ಲಕ್ಕುಂಡಿಯ ದೇವಾಲಯಗಳು

ಲಕ್ಕುಂಡಿಯ ದೇವಾಲಯಗಳು

ಬರಹ

ಗದಗ - ಕೊಪ್ಪಳ ದಾರಿಯಲ್ಲಿ ೧೨ ಕಿಮಿ ಕ್ರಮಿಸಿದರೆ ಸಿಗುವುದು ಲಕ್ಕುಂಡಿ ಎಂಬ ೧೧-೧೨ನೇ ಶತಮಾನದ ಶಿಲ್ಪಕಲೆಯನ್ನು ಸಾರುವ ಪುಟ್ಟ ಊರು. ೧೦೧ ದೇವಸ್ಥಾನಗಳು, ೧೦೧ ಬಾವಿಗಳು ಮತ್ತು ೧೦೧ ಲಿಂಗಗಳ ಊರು ಲಕ್ಕುಂಡಿ ಎಂದು ಪ್ರಸಿದ್ಧವಾದರೂ ಅವುಗಳಲ್ಲಿ ಬಹಳಷ್ಟು ಕಾಲನ ದಾಳಿಗೆ ನಶಿಸಿದ್ದರೆ ಇನ್ನೂ ಕೆಲವು ಒತ್ತುವರಿಗೆ ಬಲಿಯಾಗಿವೆ.

ಲಕ್ಕುಂಡಿ ಒಂದು ಕಾಲದಲ್ಲಿ ಪ್ರಸಿದ್ಧ ಶಿಕ್ಷಣ ಕೇಂದ್ರವಾಗಿತ್ತು. ೧೦ರಿಂದ ೧೨ನೇ ಶತಮಾನದವರೆಗೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಜೈನ, ವೈದಿಕ ಮತ್ತು ಶೈವ ಧರ್ಮಗಳಿಗೆ ಆಶ್ರಯ ನೀಡಿದ ಲಕ್ಕುಂಡಿ ಅತ್ತಿಮಬ್ಬೆಯ ಕರ್ಮಭೂಮಿಯೂ ಆಗಿರುವುದು. ಇಂದಿನ ಲಕ್ಕುಂಡಿ ಆ ಕಾಲದಲ್ಲಿ 'ಲೊಕ್ಕಿಗುಂಡಿ' ಎಂದು ಪ್ರಸಿದ್ಧವಾಗಿತ್ತು. ಬಂಗಾರದ ನಾಣ್ಯಗಳನ್ನು ತಯಾರಿಸುವ ಟಂಕಸಾಲೆ ಈ ಊರಿನಲ್ಲಿತ್ತು. ಈ ನಾಣ್ಯಗಳು ಆಗಿನ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಚಲಾವಣೆಯಲ್ಲಿದ್ದವು. ನೆರೆ ಬಂದಾಗ ಈಗಲೂ ಲಕ್ಕುಂಡಿಯ ಜನರು ಮೋರಿಗಳಲ್ಲಿ, ಬಾವಿಗಳಲ್ಲಿ ಆಗಿನ ಕಾಲದ ಚಿನ್ನದ ನಾಣ್ಯಗಳೇನಾದರೂ ಸಿಗಬಹುದೇ ಎಂದು ಹುಡುಕುತ್ತಾರೆ.

ಕಲ್ಯಾಣ ಚಾಲುಕ್ಯರು, ಸೇವುಣರು ಮತ್ತು ದೇವಗಿರಿ ಯಾದವರ ಕಾಲದಲ್ಲಿ ಲಕ್ಕುಂಡಿ ಬಹಳ ಪ್ರಾಮುಖ್ಯತೆಯನ್ನು ಪಡೆದಿತ್ತು. ಹೊಯ್ಸಳ ದೊರೆ ಇಮ್ಮಡಿ ಬಲ್ಲಾಳ ಲಕ್ಕುಂಡಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಎಂಬ ದಾಖಲೆಗಳಿವೆ. ಲಕ್ಕುಂಡಿ ಗ್ರಾಮದೊಳಗೆ ತಿರುಗಾಡಿದರೆ ಹಿಂದಿನ ಭವ್ಯ ಇತಿಹಾಸದ ಕುರುಹುಗಳನ್ನು ಕಾಣಬಹುದು. ಇದೊಂದು ದೇವಾಲಯಗಳ ಮತ್ತು ಬಾವಿಗಳ ಊರಾಗಿತ್ತು. ಇಲ್ಲಿನ ಕೋಟೆ ೩ ಸುತ್ತಿನದಾಗಿತ್ತು. ಈಗ ಕೋಟೆಯ ೩ ಸುತ್ತುಗಳ ಗೋಡೆಯನ್ನೇ ಮನೆಗಳ ನೆಲಗಟ್ಟನ್ನಾಗಿ ಅಥವಾ ಗೋಡೆಗಳನ್ನಾಗಿ ಬಳಸಲಾಗಿದೆ. ಊರೊಳಗೆ ಸುತ್ತಾಡುವಾಗ ಆಚೀಚೆ ದೃಷ್ಟಿ ಹಾಯಿಸಿದರೆ ಕೋಟೆಯ ಗೋಡೆಗಳ ನೆಲಗಟ್ಟು ಸ್ಪಷ್ಟವಾಗಿ ಕಾಣಸಿಗುವುದು. ಕೋಟೆಯೊಳಗಿನ ಕಂದಕಗಳು ಈಗ ಮಳೆಗಾಲದ ನೀರನ್ನು ಹಾಯಿಸುವ ಮೋರಿಗಳಾಗಿವೆ. ಕಲ್ಯಾಣ ಚಾಳುಕ್ಯರು ಲಕ್ಕುಂಡಿಯ ಹೆಚ್ಚಿನ ದೇವಾಲಯಗಳನ್ನು ಕಟ್ಟಿಸಿದರು ಎನ್ನಲಾಗುತ್ತದೆ. ಈ ದೇವಾಲಯಗಳು ೧೦೮೭ರಲ್ಲಿ ಚೋಳರ ದಾಳಿಯಲ್ಲಿ ಹಾನಿಗೊಳಗಾದಾಗ, ಲಕ್ಕುಂಡಿಯನ್ನು ನಂತರ ಆಳಿದವರು ಹಾನಿಗೊಳಗಾದ ದೇವಾಲಯಗಳನ್ನು ಸರಿಪಡಿಸಿದರು.

ಲಕ್ಕುಂಡಿ ಬಸ್ಸು ನಿಲ್ದಾಣದ ಹಿಂಭಾಗದಲ್ಲಿ ಒಂದೇ ಪ್ರಾಂಗಣದೊಳಗೆ ಮಣಕೇಶ್ವರ ದೇವಾಲಯ ಮತ್ತು ಮುಸುಕಿನ ಬಾವಿ ಇವೆ. ಹಿಂದೆ ಗಿಡ ಮರಗಳಿಂದ ಸುತ್ತುವರಿದು ಮುಸುಕು ಹಾಕಿದಂತೆ ಇದ್ದಿದ್ದರಿಂದ ಮುಸುಕಿನ ಬಾವಿ ಎಂಬ ಹೆಸರು. ವಾಸ್ತು ರಚನೆಯಲ್ಲಿ ತನ್ನದೇ ಆದ ಶೈಲಿಯನ್ನು ಹೊಂದಿರುವ ಭವ್ಯವಾದ ಬಾವಿ ಎನ್ನಬಹುದು. ಬಾವಿಯ ಗೋಡೆಯಲ್ಲಿ ಪುಟ್ಟ ಗೋಪುರವನ್ನು ಹೊಂದಿರುವ ಮಂಟಪಗಳನ್ನು ನಿರ್ಮಿಸಿ ಅದರಲ್ಲಿ ವಿಗ್ರಹಗಳನ್ನು ಇಡಲಾಗಿದೆ. ಈ ಬಾವಿಯ ಸೌಂದರ್ಯವನ್ನು ಕಣ್ಣಾರೆ ಕಂಡು ಆನಂದಿಸಬೇಕು. ನಾವು ತೆರಳಿದಾಗ ಮುಸುಕಿನ ಬಾವಿ ನೀರಿನಿಂದ ತುಂಬಿತ್ತು. ಎಪ್ರಿಲ್-ಮೇ ತಿಂಗಳಲ್ಲಿ ತೆರಳಿದರೆ ನೀರು ಕಡಿಮೆಯಾಗಿ, ಬಾವಿಯ ಭವ್ಯ ರಚನೆಯನ್ನು ಕಾಣಬಹುದು. ನೀರು ಕಡಿಮೆಯಿರುವಾಗ ಮುಸುಕಿನ ಬಾವಿಯ ಚಿತ್ರಗಳನ್ನು ಶಾಂತಕುಮಾರ್ ಎಂಬವರು ಇಲ್ಲಿ ಹಾಕಿದ್ದಾರೆ, ನೋಡಿ. ಒಂದು ಸಾವಿರ ವರ್ಷ ಹಳೆಯದಾದ ಈ ಬಾವಿ ಇಂದಿಗೂ ತನ್ನ ಸೌಂದರ್ಯವನ್ನು ಉಳಿಸಿಕೊಂಡಿರುವುದು ಸೋಜಿಗವೆನಿಸುತ್ತದೆ. ಲಕ್ಕುಂಡಿಯ ಬಾವಿಗಳ ಪೈಕಿ ಸುಂದರವಾಗಿದ್ದು, ನೋಡಲು ಯೋಗ್ಯವಾಗಿರುವುದೆಂದರೆ ಮುಸುಕಿನ ಬಾವಿ ಮಾತ್ರ.

ಮುಸುಕಿನ ಬಾವಿಗೆ ತಾಗಿಕೊಂಡೇ ಮಣಕೇಶ್ವರ ದೇವಾಲಯವಿದೆ. ಭಗವಾನ್ ಶಿವನ ಮತ್ತೊಂದು ಹೆಸರೇ ಮಣಕೇಶ್ವರ. ಸಣ್ಣದಿದ್ದರೂ ಸುಂದರವಾದ ದೇವಾಲಯವಿದು. ಈ ದೇವಾಲಯ ೩ ಗರ್ಭಗುಡಿಗಳನ್ನು ಹೊಂದಿದ್ದು, ಮುಖ್ಯ ಗರ್ಭಗುಡಿಯಲ್ಲಿ ಮಾತ್ರ ಶಿವಲಿಂಗವಿದೆ. ಎಡ ಮತ್ತು ಬಲದಲ್ಲಿರುವ ಗರ್ಭಗುಡಿಗಳಲ್ಲಿ ಏನೂ ಇಲ್ಲ.

ನಂತರ ನಾವು ತೆರಳಿದ್ದು ೧೦೦೭ರಲ್ಲಿ ಅತ್ತಿಮಬ್ಬೆ ನಿರ್ಮಿಸಿದ ಜೈನ ಬಸದಿಗೆ. ಅತ್ತಿಮಬ್ಬೆಯು ೧೫೦೦ ಜೈನ ಬಸದಿಗಳನ್ನು ನಿರ್ಮಿಸಿರುವಳು ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಇವೆಲ್ಲಾ ಎಲ್ಲೆಲ್ಲಿ ಇವೆ ಎಂಬ ಬಗ್ಗೆ ಹೆಚ್ಚಿನ ದಾಖಲೆಗಳಿಲ್ಲ. ಲಕ್ಕುಂಡಿಯಲ್ಲಿರುವುದು ಆಕೆ ಕಟ್ಟಿಸಿದ ೧೫೦೧ನೇ ಜೈನ ಬಸದಿ. ೧೦೦೭ರಲ್ಲಿ ನಿರ್ಮಿತವಾದ ಈ ಬಸದಿಯು ೧೦೪೦ ರಲ್ಲಿ ಕುಸಿದುಬಿತ್ತು. ಭರತರಾಯ ಎಂಬ ದೊರೆಯು ಕುಸಿದ ಈ ಜೈನ ದೇವಾಲಯವನ್ನು ೧೦೪೯ರಲ್ಲಿ ಮತ್ತೆ ನಿರ್ಮಿಸಿ ಅದಕ್ಕೆ 'ಬ್ರಹ್ಮ ಜಿನಾಲಯ' ಎಂದು ಮರುನಾಮಕರಣ ಮಾಡಿದನು. ಒಬ್ಬರಿಗೆ ರೂ.೫ರಂತೆ ಚೀಟಿ ಪಡೆದು ಈ ಜಿನಾಲಯಕ್ಕೆ ಸಮೀಪವೇ ಇರುವ ರಾಜ್ಯ ಪುರಾತತ್ವ ಇಲಾಖೆಯಿಂದ ಸ್ಥಾಪಿತವಾಗಿರುವ ವಾಸ್ತುಶಿಲ್ಪ ಸಂಗ್ರಹಾಲಯವನ್ನು ವೀಕ್ಷಿಸಿದೆವು. ವಸ್ತು ಸಂಗ್ರಹಾಲಯದ ಎದುರಿಗೆ 'ಕನೇರ ಬಾವಿ' ಇದೆ. ಇದು ಕಸ ಕಡ್ಡಿಗಳಿಂದ ತುಂಬಿದ್ದು ಪಾಳು ಬಿದ್ದಿದೆ. ನಂತರ ಸಂಗ್ರಹಾಲಯದ ಬಲಕ್ಕೆ ಹತ್ತಾರು ಮೆಟ್ಟಿಲುಗಳನ್ನೇರಿದರೆ ಭವ್ಯವಾದ ಬ್ರಹ್ಮ ಜಿನಾಲಯ. ಗರ್ಭಗುಡಿಯಲ್ಲಿ ಕರಿಕಲ್ಲಿನ ಮಹಾವೀರನ ವಿಗ್ರಹವಿದೆ. ಈ ಜಿನಾಲಯವನ್ನು ಕಲ್ಯಾಣ ಚಾಲುಕ್ಯರ ಶಿಲ್ಪಕಲಾ ಶೈಲಿಯಲ್ಲಿ ಕಟ್ಟಲಾಗಿದೆ. ಜಿನಾಲಯದ ಬಲಗಡೆ ರುಂಡವಿಲ್ಲದ ತೀರ್ಥಂಕರನ ಕಲ್ಲಿನ ಮೂರ್ತಿಯೊಂದು ಧ್ಯಾನಕ್ಕೆ ಕುಳಿತಿರುವ ರೂಪದಲ್ಲಿದೆ.

ಇಲ್ಲಿ ನಮ್ಮ ಭೇಟಿಯಾದದ್ದು ಮುತ್ತಪ್ಪ ಮುಸುಕಿನಬಾವಿ ಎಂಬ ಸಜ್ಜನರೊಂದಿಗೆ. ಇವರನ್ನು ನಮ್ಮನ್ನು ಉಳಿದ ಎಲ್ಲಾ ದೇವಾಲಯಗಳನ್ನು ತೋರಿಸುವಂತೆ ವಿನಂತಿಸಿದೆ. ನಂತರ ನಾವು ತೆರಳಿದ್ದು ಜಿನಾಲಯಕ್ಕೆ ಸಮೀಪದಲ್ಲೇ ಇರುವ ನಾಗನಾಥ ದೇವಾಲಯಕ್ಕೆ. ಇದೊಂದು ಸಣ್ಣ ದೇವಳ. ಸಣ್ಣ ಶಿವಲಿಂಗದ ಹಿಂದೆ ಶಿವಲಿಂಗದ ನಾಲ್ಕು ಪಟ್ಟು ದೊಡ್ಡದಿರುವ ನಾಗನ ರಚನೆ. ನಾಗನ ಇಕ್ಕೆಲಗಳಲ್ಲಿ ಕನ್ಯೆಯರು - ಮನುಷ್ಯ ರೂಪದಲ್ಲಿರುವ ನಾಗಕನ್ಯೆಯರಿರಬಹುದು. ನಾಗದೇವರ ಕೆತ್ತನೆ ಇರುವ ಕಲ್ಲು ಸುಮಾರು ೪ ಅಡಿ ಎತ್ತರವಿದೆ.

ವಿಶಾಲವಾದ ಲಕ್ಕುಂಡಿ ಕೆರೆಯ ತಟದಲ್ಲಿರುವುದು ಹಾಲುಗುಂದ ಬಸವೇಶ್ವರ ದೇವಾಲಯ. ಒಳಗಡೆ ೩ ಗರ್ಭಗುಡಿಗಳನ್ನು ಹೊಂದಿರುವ ಈ ದೇವಾಲಯ ಹೊರಗಿನಿಂದ ಯಾವುದೇ ಗೋಪುರಗಳನ್ನೊಳಗೊಂಡಿಲ್ಲ. ಈ ದೇವಾಲಯದೊಳಗೆ ಕಾಲಿಟ್ಟೊಡನೆ ಕಂಡುಬರುವುದು ಬೃಹದಾಕಾರದ ನಂದಿ ವಿಗ್ರಹ. ಬಲಕ್ಕೆ ಇರುವ ಗರ್ಭಗುಡಿಯಲ್ಲಿನ ಶಿವಲಿಂಗಕ್ಕೆ ಮುಖ ಮಾಡಿ ಈ ನಂದಿಯನ್ನು ಕೂರಿಸಲಾಗಿದೆ. ಎಡಕ್ಕೆ ಮತ್ತು ನೇರಕ್ಕೆ ಇರುವ ಗರ್ಭಗುಡಿಗಳಲ್ಲೂ ಶಿವಲಿಂಗಗಳಿವೆ. ಒಂದೇ ದೇವಸ್ಥಾನ. ೩ ಗರ್ಭಗುಡಿಗಳು. ಪ್ರತಿ ಗರ್ಭಗುಡಿಯಲ್ಲೂ ಶಿವಲಿಂಗ. ಆದರೆ ೩ ಶಿವಲಿಂಗಗಳಿಗೆ ಒಂದೇ ನಂದಿ. ಹಾಲುಗುಂದ ಬಸವೇಶ್ವರ ದೇವಸ್ಥಾನದ ಪ್ರಾಂಗಣಕ್ಕೆ ತಾಗಿಕೊಂಡೇ ಇರುವುದು 'ಮಜ್ಜಲ ಬಾವಿ'. ಈ ಬಾವಿಯ ನೀರು ಋತುಮಾನಗಳಿಗೆ ಅನುಗುಣವಾಗಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ ಎಂಬ ಪ್ರತೀತಿ. ನಾವು ತೆರಳಿದಾಗ ಬಾವಿಯ ನೀರು ಕಪ್ಪು ಬಣ್ಣದಾಗಿತ್ತು. ಕೆಂಪು ಹಾಗೂ ನೀಲಿ ಬಣ್ಣಗಳಿಗೆ ಈ ಬಾವಿಯ ನೀರು ಬದಲಾಗುತ್ತದೆ ಎಂದು ಮುತ್ತಪ್ಪ ತಿಳಿಸಿದರು.

ಸಮೀಪದಲ್ಲೇ ಇರುವುದು ನನೇಶ್ವರ ದೇವಸ್ಥಾನ ಹಾಗೂ ಕಾಶಿ ವಿಶ್ವೇಶ್ವರ ದೇವಾಲಯ. ಇವೆರಡೂ ದೇವಾಲಯಗಳು ಎದುರು ಬದುರಾಗಿವೆ. ಮಧ್ಯದಲ್ಲೊಂದು ರಸ್ತೆ ಹಾದುಹೋಗಿದೆ. ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿ ಈ ಎರಡೂ ದೇವಾಲಯಗಳಿರುವುದರಿಂದ ಅವು ಸುಸ್ಥಿತಿಯಲ್ಲಿವೆ. ನನೇಶ್ವರ ದೇವಾಲಯವನ್ನು ೧೨ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಮುಖಮಂಟಪ ವಿಶಾಲವಾಗಿದ್ದು ೨೦ ಕಲ್ಲಿನ ಕಂಬಗಳನ್ನು ಹೊಂದಿದೆ. ಮುಖಮಂಟಪ ದಾಟಿದರೆ ನವರಂಗ ನಂತರ ಅಂತರಾಳ ಮತ್ತು ಗರ್ಭಗುಡಿ. ಗರ್ಭಗುಡಿಯಲ್ಲಿ ಶಿವಲಿಂಗ. ಈ ದೇವಾಲಯಕ್ಕೆ ೨ ದ್ವಾರಗಳಿವೆ. ಮುಖಮಂಟಪದಲ್ಲಿ ಇರುವ ಮುಖ್ಯ ಬಾಗಿಲು ಮತ್ತು ಎಡ ಪಾರ್ಶ್ವದಲ್ಲಿ ಮತ್ತೊಂದು ಬಾಗಿಲು. ಈ ೨ನೇ ದ್ವಾರವನ್ನು ೪ ತೋಳಿನ ದ್ವಾರ ಎಂದೂ ಕರೆಯಲಾಗುತ್ತದೆ. ದ್ವಾರದ ಇಕ್ಕೆಲಗಳಲ್ಲಿ ಕಲ್ಲಿನ ೪ ಪದರಗಳನ್ನು ಕೆತ್ತಲಾಗಿರುವುದರಿಂದ ೪ ತೋಳಿನ ದ್ವಾರವೆಂಬ ನಾಮ.

ಲಕ್ಕುಂಡಿಯ ಪ್ರಸಿದ್ಧ ದೇವಾಲಯವೆಂದರೆ ಕಾಶಿ ವಿಶ್ವೇಶ್ವರ ದೇವಾಲಯ. ಭವ್ಯವಾಗಿ ಕಾಣುವ ಈ ದೇವಾಲಯ ಕಣ್ಣು ಕುಕ್ಕುವಷ್ಟು ಸುಂದರವಾಗಿದೆ. ಶಿಲ್ಪಕಲೆಯನ್ನು ಹೊಗಳಿದಷ್ಟು ಕಡಿಮೆ. ಈ ದೇವಾಲಯವನ್ನು ನೋಡುವುದರಲ್ಲಿ ನಾನು ಬಹಳ ಸಮಯ ತೆಗೆದುಕೊಂಡೆ. ಪ್ರತಿ ಕೆತ್ತನೆಯನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಾ ನಾನು ದೇವಾಲಯಕ್ಕೆ ನಾಲ್ಕಾರು ಸುತ್ತು ಹಾಕಿರಬೇಕು. ವಿಶಿಷ್ಟ ಶೈಲಿಯಲ್ಲಿ ನಿರ್ಮಿಸಲಾಗಿರುವ ಅದ್ಭುತ ಶಿಲ್ಪಕಲೆಯ ಸುಂದರ ದೇವಾಲಯ. ಈ ದೇವಾಲಯವನ್ನು ಅಗತ್ಯಕ್ಕಿಂತ ತುಂಬಾ ಹೆಚ್ಚು ಹೊಗಳುತ್ತಿದ್ದೇನೆ ಎಂದೆನಿಸುತ್ತಿದೆಯೇ? ಏನು ಮಾಡಲಿ....ದೇವಾಲಯವೇ ಹಾಗಿದೆ.

ಚೋಳ ಅರಸರ ದಾಳಿಗೆ ಸಿಕ್ಕು ನಾಶವಾಗಿದ್ದ ಈ ದೇವಾಲಯವನ್ನು ಹೊಯ್ಸಳ ದೊರೆ ವೀರಬಲ್ಲಾಳನು ಪುನ: ನಿರ್ಮಿಸಿರಬೇಕೆಂಬ ನಂಬಿಕೆಯಿದೆ. ಇಲ್ಲಿ ೨ ಗರ್ಭಗುಡಿಗಳಿದ್ದು, ಇವೆರಡಕ್ಕೂ ಗೋಪುರಗಳಿವೆ. ೨ ಗರ್ಭಗುಡಿಗಳು ಒಂದಕ್ಕೊಂದು ಮುಖ ಮಾಡಿಕೊಂಡಿವೆಯಲ್ಲದೇ ನಡುವೆ ತೆರೆದ ಅಂತರವಿದೆ. ಮುಖ್ಯ ಗರ್ಭಗುಡಿಯಲ್ಲಿ ಕಾಶಿ ವಿಶ್ವೇಶ್ವರನ ಲಿಂಗವಿದೆ. ಗರ್ಭಗುಡಿಯ ಎದುರಿಗೆ ಅಂತರಾಳ ಮತ್ತು ನವರಂಗ. ಗುಡಿಯ ಹೊರಗೋಡೆಯ ಮೇಲೆ ರಾಮಾಯಣ ಮತ್ತು ಮಹಾಭಾರತದ ಘಟನೆಗಳ ಶಿಲ್ಪಗಳನ್ನು ಕೆತ್ತಲಾಗಿದೆ. ಕಾಶಿ ವಿಶ್ವೇಶ್ವರನ ಗುಡಿಗೆ ಎರಡು ದ್ವಾರಗಳಿವೆ. ಮುಂಭಾಗದ ಮುಖ್ಯ ದ್ವಾರ ಮತ್ತು ಎಡ ಪಾರ್ಶ್ವದಲ್ಲೊಂದು ದ್ವಾರ. ಈ ಎಡ ಪಾರ್ಶ್ವದಲ್ಲಿರುವ ದ್ವಾರವನ್ನು ಅತ್ಯದ್ಭುತವಾಗಿ ಕೆತ್ತಲಾಗಿದ್ದು '೯ ತೋಳಿನ ದ್ವಾರ' ಎಂದು ಕರೆಯಲಾಗುತ್ತದೆ. ದ್ವಾರದ ಇಕ್ಕೆಲಗಳಲ್ಲಿ ೯ ಕಲ್ಲಿನ ಪದರಗಳನ್ನು ಕೆತ್ತಲಾಗಿರುವುದರಿಂದ ೯ ತೋಳಿನ ದ್ವಾರ ಎಂಬ ಹೆಸರು. ಪ್ರತಿ ತೋಳಿನಲ್ಲೂ ಅದ್ಭುತ ಕೆತ್ತನೆ ಕೆಲಸ. ಕಾಶಿ ವಿಶ್ವೇಶ್ವರ ಗುಡಿಗೆ ಮುಖ ಮಾಡಿ ಇರುವುದು ಸೂರ್ಯ ದೇವನ ಗುಡಿ. ಒಂದೇ ತಳಪಾಯದ ಮೇಲೆ ಈ ಎರಡು ಗುಡಿಗಳನ್ನು ನಿರ್ಮಿಸಲಾಗಿದೆಯಾದರೂ ನಡುವೆ ತೆರೆದ ಅಂತರವಿದೆ. ಇಲ್ಲಿನ ಗರ್ಭಗುಡಿಯಲ್ಲಿ ಸೂರ್ಯ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು ಆದರೆ ಈಗ ಸೂರ್ಯ ದೇವರ ಪೀಠ ಮಾತ್ರ ಉಳಿದಿದೆ. ಸೂರ್ಯದೇವರ ಗರ್ಭಗುಡಿಯ ತಳಪಾಯ ವೃತ್ತಾಕಾರದಲ್ಲಿರುವುದನ್ನು ಗಮನಿಸಬಹುದು.

ನಂತರ ನಾವು ತೆರಳಿದ್ದು ಊರಿನ ಮಧ್ಯದಲ್ಲಿರುವ ವಿರೂಪಾಕ್ಷ ದೇವಾಲಯಕ್ಕೆ. ದೇವಾಲಯದ ಅತೀ ಹತ್ತಿರದವರೆಗೆ ಅಂದರೆ ಕೇವಲ ಒಂದು ಅಡಿ ಸಮೀಪದವರೆಗೆ ವಾಹನಗಳು ಓಡಾಡುತ್ತವೆ. ಒಳಗಡೆ ಬಸವಣ್ಣನ ವಿಗ್ರಹವಿದೆ. ಮುಂಭಾಗದಲ್ಲಿನ ಮುಖಮಂಟಪ ಬಿದ್ದುಹೋಗಿದ್ದು ತಳಪಾಯ ಮಾತ್ರ ಉಳಿದಿದೆ. ಈ ತಳಪಾಯದ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಾರೆ ಲಕ್ಕುಂಡಿಯ ವೃದ್ಧರು, ಯುವಕರು ಮತ್ತು ಮಹಿಳೆಯರು. ಮಕ್ಕಳಿಗಂತೂ ಇದೊಂದು ಕಣ್ಣಾಮುಚ್ಚಾಲೆ ಆಟ ಆಡಲು ಯೋಗ್ಯವಾದ ಸ್ಥಳವಾಗಿದೆ. ಮುತ್ತಪ್ಪನವರಲ್ಲಿ ಈ ಬಗ್ಗೆ ಕೇಳಿದರೆ, 'ಈ ದೇವಾಲಯವನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಂಡಿಲ್ಲ' ಎಂಬ ನಿರ್ಲಿಪ್ತ ಉತ್ತರ ನೀಡಿದರು. ಅಲ್ಲೇ ಸಮೀಪದಲ್ಲಿ ರಸ್ತೆಯ ಮತ್ತೊಂದು ಬದಿಯಲ್ಲಿ ಮನೆಗಳ ಸಾಲುಗಳ ಹಿಂದೆ ಮರೆಯಾದಂತೆ ಕಾಣುತ್ತಿತ್ತು ಮಲ್ಲಿಕಾರ್ಜುನ ದೇವಾಲಯ. ಇದರ ಸ್ಥಿತಿಯೂ ವಿರೂಪಾಕ್ಷ ದೇವಾಲಯದಂತೇ!

ಕೊನೆಯದಾಗಿ ಭೇಟಿ ನೀಡಿದ್ದು ಕುಂಬಾರೇಶ್ವರ ದೇವಾಲಯಕ್ಕೆ. ಇದನ್ನು ಸರಕಾರ ತನ್ನ ವಶಕ್ಕೆ ಪಡೆದಿದೆ ಎನ್ನುತ್ತಾ ಮುತ್ತಪ್ಪ ನಮ್ಮನ್ನು ದೇವಾಲಯದ ಸಮೀಪ ಕರೆದೊಯ್ದರು. ದೇವಾಲಯಕ್ಕೆ ಎಷ್ಟು ಸಮೀಪವೋ ಅಷ್ಟು ಸಮೀಪದವರೆಗೆ ಮನೆ ಮಾಡಿಕೊಂಡಿದ್ದಾರೆ ಲಕ್ಕುಂಡಿಯ ಜನರು. ಈ ದೇವಸ್ಥಾನದ ಒಂದು ಹೊರಗೋಡೆಯೇ ಮನೆಯೊಂದರ ಒಳಗೋಡೆ! ದೇವಾಲಯದ ಬಾಗಿಲಿನ ಎಡಕ್ಕೆ ಆಡೊಂದನ್ನು ಕಟ್ಟಲಾಗಿದ್ದರೆ ಬಲಕ್ಕೆ ದನವೊಂದು ಮತ್ತದರ ಕರುವನ್ನು ಕಟ್ಟಲಾಗಿತ್ತು. ಅಲ್ಲೇ ಸಮೀಪ ಅವುಗಳ ಆಹಾರವಾಗಿ ಬೈಹುಲ್ಲು. ಸೆಗಣಿ ರಾಶಿ. ಸರಕಾರ ತನ್ನ ವಶಕ್ಕೆ ಪಡೆದ ಕುಂಬಾರೇಶ್ವರ ದೇವಾಲಯದ ಪರಿಸ್ಥಿತಿ, ಸರಕಾರದ ವಶದಲ್ಲಿರದ ವಿರೂಪಾಕ್ಷ ದೇವಾಲಯಗಿಂತ ಕಡೆ. ಯಾರ ವಶದಲ್ಲಿದ್ದು ಏನು ಪ್ರಯೋಜನ?

ಪ್ರಾಚೀನ ದೇವಾಲಯಗಳನ್ನು ನೋಡುವ ಆಸಕ್ತಿಯುಳ್ಳವರು ಮತ್ತು ಶಿಲ್ಪಕಲೆಯನ್ನು ಮೆಚ್ಚುವವರು ಭೇಟಿ ನೀಡಲೇಬೇಕಾದ ಸ್ಥಳ ಲಕ್ಕುಂಡಿ.

ಆ ದಿನ ನಾವು ಪ್ರಯಾಣಿಸಿದ ದಾರಿ...

ಹುಬ್ಬಳ್ಳಿ - ಅಣ್ಣಿಗೇರಿ - ಗದಗ - ಲಕ್ಕುಂಡಿ - ಗದಗ - ಲಕ್ಷ್ಮೇಶ್ವರ - ದೊಡ್ಡೂರ - ನಲೋಗಲ್ - ಬೆಳ್ಳಟ್ಟಿ - ತಂಗೋಡ - ಇಟಗಿ - ತೆರೆದಹಳ್ಳಿ - ಮೇವುಂಡಿ - ನೀರಲಗಿ - ಬೆಳವಿಗಿ - ಗಳಗನಾಥ - ಬೆಳವಿಗಿ - ಗುತ್ತಲ - ಹರಳಹಳ್ಳಿ - ಗುತ್ತಲ - ಹಾವೇರಿ - ಶಿಗ್ಗಾವಿ - ಹುಬ್ಬಳ್ಳಿ - ೩೨೧ ಕಿ.ಮಿ.ಗಳು.