ಈ-ಕವಿ : ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ

ಈ-ಕವಿ : ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ

ಬರಹ

ಈ-ಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ) ಸಂಸ್ಥೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವೈಭವವನ್ನು ಮರಳಿ ಹಿಂತರುವ ಮತ್ತು ಮಾಹಿತಿ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಈ-ಕವಿಯು ಹೆಚ್ಚಾಗಿ ಉತ್ಸಾಹಿ ಯುವಕರನ್ನು ಸದಸ್ಯರನ್ನಾಗಿಹೊಂದಿದ್ದು, ಅವರಲ್ಲಿ ಪ್ರಮುಖವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದವರಿದ್ದಾರೆ.

ಈಚಿನ ದಿನಗಳಲ್ಲಿ ಈ-ಕವಿ ಸಂಸ್ಥೆ , ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು, ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ. ಈ-ಮೇಲ್, ಅಂತರ್ಜಾಲ ಇತ್ಯಾದಿ ಮಾಧ್ಯಮಗಳ ಮೂಲಕ ಜನಗಳಲ್ಲಿ ಕನ್ನಡ ಜಾಗೃತಿಯನ್ನು ಮೂಡಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಕರ್ನಾಟಕದಾದ್ಯಂತ ಮತ್ತು ಹೊರಗೆ ಕನ್ನಡದ ಕೀರ್ತಿ, ಗೌರವಗಳನ್ನು ಎತ್ತಿಹಿಡಿಯುವ ಎಲ್ಲ ಕನ್ನಡಿಗರು, ಬಳಗಗಳು, ಕೂಟಗಳು, ಸಂಸ್ಥೆಗಳು, ವೇದಿಕೆಗಳೊಡನೆ ನಾವು ಕೆಲಸ ಮಾಡಲು ಮುಂದಾಗಿದ್ದಾರೆ.

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ಮೂಲ ಉದ್ದೇಶಗಳಲ್ಲಿ ಒಂದಾಗಿದೆ.

ಈ-ಕವಿ ಎಲ್ಲಾ ಕನ್ನಡ ಅಭಿಮಾನಿಗಳ ಅಂತರಾಷ್ಟ್ರಿಯ ವೇದಿಕೆ.ಕನ್ನಡಕ್ಕಾಗಿ ಅಂತರ್ಜಾಲದಲ್ಲಿ ಹುಟ್ಟಿಕೊಂಡ ಒಂದು ತಂಡ. ಕನ್ನಡದ‌ಏಳಿಗೆಗೆ ಶ್ರಮಿಸುತ್ತಿರುವ ಎಲ್ಲ ಕನ್ನಡಿಗರನ್ನು ಒಂದೆಡೆ ಸೇರಿಸಿದೆ.ಅಕ್ಟೋಬರ್ ೪- ೨೦೦೩ರಂದು ಈ-ಕವಿ ಡಾ|| ಚಂದ್ರಶೇಖರ ಕಂಬಾರ ರವರಿಂದ ಅಮೇರಿಕದ ಕ್ಯಾಲಿಫೋರ್ನಿಯದಲ್ಲಿ ಉದ್ಘಾಟನೆನೆರವೇರಿತು.

ದಿನಾಂಕ ೧೮ ಜನವರಿ ೨೦೦೪ ರಂದು "ಈ-ಕವಿ" ಬೆಂಗಳೂರಿನಲ್ಲಿ ಉದ್ಘಾಟನೆ. ಈಗಾಗಲೆ ಪ್ರಪಂಚದ ಮೂಲೆ ಮೂಲೆಯನ್ನು ತಲುಪಿ ಅಮೇರಿಕ, ಇಂಗ್ಲೆಂಡ್, ದಕ್ಷಿಣ ಆಫ್ರಿಕ, ಸಿಂಗಪೂರ್, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ಕೆನಡ, ಮಲೇಷಿಯ, ಸೌದಿ ಮುಂತಾದ ದೇಶಗಳಲ್ಲಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿದೆ,ಹಾಗೆಯ ಭಾರತದಲ್ಲಿ ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ಹಾಸನ, ಗುಲ್ಬರ್ಗ, ಮಂಡ್ಯ, ದಾವಣಗೆರೆ, ಉತ್ತರ ಕನ್ನಡ, ಕೋಲಾರ, ತಿಪಟೂರು, ಮಾಗಡಿ, ಚೆನ್ನರಾಯಪಟ್ಟಣ, ನೆಲಮಂಗಲ, ಬೆಳಗಾವಿ, ಬಳ್ಳಾರಿ, ಮುಂಬೈ , ಪುಣೆ, ಚೆನ್ನೈ, ಹೈದರಾಬಾದ್‌ನಲ್ಲಿ ಈ-ಕವಿಯು ಹರಡಿಕೊಂಡಿದೆ.

"ಈ-ಕವಿ" ಸಂಸ್ಥೆಯು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಈಗಾಗಲೆ ಸರ್ಕಾರಕ್ಕೆ ಒತ್ತಾಯ ಹೇರಿ, ಸರ್ಕಾರದ ಜೊತೆ ಮಾತುಕತೆ ನಡೆಸಿದೆ. ಹಾಗೆಯೇ ಆಡಳಿತ ಭಾಷೆ ಕನ್ನಡವಾಗಿಸಲು ಕನ್ನಡ ತಂತ್ರಾಂಶದ ಅವಶ್ಯಕತೆ ಎಷ್ಟು ಅಗತ್ಯ ಎಂದು ಕನ್ನಡಿಗರಿಗೆ ಮನವರಿಕೆ ಮಾಡಿಕೊಟ್ಟು, ಕನ್ನಡ ತಂತ್ರಾಂಶದ ಸ್ಥಿತಿ Uತಿಗಳ ಬಗ್ಗೆ ಚಿಂತಿಸಿ ಅದರ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರದ ಜೊತೆ ಸ್ಪಂದಿಸುತ್ತಿದೆ.

"ಈ-ಕವಿ" ಸಂಸ್ಥೆಯು ಕನ್ನಡಪರ ಹೋರಾಡುತ್ತಿರುವ ಇತರೆ ಸಂಘ ಸಂಸ್ಥೆಗಳು, ಬಳಗಗಳು, ಕೂಟಗಳು, ವೇದಿಕೆಗಳು ಇವುಗಳ ಜೊತೆ ಕೆಲಸ ಮಾಡುತ್ತಿದೆ.

ಆರಂಭದ ದಿನಗಳಲ್ಲಿ ಈ-ಕವಿಯ ಕೆಲವು ಮಹತ್ವದ ಕೆಲಸಗಳು

೧. ಯಾವುದೊ ಒಂದು ಖಾಸಗಿ ಸಂಸ್ಥೆಯ ಸ್ವಾಮ್ಯದಲ್ಲಿ ಕುಗ್ಗುತ್ತಿದ್ದ ಕನ್ನಡ ತಂತ್ರಾಂಶದ ಅಭಿವೃದ್ಧಿಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿ ಸರ್ಕಾರವು ಕನ್ನಡ ತಂತ್ರಾಂಶದ ಬಗ್ಗೆ ಗಮನ ಹರಿಸುವಂತೆಮಾಡಿದೆ.
೨. ಈಗಾಗಲೆ ಮಂಡ್ಯ, ಹಾಸನ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೇಗೆದುಕೊಂಡು, ಆ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು ಪ್ರತಿ ವರ್ಷ ಶಾಲೆಯ ಆರಂಭದಲ್ಲಿ ವಿತರಿಸಲಾಗುತ್ತಿದೆ.
೩.ಚಿತ್ರಮಂದಿರ ಮಾಲಿಕರು ಮತ್ತು ಕೆಲವು ನಿರ್ಮಾಪಕರ ಕನ್ನಡ ವಿರೋಧಿ ನಿಲುವು ಹಾಗೂ ಪರಭಾಷಾ ವ್ಯಾಮೋಹವನ್ನು ವಿರೋಧಿಸಿ ಸಾಫ್ಟ್‌ವೇರ್ ತಂತ್ರಜ್ಞರು ಬೀದಿಗಿಳಿದು ಹೋರಾಟ ನಡೆಸಿದರು.
೪.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಅಂದಿನ ಸಚಿವರಾದ ಶ್ರೀ ಪಿ.ಜಿ.ಆರ್.ಸಿಂಧ್ಯಾ ರವರಲ್ಲಿ ಮನವಿ ಸಲ್ಲಿಸಿ, ಸರ್ಕಾರದ ಮೇಲೆ ಒತ್ತಡ ಹೇರಲಾಯಿತು. ಅದರ ಪರಿಣಾಮವಾಗಿ ಐ.ಟಿ. ಮತ್ತು ಬಿ.ಟಿ. ಕಂಪನಿಗಳಾದ ಇನ್‌ಫೊಸಿಸ್, ವಿಪ್ರೊ, ಬಯೋ ಕಾನ್ ಕಂಪನಿಗಳ ಮುಖ್ಯಸ್ಥರು ಎಚ್ಚೆತ್ತುಕೊಂಡರು.

"ಈ-ಕವಿ" ಸಂಸ್ಥೆಯು ಕನ್ನಡನುಡಿಗಾಗಿ, ಕನ್ನಡನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ."ಈ-ಕವಿ" ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಗುರಿಯನ್ನು ಮುಟ್ಟುವ ಸಲುವಾಗಿ "ಈ-ಕವಿ" ಪ್ರತಿ ಜಿಲ್ಲೆಗಳಲ್ಲಿ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಇದರಿಂದಬೆಂಗಳೂರಿನಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ "ಈ-ಕವಿ" ಯಲ್ಲಿ ಕಲ್ಪಿತವಾಗಿದೆ. ಬನ್ನಿ ಸೋದರರೇ , ನಾವೆಲ್ಲ ಒಂದಾಗಿ ದುಡಿಯೋಣ.

ಈ-ಕವಿ ಸಂಸ್ಥಾಪಕ ಮಾರಪ್ಪನಪಾಳ್ಯ ವೆಂಕಟಪ್ಪ ಕುಮಾರಸ್ವಾಮಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ವಿ.ಎಂ.ಕುಮಾರಸ್ವಾಮಿ (emaiL: NovaMed@aol.com) ಅವರದು ಅಮೆರಿಕನ್ನಡಿಗರ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರುಗಳಲ್ಲೊಂದು. 'ಕನ್ನಡ ಎಲ್ಲಿ ತುಳಿತಕ್ಕೊಳಗಾಗುತ್ತದೆ, ಅಲ್ಲಿ ಕುಮಾರಸ್ವಾಮಿ ಅವರ ಪ್ರತಿಭಟನೆಯ ಧ್ವನಿ ಇರುತ್ತದೆ!' ಎನ್ನುವುದು ಅವರ ವೈಶಿಷ್ಟ್ಯಕ್ಕೆ ಹೊಂದುವ ಒನ್‌ಲೈನರ್‌.

ಬರಿಯ ಕನ್ನಡಪ್ರೇಮಿ ಎಂದಷ್ಟೇ ಹೇಳಿದರೆ ಕುಮಾರಸ್ವಾಮಿ ಅವರ ಕುರಿತು ಏನನ್ನೂ ಹೇಳಿದಂತಾಗುವುದಿಲ್ಲ . ಕನ್ನಡಪ್ರೇಮ, ಕನ್ನಡ ಚಳವಳಿಯನ್ನು ಅನ್ನವಾಗಿಸಿಕೊಂಡವರು/ಜೀವನವಾಗಿಸಿಕೊಂಡವರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ, ಕುಮಾರಸ್ವಾಮಿ ಅವರ ಅಗ್ಗಳಿಕೆ ನಿಂತಿರುವುದು ಕನ್ನಡಾಭಿಮಾನದ ಮೇಲೆ ಮಾತ್ರವಲ್ಲ : ಉದ್ಯಮ, ಸಮಾಜಸೇವೆ, ಸಂಘಟನೆ, ಸಂಸ್ಕೃತಿ-ಸಾಹಿತ್ಯ ಪರಿಚಾರಿಕೆ.. ಕುಮಾರಸ್ವಾಮಿ ಯಾವುದರಲ್ಲೂ ಹಿಂದೆ ಬಿದ್ದವರಲ್ಲ .

1979 ರಲ್ಲಿ ಕುಮಾರ್‌ ಅಂಡ್‌ ಅಸೋಸಿಯೇಟ್ಸ್‌ ಕಂಪನಿ ಸ್ಥಾಪಿಸಿದ ಕುಮಾರಸ್ವಾಮಿ, ನೋವಾ ಕಂಪನೀಸ್‌ನ ಅಧ್ಯಕ್ಷರು (1989 ರಿಂದ) ಕೂಡ. ಬೆಂಗಳೂರಿನ ಸ್ಕೈ ಇಂಜಿನಿಯರಿಂಗ್‌ ಕನ್‌ಸ್ಟ್ರಕ್ಷನ್‌ ಕಂಪನಿಯ ಕಾರ್ಯಕಾರಿ ನಿರ್ದೇಶಕರಾಗಿ (1971 ರಿಂದ 74) ದುಡಿದ ಅನುಭವವೂ ಅವರಿಗಿದೆ. ಟಸ್ಟಿನ್‌ನಲ್ಲಿನ 203 ಹಾಸಿಗೆ ಸಾಮರ್ಥ್ಯದ ಟಸ್ಟಿನ್‌ ಹಾಸ್ಪಿಟಲ್‌ ಮೆಡಿಕಲ್‌ ಸೆಂಟರ್‌ನ (Tustin Hospital Medical Center) ಮಾಲಕರಾಗಿದ್ದ (1989 ರಿಂದ 1992 ರವರೆಗೆ) ಯಶಸ್ವಿ ಉದ್ಯಮಿ ಅವರು.

ಅಮೆರಿಕಾದ ವಿಶ್ವ ವಿದ್ಯಾಲಯವೊಂದರಲ್ಲಿ ಕನ್ನಡ ಪೀಠ ಸ್ಥಾಪಿಸುವುದು ಅವರ ಕನಸು. ಅದಕ್ಕಾಗಿ'ಅಕ್ಕ' ಸಹಯೋಗದಲ್ಲಿ ನಿಧಿಯಾಂದನ್ನು ಸ್ಥಾಪಿಸಲಾಗಿದೆ. ಅಮೆರಿಕಾದಲ್ಲಿನ ಎಲ್ಲ ವಿಶ್ವ ವಿದ್ಯಾಲಯಗಳನ್ನು ಕುಮಾರಸ್ವಾಮಿ ಸಂಪರ್ಕಿಸಿದ್ದಾರೆ. ಕನ್ನಡ ಪೀಠ ಸ್ಥಾಪನೆಗೆ ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯ ಆಸಕ್ತಿ ತೋರಿಸಿದೆ.

ಪೆನ್ಸಿಲ್ವೇನಿಯಾ ವಿವಿ ನೆರವಿನಲ್ಲಿ WE TALKನ್ನುವ ವೆಬ್‌ ಆಧರಿತ ಕನ್ನಡ ಕಲಿಕೆ ಕಾರ್ಯಕ್ರಮವನ್ನು ರೂಪಿಸುತ್ತಿದ್ದಾರೆ.
ವಿಶ್ವಾದ್ಯಂತ ಇರುವ ಕನ್ನಡ ಸಂಘಟನೆಗಳನ್ನು ಸಂಪರ್ಕಿಸಿ, ಕರ್ನಾಟಕದ ವಾಣಿಜ್ಯ ಹಾಗೂ ಪ್ರವಾಸೋದ್ಯಮವನ್ನು ಪ್ರೋತ್ರಾಹಿಸುವ ಕಾರ್ಯಕ್ರಮಗಳ ಸಮಾನ ಮಾಧ್ಯಮವನ್ನು ರೂಪಿಸುವ ಭಗೀರಥ ಪ್ರಯತ್ನ.

ಲಾಸ್‌ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಆರೋಗ್ಯ ಕಾರ್ಯಪಡೆ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಮೂಲಕ, ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆಗೆ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಯೋಜನೆ ಪ್ರಗತಿಯಲ್ಲಿದೆ.

ಭಾರತ ಹಾಗೂ ಅಮೆರಿಕ ನಡುವಣ ಸಾಂಸ್ಕೃತಿಕ ಸಂಬಂಧ ಬಲಗೊಳ್ಳಲು ಅನುವಾಗುವಂತೆ ಅಮೆರಿಕಾದಲ್ಲಿ 'ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಭವನ' ನಿರ್ಮಿಸುವಂತೆ ಒತ್ತಾಯಿಸಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಸಮಿತಿಯಾಂದಿಗೆ ಕುಮಾರಸ್ವಾಮಿ ಸಂಪರ್ಕ ಸಾಧಿಸಿದ್ದಾರೆ. ಈ ಭವನ ನಿರ್ಮಾಣದಿಂದಾಗಿ ಪ್ರತಿವರ್ಷ 100 ಭಾರತೀಯ ಅಮೆರಿಕನ್‌ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ಇಲ್ಲಿ ನಡೆಸಲು ಅನುಕೂಲವಾಗುತ್ತದೆ.

ಗ್ರಾಮೀಣ ಶಿಕ್ಷಣಕ್ಕೆ ಕಾಯಕಲ್ಪ
VillageByVillage.org, Inc.ಎನ್ನುವ ಲಾಭರಹಿತ ಸಂಸ್ಥೆಯನ್ನು ಕುಮಾರಸ್ವಾಮಿ ರೂಪಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಆ ಪ್ರದೇಶದ ಶಾಲೆಗಳನ್ನು ದತ್ತು ಪಡೆದು ಬಡವರಿಗೆ ಮೈಕ್ರೊ ಕ್ರೆಡಿಟ್‌ ಸೌಲಭ್ಯ ಒದಗಿಸುವುದು, ಇತ್ಯಾದಿ ಜನಮುಖಿ ಕಾರ್ಯಕ್ರಮಗಳನ್ನು ರಾಜ್ಯದ ಇತರ ಎನ್‌ಜಿಓಗಳ ಸಹಕಾರದೊಂದಿಗೆ ಹಮ್ಮಿಕೊಳ್ಳುವುದು ಈ ಸಂಸ್ಥೆಯ ಉದ್ದಿಶ್ಯ. ಈ ಸಂಸ್ಥೆಯ ಧ್ಯೇಯ: ಕಲ್ಯಾಣ ಕರ್ನಾಟಕದ ಸಾಕಾರ!

ಅಮೆರಿಕಾದಲ್ಲಿ ಅನಧಿಕೃತ ಸಾಂಸ್ಕೃತಿಕ ರಾಯಭಾರಿಯಾಗಿ ಕನ್ನಡದ ಪರಿಚಾರಿಕೆಯಲ್ಲಿ ತೊಡಗಿರುವ ಕುಮಾರಸ್ವಾಮಿ ಕುವೆಂಪು ಪ್ರತಿಪಾದಿಸುವ 'ವಿಶ್ವಮಾನವ' ಆದರ್ಶಕ್ಕೆ ಹತ್ತಿರದವರು. ಕನ್ನಡವನ್ನು ಉಳಿಸುವಲ್ಲಿ , ಅಂತರ್ಜಾಲದಲ್ಲಿ ಅರಳಿಸುವಲ್ಲಿ , ವಿಶ್ವಭಾಷೆಯಾಗಿ ರೂಪಿಸುವಲ್ಲಿ ಕುಮಾರಸ್ವಾಮಿ ಅವರಂಥ ಕನ್ನಡ ಪರಿಚಾರಕರ ಮಹತ್ವ ದೊಡ್ಡದು.