ಧೂಮಪಾನದಲ್ಲಿ ಸಂಪ್ರದಾಯ?

ಧೂಮಪಾನದಲ್ಲಿ ಸಂಪ್ರದಾಯ?

ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಇದ್ದಾಗ ಸಿಗರೇಟ್ ಸೇದುವ ಗೆಳೆಯರೊಂದಿಗೆ ಮೊದಲ ಬಾರಿ ಸ್ನೇಹವಾಯಿತು. ಆಗ ಈ ಧೂಮಪಾನಿಗಳು ಮಾಡುವ ಎಲ್ಲ ಚಟುವಟಿಕೆಗಳನ್ನು ಕುತೂಹಲದಿಂದ ನೋಡುತ್ತಿದ್ದೆ. ಅವರು ಸೇದುವುದರಲ್ಲಿ ಹೊಂದಿದ್ದ ಅಲಿಖಿತ ಕಟ್ಟಳೆಗಳ ಬಗ್ಗೆ ಆಸಕ್ತಿ ಉಂಟಾಯಿತು. ಇವು ಸಹ ಒಂದು ಬಗೆಯ ಮೂಢನಂಬಿಕೆಗಳೇ ಅನ್ನಿ. ಹಾಗೇ ಹುಡುಕುತ್ತಾ ಹೋದಂತೆ ಇವುಗಳ ಹಿಂದಿನ ಕಾರಣಗಳೂ ತಿಳಿದವು. ಅವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

ನಂಬಿಕೆ: ಒಂದೇ ಬೆಂಕಿ ಕಡ್ಡಿಯಿಂದ ಎರಡಕ್ಕಿಂತ ಹೆಚ್ಚು ಸಿಗರೇಟಗಳನ್ನು ಹೊತ್ತಿಸಬಾರದು.

ಕಾರಣ: ಇದರ ಬಗ್ಗೆ ಹೆಚ್ಚು ತಿಳಿಯಲು ನಾವು ಎರಡನೆಯ ಮಹಾಯುದ್ಧದ ದಿನಗಳಿಗೆ ತಲುಪಬೇಕು. ಆಗಿನ ಸೈನಿಕರಲ್ಲಿ ಧೂಮಪಾನ ವ್ಯಾಪಕವಾಗಿತ್ತು. ಆಗ ಸೈನಿಕರಿಗೆ ಸಿಗರೇಟ ಸೇದಲು ಪ್ರೇರೇಪಿಸಲಾಗುತ್ತಿತ್ತು. ಅದನ್ನು ಪುರುಷಾರ್ಥದ ಸಂಕೇತವೆಂಬಂತೆ ಬಿಂಬಿಸಲಾಗುತ್ತಿತ್ತು. ಅವುಗಳನ್ನು ರೇಷನ್ ರೂಪದಲ್ಲಿ ಕೊಡಲಾಗುತ್ತಿತ್ತು. (ತಂಪು ಪ್ರದೇಶದಲ್ಲಿ ಕೆಲಸ ಮಾಡುವ ನಮ್ಮ ಸೇನೆಯ ಜವಾನರಿಗೆ ರಮ್ ರೇಷನ್ ರೂಪದಲ್ಲಿ ಸಿಗುವಂತೆ). ಬಹುಪಾಲು ಸೈನಿಕರು ಧೂಮಪಾನ ವ್ಯಸನಿಗಳಾಗಿದ್ದರು.
ಸೈನಿಕರ ಈ ದೌರ್ಬಲ್ಯವನ್ನು ಶತ್ರು ಪಡೆಯು ಉಪಯೋಗಿಸುತ್ತಿತ್ತು. ಶತ್ರು ಪಡೆಯ ಅನೇಕ ಸ್ನೈಪರಗಳು ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದರು. ಈ ಸ್ನೈಪರಗಳು ತರಬೇತಿ ಹೊಂದಿದ ಗುರಿಕಾರರು. ಅವರ ಬಳಿ ಟೆಲಿಸ್ಕೋಪ್ ಇರುವ ದೂರದವರೆಗೂ ಗುಂಡು ಚಿಮ್ಮುವ ವಿಶಿಷ್ತ ರೈಫಲಗಳು ಇರುತ್ತವೆ. ಇವರು ಛದ್ಮವೇಶಧಾರಿಯಾಗಿ ದೂರದಲ್ಲಿ ಮರೆಯಾಗಿ ಅಡಗಿ ಕುಳಿತು ಗುರಿ ಭೇದಿಸುತ್ತಿದ್ದರು.
ರಾತ್ರಿ ವೇಳೆಯಲ್ಲಿ ಯೋಧರು ಬೇಸರವಾಗಿಯೊ ಇಲ್ಲವೆ ಅಭ್ಯಾಸ ಬಲದಿಂದಲೊ ಸಿಗರೇಟಿಗೆ ಮೊರೆ ಹೋಗುತ್ತಿದ್ದರು. ತಮ್ಮ ಪಕ್ಕದಲ್ಲಿ ಇರುವ ಇನ್ನೊಬ್ಬ ಸೈನಿಕರಿಗೆ ಚುಟ್ಟಾ ಆಫರ್ ಮಾಡುವುದು ಶಿಷ್ಟಾಚಾರ. ಕಡ್ಡಿ ಗೀರಿ ಮೊದಲು ಅವರ ಚುಟ್ಟಾ ಹೊತ್ತಿಸಿ ಬಳಿಕ ತಮ್ಮ ಚುಟ್ಟಾ ಹೊತ್ತಿಸಿಕೊಳ್ಳುತ್ತಿದ್ದರು.
ಎರಡು ಚುಟ್ಟಾ ಹೊತ್ತಿಸಲು ಬೇಕಾಗುವ ಸಮಯ ಕಡಿಮೆ. ಎರಡಕ್ಕಿಂತ ಹೆಚ್ಚು ಚುಟ್ಟಾ ಹೊತ್ತಿಸಲು ಸ್ವಲ್ಪ ಹೆಚ್ಚಿನ ಸಮಯವೇ ಬೇಕು. ಈ ಸ್ವಲ್ಪ ಹೆಚ್ಚಿನ ಸಮಯವೇ ಮಾರಣಾಂತಿಕ. ಬೆಂಕಿ ಕಡ್ಡಿ ಗೀರುವಿಕೆ ಗುರಿಕಾರನಿಗೆ ನಿಮ್ಮ ಇರವನ್ನು ಗೊತ್ತು ಮಾಡಿಕೊಡುತ್ತದೆ. ಈ ಹೆಚ್ಚಿನ ಸಮಯ ಇರವನ್ನು ಖಾತ್ರಿ ಮಾಡುತ್ತದೆ. ಸೈನಿಕರ ತಲೆ ಗ್ಯಾರಂಟಿ ಉರುಳುತ್ತದೆ.
ಹೀಗಾಗಿಯೇ ಮಿಲಿಟರಿಯಲ್ಲಿ ಈ ಅಲಿಖಿತ ನಿಯಮವನ್ನು ಪಾಲಿಸಲಾಗುತ್ತಿತ್ತು. ಜನ ಈಗಲೂ ಅದನ್ನು ಮೂಢರಂತೆ ಪಾಲಿಸುತ್ತಿದ್ದಾರೆ.

Rating
No votes yet

Comments