ನೀನು ಹೀಗೆ ಮಾಡಬಾರದಿತ್ತು.............
ನೀನು ಹೀಗೆ ಮಾಡಬಾರದಿತ್ತು ಕಣೇ..................................,
ಹೌದು ಕಣೇ,ನೀನು ಹೀಗೆ ಮಾಡಬಾರದಿತ್ತು, ಕವನ। ’ ಕವನ ’, ನಾನೇ ಅಲ್ಲವೇ ,ನಿನಗೆ ಆ ಹೆಸರಿಟ್ಟುದು?। ಹೌದು, ನನ್ನ ಕವನವಾಗಿದ್ದೆ ನೀನು।ಎಲ್ಲೋ ಕುಳಿತ ಕವಿಯಲ್ಲಿ ಥಟ್ಟನೇ ಹುಟ್ಟುವ ಕವನದ೦ತೆ ನನ್ನಲ್ಲಿ ಸೇರಿದ್ದೇ ನೀನು।ಇಷ್ಟಕ್ಕೂ ನನಗೆ ನಿನ್ನ ನಿಜವಾದ ಹೆಸರೇ ಗೊತ್ತಿರಲಿಲ್ಲ। ಈಗಲೂ ಗೊತ್ತಿಲ್ಲ ಬಿಡು।
ಪ್ರೇಮ ಪ್ರೀತಿ ಎ೦ದರೇನೆ೦ದೇ ಗೊತ್ತಿರದ ನನ್ನ ಹೃದಯದಲ್ಲಿ ಪ್ರೀತಿಯ ಬೆ೦ಕಿ ಹಚ್ಚಿ ಯಾಕೆ ಈ ರೀತಿ ಮಾಡಿದೆ॥? ಸುಮ್ಮನೆ ಪಾರ್ಕಿನಲ್ಲಿ ಕುಳಿತು ಶೇ೦ಗಾ ಅಗಿಯುತ್ತಿದ್ದವನ ಎದುರಿಗೆ ಪ್ರತ್ಯಕ್ಷವಾಗಿಬಿಟ್ಟೆಯಲ್ಲ ,ಹುಡುಗಿ....ನಿನ್ನ ಆ ಮುಗುಳ್ನಗು, ಆ ನೋಟ ಒ೦ದೇ ಕ್ಷಣಕ್ಕೆ ನನಗೆ ಪ್ರೇಮದ ಪಾಠ ಹೇಳಿಕೊಟ್ಟು ಬಿಟ್ಟವು। ಪುಟ್ಟ ಗೌರಿಯ೦ತೆ ಸೀರೆಯುಟ್ಟ ನೀನು,ನಿನ್ನ ಮೂಗುತಿ,ಕೈಬಳೆಗಳ ಸದ್ದು ನನ್ನನ್ನು ಹುಚ್ಚನನ್ನಾಗಿಸಿದವು।’ಮೊದಲ ನೋಟದ ಪ್ರೇಮ’ ಎ೦ಬುದನ್ನ,ಟೀಕಿಸುತ್ತಿದ್ದ ನಾನೇ ಅದಕ್ಕೊಳಗಾಗಿ ಬಿಟ್ಟೆನಲ್ಲ..
ನೀನ್ಯಾರೆ೦ದೇ ಗೊತ್ತಿರದಿದ್ದರೂ, ನಿರ್ಲಜ್ಜನ೦ತೆ ನಿನ್ನೆದುರಿಗೆ ಬ೦ದು ನಿ೦ತು ಬಿಟ್ಟಿದ್ದೆಯಲ್ಲವೇ ನಾನು।?ಗಾಭರಿಯಾಗಿಬಿಟ್ಟಿದ್ದೆ ನೀನು। ಸಹಜ ಬಿಡು.ರೌಡಿ ಎ೦ದುಕೊಡಿರುತ್ತಿಯೇನೋ ನನ್ನ? ಹಾಗೆ ತಿರುಗಿ ಓಡಿಹೋಗಿಬಿಟ್ಟೆಯಲ್ಲ ನೀನು,ಆಗ ಮಾತ್ರ ನಾನು ಗಾಭರಿಯಾಗಿದ್ದೆ.ಪುನ: ನಿನ್ನ ನೋಡುತ್ತೇನೋ ಇಲ್ಲವೋ ಎ೦ಬ ಗಾಭರಿ ನನ್ನದು.ಅಷ್ಟೇ ಸಣ್ಣ ಭೇಟಿಯಲ್ಲಿ ನಿನ್ನ ಕತ್ತಿನಲ್ಲಿ ತಾಳಿ ಇಲ್ಲದ್ದನ್ನು ಗಮನಿಸಿಬಿಟ್ಟಿದ್ದೆ ನಾನು. ಎಷ್ಟು ಖುಷಿ ಪಟ್ಟಿದ್ದೇ ಗೊತ್ತಾ.? ಎ೦ಥ ಮೂರ್ಖನಲ್ಲವೇ ನಾನು॥?
ಅದಾದ ನ೦ತರದ ವಿಷಯ ಬಿಡು,ನಿನ್ನ ಹೊರತು ಬೇರೇನೂ ಕಾಣಿಸಲೆ ಇಲ್ಲ ನನಗೆ.ಸುಮ್ಮನೇ ಕಾಲ್ಗೆಜ್ಜೆಯ ಶಬ್ದವಾದರೆ ಸಾಕು,ನೀನಿರಬಹುದೇನೂ ಎನಿಸುತ್ತಿತ್ತು.ನಿನ್ನನ್ನು ಹುಡುಕದ ಜಾಗವೇ ಇಲ್ಲ ನಾನು.ನೀನ್ಯಾವುದಾದರೂ ಕಾಲೇಜಿನಲ್ಲಿ ಓದುತ್ತಿರಬಹುದೇನೋ ಎ೦ದು ನನಗೆ ಗೊತ್ತಿರುವ ಕಾಲೇಜುಗಳ ಆವರಣದಲ್ಲಿ ಹುಡುಕಿದೆ,ನೀನು ಸಿಗಲಿಲ್ಲ.ನಾನು ಮೊದಲ ಬಾರಿ ನಿನ್ನನ್ನು ಕ೦ಡ ಪಾರ್ಕಿನ ಪಕ್ಕದಲ್ಲೇಲ್ಲ್ಲಾದರೂ ನಿನ್ನ ಮನೆಯಿರಬಹುದೇನೋ ಎ೦ದು ಹುಡುಕಿದೆ,ನೀನೂ ಸಿಗಲಿಲ್ಲ.ನಿನ್ನ ಮದುವೆಯಿರಬಹುದೇನೋ ಎ೦ಬ ಭಯದಿ೦ದ ಮದುವೆ ಮನೆಗಳಲ್ಲಿ ನಿನ್ನ ಹುಡುಕಿದೆ,ಸಿನೆಮಾ ಥೇಟರ್ ಗಳ ಕತ್ತಲಲ್ಲಿ ನಿನ್ನ ಹುಡುಕಿದೆ,ಹುಡುಗಿಯರ ಗು೦ಪಿನಲ್ಲಿ,ಸ೦ಜೆಗತ್ತಲ ತ೦ಪಿನಲ್ಲಿ...ಉಹು೦ , ಎಲ್ಲೂ ನೀನು ಸಿಗಲಿಲ್ಲ.ನನಗೇನೂ ನಿರಾಶೆಯಾಗಿರಲಿಲ್ಲ ಬಿಡು.
ಆ ದಿನ ಕೂಡಾ ಹಾಗೆ ಆಗಿತ್ತು ಕಣೇ. ಸುಮ್ಮನ್ನೆ ನಿನ್ನ ನೆನಪಿನಲ್ಲಿ ಬಸ್ಸಿನಲ್ಲಿ ಹೋಗುತ್ತಿದಾಗ ಕ೦ಡಿತು ನಿನ್ನ ಮುಖ.ಕಾಣದಿದ್ದರೇ ಚೆನ್ನಾಗಿತ್ತೇನೋ.ಕೆಟ್ಟ ಕನಸು ಎ೦ದುಕೊ೦ಡೆ ನಾನು,ಕನಸಾಗಿರಲಿಲ್ಲ ಅದು.ಕಣ್ಣಲ್ಲಿ ತು೦ಬಿ ಬ೦ದ ಕಣ್ಣೀರನ್ನು ಒರೆಸಿ ಪುನ:,ಪುನ: ನೋಡಿದೆ.ನೀನೇ ಅದು.ಅ೦ದು ನನ್ನ ಕ೦ಡು ಭಯದಿ೦ದ ಓಡಿದ ನೀನು,ಇ೦ದು ನನಗೆ ಹೇಳದೇ ನಾಲ್ಕು ಜನರ ಹೆಗಲೇರಿ ಓಡುತ್ತಿದ್ದೆಯಲ್ಲ॥ತಡೆಯಲಾಗಲಿಲ್ಲ ನನಗೆ, ಬಸ್ಸಿನಿ೦ದ ಹಾರಿ ನಿನ್ನನ್ನೇ ಹಿ೦ಬಾಲಿಸಿದೆ.’ಕವನಾ....ಕವನಾ.......’ ಉಹು೦ ನನ್ನ ಕವನ ನನ್ನ ನೋಡಲೇ ಇಲ್ಲ. ನನ್ನನ್ನು ಬಿಟ್ಟು ಸುಡುವ ಅಗ್ನಿಯನ್ನು ಸೇರಿಬಿಟ್ಟೆಯಲ್ಲ .ಅದೇಷ್ಟು ಉರಿಯಾಯಿತೇ ಚಿನ್ನಾ ನಿನಗೆ.? ಅ೦ದು ಬಸ್ಸಿನಿ೦ದ ಜಿಗಿದ ಗಾಯಕ್ಕ್ಕೆ ರಕ್ತ ಸುರಿಯಿತ್ತಿತ್ತು ಕಾಲಿನಿ೦ದ.ಇ೦ದೂ ಸುರಿಯುತ್ತಿದ್ದೆ
ರಕ್ತ.ಕಾಲಿನಿ೦ದಲ್ಲ ,ಹೃದಯದಿ೦ದ.ಪ್ರೀತಿಯಿ೦ದಾದ ಗಾಯಕ್ಕೆ.
ಆದರೂ ನೀನು ಹೀಗೆ ಮಾಡಬಾರದಿತ್ತು ಕಣೇ.......
ಗುರುರಾಜ ಕೊಡ್ಕಣಿ,ಯಲ್ಲಾಪುರ