ಆಕಾಶದಲ್ಲಿ ಪೋಲೀಸ್ ಪೇದೆ

ಆಕಾಶದಲ್ಲಿ ಪೋಲೀಸ್ ಪೇದೆ

ಬರಹ

ಇದು ಜೇಮ್ಸ್ ಥರ್ಬರನ ಹಾಸ್ಯ ಲೇಖನ ದ ಕರ್ಬ್ ಇನ್ ದ ಸ್ಕೈ ದ ಭಾವಾನುವಾದ.

ಮುಂಬಯಿ ಮೈಸೂರು ಅಸೋಸಿಯೇಷನ್ನಿನ ಪತ್ರಿಕೆ ನೇಸರುವಿನಲ್ಲಿ ೧೯೯೬ರಲ್ಲಿ ಪ್ರಕಟವಾದ ನನ್ನ ಈ ಬರಹವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಇದು ಮೊದಲನೆ ಕಂತು. ಬಾಕಿ ಕಂತುಗಳು ಸದ್ಯದಲ್ಲಿಯೇ ಬರಲಿವೆ........

ಸುಬ್ಬಣ್ಣ ರೇವತಿಯನ್ನು ಮದುವೆಯಾಗುತ್ತಾನಂತೆ ಎಂದು ಸುದ್ದಿ ಕೇಳಿದಾಗ ಆಶ್ಚರ್ಯಕ್ಕಿಂತ ಹೆಚ್ಚಾಗಿ ಸುಬ್ಬಣ್ಣ ಯಾಕೆ ಈ ನಿರ್ಧಾರಕ್ಕೆ ಬಂದ ಎಂದು ಕನಿಕರ ಉಂಟಾಯಿತು.

ಹಾಗೆ ನೋಡಿದರೆ ಈ ಸುಬ್ಬಣ್ಣ ಮತ್ತು ರೇವತಿ ಇಬ್ಬರೂ ನನಗೆ ಚೆನ್ನಾಗಿ ಗೊತ್ತಿದ್ದವರೇ. ನಾನು, ಸುಬ್ಬಣ್ಣ ಶಿವಮೊಗ್ಗದ ದೇಶೀಯ ವಿದ್ಯಾಶಾಲೆಯಲ್ಲಿ ಒಟ್ಟಿಗೆ ಓದಿದವರು. ಶಿವಮೊಗ್ಗ ಬಿಟ್ಟ ಮೇಲೆ ಅವನು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟಿನಿಂದBE ಮಾಡಿ ನಂತರ IIMನಿಂದ MBA ಪೂರೈಸಿ ಕಳೆದ ಎಂಟು ವರ್ಷಗಳಿಂದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ಮೇಧಾವಿ, ಕೆಲಸದಲ್ಲಿ ಜಾಣ. ಸ್ವಾರಸ್ಯವಾಗಿ ಮಾತನಾಡುವ ಕಲೆ ಅವನಿಗೆ ಕರಗತವಾಗಿತ್ತು. ಒಟ್ಟಿನಲ್ಲಿ ಯಾರೂ ಇಷ್ಟಪಡಬಹುದಾದಂಥಾ ಆಸಾಮಿ.

ಇನ್ನು ರೇವತಿ ನನ್ನ ಹತ್ತಿರದ ಸಂಬಂಧದ ಪೈಕಿಯೇ. ಆಕೆ ಹುಟ್ಟಿದಾಗಿನಿಂದಲೂ ಅವಳನ್ನು ಬಲ್ಲೆ. ಸ್ಪುರದ್ರೂಪಿ, ಬುದ್ಧಿವಂತೆ.ಈಗಂತೂ ನಾಲ್ಕು ಜನರಲ್ಲಿ ಎದ್ದು ಕಾಣುವಂತೆ ಕಳೆಕಳೆಯಾಗಿ ಬೆಳೆದು ನಿಂತಿದ್ದಳು.ಆದರೆ ಚಿಕ್ಕಂದಿನಿಂದಲೂ ಅವಳದ್ದು ಒಂದು ದುಶ್ಚಟ. ಯಾರಾದರೂ ಮಾತನಾಡುತ್ತಿದ್ದಾಗ , ಅವರ ಮಾತನ್ನು ತಾನೇ ಊಹಿಸಿ ಹೇಳಿಬಿಡುವುದು. ಅವಳ ಊಹೆ ತಪ್ಪಾಗಿದ್ದರೆ, ಹೇಳುತ್ತಿದ್ದವರಿಗೆ ಮೈ ಪರಚಿಕೊಳ್ಳುವಂತಾಗುತ್ತಿತ್ತು. ಅವಳ ಊಹೆ ಸರಿಯಾಗಿದ್ದರೆ ಅವರಿಗೆ ಇನ್ನೂ ಹೆಚ್ಚು ಮೈ ಪರಚಿಕೊಳ್ಳುವಂತಾಗುತ್ತಿತ್ತು.

ಅವಳ ಅಪ್ಪನ ಮನೆಗೆ ಬಂದ ಸ್ನೇಹಿತರು ರಾತ್ರಿ ಊಟ ಮಾಡಿ ತಾಂಬೂಲ ಹಾಕುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾರೆ. ಎಂಟು ಹತ್ತು ವರ್ಷದ ರೇವತಿ ಅಪ್ಪನ ಕುರ್ಚಿ ಹಿಂದೆ ನಿಂತು ಕೇಳುತ್ತಿದ್ದಾಳೆ. “........ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆ ಕಟ್ಟಿಸುತ್ತಿದ್ದ ಕಾಲ. ಪ್ರತಿದಿನ ಬೆಳಿಗ್ಯೆ ಹತ್ತು ಘಂಟೆಗೆ ಸರಿಯಾಗಿ ಅವರ ಸವಾರಿ ಅಲ್ಲಿಗೆ ದಯಮಾಡಿಸುತ್ತಿತ್ತು. ಕೆಲಸ ಹೇಗೆ ನಡೆದಿದೆ ನೋಡಲಿಕ್ಕೆ. ಹೀಗೇ ಒಂದು ದಿನ ಬಂದು ನೋಡುತ್ತಿದ್ದ ಹಾಗೇ ಅವರಿಗೆ ಭಾರೀ......”

"....ಆಶ್ಚರ್ಯ ಆಯಿತು" ಕುರ್ಚಿ ಹಿಂದಿನಿಂದ ರೇವತಿ ವಾಕ್ಯ ಪೂರೈಸುತ್ತಿದ್ದಳು.

ಹೇಳುತ್ತಿದ್ದವರು "ಆಶ್ಚರ್ಯ ಆಯಿತು" ಎಂತಲೋ, “ಕೋಪ ಬಂತು" ಅಂತಲೋ ಅಥವಾ "ದೂರದಲ್ಲಿ ದೋಣಿಯ ಮೇಲೆ ನಾಲ್ಕು ಜನ ದೋಣಿಯಲ್ಲಿ ಕೂತು ಆಚೆ ದಡದತ್ತ ಹೋಗುತ್ತಾ ಇದ್ದಂತೆ ಕಂಡಿತು " ಎಂದೋ ಹೇಳಬೇಕು ಅಂದುಕೊಂಡಿರಬೇಕು. ಏನೇ ಆಗಿ, ಇದಾದ ಮೇಲೆ ವಿಶ್ವೇಶ್ವರಯ್ಯನವರ ಕಥೆಯನ್ನು ಅವರು ಸ್ವಲ್ಪದರಲ್ಲಿಯೇ ಮುಗಿಸಿ ಮಲಗಲಿಕ್ಕೆ ಎದ್ದು ಹೋಗುತ್ತಿದ್ದರು.

ಅವಳ ಅಪ್ಪ , ಅಮ್ಮನಿಗೆ ಮಗಳ ಈ ನಡವಳಿಕೆಯಿಂದ ಬಂದವರಿಗೆ ಕಿರಿಕಿರಿಯಾಗಬಹುದೆಂದು ಎಂಬ ಅರಿವಾಗಲಿಲ್ಲ. ಅವರಿಗೆ ಬಹುಷಃ ತಮ್ಮ ಮಗಳು ಎಷ್ಟು ಬುದ್ಧಿವಂತೆ, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡವರಂತೆ ಮಾತನಾಡುತ್ತಾಳೆ ಎಂದು ಅಭಿಮಾನ ಉಂಟಾಗಿರಲಿಕ್ಕೂ ಸಾಕು. ಅಷ್ಟೇ ಅಲ್ಲ, ರೇವತಿ ಒಂದೆರಡು ವರ್ಷದ ತೊದಲು ಮಾತನಾಡುವ ವಯಸ್ಸಿನಲ್ಲಿದ್ದಾಗ ಅವಳಮ್ಮ "ಬೇಗ ಹಾಲು ಕುಡಿದು ಬಿಡಮ್ಮಾ ನನ್ನ.....” ಅನ್ನುತ್ತಿದ್ದಂತೆಯೇ ಮಗಳು "....ಬಂಗಾರಾ" ಎಂದು ವಾಕ್ಯ ಮುಗಿಸಿದ್ದನ್ನು ನೋಡಿ ಅವಳಮ್ಮ ಏಕ್ದಮ್ ಖುಷಿಯಾಗಿ , ತಕ್ಷಣ ಆಫೀಸಿಗೆ ಫೋನ್ ಮಾಡಿ , ಗಂಡನಿಗೆ ಮಗಳ ಈ ಪರಾಕ್ರಮವನ್ನು ಬಿತ್ತರಿಸಿ, ಆ ಗಂಡ ಕಂಡಕಂಡವರಿಗೆಲ್ಲಾ ಇದರ ಪುನಃ ಪ್ರಸಾರಮಾಡಿರಲಿಕ್ಕೂ ಸಾಕು.

ರೇವತಿ ಬೆಳೆಯುತ್ತಿದ್ದಂತೆ ಈ ಚಟ ಇನ್ನೂ ವಿಕಾರ ರೂಪಕ್ಕೆ ತಿರುಗಿತು. ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿದ್ದ ಅವಳು ಜೊತೆಯವರ ಇಂಗ್ಲೀಷ್ ವ್ಯಾಕರಣ ತಿದ್ದಲು ಪ್ರಾರಂಭ ಮಾಡಿದಳು. ಇವಳ ಸುಂದರ ರೂಪ ನೋಡಿ ಮಾತನಾಡಿಸಲು ಹಾತೊರೆಯುತ್ತಿದ್ದ ಹುಡುಗರು, “ಸುರೇಶ, It costed ಅನ್ನಬಾರದು.You should say it cost. It cost me ten rupees, See?” ಈ ರಿತಿಯ ನರ್ಸರೀ ಟೀಚರ್‍ ನಡವಳಿಕೆಯಿಂದ ಬೇಸತ್ತು ಕೊನೆಗೂ ದೂರವಾಗುತ್ತಿದ್ದರು. (ಮುಂದುವರಿಯುವುದು.....)