ಹೀಗೊಂದು ಬೆಳಗು

ಹೀಗೊಂದು ಬೆಳಗು

ಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ ಮಲಗಿಸಿದೆ. ದೊಡ್ಡ ಮಗನಿಗೆ ಶಾಲೆಗೆ ಏನು ಬೇಕೆಂದು ಕೇಳಿ, ಅವನ ಇಷ್ಟದ ನೂಡಲ್ಸ್ ಮಾಡಿದೆ. ಜೊತೆಗೆ, ತೊಳೆದು ಒರೆಸಿದ ಕೆಂಪು ದ್ರಾಕ್ಷಿ ಹಣ್ಣು, ಬಿಸ್ಕತ್ತು, ನೀರು, v-8 ಜೂಸು ಎಲ್ಲಾ ಊಟದ ಪೆಟ್ಟಿಗೆಯಲ್ಲಿ ಭರ್ತಿ ಮಾಡಿದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಗಂಡ, "ನೀನು ದಿನವೂ ಮಕ್ಕಳಿಗೆ ಇಷ್ಟೆಲ್ಲಾ ಮಾಡುತ್ತೀಯಾ?" ಎಂದು ಅಚ್ಚರಿ ವ್ಯಕ್ತಪಡಿಸಿದ! ಇದು ಇಂದು ತಿಳಿಯಿತೇ ಎಂದು ವ್ಯಂಗ್ಯವಾಡಿ "mood" ಕೆಡಿಸಲೋ ಅಥವಾ ಹೆಮ್ಮೆಯಿಂದ ಬೀಗಲೋ ಎಂಬ ದ್ವಂದ್ವದಲ್ಲೇ ಎರಡನೆಯದು ಮಾಡಿದೆ. ಅಷ್ಟರಲ್ಲಿ, ಗಂಡ ಹಿತ್ತಲ ಕಡೆ ಬಗ್ಗಿ ನೋಡಿ, "ಅರೆರೆ, ನೋಡೋ, ನಿಮ್ಮಮ್ಮ "weeds" ಕಿತ್ತು ಎಷ್ಟೊಂದು ಓರಣ ಮಾಡಿದ್ದಾಳೆ "ಎಂದ. ದೊಡ್ಡ ಮಗ, "ಇಲ್ಲಪ್ಪ ಅಂಥದ್ದೇನೂ ಮಾಡಿಲ್ಲ ಅಮ್ಮ. ಆ ಕಲ್ಲೊಂದನ್ನು ಅಲ್ಲಿಂದ ಇಲ್ಲಿಗೆ ಜರುಗಿಸಿ ಓರಣವಾಗಿ ಕಾಣುವಂತೆ ಮಾಡಿದ್ದಾಳೆ" ಎಂದು ಬೇಡದ ವರದಿ ಒಪ್ಪಿಸಿದ. ಅಯ್ಯೋ ಕೃತಘ್ಣ್ನನೇ! ಎಂದು ಅವನನ್ನು ಆಚೆ ಶಾಲೆಗೆ ದಬ್ಬಿ, ನನ್ನ ಕಡೆ ಆರಾಧನಾ ನೋಟ ಬೀರಿದ ಗಂಡನಿಗೆ, ಏನು ಸಮಾಚಾರ? ಯಾತಕ್ಕಾಗಿ ಈ ಪೂಸಿ? ಎಂದು ಹಾಸ್ಯ ಮಾಡಿ ಆಫೀಸಿನತ್ತ ತಳ್ಳಿದೆ. ಆದರೂ....

ಯಾರಾದರೂ ಒಂಚೂರು ಹೊಗಳಿದರೆ ಕುಣಿಕುಣಿದು, ಇನ್ನೂ ಹೊಗಳುವಂತೆ ಕೆಲಸ ಮಾಡಬೇಕೆಂದು ಬಯಸುವ ಮನಸ್ಸಿಗೆ ಏನು ಮಾಡಬೇಕು? ಇಲ್ಲಿ ಯಾರು ಯಾರನ್ನು exploit ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ :-)

Rating
No votes yet