ಸಬ್‍ಮರ್ಸಿಬಲ್ ಕಾರು!
(ಇ-ಲೋಕ-62)(18/2/2008)
ನೀರಿನಡಿಯೂ ಸಾಗುವ ಕಾರನ್ನು ಸ್ವಿಸ್ ಕಂಪೆನಿ ರಿನ್‍ಸ್ಪೀಡ್ ತಯಾರಿಸಿದೆ.ಇದು ನೆಲದ ಮೇಲೆ ಗಂಟೆಗೆ ಎಪ್ಪತ್ತೇಳು ಮೈಲು ವೇಗದಲ್ಲಿ ಸಾಗಿದರೆ,ನೀರ್‍ಇನ ಮೇಲೆ ಗಂಟೆಗೆ ಮೂರು ಮೈಲು ವೇಗದಲ್ಲಿ ಸಾಗಬಲ್ಲುದು.ನೀರಿನಡಿ ಹತ್ತು ಮೀಟರ್ ಕೆಳಗೆ ಅದರ ವೇಗ ಅರ್ಧಕ್ಕಿಳಿಯುತ್ತದೆ.ಈ ಕಾರಿನಲ್ಲಿ ಅಂತರ್ದಹನ ಇಂಜಿನ್‍ಗಳನ್ನು ಬಳಸಿಲ್ಲ.ವಿದ್ಯುತ್ ಮೋಟಾರುಗಳನ್ನು ಬಳಸಲಾಗಿದೆ. ಮೂರು ವಿದ್ಯುತ್ ಮೋಟಾರುಗಳಿದ್ದು,ನೀರಿನಡಿ ಸಾಗಲು ಹುಟ್ಟು ಹಾಕುವಂತಹ ಕ್ರಿಯೆಗೆ ಮೋಟಾರು ಸಹಾಯ ಮಾಡುತ್ತದೆ.ಕಾರಿನ ಮೇಲ್ಬದಿ ತೆರೆದಿದೆ. ಹಾಗಾಗಿ ಚಾಲಕರು ಮತ್ತು ಪ್ರಯಾಣಿಕರು ಅಪಾಯದಿಂದ ಪಾರಾಗುವುದು ಸುಲಭ.ನೀರಿನೊಳಗೆ ಸಾಗುವಾಗ,ಉಸಿರಾಡಲು ಗಾಳಿಯ ಜಾಡಿಯನ್ನಿದರಲ್ಲಿ ಒದಗಿಸಲಾಗಿದೆ.ಒಂದೂವರೆ ದಶಲಕ್ಷ ಡಾಲರ್ ಬೆಲೆಯ ಈ ಕಾರಿಗೆ ಸ್ಕ್ಯೂಬಾ ಎಂಬ ಹೆಸರಿಡಲಾಗಿದೆ.ಜಿನೇವಾ ಅಟೋ ಪ್ರದರ್ಶನದ ವೇಳೆ ಕಾರನ್ನು ಬಿಡುಗಡೆಗೊಳಿಸಲಾಗುತ್ತದೆ.
ತನ್ನದೇ ಗೂಢಚಾರ ಕೃತಕ ಉಪಗ್ರಹವನ್ನು ಉರುಳಸಲಿರುವ ಅಮೆರಿಕಾ
ಅಮೆರಿಕಾದ ಗೂಢಚಾರ ಕೃತಕ ಉಪಗ್ರಹ, ಎರಡು ವರ್ಷಗಳ ಹಿಂದೆ ಉಡಾವಣೆಯಾದ ಹೊಸದರಲ್ಲೇ ಕೆಟ್ಟಿತ್ತು.ಎರಡೂವರೆ ಟನ್ ತೂಕದ ಉಪಗ್ರಹ ತುಂಡಾಗಿ ಬಿಟ್ಟು ನಿರುಪಯೋಗಿಯಾಯಿತು. ಈಗದು ಭೂಮಿಯ ವಾತಾವರಣವನ್ನು ಪ್ರವೇಶಿಸುವ ಅಪಾಯ ತಲೆದೋರಿದೆ.ಅದರಲ್ಲೂ ಉಪಗ್ರಹದ ಹೈಡ್ರಜೀನ್ ಅನಿಲದ ಟ್ಯಾಂಕ್‍ನ ಬಗ್ಗೆ ಭಯವಿದೆ.ಈ ಟ್ಯಾಂಕ್ ದಹನವಾಗದ ಹೊರಪದರ ಹೊಂದಿದೆ. ಹೀಗಾಗಿ ಅದು ಭೂಮಿಯ ವಾತಾವರಣವನ್ನು ಪ್ರವೇಶಿಸಿದರೂ,ಅದು ಸುಡದೇ ಇಡಿಯಾಗಿ ಭೂಮಿಯ ಮೇಲ್ಮೈಯನ್ನು ತಲುಪಬಹುದು.ಹೈಡ್ರಜೀನ್ ಅನಿಲ ವಿಷಮಯ. ಜನ ವಸತಿಯಿದ್ದೆಡೆ ಇದು ಸೋರಿಕೆಯಾದರೆ ಅಪಾಯ ಕಟ್ಟಿಟ್ಟದ್ದು. ಹೀಗಾಗಿ ಉಪಗ್ರಹದ ಭಾಗಗಳು ಭೂಮಿಯ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಲು ಅಮೆರಿಕಾ ನಿರ್ಧರಿಸಿದೆ. ಉಪಗ್ರಹವನ್ನು ಕ್ಶಿಪಣಿ ಮೂಲಕ ಆಗಸದಲ್ಲಿಯೇ ಮೇಲೆಯೇ ಸಿಡಿಸಿ,ಆಗಬಹುದಾದ ಅಪಾಯ ತಪ್ಪಿಸಲು ತನ್ನ ನೌಕಾಪಡೆಗೆ ಸೂಚನೆ ನೀಡಿದೆ.ಉಪಗ್ರಹದ ತುಣುಕುಗಳು ರಶ್ಯಾ,ಚೀನಾದ ಕೈಸೇರುವುದು ಅಮೆರಿಕಾಕ್ಕೆ ಬೇಕಾಗಿಲ್ಲ. ಹಾಗಾಗಿಯೇ ಇಂತಹ ಕ್ರಮಕ್ಕದು ಮುಂದಾಗಿದೆ ಎನ್ನುವವರೂ ಇಲ್ಲದಿಲ್ಲ.ಹದಿನೇಳು ಸಾವಿರ ಮೈಲು ಎತ್ತರದಲ್ಲಿ ಭೂಮಿಗೆ ಪ್ರದಕ್ಷಿಣೆ ಬರುತ್ತಿರುವ ಉಪಗ್ರಹವನ್ನು ಹೊಡೆದುರುಳಿಸುವುದು ಸುಲಭದ ಕೆಲಸವೇನೂ ಅಲ್ಲ.ಕ್ಷಿಪಣಿ ಬಳಸಿ ಈ ಕೆಲಸವನ್ನು ಸಾಧಿಸಬೇಕಾದೀತು.ಇಂತಹ ತಾಲೀಮನ್ನು ಅಮೆರಿಕಾವು ಮುಂದೆ ತನ್ನ ಶತ್ರು ರಾಷ್ಟ್ರಗಳ ಉಪಗ್ರಹಗಳನ್ನು ಹೊಡೆದುರುಳಿಸಲು ಉಪಯೋಗಿಸಬಾರದೆಂದೇನಿಲ್ಲ.ಕಳೆದ ವರ್ಷ ಚೀನಾವು ಹವಾಮಾನ ಮುನ್ಸೂಚನೆ ನೀಡುವ ಉಪಗ್ರಹವನ್ನು ಹೊಡೆದುರುಳಿಸಿ ಸುದ್ದಿ ಮಾಡಿತ್ತು.ಅದರ ಚೂರುಗಳು ಆಕಾಶದಲ್ಲೇ ಉಳಿದು ಹೋಗಿ,ಬಾಹ್ಯಾಕಾಶದಲ್ಲಿ ತಿರುಗುತ್ತಿರುವ ಅಂತಾರಾಷ್ಟ್ರೀಯ ಅಂತರಿಕ್ಷ ನೌಕೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಅಂಗಾರಾಮ್ಲ ಗುಳುಂಕರಿಸುವ ವಸ್ತು ಈಗ ಲಭ್ಯ
ತನ್ನಲ್ಲಿರುವ ಅವಕಾಶದ ಅರುವತ್ತು ಪಟ್ಟು ಅಂಗಾರಾಮ್ಲವನ್ನು ಹೀರಿಕೊಳ್ಳುವ ಸಾಮರ್ಥ್ಯವಿರುವ ZIF-69 ಎನ್ನುವ ವಸ್ತುವನ್ನು ತಯಾರಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ.ಲಾಸ್ ಏಂಜಲೀಸಿನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕ ಒಮರ್ ಯಾಗಿ ಅವರು ಪ್ರಕಟಿಸಿರುವ ಸಂಶೋಧನಾ ಲೇಖನದ ಪ್ರಕಾರ ಇಂತಹ ಇಪ್ಪತ್ತಕ್ಕೂ ಹೆಚ್ಚು ವಸ್ತುಗಳನ್ನು ಕಂಡು ಹಿಡಿಯಲಾಗಿದೆ.ಶುದ್ಧ ಅಂಗಾರಾಮ್ಲಕ್ಕೊಡಿದಾಗ ಮಾತ್ರಾ ಝಿಪ್ ಅಂಗಾರಾಮ್ಲವನ್ನು ಹೀರಿಕೊಳ್ಳುವುದು ಒಂದು ಸಮಸ್ಯೆ.ಅಂಗಾರಾಮ್ಲ ಹೀರಿಕೊಂಡ ವಸ್ತುವನ್ನು ನೆಲದಡಿ ಹುಗಿದಿಟ್ಟು ನಿವಾರಿಸಬೇಕಾಗುತ್ತದೆ. ಇಂತಹ ಕ್ರಮ ಕೈಗೊಂಡರೆ, ಪರಿಸರದ ಕಡೆ ಹೆಚ್ಚಿನ ಗಮನ ನೀಡುವುದು ಅನಿವಾರ್ಯ.ಇಂತಹ ಅಂಗಾರಾಮ್ಲ ಹೀರಿಕೊಳ್ಳುವ ವಸ್ತು ವಾಣಿಜ್ಯ ಬಳಕೆಗೆ ಲಭ್ಯವಾದರೆ,ಕಲ್ಲಿದ್ದಲಿನಂತಹ ಇಂಧನ ಬಳಸಿ,ವಿದ್ಯುತ್ ಉತ್ಪಾದನೆ ಮಾಡುವ ಉಷ್ಣ ವಿದ್ಯುತ್ ಸ್ಥಾವರಗಳಿಂದ ಅಂಗಾರಾಮ್ಲ ಬಿಡುಗಡೆಯಾಗಿ ಜಾಗತಿಕ ತಾಪಮಾನ ಏರಿಕೆಯಾಗುವುದನ್ನು ತಡೆಯಬಹುದು.
ಗೂಗಲ್ ಶೋಧ ಪುಟದಲ್ಲಿ ವಿಡಿಯೋ ಜಾಹೀರಾತಿನ ಕಿರಿಕಿರಿ
ಗೂಗಲ್ ಕಂಪೆನಿಗೆ ಬರುತ್ತಿರುವ ವಾರ್ಷಿಕ ಜಾಹೀರಾತು ಆದಾಯ ಹದಿನೈದು ಬಿಲಿಯನ್ ಡಾಲರು.ಶೋಧ ಪುಟದಲ್ಲಿ ಕಾಣಿಸಿಕೊಳ್ಳುವ ಪಠ್ಯಾಧಾರಿತ ಜಾಹೀರಾತುಗಳ ಪಾಲು ಇದರಲ್ಲಿ ಸಿಂಹ ಪಾಲು.ಅಂತರ್ಜಾಲ ಶೋಧ ಕಾರ್ಯ ಕೈಗೊಂಡಾಗ,ಶೋಧ ಸೇವೆಯ ಫಲಿತಾಂಶದ ಜತೆಗೆ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ಒದಗಿಸುವುದಲ್ಲದೆ,ವಿಡಿಯೋಗಳನ್ನೂ ನೀಡುವುದು ಗೂಗಲ್‍ನ ಹೊಸ ಯೋಚನೆ.ಆದರೆ ಪುಟ ತುಂಬಾ ವಿಡಿಯೋಗಳ ತುಣುಕುಗಳನ್ನು ತೋರಿಸಿ,ಜನರಿಗೆ ಕಿರಿಕಿರಿ ಆಗುವುದು ಕಂಪೆನಿಗೆ ಬೇಕಿಲ್ಲ.ಬದಲಾಗಿ ವಿಡಿಯೋವಿನ ಸಣ್ಣ ತುಣುಕು ಚಿತ್ರ ಕಾಣಿಸಿಕೊಳ್ಳುವಂತೆ ಮಾಡಲು ಗೂಗಲ್ ಯೋಚಿಸಿದೆ. ಅದರ ಮೇಲೆ ಕ್ಲಿಕ್ಕಿಸಿದರೆ,ವಿಡಿಯೋ ತುಣುಕು ಪ್ರಸಾರವಾಗುವಂತೆ ಮಾಡುವುದು ಗೂಗಲ್ ಯೋಚನೆ.
ಸಮುದ್ರದಿಂದ ವಿದ್ಯುತ್
ಸಮುದ್ರದಲೆಗಳನ್ನು ದಿನವಿಡೀ ಕಾಣುತ್ತೇವೆ.ಈ ಅಲೆಗಳ ಶಕ್ತಿ ಉಪಯೋಗಿಸಿ ವಿದ್ಯುತ್ ಉತ್ಪಾದಿಸುವ ಕನಸು ಕಾಣುವವರ ಸಂಖ್ಯೆ ಕಡಿಮೆಯೇನಲ್ಲ. ಆದರೆ ಇಂತಹ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸುವುದು ಸುಲಭವಲ್ಲ. ಸಮುದ್ರದಲ್ಲಿ ವಿದ್ಯುದುತ್ಪಾದನೆಗೆ ಬೇಕಾದ ರಚನೆಗಳನ್ನು ರಚಿಸುವುದು ಒಂದು ಅಡ್ಡಿಯಾದರೆ,ಪರಿಸರಪ್ರಿಯರ ಕಳವಳ ಬಗೆಹರಿಸುವ ಸಮಸ್ಯೆಯೂ ಇದೆ. ಫ್ಲೊರಿಡಾದ ಸಮುದ್ರದಲ್ಲಿ ಬಲವಾದ ಗಲ್ಫ್ ಪ್ರವಾಹ ವರ್ಷದುದ್ದಕ್ಕೂ ಇರುತ್ತದೆ.ಇಲ್ಲಿ ವಿದ್ಯುತ್ ಉತ್ಪಾದಿಸುವ ಸ್ಥಾವರಗಳ ರಚನೆಯಾದರೆ,ಡಜನ್‍ಗಟ್ಟಲೆ ಪರಮಾಣು ಶಕ್ತಿ ಆಧಾರಿತ ವಿದ್ಯುತ್ ಯೋಜನೆಗಳಿಗೆ ಸಮನಾದಷ್ಟು ವಿದ್ಯುಚ್ಛಕ್ತಿ ಉತ್ಪಾದಿಸಬಹುದಂತೆ.ಹೀಗೆನ್ನುವವರು ಫ್ಲೊರಿಡಾದ ಅಟ್ಲಾಂಟಿಕ್ ವಿಶ್ವವಿದ್ಯಾಲಯದ ಸಂಶೋಧಕರು.ಪರೀಕ್ಷಾರ್ಥ ಒಂದು ಸಣ್ಣ ವಿದ್ಯುದುತ್ಪಾದನಾ ಘಟಕವನ್ನು ಸ್ಥಾಪಿಸಲು ವಿಶ್ವವಿದ್ಯಾಲಯ ಯೋಜಿಸಿದೆ.ಘಟಕದ ಟರ್ಬೈನ್‍ಗಳ ಬ್ಲೇಡಿಗೆ ಸಿಲುಕಿ ಜಲಚರ ಜೀವಿಗಳು ಅಪಾಯಕ್ಕೀಡಾಗಬಹುದು ಎಂಬ ಭಯವಿದೆಯಾದರೂ,ಇವುಗಳಿಂದ ನೌಕಾಯಾನಕ್ಕೆ ಅಡ್ಡಿಯಾಗದಂತೆ.ಟರ್ಬೈನುಗಳು ಸಮುದ್ರದ ಮೇಲ್ಮೈಯಿಂದ ನಲ್ವತ್ತು ಅಡಿಯಾದರೂ ಕೆಳಕ್ಕಿರುತ್ತದಂತೆ.ಟರ್ಬೈನುಗಳು ಮೇಲ್ನೋಟಕೆ ಸಿಕ್ಕದೆ,ನೀರೊಳಗಿದ್ದರೆ,ಸಮುದ್ರದ ನೋಟ ಕೆಡುತ್ತದೆ ಎಂಬ ಆತಂಕವೂ ಇಲ್ಲ.ಈ ಹಿಂದಿನ ಒರೆಗಾಂವ್ ಸಮುದ್ರ ತೀರದ ಯೋಜನೆ,ನ್ಯೂಯಾರ್ಕ್ ನಗರದ ಪೂರ್ವ ನದಿ ಯೋಜನೆಗಳು ವಿಫಲವಾಗಿವೆ.ಸಮುದ್ರದಲೆಯ ವಿದ್ಯುತ್ ಯೋಜನೆಗಳು ಇಂಧನ ಖರ್ಚು ಹೊಂದಿಲ್ಲದೆ ಇದ್ದರೂ ಸ್ಥಾಪನೆಗೆ ಅಗತ್ಯವಾದ ಅಗಾಧ ಖರ್ಚಿನ ಕಾರಣ ಅಗ್ಗವಾಗುವುದು ಮಾತ್ರಾ ಸಂಶಯ.
*ಅಶೋಕ್‍ಕುಮಾರ್ ಎ