ಸಮಸ್ಯಾತ್ಮಕ ಸುಳಿ

ಸಮಸ್ಯಾತ್ಮಕ ಸುಳಿ

ಬರಹ

(ಇ-ಲೋಕ-63)(26/2/2008)  


 ಕಂಪ್ಯೂಟರ್ ತಂತ್ರಾಂಶಗಳಲ್ಲಿ ದೋಷಗಳು ಉಳಿದುಕೊಳ್ಳುವುದಿದೆ.ಇಂತಹ ದೋಷಗಳನ್ನು ಸರಿ ಪಡಿಸಲು ಸಾಮಾನ್ಯವಾಗಿ ಕ್ರಮ ಕೈಗೊಳ್ಳುತ್ತಾದರೂ,ಕೆಲವು ತೊಂದರೆಗಳು ಬಗೆ ಹರಿಯದೆ ಉಳಿದು ಬಿಡುವುದಿದೆ. ಅಂತಹ ತೊಂದರೆಗಳ ಪೈಕಿ ಒಂದು,ಕೆಲವರ ಹೆಸರಿನಲ್ಲಿ ಕಾಣಿಸಿಕೊಳ್ಳುವ ಸುಳಿ ’ ಚಿಹ್ನೆ.O’Connors, D’Angelos ಇಂತಹ ಹೆಸರುಗಳಲ್ಲಿರುವ ಸುಳಿ ಅಕ್ಷರ ಹಲವು ಬಾರಿ ತೊಂದರೆ ಕೊಡುವುದಿದೆ. ವಿಮಾನ ಅಥವಾ ರೈಲು ಟಿಕೆಟ್ ಖರೀದಿಗೆ ಹೆಸರು ನೀಡುವಾಗ,ಇಂತಹ ಹೆಸರು ಟೈಪಿಸಿದರೆ, ಅದು ಸರಿಯಾದ ಹೆಸರಲ್ಲ ಎಂದು ಕಂಪ್ಯೂಟರ್ ತಕರಾರು ತೆಗೆಯುವುದು ಹಲವರ ಅನುಭವಕ್ಕೆ ಬಂದಿದೆ. ನಿಜವಾಗಿಯಾದರೆ ಇದು ಕಂಪ್ಯೂಟರ್ ತಂದೊಡ್ಡುವ ಸಮಸ್ಯೆಯಲ್ಲ. ತಂತ್ರಾಂಶ ಅಭಿವೃದ್ಧಿ ಪಡಿಸುವವರು,ಬಳಕೆದಾರರು ನೀಡುವ ವಿವರಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಿ,ಅವನ್ನು ಸ್ಮರಣಕೋಶದಲ್ಲಿ ಉಳಿಸಿಕೊಳ್ಳುವ ಬಗ್ಗೆ ತೀರ್ಮಾನಿಸುವಂತೆ ತಂತ್ರಾಂಶ ರಚಿಸಿರುತ್ತಾರೆ.ಉದಾಹರಣೆಗೆ ತಾರೀಕು ಟೈಪಿಸುವಾಗ ಮುವತ್ತೊಂದಕ್ಕಿಂತ ದೊಡ್ದ ಅಂಕಿ ತುಂಬು ಬಾರದು. ಹೆಸರಿನಲ್ಲಿ ಸುಳಿ ಬರಬಾರದು ಎಂದು ನಿಗದಿ ಪಡಿಸಿದ್ದರೆ ತೊಂದರೆ ಎದುರಾಗುತ್ತದೆ.ಹಾಗೆಯೇ ಮಾಹಿತಿಗಳನ್ನು ಉಳಿಸಿಕೊಳ್ಳಲು ಬಳಸಲಾಗುವ ಡೇಟಾಬೇಸ್ ತಂತ್ರಾಂಶಗಳಲ್ಲೂ ಇದೇ ತೆರನ ಮಾಹಿತಿ ಸಕ್ರಮ ಪರೀಕ್ಷೆ ನಡೆಯುವುದಿದೆ.ಅಲ್ಲೂ ಸುಳಿಯು ಹೆಸರಿನಲ್ಲಿ ಕಾಣಿಸಿಕೊಳ್ಳುವುದು ಸಕ್ರಮವಲ್ಲವೆಂದು ನಿಗದಿಯಾಗಿದ್ದರೆ, ಅದು ಇಂತಹ ಹೆಸರನ್ನು ತಿರಸ್ಕರಿಸಬಹುದು.ಕಂಪ್ಯೂಟರ್ ಬಳಕೆದಾರರು ಇಂತಹ ಕಿರಿಕಿರಿಗೆ ಪದೇ ಪದೇ  ಎದುರಿಸ ಬೇಕಾಗಬಹುದು. ಆಗವರು ತಮ್ಮ ಹೆಸರಿನಿಂದ ಸುಳಿಯನ್ನು ಕೈಬಿಡಲು ತೀರ್ಮಾನಿಸುವುದೇ ಹೆಚ್ಚು.ಕಂಪ್ಯೂಟರ್ ತಂತ್ರಾಂಶಗಳನ್ನು ಬದಲಿಸುವುದು ಖರ್ಚಿನ ಬಾಬತ್ತಾದರಿಂದ ಅವುಗಳಲ್ಲಿ ಸಮಸ್ಯೆಯಿದ್ದರೂ ಬದಲಾಯಿಸುವ ನಿರ್ಧಾರ ಕೈಗೊಳ್ಳುವ ಕಂಪೆನಿಗಳು ವಿರಳ.Lina Al-Athari ಅಂತಹ ಹೆಸರು ಹೊಂದಿದ ಇರಾಕಿ ಸರದಾರರ ಕತೆಯೂ ಇದೇ.ಅಮೆರಿಕಾದಲ್ಲಿ ಕಳೆದ ಅಧ್ಯಕ್ಷೀಯ ಚುನಾವಣೆ ವೇಳೆ ಹಲವರು ಮತದಾನದಿಂದ ಹೊರಗುಳಿಯ ಬೇಕಾದ್ದಕ್ಕೆ ಇದುವೇ ಕಾರಣವಂತೆ.ಯಾವ ಕಾರಣಕ್ಕೂ ತಮ್ಮ ಹೆಸರು ಬದಲಾಗಬಾರದು ಎಂದು ಹಟ ತೊಟ್ಟು ನ್ಯಾಯಾಲಯದ ಮೆಟ್ಟಲು ಏರಲು ಯೋಚಿಸಿ,ಆನ್‍ಲೈನ್ ದೂರು ನೀಡಲು ಮುಂದಾದರೆ,ಅಲ್ಲಿಯೂ "ಸರಿಯಾದ ಹೆಸರು ನೀಡಿ" ಎಂಬ ವಿನಂತಿ ಎದುರಾಗುವುದು ಸಂಭವನೀಯ!
ಕಂಪ್ಯೂಟರಿಂದ ಗೌಪ್ಯ ಮಾಹಿತಿ ಕದಿಯುವುದು ಸಾಧ್ಯ!
 ಕಂಪ್ಯೂಟರುಗಳ ಹಾರ್ಡ್‍ಡಿಸ್ಕುಗಳಲ್ಲಿರುವ ಗೌಪ್ಯ ಮಾಹಿತಿಗಳನ್ನು ಕದಿಯುವುದು ಸಾಧ್ಯವೇ?ಪ್ರಿನ್ಸ್‍ಟನ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಇದು ಸಾಧ್ಯ. ಹಾರ್ಡ್‍ಡಿಸ್ಕುಗಳಲ್ಲಿರುವ ಮಾಹಿತಿಯನ್ನು ಅಡಗಿಸಲು ಅವನ್ನು ಗೂಢ ಲಿಪಿಯಲ್ಲಿ ಸಂಗ್ರಹಿಸಿದರೂ,ಅದನ್ನು ಕದಿಯಲು ಸಾಧ್ಯವೆಂದು ಅವರು ನಡೆಸಿರುವ ಪರೀಕ್ಷೆಗಳು ಸಿದ್ಧ ಪಡಿಸಿವೆಯಂತೆ.ಆದರೆ ಅವರ ವಿಧಾನದಿಂದ ರಹಸ್ಯ ಕದಿಯಲು ಕಂಪ್ಯೂಟರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.ವಿಧಾನ ಹೇಳುವಷ್ಟು ಸರಳವೂ ಅಲ್ಲ ಎನ್ನುವುದು ಸಮಾಧಾನಕರ ವಿಷಯ.ಕಂಪ್ಯೂಟರುಗಳ ಹಾರ್ಡ್‍ಡಿಸ್ಕುಗಳಲ್ಲಿರುವ ಮಾಹಿತಿಯು ಕಂಪ್ಯೂಟರಿನ ತೆರೆಯಲ್ಲಿ ಪ್ರದರ್ಶಿತವಾಗುವ ಮುನ್ನ,ಅದನ್ನು ರಾಮ್ ಎನ್ನುವ ಸ್ಮರಣ ಕೋಶಕ್ಕೆ ತರಿಸಿಕೊಳ್ಳುವುದು ಕಂಪ್ಯೂಟರುಗಳ ಕ್ರಮ. ಈ ರಾಮ್ ಸ್ಮರಣಕೋಶಗಳು ಕಂಫ್ಯೂಟರ್ ಚಾಲನೆಯಲ್ಲಿದ್ದಾಗ ಮಾತ್ರ ಮಾಹಿತಿಯನ್ನು ಹಿಡಿದಿಟ್ಟುಕೊಳ್ಳುತ್ತವೆ.ಕಂಪ್ಯೂಟರ್ ಬಂದಾದಾಗ,ಅದರಲ್ಲಿದ್ದದ್ದು ಅಳಿಸಿಹೋಗುತ್ತದೆ ಎಂದು ನಂಬಲಾಗಿತ್ತು.ಸಂಶೋಧಕರು ಬಂದು ಮಾಡಿದ ಕಂಪ್ಯೂಟರ್ ರಾಮ್‍ಗಳಲ್ಲಿರುವ ಮಾಹಿತಿಯನ್ನು ಪಡೆಯಲು ಶಕ್ತರಾಗಿದ್ದಾರೆ.ಅದಕ್ಕೆ ಅವರು ಮಾಡಿದ್ದು,ರಾಮ್ ಕೋಶವನ್ನು ಹೊರತೆಗೆದು,ಅದನು ತಂಪಾಗಿರಿಸಿದರು.ಹೀಗೆ ತಂಪು ಮಾಡಿದ ರಾಮ್ ಗಂಟೆಗಟ್ಟಲೆ ಚಾಲೂ ಆಗಿದ್ದಾಗ ತನ್ನಲ್ಲಿದ್ದ ಮಾಹಿತಿಯನ್ನು ಹಿಡಿದಿಟ್ಟು ಕೊಂಡದ್ದು ಕಂಡುಬಂತು.ತಂಪಾಗಿರಿಸಿದ ರಾಂ‍ಗಳನ್ನು ಕಂಪ್ಯೂಟರಿಗೆ ಸಿಕ್ಕಿಸಿದಾಗ,ಅದು ತನ್ನಲ್ಲಿದ್ದ ಮಾಹಿತಿಯನ್ನು ತೆರೆಯ ಮೇಲೆ ಪ್ರದರ್ಶಿಸಿತಂತೆ.ಆದರೆ ದೂರದಲ್ಲಿರುವ ಕಂಪ್ಯೂಟರಿನಿಂದ ಮಾಹಿತಿ ಕದಿಯಲು ಈ ವಿಧಾನ ಅವಕಾಶ ನೀಡದು.ಹಾಗಾಗಿ ವಿಧಾನ ಭಾರೀ ಅಪಾಯಕರವಾಗಿ ಪರಿಣಮಿಸದು ಎನ್ನುವುದೇ ಸಮಾಧಾನ ತರುವ ವಿಷಯ.
ವೈದ್ಯಕೀಯ ದಾಖಲೆ ಶೋಧ ಸೇವೆ ಒದಗಿಸಲಿರುವ ಗೂಗಲ್
 ಗೂಗಲ್ ಅಂತರ್ಜಾಲದ ಹುಡುಕು ಸೇವೆಯಿಂದ ಆರಂಭಿಸಿ,ಈಗ ತರಹೇವಾರು ಸೇವೆಗಳನ್ನು ನೀಡುತ್ತಿದೆ.ಜನರ ವೈದ್ಯಕೀಯ ಮಾಹಿತಿಗಳನ್ನು ಕಲೆ ಹಾಕಿ,ಅವುಗಳಲ್ಲಿ ಅಗತ್ಯ ಮಾಹಿತಿ ಹುಡುಕಿ ಕೊಡುವ ವಿನೂತನ ಸೇವೆಯತ್ತ ಅದು  ಹೆಜ್ಜೆ ಹಾಕಿದೆ.ಕ್ಲೀವ್‍ಲ್ಯಾಂಡ್ ಕ್ಲಿನಿಕ್‍ನ ಸಾವಿರದೈನೂರು ರೋಗಿಗಳ ದಾಖಲೆಗಳ ಶೋಧ ಸೇವೆ ಒದಗಿಸುವ ಪ್ರಾಯೋಗಿಕ ಯೋಜನೆಯ ಮೂಲಕ ಗೂಗಲ್ ಹೊಸ ಸೇವೆಗೆ ನಾಂದಿ ಹಾಡಲಿದೆ. ಆರೋಗ್ಯ ಮಾಹಿತಿ,ಪರೀಕ್ಷೆಗಳ ಫಲಿತಾಂಶ,ವೈದ್ಯಕೀಯ ಸಲಹೆ ಇತ್ಯಾದಿಗಳ ದಾಖಲೆಗಳನ್ನಿಟ್ಟುಕೊಂಡು,ಅವುಗಳ ಪೈಕಿ ಬೇಕಾದ್ದನ್ನು ಆಯ್ದು ಕೊಡುವುದು ಗೂಗಲ್ ಯೋಜನೆ. ಇದರಿಂದ ಆದಾಯ ಗಳಿಸುವುದು ಹೇಗೆಂದು ಗೂಗಲ್ ಲೆಕ್ಕ ಹಾಕಿರ ಬಹುದಾದರೂ,ಅದನ್ನು ಬಹಿರಂಗ ಪಡಿಸಿಲ್ಲ.
ತನ್ನ ತಂತ್ರಾಂಶಗಳ ಗುಟ್ಟು ರಟ್ಟಾಗಿಸಲಿರುವ ಮೈಕ್ರೋಸಾಫ್ಟ್
 ಮುಕ್ತ ತಂತ್ರಾಂಶಗಳ ಹರಿಕಾರರು ಮೈಕ್ರೋಸಾಫ್ಟ್ ತಂತ್ರಾಂಶಗಳ ಜತೆ ಬೆರೆಯುವ ತಂತ್ರಾಂಶಗಳ ಅಭಿವೃದ್ಧಿ ಪಡಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಸಹಾಯ ಹಸ್ತ ನೀಡಲು ಮನ ಮಾಡಿರುವಂತಿದೆ.ಇದುವರೆಗೆ ಕಂಪೆನಿಯ ತಂತ್ರಾಂಶಗಳ ಸಾಲುಗಳು ಅನ್ಯರಿಗೆ ಅಲಭ್ಯ.ಅವನ್ನು ಮಾರ್ಪಡಿಸುವ ಅಧಿಕಾರ ಇತರರಿಗೆ ಇಲ್ಲ.ಹಾಗಾಗಿ ಕಂಪೆನಿಯು ಏಕಸ್ವಾಮ್ಯ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.ಆದರೆ ದಿನದಿಂದ ದಿನಕ್ಕೆ ಕಂಪೆನಿಯ ಈ ವೈಖರಿಗೆ ಜನರ ಪ್ರತಿರೋಧ ಹೆಚ್ಚುತ್ತಿದೆ.ನ್ಯಾಯಾಲಯಗಳೂ ಮೈಕ್ರೋಸಾಫ್ಟಿನ ಏಕಸ್ವಾಮ್ಯ ನೀತಿಯ ಪರವಾಗಿಲ್ಲ.
ಬ್ಲೂರೇಡಿಸ್ಕ್ ಮಾದರಿಯ ಡಿವಿಡಿ ಡಿಸ್ಕ್ ಗೆದ್ದಿದೆ!
 ಇತ್ತೀಚೆಗಿನ ವರ್ಷಗಳಲ್ಲಿ ಡಿವಿಡಿಗಳು ಇಪ್ಪತ್ತೈದು ಜಿಬಿ ಸಾಮರ್ಥ್ಯದಲ್ಲೂ ಲಭ್ಯವಾಗಿದ್ದುವು.ಆದರೆ ಎರಡು ಬಗೆಯ ಡಿಸ್ಕುಗಳು ಲಭ್ಯವಿದ್ದುವುದು.ಬ್ಲೂರೇಡಿಸ್ಕ್ ಒಂದು ಬಗೆಯದ್ದದಾದರೆ,ಎಚ್ ಡಿ ಡಿಸ್ಕ್‍ಗಳು ಇನ್ನೊಂದು ಬಗೆಯವು.ಸೋನಿ ಫಿಲಿಫ್ಸ್ ಅಂತಹ ಕಂಪೆನಿಗಳು ಬ್ಲೂರೇಡಿಸ್ಕ್ ಡಿವಿಡಿಗಳನ್ನು ತಯಾರಿಸಿದರೆ,ಟೊಶಿಬಾ ಅಂತಹ ಕಂಪೆನಿಗಳು ಎಚ್ ಡಿ ಮಾದರಿಯ ಹಿಂಬಾಲಿಸಿದ್ದುವುದು. ಈಗ ಕೊನೆಗೆ ಕಂಪೆನಿಗಳು ಬ್ಲೂರೇಡಿಸ್ಕ್ ಮಾನಕವನ್ನೇ ಉಳಿಸಿಕೊಳ್ಳಲು ನಿರ್ಧರಿಸಿವೆ.

ashokworld

udayavani
*ಅಶೋಕ್‍ಕುಮಾರ್ ಎ