ಜೋಕುಮಾರನನ್ನು ಮಾಡಿಸುವುದು ಜೋಕಲ್ಲ...........

ಜೋಕುಮಾರನನ್ನು ಮಾಡಿಸುವುದು ಜೋಕಲ್ಲ...........

ಬರಹ

ಬಿ ವಿ ಕಾರಂತರ ನಿರ್ದೇಶನದಲ್ಲಿ ಪ್ರಥಮ ಬಾರಿಗೆ “ಬೆನಕ” ತಂಡದಿಂದ “ಜೋಕುಮಾರಸ್ವಾಮಿ” ನಾಟಕ ಪ್ರದರ್ಶನಗೊಂಡಾಗ ನನ್ನ ಕನಸು ಮನಸ್ಸಿನಲ್ಲೂ ನಾನು ಅದೇ ನಾಟಕದಲ್ಲಿ, ಅದರಲ್ಲೂ ಬೆನಕತಂಡದೊಂದಿಗೆ ನಟಿಸುವೆ ಎಂದೂ ಎಣಿಸಿರಲಿಲ್ಲ. ಅದಿರಲಿ ಅದೇ ನಾಟಕವನ್ನು ಅಮೆರಿಕದಲ್ಲಿ ರಂಗದ ಮೇಲೆ ತರುತ್ತೇನೆ ಎನ್ನುವ ವಿಚಾರವಂತೂ ನನ್ನ ತಲೆಯಲ್ಲಿ ಯಾವ ಮೂಲೆಯಲ್ಲೂ ಇರಲಿಲ್ಲ. ೧೯೭೨ರಲ್ಲಿ ಪ್ರದರ್ಶನಗೊಂಡಾಗ ಇನ್ನೂ ಬೆಂಗಳೂರಿಗೆ ಹೊಸಬ. ನಾಟಕದ ಬಗ್ಗೆ, ಪ್ರೌಢಶಾಲೆಗಳ ನಾಟಕಗಳನ್ನು ಬಿಟ್ಟರೆ, ಅಷ್ಟಾಗಿ ತಿಳಿದೂ ಇರಲಿಲ್ಲ. ನಂತರ ೧೯೭೭ರಲ್ಲಿ ಬೆನಕ ತಂಡದೊಂದಿಗೆ ಪರಿಚಯವಾಗಿ ಇದೇ “ಜೋಕುಮಾರಸ್ವಾಮಿ”ಯ ನಾಟಕದ ೫೦ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಗೌಡರ ಆಳುಗಳಲ್ಲಿ ಒಬ್ಬನಾಗಿ, ರಂಗಸಜ್ಜಿಕೆಯಲ್ಲಿ ಭಾಗಿಯಾಗಿ ಈ ನಾಟಕದ ಮೇಲಿನ ಪ್ರಭಾವ ನನ್ನ ಮೇಲೆ ಬಹಳ ಇತ್ತು. ಅಮೆರಿಕೆಗೆ ಬಂದ ಮೇಲೆ ‘ಹಾಲಿವುಡ್ನಲ್ಲಿ ಯಮ’, ‘ಯಮನ ಕಾಲ್ ಸೆಂಟರ್’ ಎಂಬ ಎರಡು ಹಾಸ್ಯ ನಾಟಕಗಳು ಅಮೆರಿಕೆಯ ಕನ್ನಡಿಗರಲ್ಲಿ ಬಹಳ ಜನಪ್ರಿಯಗೊಂಡು ನನಗೆ ಅಮೆರಿಕೆಯ ಯಮ ಎಂದು ಕರೆಯಲ್ಪಟ್ಟಾಗಲಂತೂ ಬಹಳ ಖುಷಿಯನ್ನು ತಂದಿತ್ತು. ಇದೇ ಹುಮ್ಮಸ್ಸಿನಿಂದ ಅಮೆರಿಕದಲ್ಲಿ ‘ಜೋಕುಮಾರಸ್ವಾಮಿ’ ನಾಟಕವನ್ನು ಏಕೆ ರಂಗದಮೇಲೆ ತರಬಾರದು ಎಂದು ಒಂದು ಹುಳುವಾಗಿ ತಲೆ ಕೊರೆಯಲು ಶುರುವಾಗಿದ್ದು ೨೦೦೨ರಲ್ಲಿ. ಅಂದಿನಿಂದ ಮೂರು ಬಾರಿ ನಾಟಕ ಮಾಡಬೇಕೆಂಬ ಒಂದು ಕಡಿತದಿಂದ ಗುಂಪನ್ನು ಕಟ್ಟುವುದು ಯಾವುದಾದರೂ ಒಂದು ಕಾರಣಕ್ಕೆ ನಿಂತು ಹೋಗುವುದು. ಕಳೆದ ವರ್ಷ ಬೆನಕ ತಂಡವನ್ನೇ ಅಮೆರಿಕೆಗೆ ಕರೆಸುವ ಸಾಹಸಕ್ಕೆ ಕೈಹಾಕಿದೆ. ವಿಸಾ ತೊಂದರೆಯಿಂದ ಬರಲಿಕ್ಕಾಗದಿದ್ದು ಬೆನಕ ತಂಡಕ್ಕೆ ಹಾಗೂ ಕನ್ನಡ ಹವ್ಯಾಸಿ ನಾಟಕ ತಂಡಗಳಿಗೇ ಒಂದು ನಿರಾಸೆಯನ್ನು ತಂದಿತ್ತು. ಆ ಪ್ರಯತ್ನ ‘ಬೆನಕ’ ತಂಡದ ‘ಜೋಕುಮಾರಸ್ವಾಮಿ’ ಅಮೆರಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿತ್ತು ಎನ್ನುವ ಹೆಮ್ಮೆಯ ವಿಷಯವೊಂದೇ ಅಲ್ಲ, ಅದೊಂದು ಕನ್ನಡ ನಾಟಕರಂಗದಲ್ಲಿ ಒಂದು ಮೈಲಿಗಲ್ಲಾಗುತ್ತಿತ್ತು. ಏಕೆಂದರೆ ‘ಬೆನಕ’ ತಂಡ ಬಂದಿದ್ದರೆ ಅಮೆರಿಕೆಯ ಪ್ರಮುಖ ನಗರಗಳಲ್ಲಿ ೩೦ಕ್ಕೂ ಹೆಚ್ಚು ಪ್ರದರ್ಶನಗಳು ಒಪ್ಪಿಗೆಯಾಗಿದ್ದವು. ಅಂತಹ ಒಂದು ಚಾರಿತ್ರಿಕ ಮೈಲಿಗಲ್ಲನ್ನು ಸಾಧಿಸಬೇಕೆಂದು ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಅಂತಹ ಒಂದು ಅವಕಾಶ ಕೈತಪ್ಪಿಹೋಯಿತಲ್ಲಾ ಎಂದು ಬಹಳ ನಿರಾಸೆಯೂ ನನಗಾಗಿದೆ. ಹೀಗಿ ಕಳೆದ ೫ ವರ್ಷದಿಂದ ಮಾಡಲೇಬೇಕೆಂಬ ಛಲದಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ. ಅಂತಹ ಅವಕಾಶ ಸಿಕ್ಕಿದ್ದು ಈ ವರ್ಷ. ನಾಟಕದ ಬಗ್ಗೆ ನನಗೆ ಪೂರ್ಣ ಮಾಹಿತಿ ಇತ್ತು. ನನ್ನ ಬೆನಕ ತಂಡದ ಅನುಭವ ಹಾಗೂ ಅಮೆರಿಕನ್ನಡಿಗರಲ್ಲಿ ನನ್ನ ನಟನೆ ಹಾಗೂ ನಿರ್ದೇಶನದ ಬಗೆಗಿನ ಇದ್ದ ವಿಶ್ವಾಸ ನನಗೆ ಇನ್ನಷ್ಟು ಸ್ಥೈರ್ಯವನ್ನು ತುಂಬಿತ್ತು.

“ಜೋಕುಮಾರಸ್ವಾಮಿ” ನಾಟಕ ಮಾಡಬೇಕೆಂಬ ಹಂಬಲ ಮತ್ತೊಮ್ಮೆ ಚಿಗುರಿದ್ದು ಕರ್ನಾಟಕ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಶ್ರೀ.ನಾಗನಗೌಡರಿಂದ. ನವೆಂಬರ್ ತಿಂಗಳಲ್ಲಿ ಸಂಘದ ವತಿಯಿಂದ ನಡೆವ ಮಕ್ಕಳ ಕಾರ್ಯಕ್ರಮದ ವೇಳೆಯಲ್ಲಿ ೨೦೦೮ ನಡೆಸುವ ನಾಟಕೋತ್ಸವದ ಬಗ್ಗೆ ಪ್ರಸ್ತಾಪ ಬಂತು. ಅವರು ಹೇಳಿದ್ದು ಇಷ್ಟೆ “ಶಾಸ್ತ್ರಿಗಳೇ, ಈ ಬಾರಿಯ ನಾಟಕೋತ್ಸವದಲ್ಲಿ ನಿಮ್ಮ ನಾಟಕ ಪ್ರದರ್ಶನಗೊಳ್ಳಬೇಕು”. ಯಾಕೆಂದರೆ ಕಳೆದ ವರ್ಷ ನಾಟಕೋತ್ಸವಕ್ಕೆ ನನ್ನೊಬ್ಬನ ಪ್ರವೇಶ ಬಿಟ್ಟರೆ ಯಾರದ್ದೂ ಸಹ ಬಂದಿರಲಿಲ್ಲ. ಆದ್ದರಿಂದ ಕಳೆದ ವರ್ಷ ನಾಟಕೋತ್ಸವವನ್ನೇ ನಡೆಸಲಿಲ್ಲ. ನನಗೆ ಗೌಡರ ಮೇಲೆ ಭಾರಿ ಗೌರವ. ಅವರಿಗೂ ನನ್ನ ಮೇಲೆ ಅಷ್ಟೇ ವಿಶ್ವಾಸ. ಅವರ ನಿಸ್ವಾರ್ಥ ಕನ್ನಡ ಸೇವೆ ನಿಜವಾಗಲೂ ಪ್ರಶಂಸಾರ್ಹ. ಕನ್ನಡ ಸಂಘದ ಪದಾದಿಕಾರಿಗಳಲ್ಲಿ ಬಹಳಷ್ಟು ಜನ ತಮ್ಮ ಮಕ್ಕಳು ಚಿಕ್ಕವರಿದ್ದಾಗ ಬಹಳ ಹುರುಪಿನಿಂದ ಸೇವೆ ಮಾಡಿ ಮಕ್ಕಳು ದೊಡ್ಡವರಾದ ಮೇಲೆ ಕನ್ನಡ ಸಂಘದ ಕಡೆ ತಿರುಗಿಯೂ ಮಲಗದಿರುವ ಉದಾಹರಣೆಗಳಿವೆ. ಆದರೆ ಗೌಡರಿಗೆ ಮಕ್ಕಳೆಲ್ಲಾ ಮದುವೆಯಾಗಿ ಅಮೆರಿಕದ ಬೇರೇ ರಾಜ್ಯಗಳಲ್ಲಿ ಸುಖವಾಗಿದ್ದಾರೆ. ಮೊಮ್ಮಕ್ಕಳೂ ಸಹ ಲಾಸ್ ಎಂಜಲಿಸ್ನ ಹತ್ತಿರವಿಲ್ಲ. ಆಗರ್ಭ ಶ್ರೀಮಂತ. ಶ್ರೀಮಂತ ಹೃದಯ. ದಾನಕ್ಕೆ ಎತ್ತಿದ ಕೈ. ಅಂತಹ ವ್ಯಕ್ತಿಗೆ ವಂದನಾವಂಚಿತ ಕನ್ನಡ ಸಂಘದ ಅಧ್ಯಕ್ಷರ ಕೆಲಸ ಮಾಡಬೇಕೆಂದರೆ ಅವರ ನಿಸ್ವಾರ್ಥ ಸೇವೆಯೇ ಕಾರಣ. ಆದ್ದರಿಂದ ಕ್ಯಾಲಿಫ಼ೋರ್ನಿಯಾದ, ಕನ್ನಡ ಸೇವೆ ಮಾಡುತ್ತಿದ್ದೇವೆ ಎಂದು ಹೇಳುವ ಎಲ್ಲ ಹುರಿಯಾಳುಗಳಿಗಿಂತ ಇವರ ಮೇಲೆ ಅಪಾರ ಗೌರವ. ಇಂತಹ ಕನ್ನಡ ಆರಾಧಕನ ಅಧ್ಯಕ್ಷತೆಯಲ್ಲಿ ನಾನು ಒಂದು ಒಳ್ಳೆಯ ನಾಟಕವನ್ನು ಆಡಿಸಬೇಕೆಂಬ ಛಲ ಹುಟ್ಟಿಕೊಂಡಿತು.

ಅಮೆರಿಕನ್ನಡಿಗರ ದೃಷ್ಟಿಯಲ್ಲಿ ನಮ್ಮ ನಾಟಕಗಳ ಗುಣಮಟ್ಟದ ದರ್ಜೆ ಬಹಳ ಮೇಲ್ಮಟ್ಟದಲ್ಲೆ ಇದೆ. ಯಾವುದೇ ನಾಟಕ ಮಾಡಿದರೂ ಆ ಮಟ್ಟಕ್ಕೆ ಸಮನಾಗಿ ಅಥವಾ ಅದಕ್ಕಿಂತ ಮೇಲೇ ಇರುತ್ತದೆ ಎನ್ನುವ ನಿರೀಕ್ಷೆ. ಆ ನಿರೀಕ್ಷೆಗೆ ತಕ್ಕಂತೆ ನಮ್ಮ ನಾಟಕದ ಆಯ್ಕೆ, ಅಭಿನಯ ಹಾಗೂ ರಂಗದ ಮೇಲೆ ತರುವಿಕೆ ಇರದಿದ್ದರೆ ನಾಟಕ ಸೋಲುವುದಂತು ಖಂಡಿತ ಎಂಬುದು ನನಗೆ ಮನದಟ್ಟಾಗಿತ್ತು. ಮೊದಲ ನಿರ್ಧಾರ “ಜೋಕುಮಾರಸ್ವಾಮಿ” ನಾಟಕವನ್ನು ಮಾಡಬೇಕು. ಎರಡನೇ ನಿರ್ಧಾರ ನಾನೇ ಕಟ್ಟಿ ಬೆಳಸಿದ “ರಂಗಧ್ವನಿ” ನಾಟಕ ತಂಡದ ಹೆಸರಿನಲ್ಲಿ ಮಾಡುವುದು. “ರಂಗಧ್ವನಿ” ತಂಡ ಹುಟ್ಟಿದ ರೀತಿಯೇ ಒಂದು ಕಥೆ. ಒಮ್ಮೆ ನಮ್ಮ ಯಮನ ನಾಟಕಗಳು ಅಮೆರಿಕೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದು ಹಲವಾರು ನಗರಗಳಲ್ಲಿ ಪ್ರದರ್ಶನಕ್ಕೆ ಆಹ್ವಾನ ಬಂದಾಗ ನಮ್ಮ ಗುಂಪಿಗೆ ಒಂದು ಹೆಸರನ್ನು ಕೊಡಬೇಕೆಂಬ ನಿರ್ಧಾರ ಮಾಡಿ “ರಂಗಧ್ವನಿ” ಎಂಬ ಹೆಸರು ಹುಟ್ಟಿಕೊಂಡಿತು. ಆ ಹೆಸರಿನ ಅಡಿಯಲ್ಲಿ ಆಡಿದ ಮೊದಲ ನಾಟಕ ವಿ ಎಲ್ ಅಶ್ವಥ್ರವರ ಹಾಸ್ಯ ನಾಟಕ “ಕೃಷ್ಣ ಸಂಧಾನ”. ಈ ನಾಟಕ ನಮ್ಮ ತಂಡಕ್ಕೆ ಹೆಸರನ್ನು ಪ್ರಜ್ವಲಿಸಿತ್ತು. “ರಂಗಧ್ವನಿ”ಯಲ್ಲಿ ಇರುವ ನಾಟಕಾಸಕ್ತರೆಲ್ಲರೂ ನಿಜವಾದ ನಾಟಕಾಸಕ್ತರು. ಅಂದರೆ ನಾಟಕದಲ್ಲಿ ಪಾತ್ರವಿರಲಿ ಇಲ್ಲದಿರಲಿ ಒಳ್ಳೆಯ ನಾಟಕವನ್ನು ರಂಗದ ಮೇಲೆ ತರಬೇಕು, ನಾಟಕದ ಬಗ್ಗೆ ಕಲಿಯ ಬೇಕು ಎನ್ನುವ ಹಂಬಲ ಇಟ್ಟಿಕೊಂಡಿರುವ ರಂಗಕರ್ಮಿಗಳು. ಆದ್ದರಿಂದ ಅಂತಹ ರಂಗಕರ್ಮಿಗಳನ್ನು ಗುಂಪುಕಟ್ಟುವುದು ಅಮೆರಿಕೆಯಲ್ಲಿ ಒಂದು ದೊಡ್ಡಸವಾಲು. ನನ್ನಂತ ನಾಟಕದ ಹುಚ್ಚಿಟ್ಟಿಕೊಂಡಿರುವ ರಂಗಾಸಕ್ತನಿಗೆ ಇಂತಹ ನಾಟಕಾಸಕ್ತರು ಸಿಕ್ಕಿರುವುದು ನನ್ನ ಅದೃಷ್ಟ. ಆದರೆ ಒಂದೇ ಒಂದು ಅವಗುಣ. ತಂಡದ ಬಹುಪಾಲು ಸದಸ್ಯರು ಅರ್ಧಶತಕದ ಬಾಗಿಲಲ್ಲಿರುವವರು ಅಥವಾ ಅರ್ಧಶತಕ ದಾಟಿರುವವರು. ಒಬ್ಬಿಬ್ಬರನ್ನು ಬಿಟ್ಟರೆ ಎಲ್ಲರೂ ಈ ವಯಸ್ಸಿನ ಗುಂಪಿಗೆ ಸೇರಿರುವವರು. ಇಂತಹವರಲ್ಲಿ “ಜೋಕುಮಾರಸ್ವಾಮಿ” ನಾಟಕಕ್ಕೆ ಬೇಕಾಗುವ ಬಸಣ್ಯ, ಗುರ್ಯ, ಗೌಡ್ತಿ, ನಿಂಗಿಯಂತಹ ಯುವಕ ಯುವತಿಯರನ್ನು ಹೇಗೆ ಸೃಷ್ಟಿಸಲಿ. ಅಂತಹ ತಂಡದಲ್ಲಿ ಮೊದಲ ಸವಾಲು “ಜೋಕುಮಾರಸ್ವಾಮಿ”ಯಂತಹ ಕಥೆಯುಳ್ಳ, ಗಡಸು ಭಾಷೆಯ, ಉತ್ತರಕರ್ನಾಟಕದ ಭಾಷೆಯಲ್ಲಿ ನಾಟಕಮಾಡಲು ಸ್ನೇಹಿತರನ್ನು ಓಲೈಸುವುದು. ಈಗಾಗಲೇ ನನ್ನ ಮೊದಲ ಮೂರು ಪ್ರಯತ್ನ ಸೋಲುಂಡಾಗಿತ್ತು. ಆದರೆ ಈ ಭಾರಿ ಒಂದು ರಂಗಾಸಕ್ತಿಯ ಗುಂಪು ಒಂದು ರೂಪ ತೆಗೆದುಕೊಂಡು ಪ್ರಯತ್ನಿಸಿರುವುದರಿಂದ ನನ್ನ ಪ್ರಯತ್ನಕ್ಕೆ ಹೆಚ್ಚು ಬಲವನ್ನು ಕೊಟ್ಟಿತ್ತು. ನಾಟಕವನ್ನು ಮೊಟಕುಗೊಳಿಸಿ ಇರಸು ಮುರಸು ತರುವ ಸಂಭಾಷಣೆಗಳನ್ನು ಕಿತ್ತು ಹಾಕುತ್ತೇನೆ ಎಂಬ ಭರವಸೆಯ ಮೇಲೆ ಎಲ್ಲರೂ ಸ್ವಲ್ಪ ಅನುಮಾನದಲ್ಲೇ ಒಪ್ಪಿಕೊಂಡರು. ಎರಡನೇ ಸವಾಲು ಪಾತ್ರಕ್ಕೆ ಹೊಂದುವ ನಟರನ್ನು ಹುಡುಕುವುದು ಅಥವಾ ಪಾತ್ರಕ್ಕೆ ಹೊಂದುವ ರಂಗಾಸಕ್ತರಿಗೆ ನಟನೆ ಕಲಿಸಿ ಪಾತ್ರಕ್ಕೆ ಜೀವ ತುಂಬುವಂತೆ ಮಾಡಬೇಕು. ಕಳೆದ ಮೂರು, ನಾಲ್ಕು ವರ್ಷಗಳಿಂದ ನಮ್ಮ ಕನ್ನಡ ಸಂಘದಲ್ಲಿ ನಡೆಯುತ್ತಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಕಲಾವಿದರನ್ನು ಸೂಕ್ಷ್ಮವಾಗಿ ಅವರ ಅಭಿನಯನವನ್ನು ನೋಡುತ್ತಿದ್ದೆ. ನನ್ನ ತಲೆಯ ಹಿಂದೆ ನನ್ನ ಯಾವುದಾದರೂ ನಾಟಕ ಮಾಡಿದರೆ ಇವರನ್ನು ಉಪಯೋಗಿಸಬಹುದೇ ಎನ್ನುವುದೇ ನನ್ನ ತಲೆಯಲ್ಲಿ ಓಡುತ್ತಿತ್ತು. ಕಾರ್ಯಕ್ರಮದ ನಂತರ ರಂಗದ ಹಿಂದೆ ಹೋಗಿ ಅವರಿಗೆ ಉತ್ತೇಜನದ ಮಾತುಗಳನ್ನು ಆಡಿ, ಅವರಿಗೆ ನನ್ನ ನಾಟಕದಲ್ಲಿ ಅಭಿನಯದ ಆಸೆಯಿದೆಯೇ ಎಂದು ತಿಳಿದುಕೊಳ್ಳುತ್ತಿದ್ದೆ. ಹೀಗೆ ಕ್ರೂಡಿಕೃತ ಪಟ್ಟಿಯಲ್ಲಿ ಜೋಕುಮಾರಸ್ವಾಮಿಯ ನಾಟಕಕ್ಕೆ ಬೇಕಾಗುವ ಪಾತ್ರಗಳಿಗೆ ಹಲವಾರು ಹೆಸರುಗಳು ಮುಂದೆ ಬಂದವು. ನನ್ನ ನಿರ್ದೇಶನದಲ್ಲಿ ನಟಿಸಬೇಕಾದರೆ ಅವರುಗಳು ಬಹಳಷ್ಟು ಕಠಿಣ ನಿರ್ಧಾರಗಳಿಗೆ ಬದ್ಧರಾಗಿರಬೇಕೆಂದು ನನ್ನ ಹತ್ತಿರದ ಎಲ್ಲ ಸ್ನೇಹಿತರಿಗೆ ಗೊತ್ತಿತ್ತು. ಅಭ್ಯಾಸಕ್ಕೆ ತಪ್ಪದೇ ಬರುತ್ತೇನೆ, ನಿರ್ದೇಶಕನು ಕೊಟ್ಟ ಪಾತ್ರಕ್ಕೆ ಭದ್ಧನಾಗಿರುತ್ತೇನೆ, ರಂಗದ ಮೇಲೆ ಬಂದು ಮೆರೆಯಬೇಕೆಂಬ ದೃಷ್ಟಿ ಇರುವುದಿಲ್ಲ, ಅಭ್ಯಾಸದ ವೇಳೆಯಲ್ಲಿ ನಿರ್ದೇಶಕನ ಕೂಗಾಟವನ್ನು ರಂಗಾಸಕ್ತಿಯ ದೃಷ್ಟಿಯಿಂದ ನೋಡುತ್ತೇನೆ. ಹೀಗೆ ಹಲವಾರು ಷರತ್ತುಗಳಿಗೆ ಒಪ್ಪಿಬರಬೇಕು. ಅಮೆರಿಕೆಯಲ್ಲಿ, ಅದರ ಒಂದು ಭಾಗವಾದ ಕ್ಯಾಲಿಫ಼ೋರ್ನಿಯಾದಲ್ಲಿ, ಅದರಲ್ಲೂ ದಕ್ಷಿಣ ಕ್ಯಾಲಿಫ಼ೋರ್ನಿಯಾದಲ್ಲಿ ಇರುವ ಕೆಲವೇ ಸಾವಿರ ಕನ್ನಡಿಗರಲ್ಲಿ, ಅದರಲ್ಲೂ ಕನ್ನಡತನವನ್ನು ಇಟ್ಟಿಕೊಂಡಿರುವ ಕೆಲವೇ ನೂರಾರು ಕನ್ನಡಿಗರಲ್ಲಿ, ಅವರೊಳಗೆ ರಂಗಾಸಕ್ತಿಯುಳ್ಳ ಬೆರಳೆಣಿಕೆಯಷ್ಟು ಕನ್ನಡಿಗರಲ್ಲಿ ಇಷ್ಟೊಂದು ಷರತ್ತುಗಳಿಗೆ ಒಪ್ಪಿಕೊಂಡು “ಜೋಕುಮಾರಸ್ವಾಮಿ”ಗೆ ಬೇಕಾಗುವ ೩೦ಕ್ಕೂ ಹೆಚ್ಚು ವಿವಿಧ ರೀತಿಯ ಕಲಾವಿದರನ್ನು ಕೂಡಿಹಾಕುವುದು ನನ್ನ ಹಗಲುಗನಸಷ್ಟೆ. “ಜೋಕುಮಾರಸ್ವಾಮಿ” ನಾಟಕವನ್ನು ರಂಗದ ಮೇಲೆ ತರಬೇಕೆನ್ನುವ ಕನಸಿಗೆ ಮೊದಲು ಒಂದು ಜೀವವನ್ನು ಕೊಟ್ಟವರೆಂದರೆ ನನ್ನ ಧರ್ಮಪತ್ನಿ ವಿದ್ಯಾ ಹಾಗೂ ನನ್ನ ಮುದ್ದಿನ ಮಗಳು ವಿವನ್ಹಿ. ಕಲಾವಿದರ ಹೆಸರುಗಳ ಒಂದು ಪಟ್ಟಿಯೇ ತಯಾರಾಯಿತು. ನನ್ನ ಕನ್ನಡ ಸಂಘದ ಭಾಂಧವ್ಯ ಮತ್ತು ನನ್ನ ನಿಸ್ವಾರ್ಥ(ನಾನು ಅಂದುಕೊಂಡಿರುವಷ್ಟು ಮಾತ್ರಕ್ಕೆ) ಕನ್ನಡ ಸೇವೆ ಬಹಳಷ್ಟು ಸ್ನೇಹಿತರನ್ನೂ ವೈರಿಗಳನ್ನೂ ಸೃಷ್ಟಿಸಿದೆ. ಆ ದೃಷ್ಟಿಯಿಂದ ಕಲಾವಿದರ ಪಟ್ಟಿಯಲ್ಲಿ ಸ್ನೇಹಿತರೆನಿಸಿದ ಕಲಾವಿದರನ್ನೇ ಮೊದಲು ನಾನು ಮತ್ತು ವಿದ್ಯಾ ಗುರುತಿಸಿದೆವು. ನನಗೆ ಅಷ್ಟು ಹತ್ತಿರಿಂದ ಗೊತ್ತಿರದ (ಹೆಲ್ಲೋ ಹೆಲ್ಲೋ ಸ್ನೇಹಿತರು..) ಕಲಾವಿದರ ಬಗ್ಗೆ ತಿಳಿದುಕೊಳ್ಳಲು ಇನ್ನೊಬ್ಬ “ರಂಗಧ್ವನಿ” ಕಲಾವಿದ ಅರುಣ್ ಮಾಧವನ ಸಹಾಯಬೇಕಾಯಿತು. ಅವನ ಸಹಾಯದಿಂದ ಕೆಲವು ಕಲಾವಿದರ ಮತ್ತಷ್ಟು ವಿಷಯಗಳು ತಿಳಿದವು. ಆ ಕಲಾವಿದರ ನಟನಾ ಸಾಮರ್ಥ್ಯ, ನಡುವಳಿಕೆ, ನಮ್ಮ ನಾಟಕತಂಡದ ಬಗೆಗಿನ ನಿಲುವು, ಹೀಗೆ ಹಲವಾರು ವಿಷಯಗಳನ್ನು ಅಳೆತೆಗೋಲಾಗಿ ಭಾವೀ ಕಲಾವಿದರ ಪಟ್ಟಿ ತಯಾರು ಮಾಡಿ ಒಮ್ಮೆ ಎಲ್ಲರಲ್ಲೂ ಫ಼ೋನ್ ಮಾಡಿ ಮಾತನಾಡಿ, ಒಂದು ಸಭೆಯನ್ನು ಕರೆಯಲು ನಿರ್ಧಾರ ಮಾಡಿದೆ. ಮೊದಲ ಕರೆ ಹೋಗಿದ್ದು ಈ ಮೈಲ್ ಮೂಲಕ ನವೆಂಬರ್ ೨೦, ೨೦೦೭ರಂದು. ಗೌಡನ ಪಾತ್ರಕ್ಕೆ ನಾನೇ ಸರಿಯಾದವ ಎಂದು ತಿಳಿದು ಆ ಪಾತ್ರಕ್ಕೆ ನನ್ನನ್ನು ಹೆಸರಿಸಿಕೊಂಡಿದ್ದೆ. ನನ್ನ ಈ-ಪತ್ರದಲ್ಲಿ ಪಾತ್ರಗಳ ಸಂಕ್ಷಿಪ್ತ ಪರಿಚಯವನ್ನೂ ಮಾಡಿಕೊಟ್ಟಿದ್ದೆ. ನನ್ನ ಕರೆಗೆ ಓಗೊಟ್ಟು ಬಂದವರಿಗೆಲ್ಲಾ ನಮ್ಮ ಮನೆಯಲ್ಲಿ ಬೆನಕ ತಂಡದ ಇದೇ ನಾಟಕದ ಡಿವಿಡಿ ಹಾಕಿ ನಾಟಕ ತೋರಿಸಿದೆ. ಕೆಲವರು ಈ ಮಟ್ಟದಲ್ಲಿ ನಾಟಕ ನಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಹೋದರು. ಕೆಲವರು ಈ ಪಾತ್ರವನ್ನೇ ಕೊಟ್ಟರೆ ಮಾಡುತ್ತೇನೆ ಎಂದು ತಿಳಿಸಿ ಹೋದರು. ಕಡೆಗೆ ಉಳಿದವರು ಮತ್ತೆ ಅದೇ ಸೀನ, ವೆಂಕ. ಹೇಗೆ ಮಾಡುವುದು. ವಿದ್ಯಾ ಮತ್ತು ವಿವಾ ಮತ್ತೆ ನನ್ನ ಸಹಾಯಕ್ಕೆ ಬಂದರು. “ತಾವು ಎರಡು ಪಾತ್ರಗಳನ್ನು ಮಾಡುತ್ತೇವೆ. ಇನ್ನು ಮಿಕ್ಕ ಪಾತ್ರಗಳಿಗೆ ಹುಡುಕೋಣ. ಬೇಕಾದರೆ ಕೆಲವು ಪಾತ್ರಗಳನ್ನು ಕಿತ್ತಿ ಹಾಕೋಣ” ಎಂದು ನನ್ನ ಬೆನ್ನಿಗೆ ಬೆನ್ನು ಕೊಟ್ಟು ನಿಂತರು. ಅದರ ಪ್ರಕಾರ, ವಿದ್ಯಾಳಿಗೆ ಗೌಡತಿ ಮತ್ತು ವಿವಾಳಿಗೆ ಶಿವಿ ಪಾತ್ರಗಳನ್ನು ಹಂಚುವ ಯೋಚನೆಯನ್ನು ಹಾಕಿಕೊಂಡು, ಗುರ್ಯ ಮತ್ತು ನಿಂಗಿ ಪಾತ್ರಗಳಿಗೆ ಇಬ್ಬರನ್ನು ಗುರುತಿಸಿದೆ. ಅವರ ಅಭಿನಯವನ್ನು ಎಲ್ಲೂ ನೋಡಿಲ್ಲ, ಏಕೆಂದರೆ ಎಲ್ಲೂ ಮಾಡಿಲ್ಲ. ಕನ್ನಡ ಸಂಘದ ಒಂದು ಕಾರ್ಯಕ್ರಮದಲ್ಲಿ ಒಂದು ಕನ್ನಡ ಹಾಡಿನ ನೃತ್ಯಕ್ಕೆ ಹೆಜ್ಜೆ ಹಾಕಿದ್ದ ಈ ದಂಪತಿಗಳು ನನ್ನ ನಾಟಕದಲ್ಲಿ ಮಾಡುತ್ತೀರ ಎಂದಾಗ ಅವರಿಗೆ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಅವರಿಗೆ ನಂಬಲೇ ಅಸಾಧ್ಯವಾದ ಮಾತಾಗಿತ್ತು. ಅವರಿಬ್ಬರ ಸರಳ ಸತ್ಯದ ಹೃದಯ ಬಿಚ್ಚಿ ಆಡಿದ ಮಾತುಗಳು ನನಗೆ ಹಿಡಿಸಿದವು. ಅವರಾಡಿದ ಮಾತುಗಳು “ಸಾರ್ ನಮ್ಮಿಬ್ಬರಿಗೂ ಯಾವುದೇ ನಾಟಕದಲ್ಲಿ ಅಭಿನಯಿಸಿದ ಅನುಭವ ಇಲ್ಲ. ಆದರೆ ನಮಗೆ ನಾಟಕದಲ್ಲಿ ಮಾಡಬೇಕು ಅಂತ ಆಸೆ. ನೀವು ಹ್ಯಾಗೆ ಹೇಳಿಕೊಡ್ತೀರೋ ಆ ರೀತಿ ಮಾಡ್ತೀವಿ. ಆದರೆ ನಾವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ”. ಈ ಮಾತುಗಳನ್ನು ಕೇಳಿದಾಗಲೇ ನನ್ನ ಗುರ್ಯಾ ಮತ್ತು ನಿಂಗಿಯ ಶೋಧನೆಯಾಗಿತ್ತು. ಇನ್ನು ಉಳಿದಿರುವ ಬಸಣ್ಯನ ಪಾತ್ರಕ್ಕೆ ಹಲವಾರು ಹೆಸರುಗಳು ಹೊರಬಂದವು. ಅದರಲ್ಲಿ ಶ್ರೀನಿವಾಸ್ ಹೆಸರು ಬಂದಾಗ, ಅವರ ಹೆಸರೂ ನನ್ನ ಪಟ್ಟಿಯಲ್ಲಿ ಇತ್ತು. ನಾನು ಒಮ್ಮೆ ಅವರ ಒಂದು ಕನ್ನಡ ಸಂಘದ ಪ್ರಹಸನದಲ್ಲಿ ಭಾಗವಹಿಸಿದ್ದನ್ನು ನೋಡಿ ಆಗಲೇ ಹೇಳಿದ್ದೆ. ನೀವು ಚೆನ್ನಾಗಿ ಅಭಿನಯಿಸುವ ಸಾಮರ್ಥ್ಯವಿದೆ. ನಮ್ಮ ಯಾವುದಾದರೂ ನಾಟಕ ಮಾಡಲು ಕರೆಯುತ್ತೇನೆ, ಬನ್ನಿ ಎಂದು ಹೇಳಿದ್ದೆ. ಅವರ ಹೆಸರು ಬಂದಾಗ ಎರಡು ಮಾತನಾಡದೇ ಬಸಣ್ಯನ ಪಾತ್ರಕ್ಕೆ ನನ್ನ ಮನಸ್ಸಿನಲ್ಲಿ ಅವರಿಗೆ ಪಟ್ಟಕಟ್ಟಾಗಿತ್ತು. ಆಳುಗಳು ಪಾತ್ರಗಳ ಹೊಣೆಯನ್ನು ಅರುಣ್ ಮಾಧವ್ ತಮ್ಮ ತಲೆಯಲ್ಲಿ ಮೇಲೆ ಹೊತ್ತಿಕೊಂಡ. ನಮ್ಮ ಗುಂಪಿನಲ್ಲಿ ಹರಿಗೆ ನಾಟಕ ಮಾಡಲು ಇರುವ ಉತ್ಸಾಹ ಯಾರಲ್ಲೂ ಇಲ್ಲ. ಆದರೆ ಅವರಿಗೆ ಕನ್ನಡ ಬಾಯಿಂದ ಹೊರಳುವುದೇ ನಮ್ಮ ತಮಿಳುನಾಡಿನ ಅಂಚಿನಿಂದ. ಅವರಿಗೆ ಧಾರವಾಡದ ಭಾಷೆಯನ್ನು ಕಲಿಸಿ, ಅವರ ನಾಲಿಗೆಯನ್ನು ತಿರಿಚಿಸುವ ಕೆಲಸ ಅಸಾಧ್ಯದ ಕೆಲಸ. ಆದರೆ ಅವರು ಸಂಗೀತದ ವಿಷಯದಲ್ಲಿ ನಮಗೊಂದು ಆಸ್ಥಿ. ಹೀಗೆ ಅವರನ್ನು ನಮ್ಮ ಮೇಳಕ್ಕೆ ತಾಳವಾದ್ಯದ ಹೊಣೆಯನ್ನು ಕೊಟ್ಟೆ. ಇನ್ನು ಒಂದು ಹೆಣ್ಣು ಧ್ವನಿ ಬೇಕಾಗಿತ್ತು. ವೀಣಾ ಅನಂತ್, ಅವರ ತಾಯಿಯವರು ಸಂಯೋಜಿಸಿದ ಸಂಪ್ರದಾಯದ ಹಾಡಿನ ಸಿಡಿಯಲ್ಲಿ ಅವರ ಧ್ವನಿ ಕೇಳಿದ್ದೆ. ನನಗೆ ಜಾನಪದ ಹಿನ್ನೆಲೆಯ ಗಾಯಕಿ ಬೇಕಾಗಿತ್ತು. ಅವರು ಮನಸಾರೆ ಒಪ್ಪಿಕೊಂಡು ಅದರ ಮುಂದಾಳತ್ವವನ್ನು ವಹಿಸಿದರು.

ನಾಟಕ ಬಿ ವಿ ಕಾರಂತರ ವಿನ್ಯಾಸದಲ್ಲಿ ಹಾಗೂ ಡಾ||ಚಂದ್ರಶೇಖರ ಕಂಬಾರರ ಸಂಗೀತದ ಶೈಲಿಯಲ್ಲೇ ಮಾಡಿಸಬೇಕೆಂಬ ನಿರ್ಧಾರ ಮಾಡಿದ್ದೆ. ಅದಕ್ಕೆ ಕಾರಣಗಳು ಹಲವು. ಆದರೆ ಮುಖ್ಯವಾಗಿ ಆ ವಿನ್ಯಾಸ ಬಿಟ್ಟು ಬೇರೆ ರೀತಿ ಮಾಡಿದವರನ್ನು ನೋಡಿದ್ದೆ, ಆದರೆ ಕಾರಂತರ ವಿನ್ಯಾಸ ಬಿಟ್ಟೂ ಬೇರೇ ಯಾವುದು ಪೂರಕವಾಗಿ ಕಾಣಲಿಲ್ಲ. ವಿನ್ಯಾಸದ ಸವಾಲುಗಳು ಹಲವು ಇದ್ದವು. ಆದರೂ ಎಷ್ಟೇ ಕಷ್ಟವಾದರೂ ಅದೇ ವಿನ್ಯಾಸಕ್ಕೆ ನನ್ನ ಒಲವು. ಒಮ್ಮೆ ಕಂಬಾರರು ಅಮೆರಿಕೆಯ ನಮ್ಮ ಮನೆಗೆ ಭೇಟಿ ನೀಡಿದ್ದಾಗ, ಅವರ ಆಶೀರ್ವಾದ ಆಗಲೆ ಪಡೆದು ಅವರ ಹಸ್ತಾಕ್ಷರವನ್ನು ನಾಟಕದ ಪುಸ್ತಕದ ಮೇಲೆ ಹಾಕಿಸಿಕೊಂಡಿದ್ದೆ. ಅವರ ಮನೆಗೆ ಫೋನ್ ಮಾಡಿ ಅವರೊಂದಿಗೆ ಮಾತನಾಡಿ ಅವರ ಒಪ್ಪಿಗೆ ಪಡೆದು, ನನ್ನ ಅಲ್ಪ ಕಾಣಿಕೆಯನ್ನೂ ಅವರಿಗೆ ತಲಪಿಸಿದೆ. ನಂತರ ಬಿ ವಿ ಕಾರಂತರು ನಮ್ಮನ್ನು ಅಗಲಿ ಬಹಳ ವರ್ಷಗಳೇ ಆಗಿವೆ. ಮತ್ತೆ ಪ್ರೇಮಕಾರಂತರೂ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಇನ್ನು ಯಾರಿಗೆ ಕೇಳುವುದು ಎಂದೇ ಗೊತ್ತಾಗಲಿಲ್ಲ. ನನ್ನ ಸ್ನೇಹಿತ ಖ್ಯಾತ ರಂಗನಟ, ನಿರ್ದೇಶಕ ನಾಗಾಭರಣನಿಗೆ ಫೋನಾಯಿಸಿದೆ. “ಅಪ್ಪ ಮೇಷ್ಟ್ರು ಇಲ್ಲ, ಮೇಡಂ ಸಹ ಇಲ್ಲ. ಇನ್ನು ಆ ನಾಟಕ ಬಿ ವಿ ಕಾರಂತರ ಶೈಲಿಯಲ್ಲಿ ಆಡಿಸಲಿಕ್ಕೆ ನಿನ್ನ ಆಶೀರ್ವಾದವೇ ಮುಖ್ಯ” ಎಂದು ಅವನ ಆಶೀರ್ವಾದವನ್ನು ತೆಗೆದುಕೊಂಡು ಒಂದು ಮಹೂರ್ತದದ ದಿನವನ್ನು ಹುಡುಕಿ ಎಲ್ಲರಿಗೂ ಈ-ಪತ್ರ ಕಳುಹಿಸಿದೆ. ಮೊದಲ ಅಭ್ಯಾಸಕ್ಕೆ ಮೀಸಲಿಟ್ಟ ದಿನ ಡಿ. ೧೫, ೨೦೦೭ (ಶನಿವಾರ) ಸಂಜೆ ನಮ್ಮ ಮನೆಯಲ್ಲಿ. ಅದಕ್ಕೆ ಇನ್ನು ತಯಾರಿಕೆಲಸ. ನಾಟಕದ ಪ್ರತಿಯ ಫ಼ೋಟೋಕಾಪಿ, ಪಾತ್ರಗಳಿಗೆ ಅವರವರ ಭಾಗವನ್ನು ಮಾತ್ರ ಜೋಡಿಸಿ ತೆಗೆದಿಟ್ಟೆ. ಹಾಡಿನ ಸಿಡಿಗಳ ಪ್ರತಿಗಳನ್ನು ಮಾಡಿ ಇಟ್ಟುಕೊಂಡೆ.

ಡಿ.೧೫, ನಮ್ಮ ಮನೆಯಲ್ಲಿ ಕೆಲವರು ಬಂದರು. ಕೆಲವರು ತಡವಾಗಿ ಬಂದರು, ಕೆಲವರು ‘ಸ್ಕ್ರಿಪ್ಟ್ ಕಳಿಸಿ ಸಾರ್, ನಾವು ಅದನ್ನೆಲ್ಲಾ ಚೆನ್ನಾಗಿ ಗಟ್ ಮಾಡ್ಕೊಂಡ್ ಬರ್ತೀವಿ..” ಅಂತ ಹೇಳಿದರು. ಬಂದವರಿಗಾಗಲಿ, ಮಾಡತೀನಿ ಅಂತ ಒಪ್ಪಿಕೊಂಡವರಿಗಾದರೂ ನಾಟಕದ ತೀಕ್ಷ್ಣತೆಯಾಗಲಿ, ಅದರ ಕಠಿಣತ್ವವಾಗಲಿ ಅರಿವೆಯೇ ಇರಲಿಲ್ಲ. ಮೊದಲು ಮೇಳದವರಿಗೆ ಹಾಡಿತೋರಿಸಿ ಸಿಡಿ ಹಾಕಿದಾಗ ಭಾಷೆಯಾಗಲೀ, ಹಾಡಿನ ಧಾಟಿಯಾಗಲಿ ಒಂದು ಚೂರು ಅರ್ಥವಾಗಲಿಲ್ಲ. ಕೆಲವರು ಬಹಳ ಅಭ್ಯಾಸ ಬೇಕು, ಇರುವ ಇನ್ನು ೭ ವಾರಗಳಲ್ಲಿ, ಅಂದರೆ ಅರ್ಥಾತ್ ೭ ಅಭ್ಯಾಸಗಳಲ್ಲಿ ಸಾಧ್ಯವೇ ಇಲ್ಲ ಎಂದರು. (ಇಲ್ಲಿ ಬೆಂಗಳೂರಿನ ರೀತಿ ಪ್ರತಿದಿನ ಅಭ್ಯಾಸ ನಡೆಯಲು ಸಾಧ್ಯವಿಲ್ಲ. ವಾರಾಂತ್ಯದಲ್ಲಿ ಮಾತ್ರ ಸಾಧ್ಯ). ರವಿ ಶೇಶಾದ್ರಿ ಇನ್ನೊಬ್ಬ ರಂಗ ನಟ. ಅವರು ಕಲ್ಕತ್ತಾದಲ್ಲಿ ಬೆಳೆದು ವಿದ್ಯಾಭ್ಯಾಸ ಮುಗಿಸಿ, ಕೊಲ್ಲಿ ರಾಷ್ಟ್ರಗಳಲ್ಲಿ ವೃತ್ತಿ ಜೀವನ ಮುಗಿಸಿ, ಅಮೆರಿಕೆಯಲ್ಲಿ ಬಂದು ನೆಲಸಿದ ಕನ್ನಡಾಭಿಮಾನಿ. ಕನ್ನಡ ಬರೆಯಲು, ಓದಲು ಬರುವುದಿಲ್ಲ. ಕನ್ನಡವನ್ನೆಲ್ಲಾ ಹಿಂದಿ ಬೆಂಗಾಳಿಯಲ್ಲಿ ಬರೆದು ಓದಿ ಕನ್ನಡ ಮಾತನಾಡಲು ಕಲಿತವ. ಕರ್ನಾಟಕದ ನೀರು ಬೇಸಿಗೆ ರಜೆಯಲ್ಲಿ ಮಾತ್ರ ಬೀಳುತ್ತಿತ್ತು ಅದೂ ಹುಡುಗನಾಗಿದ್ದಾಗ. ಆದರೆ ೫೦+ ವರ್ಷದ ಈ ಉತ್ಸಾಹಿಗೆ ಕನ್ನಡ ಎಂದರೆ ಪ್ರಾಣ. ಅದರಲ್ಲೂ ನಾಟಕವೆಂದರೆ ಎಲ್ಲೂ ಇಲ್ಲದ ಉತ್ಸಾಹ. ಯಾವುದಕ್ಕೂ ಆಗುವುದಿಲ್ಲ ಅನ್ನುವ ಮಾತೇ ಇಲ್ಲ. “ಚಲೋ ಸಾಬ್ ಮಾಡೋಣ..” ಅನ್ನುವ ಮಾತೇ. ಅಲ್ಪ ಸ್ವಲ್ಪ ಹಾಡುಗಾರ ಕೂಡ. ಇವರಿಗೆ ಹಿಮ್ಮೇಳ್ಯನ ಪಾತ್ರ ಕೊಟ್ಟು ಮೇಳದಲ್ಲಿ ಹಾಡಲು ಹೇಳಿದೆ. ಮಾರುತಿ ಪ್ರಸಾದ್ರವರಿಗೆ ಸೂತ್ರಧಾರನ ಪಾತ್ರದಲ್ಲಿ ಹಾಕಿದೆ. ಆದರೆ ಪ್ರಸಾದ್ ಬೆಂಗಳೂರಿಗೆ ರಜೆಯಲ್ಲಿ ಹೋಗಬೇಕಾದ್ದರಿಂದ ಅವರ ಸ್ಥಳಕ್ಕೆ ಇನ್ನೊಬ್ಬರನ್ನು ಹುಡುಕುವ ಕಾರ್ಯ ಬಂತು. ಅಂತೂ ಮೊದಲ ದಿನದ ಅಭ್ಯಾಸದ ನಂತರ ನಾಟಕವನ್ನು ಒಂದು ಘಂಟೆಗೆ ಮೊಟಕುಗೊಳಿಸುವ ಕಾರ್ಯವನ್ನು ಮಾಡೋಣ ಎಂದುಕೊಂಡಿದ್ದ ನನಗೆ ಪೂರ್ಣ ನಾಟಕವನ್ನೇ ಮೊಟಕುಗೊಳಿಸುವ ಯೋಚನೆ ಬಂತು. ಹಾಡಿನವರಾಗಲಿ, ಪಾತ್ರವರ್ಗದವರಾಗಲಿ ನನಗೆ ಯಾವ ಭರವಸೆಯನ್ನು ಮೂಡಿಸಲಿಲ್ಲ. ಎರಡು ದಿನದ ನಂತರ ಇನ್ನೊಬ್ಬರು ಸ್ಕ್ರಿಪ್ಟ್ ಪೋಸ್ಟ್ನಲ್ಲಿ ವಾಪಸ್ ಕಳುಹಿಸಿ, ನಾಟಕದಲ್ಲಿ ಮಾಡಲಿಕ್ಕಾಗದಿರುವ ಅಸಹಾಯಕೆಯನ್ನು ತೋರ್ಪಡಿಸಿದ್ದರು. ಆ ನಂತರ ತಿಳಿಯಿತು ಅವರು ಯಾವುದೋ ಒಂದು ಪಾತ್ರವನ್ನು ದೃಷ್ಟಿಯಲ್ಲಿ ಇಟ್ಟಿಕೊಂಡು ಬಂದಿದ್ದರು, ಅವರಿಗೆ ಅದು ಸಿಗದಿದ್ದಾಗ ತಾವು ನಾಟಕದಲ್ಲಿ ಮಾಡಲು ಸಾಧ್ಯವಿಲ್ಲವೆಂದು ತಿಳಿಸದ್ದರು ಎಂದು. ಹೀಗೆ ನೂರೆಂಟು ವಿಘ್ನಗಳ ನಡುವೆ ನಾಟಕದ ಭವಿಷ್ಯ ಇನ್ನೂ ತೂಗುಯ್ಯಾಲೆಯಲ್ಲೇ ಇತ್ತು.
ಅಂತೂ ಜೆಂಜಾಟಗಳ ನಡುವೆ ಈ ನಾಟಕವನ್ನು ಮಾಡಿಸಲೇಬೇಕೆಂಬ ಛಲಕ್ಕೆ ಬೆಂಬಲಕೊಟ್ಟವರು ರವಿ, ವಾಣಿ, ವೀಣಾ, ನನ್ನ ಪತ್ನಿ ವಿದ್ಯಾ ಮತ್ತು ನನ್ನ ಮುದ್ದಿನ ಮಗಳು ವಿವಹ್ನಿ(ವಿವಾ). ವಿವಾ ಎಲ್ಲರಿಗೂ ನೃತ್ಯವನ್ನು ಹೇಳಿಕೊಡುವ ಜವಾಬ್ಧಾರಿಯನ್ನು ಹೊತ್ತಿಕೊಂಡಳು. ನಮ್ಮ ಗುಂಪಿನ ಸದಸ್ಯರೆಲ್ಲರೂ ಇರುವುದು ಸುಮಾರು ೭೦-೮೦ ಮೈಲಿಗಳ ದೂರದಲ್ಲಿ. ಅದಕ್ಕಾಗಿ ಒಂದು ಯೋಜನೆ ಹಾಕಿ ಪ್ರತಿ ಭಾನುವಾರ ನಮ್ಮೆ ಮನೆಯ ಹತ್ತಿರ ಅಂದರೆ ಲಾಸ್ ಏಂಜಲಿಸ್ಗೆ ಪೂರ್ವಭಾಗದ ಪ್ರದೇಶದ ನಟರಿಗೆ ಅಭ್ಯಾಸ. ಪ್ರತಿ ಶನಿವಾರ ವ್ಯಾಲಿಪ್ರದೇಶ(ಲಾಸ್ ಏಂಜಲಿಸ್ಗೆ ಉತ್ತರ ಭಾಗ)ದಲ್ಲಿ ಆಭ್ಯಾಸ ಮಾಡಲು ನಿರ್ಧರಿಸಿದೆವು. ಈ ಮೂರು ವಾರ ನಾನು ಮಾತ್ರ ಎರಡೂ ಕಡೆಗೆ ಹೋಗುತ್ತಿದ್ದೆ. ಈ ಮಧ್ಯೆ ರಾತ್ರಿಯ ವೇಳೆ ಭೋಜನಾನಂತರ ಫ಼ೋನಿನಲ್ಲಿ ಭಾಷೆಯ ಉಚ್ಛಾರದ ಬಗ್ಗೆ ತರಬೇತಿ. ಹಾಡಿನವರಿಗೂ ಹಾಗೂ ನಟಿಸುವವರಿಗೂ. ನನ್ನ ಒಂದು ವರ್ಷದ ಧಾರವಾಡ ವಾಸ ಈಗ ಕಾರ್ಯಕ್ಕೆ ಬಂದಿತ್ತು. ಮೂರುವಾರಕ್ಕೆ ಎಲ್ಲರಿಗೂ ನಾಟಕದ ಆಳ ಗೊತ್ತಾಗಿತ್ತು. ಎಲ್ಲರಿಗೂ ನಾಟಕದ ಮೇಲಿನ ಆಸಕ್ತಿ ಹೆಚ್ಚಿತ್ತು. ಈಗ ಅಭ್ಯಾಸಕ್ಕೆ ಎಲ್ಲಿಗೆ ಕರೆದರೂ ಬರುವುದಕ್ಕೆ ತಯಾರಿದ್ದರು. ಅವರುಗಳ ಉತ್ಸಾಹ, ಆಸಕ್ತಿ ನೋಡಿದರೆ ಅಭ್ಯಾಸ ಚಂದ್ರಲೋಕಕ್ಕೆ ಕರೆದಿದ್ದರೂ ಬರುತ್ತಿದ್ದರೋ ಏನೋ. ಆಗಲೇ ನನಗೆ ನನ್ನ ಕನಸು ನನಸಾಗುವ ಸುರಂಗದ ಅಂತ್ಯದೊಲ್ಲೊಂದು ಸಣ್ಣದೊಂದು ಬೆಳಕನ್ನು ಕಂಡೆ. ಇದರ ಮಧ್ಯೆ ಉತ್ತರ ಕ್ಯಾಲಿಪೋರ್ನಿಯಾದ ಕನ್ನಡ ಸಂಘದವರು ಅವರ ಸಂಕ್ರಾಂತಿಯ ಹಬ್ಬದ ಕಾರ್ಯಕ್ರಮದಲ್ಲಿ ಇದೇ ನಾಟಕವನ್ನು ಫೆ. ೨ರಂದು ಆಡಿಸುವ ನಿರ್ಧಾರಕ್ಕೆ ಖಾತ್ರಿಗೊಳಿಸಿದ್ದರು. ನಮ್ಮ ಮೇಲಿನ ಒತ್ತಡ ಇನ್ನೂ ಜಾಸ್ತಿ ಆಗಿತ್ತು. ಇನ್ನು ಇರುವ ವಾರಗಳಲ್ಲಿ ಒಂದು ವಾರದ ಅಭ್ಯಾಸವನ್ನು ಕಳೆದುಕೊಂಡು ಒಂದು ವಾರಕ್ಕೆ ಮುಂಚೆಯೇ ರಂಗದ ಮೇಲೆ ತರಬೇಕಾಯಿತು. ಅದಕ್ಕೂ ಗುಂಪು ಒಪ್ಪಿಕೊಂಡರು. ಉಳಿದ ಮೂರು ವಾರಗಳ ಅಭ್ಯಾಸ ಒಟ್ಟಿಗೆ ನಡೆಯಬೇಕೆಂಬ ನಿರ್ಧಾರಕ್ಕೆ ಬಂದು, ಅಭ್ಯಾಸಕ್ಕಾಗಿ ಒಂದು ದೊಡ್ಡ ಜಾಗವನ್ನು ಹುಡುಕಲು ಪ್ರಾರಂಭಿಸಿದ್ದೆವು. ಜ್ಯೋತಿ ಬಾನಾಜಿ ಅವರ ಸಹಾಯ ಇದರಲ್ಲಿ ಅಪಾರ. ತಮ್ಮ ಮನೆಯೆ ಹತ್ತಿರ ಒಂದು ಕಮ್ಯುನಿಟಿ ಹಾಲನ್ನು ಅದಕ್ಕಾಗಿ ಕಾದಿರಿಸಿದರು. ಒಂದು ವಾರ ಅದು ಸಿಗದಿದ್ದಾಗ, ಅನಂತ್ ಮತ್ತು ವೀಣಾ ಚಿನೋ ಹಿಲ್ಸ್ನ ಕಮ್ಯುನಿಟಿ ಹಾಲ್ ಕಾದಿರಿಸಿದ್ದರು. ಹೀಗೆ ಇನ್ನುಳಿದ ಮೂರು ವಾರಗಳಲ್ಲಿ ನಮ್ಮ ಅಭ್ಯಾಸ ಭರದಿಂದ ಸಾಗಿತ್ತು. ಆಳುಗಳ ಪಾತ್ರದಲ್ಲಿ ಮಾಡಿದ್ದ ಕೆಲವರು, ಸ್ಯಾನ್ ಹೊಸೆಯಲ್ಲಿ ಇನ್ನು ಎರಡು ವಾರದಲ್ಲಿ ನಾಟಕವಿದೆ ಎಂದಿದ್ದರೂ, ಇನ್ನೂ ಸಂಭಾಷಣೆಗಳು ಬಾಯಿಗೆ ಬರುತ್ತಿಲ್ಲ, ನೃತ್ಯದ ಹೆಜ್ಜೆಗಳು ಅಭ್ಯಾಸ ಮಾಡಿಲ್ಲ, ಯಾವಾಗ ರಂಗದ ಮೇಲೆ ಬರಬೇಕು, ಯಾವಾಗ ಹೋಗಬೇಕು, ಯಾವ ಸಂಭಾಷಣೆಯ ನಂತರ ಯಾರ ಸಂಭಾಷಣೆ ಎನ್ನುವುದೇ ಗೊತ್ತಿಲ್ಲ. ನನಗೆ ಮೈಯೆಲ್ಲಾ ಉರಿದು ಹೋಗುತ್ತಿತ್ತು. ಕೂಗಾಡಿದೆ. ನಾಟಕವನ್ನು ಸ್ಯಾನ್ ಹೊಸೆಯಲ್ಲಿ ಆಡುವುದು ಬೇಡ ಅನ್ನುವ ಧಮಕಿ ಕೊಟ್ಟೆ. ಮುಂದಿನ ವಾರದ ಆಭ್ಯಾಸದ ಹೊತ್ತಿಗೆ, ಎಲ್ಲವನ್ನೂ ತಾವುಗಳೇ ಸೇರಿಕೊಂಡು ಆಭ್ಯಾಸ ಮಾಡಿಕೊಂಡೂ ಬರುವುದಾಗಿ ಶಿವು ಮತ್ತು ಅರುಣ್ ನಾಯಕತ್ವ ವಹಿಸಿಕೋಂಡು ಭರವಸೆ ಕೊಟ್ಟರು. ಅದರಂತೆ ನಡೆದು ಗುಂಪಿನಲ್ಲಿ ಎಲ್ಲರಿಗೂ ಆಶ್ಚರ್ಯ ತಂದರು.
ಸ್ಯಾನ್ ಹೊಸೆಗೆ ೪೦ ಜನರ ತಂಡದ ಸಾರಿಗೆ ವ್ಯವಸ್ಥೆ ನಮ್ಮ ತಂಡದ ಜೇನಿನ ಹುಳದ ರೀತಿ ಯಾವಾಗಲೂ ಕೆಲಸಮಾಡುವ ಜಗನ್ನಾಥ್ ವಹಿಸಿಕೊಂಡರು, ಅದಕ್ಕೆ ವಿಜಯ್ ಸಹಾಯ ಮಾಡಿ ಎಲ್ಲ ವ್ಯವಸ್ಥೆ ಮಾಡಿದರು. ನನ್ನ ಸ್ನೇಹಿತರುಗಳ ಮನೆಯಲ್ಲಿ ಅಲ್ಲಿ ತಂಗುವ ವ್ಯವಸ್ಥೆಯನ್ನು ನಾನೂ ಮಾಡಿದೆ. ಕೆಲವರು ಅವರವರ ಸ್ನೇಹಿತರಗಳ ಅಥವಾ ಬಂಧುಗಳ ಮನೆಯಲ್ಲಿ ಉಳಿಯಲು ನಿರ್ಧರಿಸಿದ್ದರು. ಈ ವಿಷಯದಲ್ಲಿ ಕುಮಾರ್ ರಾವ್ ಅವರ ಕಾರ್ಯ ಅಪಾರ. ಫೆ.೧ ಶುಕ್ರವಾರ ಎರಡು ವ್ಯಾನುಗಳು, ಶನಿವಾರ ಒಂದು ವ್ಯಾನ್ ಹಾಗೂ ಅರುಣ್ ತನ್ನದೇ ವ್ಯಾನ್ನಲ್ಲಿ ಹೊರಟಿದ್ದ. ಬಸಣ್ಯನ ಪಾತ್ರಧಾರಿ ಶ್ರೀನಿ ವಿಮಾನದಲ್ಲಿ ಹೊರಟಿದ್ದ. ನಮ್ಮ ಮುಖ್ಯ ಗಾಯಕಿ ವೀಣಾ ಅನಂತ್ ದಾಸರ ದಿನದಲ್ಲಿ ಹಾಡಲು ಒಪ್ಪಿಕೊಂಡಿದ್ದು, ಅದು ಫೆ.೨ ರಂದೇ ಲಾಸ್ ಏಂಜಲೆಸ್ ಬಳಿ ಇದ್ದಿದ್ದು ನಮ್ಮ ಸಮಸ್ಯೆಗಳ ಗಂಟಿನ ಮೇಲೆ ಒಂದು ಕಗ್ಗಂಟು. ಕಡೆಗೆ ದಾಸರ ದಿನದ ಕಾರ್ಯಕ್ರಮ ಮುಗಿದ ಮೇಲೆ ವಿಮಾನದಲ್ಲಿ ಬರುವ ವ್ಯವಸ್ಥೆ ಮಾಡಲಾಯಿತು. ಅದೂ ಒಂದು ಅಪಾಯಕಾರಿ ಪ್ರಯತ್ನವೇ ಆಗಿತ್ತು. ಅವರ ವಿಮಾನವು ಏನಾದರೂ ತಡವಾದರೆ ನಮಗೆ ಮುಖ್ಯ ಗಾಯಕಿಯೇ ಇಲ್ಲ. ಅಂತಹ ಸ್ಥಿತಿ. ಆದರೂ ಇನ್ನು ಬೇರೆ ವಿಧಿಯೇ ಇರಲಿಲ್ಲ.

ಫೆ. ೨, ಶನಿವಾರ. ಸನ್ನಿವೇಲ್ ಹಿಂದು ದೇವಸ್ಥಾನದ ಸಭಾಂಗಣ. ತುಂಬಿದ ಗೃಹ. ಕನ್ನಡದ ಕಂಪು ಹೊರಹೊಮ್ಮುತ್ತಿತ್ತು. ನಮ್ಮಲ್ಲಿ ಕೆಲವರಿಗೆ ಇಂತಹ ದೊಡ್ಡ ಸಭಾಂಗಣದಲ್ಲಿ ನಾಟಕಮಾಡಿದ ಅಭ್ಯಾಸವಿದ್ದರು, ಬಹುತೇಕ ನಟರಿಗೆ ಇದೇ ರಂಗಪ್ರವೇಶ. ಎಲ್ಲರಿಗೂ ಧೈರ್ಯತುಂಬಿ ಹುರಿದುಂಬಿಸಿ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವ ಹೊತ್ತಿಗೆ ವೀಣಾ ಆಂಟಾರಿಯೋದಿಂದ(ಲಾಸ್ಏಂಜಲೆಸ್ ಬಳಿಯಿರುವ ಒಂದು ಸಣ್ಣ ವಿಮಾನ ನಿಲ್ದಾಣ) ಹೊರಟರೋ ಇಲ್ಲವೋ ಎನ್ನುವ ಚಿಂತೆ. ವಿಮಾನ ಅಂಟಾರಿಯೋ ಹೊರಟಿತು ಎಂದು ಫೋನ್ ಬಂದಾಗ ಒಂದು ನಿಟ್ಟುಸಿರಿಟ್ಟಿದ್ದೆ. ಕಾರ್ಯಕ್ರಮ ಸ್ವಲ್ಪ ತಡವಾಗಿ ಪ್ರಾರಂಭವಾದರೂ, ನಮ್ಮ ನಾಟಕಕ್ಕೆ ಜನ ಊಟಮಾಡಿಕೊಂಡು ಬಂದು ಕುಳಿತಿದ್ದು ಒಂದು ರೀತಿ ಒಳ್ಳೆಯದೇ ಆಯಿತು. ೬೦೦ಕ್ಕೂ ಹೆಚ್ಚು ಪ್ರೇಕ್ಷಕರು ಚಪ್ಪಾಳೆ ಹಾಕಿದಾಗ ನಮಗಾದ ಆನಂದ ಅಷ್ಟಿಷ್ಟಲ್ಲ. ನಮ್ಮ ಮೊದಲ ಯುದ್ಧದಲ್ಲಿ ಗೆದ್ದಿದ್ದೆವು. ಆದರೂ ಪ್ರೇಕ್ಷಕರಿಗೆ ತಿಳಿಯದ ಕೆಲವು ತಪ್ಪುಗಳನ್ನು ಮಾಡಿದ್ದೆವು. ಮಾರನೆಯ ದಿನ ಎಲ್ಲವನ್ನೂ ಪಟ್ಟಿಮಾಡಿ ಎಲ್ಲರಿಗೂ ಕಳುಹಿಸಿ ಅದನ್ನು ತಿದ್ದಿಕೊಳ್ಳುವಂತೆ ಎಲ್ಲರಿಗೂ ಸಲಹೆ ಕೊಟ್ಟಿದ್ದೆ.

ಎಲ್ಲರೂ ಊರಿಗೆ ಬಂದು ಸೇರಿಕೊಂಡರೂ, ಗುಂಪಿನಲ್ಲಿದ್ದ ಬಹಳಷ್ಟು ಜನಗಳಿಗೆ ಕೆಮ್ಮು, ಜ್ವರ ಬಂದಂತಾಗಿ ಹಾಸಿಗೆ ಹಿಡಿದಿದ್ದರು. ಮುಖ್ಯವಾಗಿ ಮೇಳದ ರವಿ, ಬಸ್ಸಿ ಪಾತ್ರದ ವಾಣಿ, ಆಳುಗಳು ಪಾತ್ರದ ಅರುಣ್. ಎಲ್ಲ ವಿಘ್ನಗಳನ್ನೂ ಎದುರಿಸಿದ್ದ ನಮಗೆ ಈ ಕಠಿಣ ಪರೀಕ್ಷೆಯನ್ನೇಕೆ ಮಾಡುತ್ತಿದ್ದಾನೆ ಎನ್ನಿಸಿತು. ಎಲ್ಲರಿಗೂ ಮಾತನಾಡಿಸಿ ಹುರಿದುಂಬಿಸಿದೆ. ಬಸ್ಸಿ ಬರಲು ಸಾಧ್ಯವಿಲ್ಲವೆಂದರೆ ಆ ಪಾತ್ರವನ್ನೇ ತೆಗೆದುಬಿಡುವ ಯೋಜನೆ ಹಾಕಿದ್ದೆ. ದೇವರದಯವೋ ಏನೋ ಫೆ.೯ (ಶನಿವಾರ) ರ ಲಾಸ್ ಏಂಜಲಿಸ್ ನಾಟಕ ಸ್ವಲ್ಪ ತಡವಾಗಿ ಪ್ರಾರಂಭವಾದರೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ನಾಟಕೋತ್ಸವದಲ್ಲಿ ಉತ್ತಮ ನಾಟಕ ಪ್ರಶಸ್ತಿಯನ್ನೂ ಗೆದ್ದಿತು.

ಇನ್ನು ಪಾತ್ರಗಳ ವಿಶ್ಲೇಷಣೆಯನ್ನು ಮಾಡೋಣ. ಈ ನಾಟಕದಿಂದ ನಾಲ್ಕು ತಾರೆಯರು ಹುಟ್ಟಿದಂತಾಯಿತು ಅಮೆರಿಕನ್ನಡ ನಾಟಕರಂಗಕ್ಕೆ. ಬಸಣ್ಯನ ಪಾತ್ರ ಮಾಡಿದ್ದ ಶ್ರೀನಿ, ಇದೇ ಅವನ ಮೊದಲ ಪೂರ್ಣ ನಾಟಕದ ಪ್ರಯೋಗವೆಂದರೆ ನಂಬಲಾಗಲಿಲ್ಲ ಪ್ರೇಕ್ಷಕರಿಗೆ. ಪಾತ್ರಕ್ಕೆ ತಕ್ಕಂತೆ ಅಭಿನಯ, ಭಾಗಲ್ಕೋಟೆಯಲ್ಲಿ ತನ್ನ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದರಿಂದ ಉತ್ತರ ಕರ್ನಾಟಕ ಭಾಷೆಯನ್ನು ಲೀಲಾ ಜಾಲವಾಗಿ ಮಾತನಾಡುತ್ತಿದ್ದ. ನೃತ್ಯಗಳನ್ನು ಚೆನ್ನಾಗಿ ಮಾಡಿದ್ದ. ವೆಂಕಟೇಶ್ ಮಿಂಚಿದ್ದು ಗುರ್ಯನ ಪಾತ್ರದಲ್ಲಿ. ಅವನ ಸಮ್ಯಯೋಜಕ ಹಾಸ್ಯ, ಗೌಡರೊಡನೆಯ ಸಂಭಾಷಣೆ, ಪ್ರೇಕ್ಷಕರಲ್ಲಿ ನಗುವನ್ನು ತರಿಸಿತ್ತು. ನಿಂಗಿ ಪಾತ್ರದಲ್ಲಿ ಜ್ಯೋತಿ ವೆಂಕಟೇಶ್ ಪಾತ್ರಕ್ಕೆ ಒಳ್ಳೆಯ ಜೀವ ತುಂಬಿದ್ದಳು. ಅವಳ ಅಭಿನಯದಲ್ಲಿ ಒಂದು ಹೊಸತನವಿತ್ತು. ರಂಗದ ಮೇಲೆ ಲವಲವಿಕೆಯಿಂದ ಅಭಿನಯಿಸಿದ್ದಳು. ಇನ್ನು ಗೌಡತಿಯ ಪಾತ್ರದಲ್ಲಿ ವಿದ್ಯಾಳ ಅಭಿನಯ ಭಾವಪೂರ್ಣವಾಗಿತ್ತು. ಕೆಲವು ಕಡೆ ನೃತ್ಯದಲ್ಲಿ ಸೋತಿದ್ದರೂ ತನ್ನ ಭಾವಪೂರ್ಣ ಅಭಿನಯದಿಂದ ನಾಟಕಕ್ಕೆ ಒಂದು ಮೆರಗನ್ನು ಕೊಟ್ಟಿದ್ದಳು. ಆಳುಗಳ ಪಾತ್ರದಲ್ಲಿ ಅಭಿನಯಿಸಿದ ಅರುಣ್, ಶಿವು, ಅಂಬರೀಶ್ ಹಾಗೂ ಜಗದೀಶ್ ಎಲ್ಲರಿಂದ ಬೇಷ್ ಎನಿಸಿಕೊಂಡಿದ್ದರು. ಸೂತ್ರಧಾರ ಶ್ರೀನಿ ಹಾಗೂ ಹಿಮ್ಮೇಳ್ಯ ಜಗನ್ನಾಥ್ ನಾಟಕಕ್ಕೆ ಒಳ್ಳೆಯ ತಳಹದಿ ಹಾಕಿದ್ದರು. ಮೇಳದ ಹಾಡುಗಳಂತೂ ಪ್ರೇಕ್ಷಕರ ಬಾಯಲ್ಲಿ ಗುಣುಗುಟ್ಟುತ್ತಿದ್ದವು. ಮಕ್ಕಳೆಲ್ಲಾ ಡಂ ಡಂ ದೇವರ ಹಾಡನ್ನಂತೂ ಹೇಳಿಕೊಂಡು ಗೌಡನ ಪಾತ್ರವನ್ನು ಮೆಲಕು ಹಾಕುತ್ತಿದ್ದರು. ಕಡೆಯದಾಗಿ ಗೌಡನ ಪಾತ್ರದ ಹೊಣೆಯನ್ನು ನಾನೇ ಹೊತ್ತು, ನಾನೇ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದೆ. ರಂಗವಿನ್ಯಾಸದ ಕೆಲಸ ಬಹಳಷ್ಟು ಭಾಗ ಬಿ ವಿ ಕಾರಂತರ ವಿನ್ಯಾಸವೇ ಆಗಿದ್ದರಿಂದ, ನನ್ನ ಅರ್ಧ ಕೆಲಸ ಪೂರೈಸಾಗಿತ್ತು. ಇನ್ನು ನಟನೆ. ಆ ಕೆಲಸವನ್ನು ದೇವರಿಗೆ ಬಿಟ್ಟಿದ್ದೆ. ನಮ್ಮ ನಾಟಕದ ಡಿವಿಡಿ ನೋಡಿದ ಮೇಲೆ, ಆ ಹೊಣೆಗಾರಿಕೆಗೆ ಮೋಸ ಮಾಡಿಲ್ಲವೆಂದು ನಾನು ಅಂದುಕೊಂಡೆ. ನಾಟಕ ನೋಡಿದ ಜನ ಬಂದು ಹೊಗಳಿ ಅಟ್ಟಕ್ಕೇರಿಸಿದ್ದರು. ಏನೇ ಆಗಲಿ ಇದು ಒಂದು ಒಬ್ಬಿಬ್ಬರ ನಟನಾ ಸಾಮರ್ಥ್ಯದಿಂದ ಗೆಲ್ಲುವ ನಾಟಕವಲ್ಲ. ಪ್ರತಿಯೊಂದು ವಿಭಾಗದ ಪ್ರತಿಯೊಂದು ನಟನೂ, ಪ್ರತಿಯೊಂದು ಕಲಾವಿದನೂ, ಪ್ರತಿಯೊಂದು ರಂಗಕರ್ಮಿಯೂ ಹೃದಯ ಬಿಚ್ಚಿ ಕೆಲಸ ಮಾಡಿದರೆ ಮಾತ್ರ ಈ ನಾಟಕ ಗೆಲ್ಲಲು ಸಾಧ್ಯ. ಈ ವಿಷಯದಲ್ಲಿ ರಂಗಧ್ವನಿ ಗೆದ್ದಿದೆ ಅನ್ನಿಸಿತು. ಅದರ ನಟರು ಗೆದ್ದಿದ್ದಾರೆ ಅನ್ನಿಸಿತು.

ಅಮೆರಿಕೆಯಲ್ಲಿ ಬೆನಕ ತಂಡವನ್ನು ಕರೆಸಿ ಆಡಿಸಬೇಕೆಂದಿದ್ದ ನಾಟಕವನ್ನು ನಾವೇ ಆಡಿಸಿ ತೋರಿಸಿದ ಸಂತೃಪ್ತಿಯೊಂದಿಗೆ ಈ ನನ್ನ ನಾಟಕ ಮಾಡಿಸಿದ ಅನುಭವವನ್ನು ನಿಮ್ಮ ಚರಣಗಳಿಗೆ ಇಟ್ಟಿದ್ದೇನೆ.

ಜೈ ಜೋಕುಮಾರಸ್ವಾಮಿ

ಮವಾಸು
ಫೆ ೧೨, ೨೦೦೮
ಚಿನೋ ಹಿಲ್ಸ್