ನಾ ಕಂಡ ಚೆನ್ನೈ

ನಾ ಕಂಡ ಚೆನ್ನೈ

ಬರಹ

ಕುಡಿಯಲು ಸಿಗಲೊಲ್ಲದು ಹನಿ ಶುದ್ಧ ನೀರು
ಬೀದಿಬೀದಿಯಲೂ ಕಾಣಬರುವುದು ಬೀರು ಬಾರು
ಈಗಿಲ್ಲಿ ನಡೆದಿಹುದು ಅಮ್ಮನವರ ದರಬಾರು
ಕೆಲವೊಮ್ಮೆ ಸಾಗುವುದು ಅಣ್ಣನವರ ಕಾರುಬಾರು

ತಂಬಿ ತಂಗಚ್ಚಿಗಳು ಮತ ಯಾಚನೆಗಾಗಿಹ ಗೊಂಬೆಗಳು
ನನ್ನ ಕಣ್ಣಿಗೆ ಮಾತ್ರ ಅವರು ಉಸಿರಾಡುತಿಹ ಜೀವಿಗಳು
ಕೊಚ್ಚೆಯಲೂ ರಚ್ಚೆ ಹಿಡಿಯದ ಹಸುಗೂಸುಗಳು
ಮತ ಚಲಾಯಿಸದೇ ಸೂತ್ರ ಹಿಡಿವ ಶ್ರೀಮಂತ ಜಿಗಣೆಗಳು

ಸಣ್ಣ ಮಳೆ ಬರಲೂ ಈ ಊರಾಗುವುದೊಂದು
ದೊಡ್ಡ ಕೊಚ್ಚೆ ಗುಂಡಿ
ಸುಭಿಕ್ಷದಲಿ ಭೂಗರ್ಭ ಸೀಳಿ ಭೋರ್ಗರೆವುದು
ದುರ್ನಾತದ ಮಲನೀರೆಂಬ ಪ್ರಚಂಡಿ

ತಾನೇನು ಕಡಿಮೆ ಇಲ್ಲವೆಂದು ಎತ್ತಿ ಬಿಸಾಕುವುದು
ಸತ್ತ ಜಲಚರಗಳ ಆ ಸಮುದ್ರ ದೇವತೆ
ಇವೆಲ್ಲದರ ಗೊಡವೆ ಇಲ್ಲದ್ದೆ ಸುಖಿಸುವರು
ತಂಬಿ ತಂಗಚ್ಚಿಗಳು ನಿರ್ಲಿಪ್ತರಂತೆ

ಕೆರೆ ಕಟ್ಟೆ ಒಡೆಯೆ ಊರೊಳಗೆ ಹರಿ ಬಿಟ್ಟರು
ನೀರೊಂದಿಗೆ ಶತಮಾನದ ಗಲೀಜು
ಊರ ತುಂಬಾ ಎಲ್ಲೆಲ್ಲಿ ನೋಡಲೂ ಕೊಳಚೇ ನೀರು
ಆದರೂ ಕುಡಿಯಲು ಸಿಗಲೊಲ್ಲದು ಹನಿ ಶುದ್ಧ ನೀರು