ಸತ್ಯಕ್ಕೆ ಲಿಂಕ್

ಸತ್ಯಕ್ಕೆ ಲಿಂಕ್

ಆವತ್ತು ಸತ್ಯ ಡೋನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ನನ್ನ ಗೆಳೆಯ ಯಾವುದೋ ಲಿಂಕ್ ಕಳಿಸಿದ್ದ. ಬರೀ ಸುಳ್ಳನ್ನೇ ಹೇಳ್ಕೊಂಡು, ಸುಳ್ಳನ್ನೇ ಕೇಳ್ಕೊಂಡು ಅದರಲ್ಲೇ ಜೀವನ ಮಾಡ್ಕೊಂಡಿದ್ಯ. ಸ್ವಲ್ಪ ಇದನ್ನ ಡೌನಲೋಡ್ ಮಾಡಿಕೊಂಡು ನೋಡು. ಸುಳ್ಳಿನ್ನ ತಲೇ ಮೇಲೆ ಹೊಡೆದ ಹಾಗಿದೆ ಅಂದ. ಶಾಕ್ ಹೊಡೆದ ಹಾಗಾಯ್ತು. ಸುಳ್ಳಿನ ತಲೆ ಮೇಲೆ ಹೊಡೆದ ಹಾಗೆ ಸತ್ಯ ಯಾಕಿರಬೇಕು ಅಂತ ತೊದಲಿದೆ. ಅನೈತಿಕ ಪ್ರಶ್ನೆಗಳನ್ನ ಕೇಳಬೇಡ ಅಂತ ಗದರಿದ. ಸರಿ ಸರಿ ಅಂತ ಗೊಣಗಿಕೊಂಡೆ.

ಡೌನ್‌ಲೋಡ್ ಲಿಂಕ್ ನೋಡಿದರೆ ಯಾಕೋ ಡೌಟ್ ಬಂತು. ಈ ಡಬ್ಲ್ಯುಡಬ್ಲ್ಯುಡಬ್ಲ್ಯು ಇಂದ ಶುರು ಆಗೋ ಹೆಸರು ಇಲ್ಲದಿದ್ದರೆ ನನಗೆ ಸ್ವಲ್ಪ ಗುಮಾನಿ. ನಿಮ್ಮ ಬ್ಯಾಂಕಿನ ದುಡ್ಡು ದೋಚೋಕೆ ಬರೇ ನಂಬರುಗಳು ಇರೋ ಲಿಂಕ್ ಕಳಿಸ್ತಾರಲ್ಲ ಹಂಗೆ. ನನ್ನ ಬ್ಯಾಂಕ್ ಅಕೌಂಟು ಕಂಠಪೂರ್ತಿ ಸಾಲಾನೆ ಇರೋದರಿಂದ ಆ ಭಯ ಇಲ್ಲ ಅಂತಿಟ್ಕೊಳ್ಳಿ. ದುಡ್ಡು ದೋಚೋಕೆ ಬಂದೋರೇ ದುಡ್ಡು ಕಟ್ಟಬೇಕಾಗಿ ಬರುತ್ತಷ್ಟೆ. ಅದಕ್ಕೆ ನಿರಾಳ. ಆದರೂ ಬೇರೇ ಏನೇನೋ ಕದೀತಾರಂತಲ್ಲ. ಅದಕ್ಕೆ ಚಿಂತೆ.

ಲಿಂಕ್ ಚಿಟಕಿಸಿ ಎಷ್ಟೊತ್ತು ಕಾದರೂ ಏನೂ ಆಗಲಿಲ್ಲ. ಕಾದೆ. ಏನಾದರೂ ಆಗ್ತಿರಬೇಕು ಅಂತ ಕಂಪ್ಯೂಟರ್‌ ಡಬ್ಬಕ್ಕೆ ಕಿವಿ ಕೊಟ್ಟು ಕೇಳಿದೆ. ಗುಯ್ ಅಂತ ಸದ್ದು ಅಷ್ಟೆ. ನನ್ನ ಗೆಳೆಯನ ಮೇಲೆ ಡೌಟ್ ಬಂತು. ಅವನು ಯಾವುದೋ ಸಾಫ್ಟ್‌ವೇರ್‍ ಫ್ಯಾಕ್ಟರಿನಲ್ಲಿ ಕೆಲಸ ಮಾಡೋದು. ಇಂಥ ಸಾವಿರಾರು ಲಿಂಕ್ ತಯಾರು ಮಾಡ್ತಾರಂತೆ. ಎಲ್ಲಾನೂ ಸತ್ಯಕ್ಕೆ ಕೊಂಡಿ ಕೊಡತ್ತಂತೆ. ಹೀಗಂತ ಅವನು ಹೇಳಿದ್ದೆಲ್ಲಾ ನೆನಪಿಗೆ ಬಂತು. ಇನ್ನೊಂದು ಚೂರು ಕಾದು ಅವನಿಗೆ ಪೋನ್ ಮಾಡೋಣ ಅಂತ ಕಣ್ಣು ಪಿಳಿಪಿಳಿ ಬಿಡ್ತಾ ಕೂತೆ. ಇದು ಒಳ್ಳೇ ಘನವಾದ ಲಿಂಕೇ ಇರಬೇಕು ಅಂತ ಅನ್ನಿಸಿತು. ಆದರೂ ಎಷ್ಟೊತ್ತು ಅಂತ ಕಾಯೋದು ನೀವೇ ಹೇಳಿ. ಫೋನ್‌ ಕೈಗೆತ್ತಿಕೊಂಡೆ.

ಅಳ್ಳೆದೆ ಆಚಾರಿ ಕಣಯ್ಯ ನೀನು ಅಂತಾನೇ ಶುರುಮಾಡಿದ. ಏನು ಅನ್ಕೊಂಡಿದ್ಯ. ಕುಟುಕಿದ ತಕ್ಷಣ ಡೌನ್‌ಲೋಡ್ ಆಗಕ್ಕೆ ಇದೇನು ನಿನ್ನ ಸುಳ್ಳಿನ ಕಂತೆ ಅಂದುಕೊಂಡ್ಯ? ಸಹನೆ ಇಲ್ಲದೋರಿಗೆಲ್ಲ ನಮ್ಮ ಲಿಂಕ್ ವರ್ಕ್ ಆಗಲ್ಲ. ಅಷ್ಟು ಕಷ್ಟ ಆದರೆ ಬಿಟ್ಟುಬಿಡು. ನಿನ್ನ ಸುಳ್ಳುಗಳು ನಿನಗೆ ಇದ್ದೇ ಇದೆಯಲ್ಲ ಅಂತ ಫೋನ್ ಕುಕ್ಕಿದ. ನನಗೂ ರೇಗಿತು. ಹೌದು ನನಗೆ ಯಾಕೆ ಈ ಹುಚ್ಚು ಅಂದ್ಕೊಂಡು ಚಿಟಕಿಸಿದ ಕೂಡಲೆ ಚಕ್ ಚಕ್ ಅಂತ ನುಗ್ಗಿಬರೋ ಕೊಂಡಿಗಳಿಗೆ ಮರಳಿದೆ.

ಇದಾಗಿ ಎಷ್ಟೋ ದಿನ ಕಳೆದಿದೆ. ಆದರೂ ಅವನು ಹೇಳಿದ ಒಂದು ವಿಷಯ ನನ್ನ ತಲೇಲಿ ಕೊರೀತಾನೆ ಇದೆ. ಊಟ ಮಾಡದ ಮಕ್ಕಳನ್ನ ಅಮ್ಮ ಅಪ್ಪಂದಿರು, ಅಜ್ಜಿ ಅಜ್ಜಂದಿರು ಕಂಪ್ಯೂಟರ್‍ ಮುಂದೆ ಕೂರಿಸಿಕೋತಾರಂತೆ. ಇಂತಾ ಲಿಂಕ್‌ಗಳನ್ನೆಲ್ಲಾ ತೋರಿಸ್ತಾ ತುತ್ತು ಹಾಕಿದರೆ ಮಕ್ಕಳು ಬೇಗ ಊಟ ಮಾಡ್ತಾರಂತೆ. ಅಂಗಳಕ್ಕೆ ಹೋಗೋದೇ ಬೇಡವಂತೆ.

ನನಗೇನಾಗಿದೆ ಅಂದುಕೊಂಡೆ.

Rating
No votes yet

Comments