ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು-ಭಾಗ ೨

ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು-ಭಾಗ ೨

ಬರಹ

ಕೊಳಲುವಾದಕ ಮೀನುಗಾರ

ಸಂಗೀತದಲ್ಲಿ ನುರಿತ ಮೀನುಗಾರನೊಬ್ಬ ತನ್ನ ಕೊಳಲು ಮತ್ತು ಬಲೆಗಳೊಂದಿಗೆ ಕಡಲಕಿನಾರೆಗೆ ಹೋದ. ಕಡಲ ಚಾಚುಬಂಡೆಯೊಂದರ ಮೇಲೆ ನಿಂತು, ತನ್ನ ಕೊಳಲ ಮಾಧುರ್ಯಕ್ಕೆ ಮನಸೋತ ಕೆಲವಾದರೂ ಮೀನುಗಳು ಕುಣಿಯುತ್ತ ದಂಡೆಯ ಮೇಲಿಟ್ಟ ಬಲೆಗೆ ಬೀಳುತ್ತವೆಯೆಂಬ ನಂಬಿಕೆಯಿಂದ ಹಲವಾರು ರಾಗಗಳನ್ನು ನುಡಿಸಿದ. ತುಂಬ ಹೊತ್ತು ಕೊಳಲು ನುಡಿಸಿ ಬೇಸತ್ತ ಬೆಸ್ತ ತನ್ನ ಕೊಳಲನ್ನು ಪಕ್ಕಕ್ಕಿಟ್ಟು ಕಡಲಿಗೆ ಬಲೆ ಬೀಸಿದ. ತುಂಬ ಮೀನುಗಳು ಬಲೆಗೆ ಬಿದ್ದವು. ಬಂಡೆಯ ಮೇಲೆ ಬಲೆಯಲ್ಲಿ ಚಟಪಟನೆ ಚಡಪಡಿಸುವ ಮೀನುಗಳನ್ನು ನೋಡಿ ಹೇಳಿದ "ನೀವೆಂಥ ತಿಕ್ಕಲು ಜೀವಿಗಳು!! ನಾನು ಕೊಳಲು ನುಡಿಸಿದಾಗ ಕುಣಿಯದ ನೀವು ನಾನು ಕೊಳಲೂದುವುದನ್ನು ನಿಲ್ಲಿಸಿದಾಗ ಕುಣಿಯುತ್ತಿದ್ದೀರಿ."

ಜಿಂಕೆಯೂ ಅದರ ಮರಿಯೂ

ಒಮ್ಮೆ ಒಂದು ಜಿಂಕೆಯ ಮರಿ ಅದರ ತಾಯಿಯನ್ನು ಕೇಳಿತು "ಅಮ್ಮ ನೀನು ನಾಯಿಗಿಂತ ದೊಡ್ಡದಾಗಿದೀಯ. ನಾಯಿಗಿಂತ ಜೋರಾಗಿ ಓಡಬಲ್ಲೆ. ನಿನ್ನ ಕಾಪಿಗೆ ಕೊಂಬಿದೆ. ಇಷ್ಟೆಲ್ಲ ಇದ್ದೂ ನೀನು ಬೇಟೆಯ ನಾಯಿಗಳಿಗೆ ಹೆದರುವುದೇಕಮ್ಮ?" ಅಮ್ಮ ನಕ್ಕು ಹೇಳಿತು "ನೀನು ಹೇಳುವುದೆಲ್ಲ ನಿಜ ಅಂತ ಗೊತ್ತು ಮಗನೆ, ನೀನು ಹೇಳಿದ ಎಲ್ಲ ಪ್ರಯೋಜನಗಳೂ ನನಗಿವೆ. ಆದರೆ ಒಂದು ಬಿಡಿ ನಾಯಿಯ ಸೊಲ್ಲು ಕೇಳಿದರೂ ನನಗೆ ಮೂರ್ಛೆತಪ್ಪುವಂತಾಗಿ ಸಾಧ್ಯವಾದಷ್ಟು ಬೇಗ ಓಡಿಹೋಗುತ್ತೇನೆ."
ಯಾವ ವಾದಗಳೂ ಹೇಡಿಯಲ್ಲಿ ಧೈರ್ಯ ತುಂಬಲಾರವು

ಹುಡುಗನ ಮಿಡಿತೆ-ಬೇಟೆ

ಹುಡುಗನೊಬ್ಬ ಮಿಡಿತೆಗಳನ್ನು ಹಿಡಿಯುತ್ತಿದ್ದ. ಸುಮಾರು ಮಿಡಿತೆಗಳು ಅವನಿಗೆ ಸಿಕ್ಕಿಬಿದ್ದಿದ್ದವು. ಅಕಸ್ಮಾತ್ತಾಗಿ ಒಂದು ಚೇಳನ್ನು ಮಿಡಿತೆಯೆಂದು ತಪ್ಪಾಗಿ ತಿಳಿದು ಅದರತ್ತ ಕೈಚಾಚಿದಾಗ ಅದು ತನ್ನ ಕೊಂಡಿಯನ್ನು ತೋರಿಸಿ ಹೇಳಿತು "ಹುಡುಗ, ನೀನೇನಾದರೂ ನನ್ನನ್ನು ಮುಟ್ಟಿದ್ದರೆ ಬರೀ ನನ್ನನ್ನು ಮಾತ್ರವಲ್ಲ ನೀನು ಹಿಡಿದ ಈ ಉಳಿದ ಮಿಡಿತೆಗಳನ್ನೂ ಕಳೆದುಕೊಳ್ಳುತ್ತಿದ್ದೆ."

ಮನುಷ್ಯನೂ ಅವನ ಇಬ್ಬರು ಪ್ರೇಯಸಿಯರೂ

ಕೂದಲು ನೆರೆಯುತ್ತಿದ್ದ ನಡುವಯಸ್ಸಿನ ಗಂಡಸೊಬ್ಬ ಒಂದೇ ಬಾರಿಗೆ ಇಬ್ಬರು ಹೆಂಗಸರನ್ನು ಓಲೈಸುತ್ತಿದ್ದ. ಅವರಲ್ಲೊಬ್ಬಳು ಹರಯದವಳಾದರೆ ಮತ್ತೊಬ್ಬಳು ಪ್ರಾಯಸಂದವಳು. ವಯಸ್ಸಾದವಳು, ತನಗಿಂತ ಚಿಕ್ಕವನ ಓಲೈಕೆಗೆ ನಾಚಿ, ಅವನು ತನ್ನ ಬಳಿ ಬಂದಾಗಲೆಲ್ಲ ಅವನು ತನ್ನ ಕಪ್ಪು ಕೂದಲಲ್ಲಿ ಕೆಲವನ್ನು ಕಿತ್ತುಹಾಕಬೇಕೆಂಬ ಬೇಡಿಕೆ ಮುಂದಿಟ್ಟಳು. ಇದಕ್ಕೆ ಎದುರಾಗಿ ಚಿಕ್ಕಪ್ರಾಯದವಳು ಮುದುಕನ ಮಡದಿ ಎನಿಸಿಕೊಳ್ಳಲು ಬಯಸದೆ ಸಿಕ್ಕಸಿಕ್ಕ ನೆರೆಗೂದಲುಗಳನ್ನು ಕಿತ್ತುಹಾಕಲು ಆತುರ ತೋರಿಸುತ್ತಿದ್ದಳು. ಹೀಗಾಗಿ ಬಹಳ ಬೇಗ ಅವನ ಮಂಡೆಯ ಮೇಲೆ ಒಂದೂ ಕೂದಲು ಉಳಿಯಲಿಲ್ಲ.

ಎಲ್ಲರನ್ನೂ ಓಲೈಸಲು ಬಯಸುವವರು ಯಾರನ್ನೂ ಓಲೈಸಲಾರರು