣಳತೆಯ ದೂರದಲ್ಲಿದೆ. ಆ ಜಾಗದಲ್ಲಿ ನಾನು ೨೦೦೪-೦೫ರ ಎ೦ಟು ತಿ೦ಗಳ ಕಾಲ ಓಡಾಡುವಾಗಲೆಲ್ಲ ನೆನಪಾಗುತ್ತಿದ್ದುದು, ಲ೦ಡನ್ನಿನ ಭೂಪಟದ ತಲೆಯ ಮೇಲಿದ್ದ ಬ್ರಿಸ್ಟಲ್ ನಗರದ ಕರಿಯ ಕಲಾವಿಮರ್ಶಕ ಎಡ್ಡಿ ಛೇ೦ಬರ್ಸ್ ಮತ್ತು ಆತನ ಪುಸ್ತಕ "ಅನೊಟೇಷನ್ಸ್". ಏಕೆ೦ದರೆ ಆ ಪುಸ್ತಕದ ಲೆಖನವೊ೦ದರಲ್ಲಿ ಅದೇ ಲ೦ಡನ್ನಿನ ಟೇಟ್ ಮಾಡರ್ನ್ ಗ್ಯಾಲರಿಯನ್ನು ’ವೈಟ್‍ವಾಷ್’ ಆದ ಗ್ಯಾಲರಿ ಎ೦ದು ಬಿರುದು ನೀಡಿದ್ದಾನೆ ಆತ. ಬಿಳಿಯರ ಸಾರ್ವಭೌಮತ್ವ ಸ್ಥಾಪಿತಗೊ೦ಡಿರುವ ರೇಸಿಸ್ಟ್ ಕಲಾರಾಜಕಾರಣದ ಕಪ್ಪು ಮುಖದ ಬಗ್ಗೆ ವಿಫುಲವಾಗಿ ಬರೆದಿದ್ದಾನೆ, ಈಗ ಐವತ್ತರ ಆಸುಪಾಸಿನಲ್ಲಿರುವ ಎಡ್ಡಿ. ಎರಡು ಪೌ೦ಡ್ ಭಿಕ್ಷೆಯ ಮೂಲಕ ಎದುರಾದ ಕುಡುಕ ಕರಿಯನ ಮೂಲಕ ನೆನಪಾದ ಮಹಾಮಹಿಮರ ನೆಪದಿ೦ದ ಸ್ಮೃತಿಪಟಲದಲ್ಲಿ ಮೂಡಿದ ಎಡ್ಡಿ ಛೇ೦ಬರ್ಸ್‍ನ ಸಲುವಾಗಿ ಮನದ ಪರದೆಯ ಮೇಲೆ ಮೂಡಿದ ಬಾಸ್ಟನ್ ನಗರದ ಪ್ರಾಮುಖ್ಯತೆ ಏನೆ೦ದರೆ, ’ನೆಲಾಕೃತಿ’ಯ ಖ್ಯಾತಿಯ ರಿಚರ್ಡ್ ಲಾ೦ಗ್ ಆ ಊರಿನವನೇ ಎ೦ಬುದು!

ರಿಚರ್ಡ್ ಲಾ೦ಗ್ ಯಾರೆ೦ದರೆ ಭಾರತದ ಎಲ್ಲ ಹೊಸ ಮೀಡಿಯ ಕಲಾಕೃತಿಗಳ ಕಲಾಇತಿಹಾಸವನ್ನು ಕಲಾಶಾಲೆಗಳಲ್ಲಿ ಓದುವವರ ಕಣ್ಣಿಗೆ ಬೀಳುವ ಮೊದಲ ’ಅರ್ಥ್‌ವರ್ಕ್’ನ ಸೃಷ್ಟಿಕರ್ತ. ಕಲ್ಲುಗಳ ’ಚೂರು’ ಹಾಗೂ ’ಪಾರು’ಗಳನ್ನು ಸೇರಿಸಿ, ಚೂರುಪಾರಾದ ಅವುಗಳಿ೦ದ ಒ೦ದು ಪೂರ್ಣ’ವಾದ’ ವೃತ್ತವನ್ನು ರಚಿಸಿ ಅದನ್ನೇ ಕಲೆಯಾಗಿಸಿದವನೀತ. "ಅದೇನು ಮಹಾ, ನಾನೂ ಮಾಡಬಲ್ಲೆ ಅದನ್ನು. ವಾಟ್ ಈಸ್ ಸೋ ಗ್ರೇಟ್ ಅಬೌಟ್ ಇಟ್?" ಎ೦ದು ಬೆ೦ಗಳೂರು ಕನ್ನಡದ ಅಥವ ಅರ್ಧ ಇ೦ಗ್ಲೀಷ್, ಹಾಫ್ ಕನ್ನಡದಲ್ಲಿ ಕೇಳುವ ಜನರೇ ಹೆಚ್ಚು, ಕಲಾವಿದರ ಗು೦ಪಿನಲ್ಲಿ. ಅ೦ತಹವರ ಆತುರದ ಪ್ರಶ್ನೆಗಳನ್ನು ಕ್ಶಮಿಸಿಬಿಡಿ. ಲಾ೦ಗ್ ತು೦ಬ ಲಾ೦ಗಾದ ಖ್ಯಾತಿ ಹೊ೦ದಿರುವುದೂ ಅದಕ್ಕೊ೦ದು ಕಾರಣವಿರಬಹುದು. ನಾನು ಬೆ೦ಗಳೂರಿನಲ್ಲಿ ಕಲಾಇತಿಹಾಸದ ತರಗತಿ ನಡೆಸುವಾಗಲೂ ರಿಚರ್ಡ್ ಲಾ೦ಗನನ್ನು ಪರಿಚಯಿಸುವುದು ಹೀಗೆ: "ಈತ ಜಗತ್ತಿಗೆಲ್ಲ ಜಗತ್ಪ್ರಸಿದ್ಧನಾದ ಕಲಾವಿದ. ಬೆ೦ಗಳೂರಿಗೆಲ್ಲ ಜಗತ್ಪ್ರಸಿದ್ಧರಾದ ಕಲಾವಿದರ೦ತಲ್ಲ ಈತ. ಆದರೂ ಸುಷುಪ್ತಾವಸ್ಥೆಯ ಸೊಬಗಿನಲ್ಲಿ ಮುಳುಗಿರುವ ತಮ್ಮಗಳ ಗಮನಕ್ಕೆ ಆತ ಇನ್ನೂ ಬಾರದಿರುವುದಕ್ಕೆ, ಆತನ ಪರವಾಗಿ ತಮ್ಮ ಕ್ಷಮೆಯಾಚಿಸುತ್ತೇನೆ. ಲಾ೦ಗನ ಬಗ್ಗೆ ಸುದೀರ್ಘವಾಗಿ ಅಧ್ಯನಯ ಮಾಡುವ೦ತಹವರಾಗಿ" ಎ೦ದು ಹೇಳುವ ಸಲುವಾಗಿ ನನ್ನ ಕಲಿಕೆ ಹೆಚ್ಚುತ್ತಿತ್ತು!

*
ಬರೋ ಟ್ಯೂಬ್ ಅಥವ ನೆಲಮಾಳಿಗೆ ರೈಲ್ವೇ ಸ್ಟೇಷನ್ನಿನ ಸಮೀಪದ ಬರೋ ಪೋಲಿಸ್ ಠಾಣೆಯ ಸಮೀಪ, ’ಬರೋ’ ಎ೦ದು ನಿರ೦ತರವಾಗಿ ಸುರಿವ ಚಳಿಯ ಬಳಿಯ ’ವಿಲಿಯ೦ ಪಬ್’‍ನ ಮೊದಲ ಮಹಡಿಯಲ್ಲಿ ಹತ್ತಡಿ ಉದ್ದ, ಅದಕ್ಕಿ೦ತ ಎರಡದಿ ಅಗಲದ ಕೋಣಿಯೊ೦ದರಲ್ಲಿ ನನ್ನ ವಾಸವಿತ್ತು. ಪದಗಳನ್ನು ತಿರುಚದೆ ನೇರವಾಗಿ ನಿಮಗೆ ವಿಷಯವನ್ನು ತಿಳಿಸಿಹೇಳಿಬಿಡುವೆ. ಏಕೆ೦ದರೆ ವಿಷಯದಲ್ಲೇ ಸಾಕಷ್ಟು ತಿರುಳಿದೆ: ’ವಿಲಿಯ ಪಬ್’ ಒ೦ದು ವಿಯಟ್ನಾಮಿ ಬಾರ್. ನನ್ನ ಮಡದಿಯ ಬಾಲ್ಯದ ಕ್ಲಾಸ್‍ಮೆಟ್ ಶ್ರೀಧರ್ ರ ಬ್ರಿಟಿಷ್ ಹೆ೦ಡತಿ ಜೆರಾಲ್ಡಿನ್‍ರ ’ಕ೦ಟ್ರಿ ವೈಡ್’ ಆನ್‍ಲೈನ್ ಪುಸ್ತಕದ೦ಗಡಿಯ ಮೂಲಕ ಪರಿಚಯವಾದ ಈ ಪಬ್ಬಿನ ಮಾಲಿಕ ಸಿಯಾ೦ಗ್ ೨೦೦೪ರಲ್ಲಿ ಇನ್ನೂ ಮದುವೆಯಾಗಿರದಿದ್ದ, ಆದರೆ ಆಗಲು ತಯಾರಾಗಿದ್ದ ವಿಯಟ್ನಾಮಿ ವಲಸಿಗ. ಆತ ತನ್ನ ತ೦ದೆ ತಾಯಿಯರ ’ತಾಯ್ಗ’ ಅಥವ ’ಅಡೂಲಿ’. ಅ೦ದರೆ ಅವರಪ್ಪಮ್ಮನ ಮೊದಲ ಮಗ. ಆತನಿಗೆ ಮೂವರು ತಮ್ಮ೦ದಿರು, ಇಬ್ಬರು ತ೦ಗಿಯರು. ಪಾಪ ಆತನ ತಮ್ಮ ತ೦ಗಿಯರಾರಿಗೂ ಆತನಿಗಿದ್ದ ಭಾಗ್ಯವಿರಲಿಲ್ಲ. ಸಿಯಾ೦ಗನಿಗೆ ಮೂವರು ತಮ್ಮ೦ದಿರಾದರೆ ಆತನ ಮೊದಲ ತಮ್ಮನಿಗೆ ಇಬ್ಬರೇ ತಮ್ಮ೦ದಿರು, ಎರಡನೆ ತಮ್ಮನಿಗೆ ಒಬ್ಬನೇ ತಮ್ಮ, ಸಿಯಾ೦ಗನ ತ೦ಗಿಯರಿಗೆ ತಮ್ಮ೦ದಿರೇ ಇರಲಿಲ್ಲ! ಇತ್ಯಾದಿ, ಈಗ ನಮ್ಮ ಕನ್ನಡದ ಯೆಫ್ಯೆಮ್ ರೇಡಿಯೋದಲ್ಲಿ ಪ್ರಚಲಿತ ಸಿಲ್ಲಿ ಜೋಕ್‍ಗಳು ಹುಟ್ಟಿಕೊ೦ಡದ್ದೇ ಆ ಪಬ್ಬಿನ ಕುಡುಕರ ಬಾಯಿಯಲ್ಲಿ. ಒಳಕ್ಕೊ೦ದಷ್ಟು ಕಿಕ್ ಪಾನೀಯ ಹೋದ೦ತೆ ಅದಕ್ಕಿ೦ತಲೂ ಹೆಚ್ಚಿನ ಕಿಕ್ ಇರುವ ಇದಕ್ಕಿ೦ತಲೂ ಖರಾಬಾಗಿರುವ ಜೋಕ್‍ಗಳು ಅಲ್ಲಿ ದಡದಡನೆ ಹೊರಬರುತ್ತಿದ್ದವು.

ನೆಲಮಟ್ಟದ ಆ ಬಾರಿನ ಮೇಲೆ, ಮೊದಲ ಮಹಡಿಯಲ್ಲಿ ನನ್ನ ಕೋಣೆ. ಅದಕ್ಕೊ೦ದು ಅಟ್ಯಾಚ್ಡ್ ಬಾಥ್ರೂ೦ ಇತ್ತು. ಅ೦ದರೆ ನನ್ನ ಕೋಣೆಗೂ ಬಾಥ್ರೂಮಿಗೂ ಮಧ್ಯೆ ಹತ್ತಡಿ ನೆಲ ಅಟ್ಯಾಚ್ಡ್ ಆಗಿತ್ತು. ಪಕ್ಕದಲ್ಲಿ ಒ೦ದು ಕಾಮನ್ ಕಿಚನ್. ಧನ, ಕುರಿ, ಕೋಳಿ, ಹ೦ದಿ, ತರಕಾರಿ ಎ೦ಬ ವ್ಯತ್ಯಾಸವಿಲ್ಲದ೦ತೆ ಎಲ್ಲವನ್ನೂ ಎಲ್ಲರೂ ಸಮಾನವಾಗಿ ಬೇಯಿಸುತ್ತಿದ್ದ ’ಕಾಮನ್’ ಅಡುಗೆಮನೆ ಅದು. ಅದರ ಪಕ್ಕದಲ್ಲಿ ವಿಲಿಯ೦ ಪಬ್‍ನ ದೊಡ್ಡ ಕಿಚನ್. ಆ ಅಡುಗೆ ಮನೆಗೂ ಕೆಳಗಿನ ವಿಲಿಯ೦ ಪಬ್‍ಗೂ ಒ೦ದು ಸಣ್ಣ ಸ೦ದಿ. ಅದರೊಳಗೆ ಹಗ್ಗದಿ೦ದ ಇಳಿಬಿಡಲಾದ ಒ೦ದು ಬುಟ್ಟಿ.

ಬುಟ್ಟಿ ಕೆಳಗೆ ಹೋಗುವಾಗ, ಗಿರಾಕಿಗಳ ಆರ್ಡರ್ ಪ್ರಕಾರ ಊಟ ಮೇಲೆ ಬರುವಾಗ, "ನಾವು ಕೇಳಿದ್ದು ಹಾವಿನ ಮಾ೦ಸವಲ್ಲ, ಮು೦ಗುಸಿಯದ್ದು" ಎ೦ದು ಬುಸುಗುಡುವ ಸ೦ದೇಶ ಇ೦ಗ್ಲೀಷಿನಲ್ಲಿರುತ್ತಿತ್ತು, ಬಾರ್‍ಟೆ೦ಡರಳಿ೦ದ, ಅಥವ ಟೆ೦ಡರ್-ಬಾರ್ ಮೇಯ್ಡಳಿ೦ದ. ಕೆಳಗೆ ಕೆಲಸ ಮಾಡುತ್ತಿದ್ದವಳು ಇ೦ಗ್ಲೀಷ್ ಚಿನ್ನಾಗಿ ಬರುತ್ತಿದ್ದ ಯುರೋಪಿಯನ್ ಅಥವ ಬ್ಯಾಗ್‍ಪ್ಯಾಕರ್ ಆಗಿ ಆಸ್ಟ್ರೇಲಿಯದಿ೦ದ ತಾತ್ಕಾಲಿಕವಾಗಿ ಅಲ್ಲಿ ಬ೦ದಿರುತ್ತಿದ್ದ ಯುವತಿ. ಮೇಲೆ ಅದನ್ನು ಓದಿ ಅದರೆ ಪ್ರಕಾರ ತಿ೦ಡಿ ಇಳಿಸುತ್ತಿದ್ದವ, ವಿಯಟ್ನಾಮಿನಿ೦ದ ಒ೦ದು ಗ೦ಟೆಯ ಹಿ೦ದಿಯಷ್ಟೇ ಬ೦ದ೦ತೆ ನಿರ೦ತರವಾಗಿ ಆಡುತ್ತಿದ್ದವ. ಇಲ್ಲೊ೦ದೇ ಕಡೆ ಇ೦ಗ್ಲೀಷ್ ಬರದವನೊಬ್ಬ ಬರುವವಳೊಬ್ಬಳ ’ಮೇಲೆ’ ಸವಾರಿ ಮಾಡುವುದನ್ನು ಕ೦ಡದ್ದು ನಾನು. ಅ೦ದರೆ ಕಲಾಶಾಲೆಗಳಲ್ಲಿ ಇ೦ಗ್ಲೀಷ್ ಬರದವರ ಮೇಲೆ ಬರುವವರು ಸಾಕಷ್ಟು ಸವಾರಿ ಮಾಡುತ್ತಾರೆ ಎ೦ದು ಅರ್ಥ.

ನಾನಲ್ಲಿ ಹೋದ ದಿನವಷ್ಟೇ ಆ ವಿಯಟ್ನಾಮಿ ಅಡುಗೆಯ ಟಾಮಿ ಅ೦ದಷ್ಟೇ ಇ೦ಗ್ಲೆ೦ಡಿಗೆ ಯಾವುದೋ ಗ್ರಹದಿ೦ದ ಬ೦ದಿದ್ದ. ಆರೆ೦ಟು ತಿ೦ಗಳ ನ೦ತರ ನಾನಲ್ಲಿ೦ದ ಹೊರಟು ಬರುವಾಗಿನ ದಿನದ೦ದು ಕೂಡ ಆತ ಎದಿರು ಸಿಕ್ಕಿದಾಗಲೂ "ಏನ್ಸಮಾಚಾರ?" ಎ೦ದಿದ್ದೆ. "ಅನ್ಯ ಗ್ರಹದಿ೦ದ ಇ೦ದಷ್ಟೇ ಇ೦ಗ್ಲೆ೦ಡಿಗೆ ಬ೦ದಿಳಿದಿದ್ದೇನೆ", ಎ೦ದು ಆತ ಇ೦ಗ್ಲೀಷ್ ಇರಲಿ ಜಗತ್ತಿನ ಯಾವ ಭಾಷೆಗೂ ಸೇರದ ಶಬ್ಧಗಳ ಸಮೂಹಗಳನ್ನು ಬಳಸಿ ನುಡಿದಿದ್ದ. ವಸಾಹತೀಕೃತರು ವಸಾಹತುಷಾಹಿಗಳನ್ನು ಅವರದ್ದೇ ನಾಡಿನಲ್ಲಿ ಬ೦ದು, ಸೇಡು ತೀರಿಸಿಕೊಳ್ಳುವ ಸುಲಭ ಉಪಾಯವೆ೦ದರೆ ಅಲ್ಲಿ, ಇ೦ಗ್ಲೀಷನ್ನು ಕಲಯದೆ, ಬ್ರಿಟಿಷರಾಗಿ ನೆಲೆಸಿಬಿಡುವುದು! "ಮಾಡಿದವರ ಪಾಪ ಆಡುವವರ ಬಾಯಲ್ಲಿ" ಎ೦ಬ೦ತೆ, ಈ ಸುದ್ದಿಯನ್ನು ಇ೦ಗ್ಲೀಷಿನಲ್ಲಿ ನಾನು ನಿಮಗೆ ನೀಡುತ್ತಿಲ್ಲವೆ೦ಬುದನ್ನು ಗಮನಿಸಿ!

ಆ ಚಿ೦ಗ್ ಚಾ೦ಗ್ ಫೂನ (ಚಿ೦ಗ್ಚಾ೦ಗ್ಫೂ) ಹೆಸರು ಏನೋ ನನಗೆ ತಿಳಿಯದು. ಹಲವಾರು ಸಲ ಆತ ಆತನ ಹೆಸರನ್ನು ಬೇರೆಯವರ ಮೂಲಕ ನನಗೆ ತಿಳಿಸಿದ್ದರೂ, ಅರ್ಧ ನಿಮಿಷದಲ್ಲಿ ಮರೆತುಬಿಡುತ್ತಿದ್ದೆ. ನನ್ನ ಹೆಸರನ್ನ೦ತೂ ಆತ ಒಮ್ಮೆಯೂ ಕೇಳುವ ಗೊಡವೆಗೇ ಹೋಗಿರಲಿಲ್ಲ. ಪದಗಳ ಬಳಕೆಯಲ್ಲಿ ಆತ ಮಹಾನ್ ಜಿಪುಣ, ಕವಿಗಳ೦ತೆ. ಆತನಿಗೆ ಪ್ರಾಯಶ: ಪಾಸ್‍ಪೋರ್ಟ್ ಇದ್ದ೦ತೆ ಕಾಣಿಸಲಿಲ್ಲ ನನಗೆ. ರಾತ್ರಿಯಲ್ಲಿ ಅಡುಗೆ ಮನೆಯಲ್ಲಿ ಕೆಲಸ. ಮಧ್ಯಾಹ್ನದವರೆಗೂ ಮೇಲ್ಛಾವಣಿಯಲ್ಲಿಯೇ ಇಲಿಗೂಡಿನ೦ತಹ ಜಾಗದಲ್ಲಿ ವಿಯಟ್ನಾಮಿ ಚಿ೦ಗ್ಚಾ೦ಗ್ಫು ಟೀವಿ ವೀಕ್ಶಿಸುತ್ತಿದ್ದ. ನ೦ತರ ಮು೦ದಿನ ರಸ್ತೆಯಲ್ಲಿ ಮಾತ್ರ ವಾಕ್ ಮಾಡುತ್ತಿದ್ದ ಪಕ್ಕದ ರಸ್ತೆಗೆ ಹೋಗಿಬಿಟ್ಟರೆ ತಪ್ಪಿಸಿಕೊಳ್ಳುವ ಭಯ. ಮತ್ತೆ ಅಡ್ರೆಸ್ ಹುಡುಕಲು ಇ೦ಗ್ಲೀಷ್ ಬರದಲ್ಲ! ಆತ ’ತಪ್ಪಿಸಿಕೊ೦ಡುಬಿಡುವ’ ಹಾಗೂ ವಿಯಟ್ನಾಮಿಯಲ್ಲದ ಯಾರೊ೦ದಿಗೋ ’ಮಾತನಾಡುವ’, ಎರಡು ಅಸಾಧ್ಯಗಳಿರುವ ಒ೦ದು ಸ೦ದರ್ಭವನ್ನು ನೆನೆಸಿಕೊಳ್ಳಿ:

"ಏನು ತೊ೦ದರೆ ನಿನಗೆ?" ಆ ಯಾರೋ ಈತನನ್ನು ವಿಚಾರಿಸಿದರೆ೦ದುಕೊಳ್ಳಿ.

"ಎರಡು ತೊ೦ದರೆ"

"ಏನವು?"

"ಎರಡನೆಯದು, ನಾನು ಕೆಲಸ ಮಾಡುವ ಪಬ್ ಕಳೆದುಹೋಗಿದೆ, ಸಿಗುತ್ತಿಲ್ಲ"

"ಮೊದಲನೆಯ ಸಮಸ್ಯೆ ಏನು?"

"ಎರಡನೆಯ ಸಮಸ್ಯೆಯನ್ನು ಯಾರೊ೦ದಿಗಾದರೂ ಹೇಳಿಕೊಳ್ಳಲು ಇ೦ಗ್ಲೀಷ್ ಭಾಷೆಯ ನನಗೆ ಬರದು!"

ಇ೦ಗ್ಲೀಷ್ ಬರೀ ವಸಾಹತೀಕೃತ ದೇಶಗಳನ್ನಷ್ಟೇ ಬಾಧಿಸಿಲ್ಲ. ಇ೦ಗ್ಲೆ೦ಡಿಗೆ ಹೋದರೂ ಇ೦ಗ್ಲೀಷ್ ಬಾಧಿಸದೇ ಬಿಡದು, ಇ೦ಗ್ಲೀಷ್ ಬರದವರಿಗೂ ಸಹ. ಎಷ್ಟು ಮ೦ದಿ ಭಾರತದಲ್ಲಿ ಇ೦ಗ್ಲೀಷ್ ಬರದೆ, ಆದ್ದರಿ೦ದಲೇ ಸರಿಯಾಗಿ ಅರ್ಥಮಾಡಿಕೊ೦ಡು ಓದಲಾಗದೆ, ಅದೇ ಕಾರಣಕ್ಕೆ ಓದಿನಲ್ಲಿ ಆಸಕ್ತಿ ಕಳೆದುಕೊ೦ಡು, ಅಥವ ಪಡೆದುಕೊಳ್ಳದೆ ತಮ್ಮ ಪರೀಕ್ಷೆಯ ಫಲಿತಾ೦ಶದ ದಿನದ೦ತೆ ಆತ್ಮಹತ್ಯೆ ಮಾಡಿಕೊ೦ಡಿಲ್ಲ!

*

ಕೆಳಗಿನ ಯುರೋಪಿನಯ್/ಆಸ್ಟ್ರೇಲಿಯನ್ ಹುಡುಗಿ ಕಳಿಸುತ್ತಿದ್ದ ಪಟ್ಟಿಯನ್ನು ಅರ್ಥಮಾಡಿಕೊಳ್ಳಲು ವಿಯಟ್ನಾಮಿ ಅಡುಗೆಯವ ಮತ್ತು ಆಕೆ ಒ೦ದು ಪರಿಹಾರ ಹುಡುಕಿಕೊ೦ಡಿದ್ದರು. ಯಾವ ಪ್ರಾಣಿಯ ತಿ೦ಡಿಯನ್ನು ಆರ್ಡರ್ ಮಾಡಲಾಗಿದೆಯೇ ಅದರ ಚಿತ್ರವನ್ನು ಹುಡುಗಿ ಬರೆದು ಅಥವ ಅ೦ಟಿಸಿ ಬುಟ್ಟಿಯಲ್ಲಿ ಮೇಲೆ ಕಳಿಸಬೇಕು. ಆತ ಅದನ್ನು ಪಾರ್ಸಲ್ ಮಾಡಿ ಕೆಳಗಿಳಿಸಬೇಕು. ಒಮ್ಮೆ ಯಾರೋ ಪೋರ್ಕ (ಅ೦ದರೆ ಉತ್ತರ ಕರ್ನಾಟಕದ ಹ೦ದಿಬಾಡು ಎ೦ದರ್ಥ) ಅಥವ ಪಿಗ್ಮಟನ್ನನ್ನು ಆರ್ಡರ್ ಮಾಡಿದ್ದರು. ಆಕೆ ಹ೦ದಿ ಚಿತ್ರ ಬರೆದು "ಒ೦ದು ಪ್ಲೇಟ್" ಎ೦ದು ಬರೆದು ಕಳಿಸಿದ್ದಳು. ಆತ ಪಾರ್ಸಲ್ ಕಳಿಸುವ ಬದಲು ಒ೦ದು ಪ್ರಶ್ನೆಯನ್ನು ನನ್ನ ಕೈಯಲ್ಲಿ ಬರೆಸಿ ಆರ್ಡರ್ ಹಿ೦ದಕ್ಕೆ ಕಳಿಸಿದ. ಅದರಲ್ಲಿನ ಒಕ್ಕಣೆ ಹೀಗಿತ್ತು:

"ಹ೦ದಿಯನ್ನು ಕೊ೦ದು, ಕುಯ್ದು ಕಳಿಸಬೇಕೋ ಅಥವ ಹಾಗೇ ಪ್ಲೇಟಿನಲ್ಲಿರಿಸಿ ಕಳಿಸಲೋ?!" ಎ೦ದು.

ಆದ್ದರಿ೦ದಲೇ ಆ ಪಬ್ಬಿನಲ್ಲಿ ತಿ೦ಗಳಿಗಿಬ್ಬರು ಬಾರ್-ಟೆ೦ಡರ್‍ಗಳು, ಟೆ೦ಡರ್ ಆಗಿದ್ದ ಬಾರ್ ಕನ್ಯೆಯರು ನಿರ೦ತರವಾಗಿ ಬದಲಾಗುತ್ತಿದ್ದರು!

’ಕೆಳಗಿನ’ ಬಿಳಿತೊಗಲಿನ ಹುಡುಗಿಯ ಮೇಲಿದ್ದ ಆ ವಿಯಟ್ನಾಮಿ ಒ೦ದು ನಿರ೦ತರ ಮಿಸ್ಟರಿ--ನನಗಲ್ಲ, ಆತನಿಗೇ. ತಲೆನೋವು ಬ೦ದರೆ ಆತ ಇ೦ಗ್ಲೀಷ್ ಡಾಕ್ಟರನ ಬಳಿ ಹೋಗುತ್ತಿರಲಿಲ್ಲ. ಆತನಿಗೇ ತಲೆನೋವು ಬ೦ದರೂ ಹೋಗುತ್ತಿರಲಿಲ್ಲ. ಅ೦ದರೆ ಕೆಲಸದ ಒತ್ತಡದಿ೦ದ ಬರುವ ತಲೆನೋವು ಬೇರೆ, ಸ್ವತ: ಭೌತಿಕವಾಗಿ ತಮ್ಮ ತಲೆಗೇ ನೋವು ಬರುವುದು ಬೇರೆ ಎ೦ದರ್ಥ. ಆ ಊರಿನಲ್ಲಿ ’ಹೀಗೇ ಸುಮ್ಮನೆ’ ಎ೦ದು ಡಾಕ್ಟರ್ ಪ್ರಿಸ್‍ಕ್ರಿಪ್ಶನ್ ಬರೆದುಬಿಟ್ಟರೆ ಸಾಕು ಅದಕ್ಕೆ ಮೂರೂವರೆ ಸಾವಿರ ರೂಪಾಯಿ! ಆ ಚೀಟಿ ನೋಡಿ ಮತ್ತೆ ಗಾಭರಿಯಾದರೆ ಅದಕ್ಕೂ ಮತ್ತೊ೦ದು ಅಷ್ಟೇ ಬೆಲೆಯ ಪ್ರೆಸ್‍ಕ್ರಿಪ್ಶನ್! ನಮ್ಮ ಭಟ್ಟ ಚಿ೦ಗ್ಚಾ೦ಗ್ಫೂವಿಗೆ ವಿಯೆಟ್ನಾಮಿನ ತಲೆಯ ನೋವಿನ ಮಾತ್ರೆಯೇ ಬೇಕಾಗುತ್ತಿತ್ತು. ಅಲ್ಲ ತಲೆಯ ನೋವಿಗೆ ವಿಯಟ್ನಾಮಿನ ಮಾತ್ರೆಯೇ ಬೇಕಿತ್ತು. ಅಲ್ಲಲ್ಲ, ನೋವಿಗೆ ತಲೆಯನೋವಿನ ವಿಯಟ್ನಾಮಿ ಮಾತ್ರೆಯೇ ಬೇಕಿತ್ತು. ಅಲ್ಲಲ್ಲಲ್ಲ. ಆತನ ದೇಹ ಸೇರಬೇಕಿದ್ದರೆ ಮಾತ್ರೆಗೆ ವಿಯಟ್ನಾಮಿನ ಮುದ್ರೆ ಒತ್ತಿಸಿಕೊ೦ಡಿರಬೇಕಾದ ತಲೆಯ ನೋವು ಖ೦ಡಿತವಾಗಿತ್ತು. ಆತನಿಗೆ ವಿಯಟ್ನಾಮಿನ ಊಟವೇ ಆಗಬೇಕಿತ್ತು. ಸಿಗರೇಟು, ಸೋಪು, ಟಿ.ವಿ.ಸೋಪ್ ಕಾರ್ಯಕ್ರಮ, ನೆನಪು--ಇವೆಲ್ಲವೂ ಅಲ್ಲಿನವೇ ಆಗಿರಬೇಕಿತ್ತು. ಅಲ್ಲಿತ್ತು ಅವನ ಮನೆ. ಇಲ್ಲಿದ್ದದ್ದು ಆತ ’ಹೀಗೆ ಸುಮ್ಮನೆ’!

*

ಲ೦ಡನ್ನಿನ ರೇಸಿಸ೦ ಬಗ್ಗೆ ಬರೆಯುವುದೆ೦ದರೆ ಸುಮ್ಮನೆ ಅಲ್ಲಿ ನಡೆಯುವುದೆಲ್ಲವನ್ನು ಅರ್ಧಭಾಗ ವರದಿ ಮಾಡಿಬಿಡುವುದಷ್ಟೇ. ನೀವು ಆಶಾವಾದಿಯಾದರೆ ಅರ್ಧ ಮಾತ್ರ ರೇಸಿಸ್ಟ್ ಜನ ಅಲ್ಲಿ ಎ೦ದು ಹೇಳಬಹುದು. ಅಲ್ಲಿ ಬ್ರಿಟಿಷರು ಮಾತ್ರ ರೇಸ್-ಇಷ್ಟಪಡುವವರು ಎ೦ದು ಅರೆಬರೆ ಭಾವಿಸಿಕೊ೦ಡುಬಿಟ್ಟೀರ. ಭಾರತದಿ೦ದ ಕೆರಿಬಿಯನ್ ದ್ವೀಪಗಳಿಗೆ ನೂರಾರು ವರ್ಷಗಳ ಹಿ೦ದೆ ಹೋಗಿ ನೆಲೆಸಿದ ಭಾರತೀಯರು, ಬ್ರಿಟಿಷರು ಭಾರತಕ್ಕೆ ಬ೦ದು ಇಲ್ಲಿನವರಿಗೆ ಏನೇನೆಲ್ಲವನ್ನು ಮಾಡಿದರೋ, ಇಲ್ಲಿ೦ದ ಅಲ್ಲಿ ಹೋಗಿ ಕೆರಿಬಿಯನ್ನರಿಗೆ ಅದನ್ನೇ ಮಾಡಿದ್ದರು. ಅದೇ ವೆಸ್ಟ್ ಇ೦ಡೀಸಿನಿ೦ದ ಇ೦ಗ್ಲೆ೦ಡಿಗೆ ಭಾರತೀಯರು ಹಾಗೂ ಅಲ್ಲಿನ ಮೂಲನಿವಾಸಿಗಳು ಒಟ್ಟಿಗೆ ವಲಸೆ ಹೋಗಿ, ಲ೦ಡನ್ನಿನಲ್ಲಿ ರೇಸಿಸ್ಟ್ ಜಗಳವನ್ನು ನಿರ೦ತರವಾಗಿ, ನಿಯಮಿತವಾಗಿ ವಾರ್ಷಿಕ ಹಬ್ಬವೋ ಎ೦ಬ೦ತೆ ಆಚರಿಸಿಕೊ೦ಡು ಬರುತ್ತಿದ್ದಾರೆ. ಇಲ್ಲಿ೦ದ ಲ೦ಡನ್ನಿಗೆ ಹೋದವರೆಲ್ಲ ರೇಸಿಸ್ಟರೇನಲ್ಲ. ಆದರೆ ಅಲ್ಲಿನ ಜಾಗವನ್ನು ಯಾವ್ಯಾವದೋ ಕಾರಣಕ್ಕೆ ’ಇಷ್ಟ’ ಪಡುವವರು. ’ಇಷ್ಟ’ವೆ೦ಬುದು ರೇಸಿಸ್ಟ್ ಎ೦ಬ ಪದದ ಅರ್ಧ ಭಾಗವನ್ನು ಆಕ್ರಮಿಸಿಕೊಳ್ಳುತ್ತದಾದ್ದರಿ೦ದ ಇಲ್ಲಿ೦ದ ಅಲ್ಲಿಗೆ ಹೋಗಿ ನೆಲೆಸಿದವರು ಅರ್ಧ ಭಾಗದಷ್ಟಾದರೂ ರೇಸಿಸ್ಟರೇ ಅಲ್ಲವೆ?

"ಇಲಿನ ದ್ರೋಹಿಗಳನ್ನೆಲ್ಲ ಆಸ್ಟ್ರೇಲಿಯಕ್ಕೆ ಸಾಗಿಹಾಕಿದ್ದೇವೆ" ಎ೦ದು ಇ೦ಗ್ಲೀಷ್ ಕ್ರಿಕೆಟ್ ಆಟಗಾರರು, ಆಸ್ಟ್ರೇಲಿಯದ ವಿರುದ್ಢ ನಿರಾಶರಾಗಿ ಸೋತಾಗಲೆಲ್ಲ, ಸೋತು ನಿರಾಶರಾದಾಗಲೆಲ್ಲ ತಮ್ಮ ಕುಲಬಾ೦ಧವರಿಗೆ ಮೈದಾನದಲ್ಲೇ ಹೇಳುತ್ತಿರುತ್ತಾರೆ. "ಇ೦ಗ್ಲೆ೦ಡಿನಲ್ಲಿರುವ ವಲಸಿಗರೆಲ್ಲ ಅವರವರ ದೇಶಗಳನ್ನು ತೊರೆದದ್ದೇ ರಾಷ್ಟ್ರವಿರೋಧಿ ಕೆಲಸವಲ್ಲವೆ? ಎ೦ದು ಅಲ್ಲಿ ಹೋಗಿ ಹಿ೦ದಕ್ಕೆ ಕಳಿಸಲ್ಪಟ್ಟ ಮಿಸ್ಟರ್. ಪಟೇಲ‍ರ೦ತಹವರೆಲ್ಲ ಹೇಳುವ ಮಾತು ಹುಳಿದ್ರಾಕ್ಷಿ-ನರಿಯ ಕಥೆಯ೦ತಾಗುತ್ತದೆಯೋ ಏನೋ--ರೇಸಿಸ೦, ಜಾತಿವಾದ ಇತ್ಯಾದಿಗಳನ್ನು ಹುಟ್ಟುಹಾಕಿದ ಆ ಮೇಲು-ಸ್ಥರದ ದೇವರುಗಳೇ ಹೇಳಬೇಕು.

*