ನಾ ಅಮೆರಿಕೆಯಿಂದ ಬಂದಾಗ
ಅದೋ ಅಲ್ಲಿ ಬಂದ ನನ್ಕಂದ, ನನ್ನ ಮಗ, ನನ್ನ ಮುದ್ದಿನ ತಮ್ಮ, ನನ್ನ ಗುರು, ನನ್ ಚಿಕ್ಕಪ್ಪ, ಆಂ! ನನ್ ಚಿಕ್ಕ - ಸ್ವಾಮೇರು ಬಂದ್ರು - ಸ್ವಾಮೇ ಕೊಡಿ ನಿಮ್ ಲಗೇಜು - ಅಯ್ಯೋ ಇದೇನು ಏರ್ ಪೋರ್ಟ್‍ನಲ್ಲಿ ಇಷ್ಟೆಲ್ಲಾ ಗಲಾಟೆ. ಗಲಾಟೆ ಅಲ್ಲ ಸ್ವಾಮಿ ನಿಕಟ ಸಂಬಂಧಿಗಳು ತಮ್ಮವರನ್ನು ಎದುರುಗೊಳ್ಳುತ್ತಿರುವುದು. ಅಲ್ಲಿ ನೋಡಿ ಟಾಟಾ ಸುಮೋ ನಿಂತಿದೆ, ಅಲ್ಲಿ ಇಬ್ಬರು ಹೆಣ್ಣು ಮಕ್ಕಳು (ಸುಮಂಗಲಿಯರು) ಆರತಿ ತಟ್ಟೆ ಹಿಡಿದು ನಿಂತಿದ್ದಾರೆ.
ಇದೇನು ಹೇಳ್ತಿದ್ದೀನಿ, ಇವರೆಲ್ಲಾ ಯಾರು ಅಂತ ನಿಮಗಾಶ್ಚರ್ಯವೇ? ಅಯ್ಯೋ! ಮೊದಲು ಹೇಳಿಬಿಡ್ತೀನಿ. ನಾನು ಅಮೆರಿಕೆಯಿಂದ ತಾಯ್ನಾಡಿಗೆ ಬಂದ ಸಂದರ್ಭ. ಇವರೆಲ್ಲರೂ ನನ್ನ ಸಂಬಂಧಿಗಳು. ಇವರೆಲ್ಲರೂ ಸಂಬೋಧಿಸುತ್ತಿರುವುದು ನನ್ನನ್ನೇ. ನನ್ನೊಬ್ಬನನ್ನೇ.
ನಾನು ಒಂದು ವರ್ಷದಿಂದ ಅಮೆರಿಕೆಯ ನ್ಯೂಜರ್ಸಿಯಲ್ಲಿ ಕೆಲಸ ಮಾಡುತ್ತಿದ್ದೀನಿ. ಮೊದಲ ಬಾರಿಗೆ ತಾಯ್ನಾಡಿಗೆ ಬಂದಿಳಿಯುತ್ತಿದ್ದೀನಿ. ತಾಯ್ನಾಡು ಅಂದ್ರೆ ಬೆಂಗಳೂರು ಸ್ವಾಮಿ. ತಂದೆ ನಾಡು ಪಕ್ಕದ ದೊಡ್ಡಬಳ್ಳಾಪುರ. ಮೊದಲು ತಂದೆಯ ಮನೆಗೇ ತಾನೇ ಹೋಗಬೇಕಾಗಿರೋದು. ಹುಟ್ಟಿ ಬೆಳೆದ ಮನೆಯದು. ಈ ಸನ್ನಿವೇಶದಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ವೇಳೆಗೆ ಇವರೆಲ್ಲರೂ ಎದುರುಗೊಳ್ಳಲು ಬಂದಿದ್ದಾರೆ. ಓಹ್! ಮರೆತಿದ್ದೆ, ಇವರೆಲ್ಲರ ಪರಿಚಯ ಮಾಡಿಸಬೇಕಾದದ್ದು ನನ್ನ ಆದ್ಯ ಕರ್ತವ್ಯ. ಇಲ್ದೇ ಇದ್ರೆ ಮನೆಗೆ ಹೋದ ಮೇಲೆ ಅವರ್‍ಯಾರೋ ನಿನ್ನ ಜೊತೆ ಇದ್ದವರು, ನಮಗೆ ಪರಿಚಯ ಮಾಡಿಸಲೇ ಇಲ್ಲ - ಏನೋ ಮಸಲತ್ತು ಮಾಡ್ತಿದ್ದೀಯೇ ಅಂತ ಇಲ್ಲ ಸಲ್ಲದ ಕಥೆಗಳನ್ನೆಲ್ಲಾ ಕಟ್ಟಿಬಿಡ್ತಾರೆ.
ನೋಡಿ ಅಲ್ಲಿದ್ದಾರಲ್ಲ ನನ್‍ಕಂದ ಅಂದವರು ಅವರೇ ನನ್ನಮ್ಮ, ಪಕ್ಕದಲ್ಲಿ ನನ್ನಪ್ಪ, ಅವರ ಪಕ್ಕ ಅದೇ ದಪ್ಪಗಿರುವವರು ನನ್ನಣ್ಣ, ನನ್ನ ಅತ್ತಿಗೆ, ನನ್ನ ಅಣ್ಣನ ಮೊದಲನೆಯ ಮಗ ಮತ್ತು ಎರಡನೆಯ ಮಗ. ಇನ್ನು ಲಗೇಜು ತೆಗೆದುಕೊಳ್ಳಲು ಬಂದವನು ನಮ್ಮ ಮನೆಯ ಆಳು ಸಿದ್ದ. ಬಹಳ ನಂಬಿಕಸ್ಥ. ತನ್ನ ಜೀವಮಾನವನ್ನೆಲ್ಲಾ ನಮ್ಮ ಮನೆಯ ಏಳಿಗೆಗೇ ತೇಯ್ದ ಜೀವ. ಆಗ್ಲೇ ನಿಮಗೆ ಅನುಮಾನ ಬಂತೇ? ನನ್ನ ಅತ್ತಿಗೆಯ ಪಕ್ಕದಲ್ಲಿ ನಿಂತಿರುವ ಇನ್ನೊಬ್ಬರನ್ನು ಪರಿಚಯಿಸಿಲ್ಲ ಅಂತ. ಅಯ್ಯೋ! ಅವರಿನ್ನೂ ನನಗೆ ಸಂಬಂಧಿ ಆಗಿಲ್ಲ. ನನ್ನ ಅತ್ತಿಗೆಯ ತಂಗಿ ಅಷ್ಟೇ, ಸ್ವಾಮಿ. ನಡೆಯಿರಿ ಮುಂದಕ್ಕೆ ಹೋಗೋಣ.
ಹತ್ತಿರ ಹೋದಂತೆ ಸುಮಂಗಲಿಯರು ಆರತಿ ಎತ್ತಿದರು. ಇದೇನು ನಡುರಸ್ತೆಯಲ್ಲಿ ನಿಲ್ಲಿಸಿ ಊರಿನವರೆಲ್ಲರೂ ನೋಡುವ ಹಾಗೆ ಮಾಡ್ತಿದ್ದಾರಲ್ಲ ಅನ್ನಿಸಿದರೂ ಅವರ ಮನಸ್ಸಿಗ್ಯಾಕೆ ನೋವು ಮಾಡುವುದು ಅಂತ ಸುಮ್ಮನಾದೆ. ಪಕ್ಕದಲ್ಲಿರುವಾತ (ಅಮೆರಿಕೆಯಿಂದ ಜೊತೆಗೆ ಬಂದಿದ್ದಾನೆ, ತಲಹರಟೆ ಪ್ರಾಣಿ) - ಏನೋ ವಿಶ್ವ ಅವರೆಲ್ಲರ ಕಣ್ಣುಗಳಲ್ಲೂ ಬೆಳ್ಳಿ ಚುಕ್ಕಿ ಮಿನುಗುತ್ತಿದೆ. ಏನಪ್ಪಾ ನೀನು ಬಲು ಅದೃಷ್ಟವಂತ ಎನ್ನೋದೇ. ಲೇ! ತಲೆಹರಟೆ, ಮೆಲ್ಲಗೆ ಮಾತಾಡೋ, ಅದು ಬೆಳ್ಳಿ ಚುಕ್ಕೆ ಅಲ್ಲ. ಈಗ ಸಮಯ ಎಷ್ಟು ಹೇಳು. ೮ ಘಂಟೆ. ಇವರೆಲ್ಲರೂ ಬೆಳಗಿನ ಜಾವ ೪ಕ್ಕೇ ಊರನ್ನು ಬಿಟ್ಟು ಇಲ್ಲಿಗೆ ಬಂದಿದ್ದಾರೆ. ರಾತ್ರಿ ೧೨ಕ್ಕೆ ನಾನು ಬೇರೆ ಮುಂಬಯಿ ತಲುಪಿದ ತಕ್ಷಣ ಫೋನ್ ಮಾಡಿದ್ದೆ. ಆಗಿನಿಂದ ಯಾರಿಗೂ ನಿದ್ದೆ ಇಲ್ಲ. ಕಣ್ಣಲ್ಲಿರುವುದು ಚುಕ್ಕೆ ಅಲ್ಲ ಪಿಸುರು, ಎಂದು ಅವನ ಕಿವಿಯಲ್ಲಿ ಉಸುರಿದ್ದೆ.
ಅಷ್ಟು ಹೊತ್ತಿಗೆ ಅತ್ತಿಗೆ ಪುಟ್ಟನನ್ನು ಎತ್ತಿಕೊಂಡು ನನ್ನ ಹತ್ತಿರ ಕೊಡಲು ಮುಂದಾದರು. 'ಪುಟ್ಟ ಚಿಕ್ಕಪ್ಪ ಕಣೋ. ಫೋನ್‍ನಲ್ಲಿ ಚಿಕ್ಕ ಅಂತಿರ್ತೀಯಲ್ಲ'. ಮಗು ಹತ್ತಿರ ಬರಲು ಸ್ವಲ್ಪ ಕೊಸರಾಡಿತು. ನಾನು ಅಯ್ಯೋ ಅವನಿಗೆ ಹೇಗೆ ನನ್ನ ಪರಿಚಯ ಇದ್ದೀತು. ನಾನು ಅಮೆರಿಕೆಗೆ ಹೋಗುವಾಗ ಅವನಿನ್ನೂ ಕಣ್ಣು ಬಿಡದ ಕೈಗೂಸು. ಇನ್ನು ಸ್ವಲ್ಪ ಹೊತ್ತಾಗಲಿ ಬಿಡಿ. ಹತ್ತಿರ ಬಂದೇ ಬರ್ತಾನೆ, ಅಂದೆ. ಸರಿ ಎಲ್ಲರೂ ವ್ಯಾನ್ ಏರಿದರು. ನಾನು ಕೊನೆಗೆ ಹತ್ತುತ್ತೀನಿ ಅಂದಿದ್ದೇ ತಪ್ಪಾಯ್ತು. ಯಾಕೆ ಹೇಳಿ, ನಮ್ಮದು ಮೊದಲೇ ವಾನರ ಸೈನ್ಯ. ಮೇಲಾಗಿ ಎಲ್ಲರೂ ಹೆವಿ ವೈಟ್ಸ್. ನನಗೆಲ್ಲಿ ಜಾಗ. ಎಲ್ಲರೂ ತಮ್ಮ ತೊಡೆ ಮೇಲೆ ಬಂದು ಕೂತುಕೋ ಅಂತಾರೆ. ಹೋಗ್ಲಿ ಅಂತ ಡ್ರೈವರ್ ಪಕ್ಕದಲ್ಲೇ ಅಡ್ಜಸ್ಟ್ ಮಾಡಿಕೊಂಡು ಕುಳಿತೆ. ಅಲ್ಲಿಯೇ ಇದ್ದ ನನ್ನಣ್ಣನ ಮೊದಲನೆಯ ಮಗ ರಘು ಅಲಿಯಾಸ್ ರಾಘವೇಂದ್ರ ನನ್ನ ಸೂಟ್‍ಕೇಸನ್ನು ಒತ್ತಿ ಒತ್ತಿ ನೋಡ್ತಿದ್ದ. ಏನೋ ಬೇಕಿತ್ತು ಅಂತ ಅವರಪ್ಪ ಕೇಳಿದ್ರೆ, ನನ್ನ ಮುಖ ನೋಡಿ ತನ್ನ ೨೮ ಹಲ್ಲುಗಳನ್ನು ತೋರಿಸಿದ. ತಕ್ಷಣ ಅವನ ಹುಳುಕಾಗುತ್ತಿರುವ ಹಲ್ಲು ನೋಡಿ ನನಗರ್ಥವಾಯಿತು. ಇವನಿಗೆ ಚಾಕಲೇಟ್ ಬೇಕಿದೆ ಎಂದು. ಹೇಗಿದ್ದರೂ ವಿಮಾನದಲ್ಲಿ ಕೊಟ್ಟಿದ್ದ ಚಾಕಲೇಟ್ ಜೇಬಿನಲ್ಲೇ ಇತ್ತು, ಅದನ್ನೇ ಅವನ ಕೈಗಿತ್ತೆ. ಅಮ್ಮನ ಮುಖ ನೋಡಲು ಮಾತ್ರ ಧೈರ್ಯವೇ ಇಲ್ಲ. ವಿಮಾನ ನಿಲ್ದಾಣದಲ್ಲಿ ನೋಡಿದಾಕ್ಷಣ ಅವಳ ಕಣ್ಣಲ್ಲಿ ಬಂದ ನೀರು ಇನ್ನೂ ಬರುತ್ತಲೇ ಇತ್ತು. ಅಷ್ಟು ಖುಷಿ ಆಗಿದೆ ಅವಳಿಗೆ. ಮನೆಗೆ ಹೋಗಿ ತಲೆಗೆ ಹರಳೆಣ್ಣೆ ಹಾಕಿಸಿಕೊಂಡು ಮಜ್ಜನದಲ್ಲಿ ಸೀಗೇಕಾಯಿ ಪುಡಿ ತಿಕ್ಕಿಸಿಕೊಳ್ಳುವಾಗ ಎಲ್ಲವೂ ಸರಿಹೋಗುತ್ತದೆ ಅಂತ ಸುಮ್ಮನಾದೆ. ಆಗ ಅವಳು ಏನು ಮಾಡ್ತಾಳೆ ಗೊತ್ತಾ? ಮುಂಡೇದೇ, ಎಷ್ಟು ದಿನಗಳಾಯ್ತೋ ನೀನು ನೀರು ಹಾಕಿಕೊಂಡು. ಅದೇನೋ ಶಾಂಪೂ ಪಾಂಪೂ ಅಂತ ಇರ್ತೀಯೆ, ಈಗ ನೋಡು ತಲೆ ಹೇಗೆ ಕಾದು ದೋಸೆ ಹೆಂಚಾಗಿದೆ, ಅಂತ ನಯವಾಗಿ ತಲೆಯ ಮೇಲೆ ಮೊಟಕುತ್ತಾಳೆ. ಅದೇ ನನಗೆ ಬಲು ಸಂತೋಷ ಕೊಡೋದು. ಈ ಮಾತುಗಳನ್ನು ಕೇಳಿದರೇ ನನಗೆ ಸಮಾಧಾನವಾಗೋದು. ಇನ್ನು ಅಣ್ಣ ಕಿರುಗಣ್ಣಿನಲ್ಲಿ ನನ್ನನ್ನು ಮತ್ತು ಅತ್ತಿಗೆಯನ್ನೇ ನೋಡುತ್ತಿದ್ದ. ಅವನಿಗೆ ಅತ್ತಿಗೆಯಿಂದ ಏನೋ ಮೆಸೇಜ್ ಬರ್ತಿದೆ. ಎಷ್ಟೇ ಆಗಲಿ ಅವನು ಚಾರ್ಟರ್ಡ್ ಅಕೌಂಟೆಂಟ್ - ವ್ಯಾಪಾರೀ ಮನೋವೃತ್ತಿ. ಇನ್ನು ಅಪ್ಪನೋ, ನಿರಾಕಾರ ಸ್ವರೂಪಿ. ಎಂದಿಗೂ ಆರಕ್ಕೆ ಏರದವನು, ಮೂರಕ್ಕೆ ಇಳಿಯದವನು. ಜಾಸ್ತಿ ಏನನ್ನೂ ಮಾತನಾಡುವುದಿಲ್ಲ. ಆದರೂ ವರ್ಷದ ಮೇಲೆ ಮಗನನ್ನು ನೋಡಿದ ಸಂತೋಷ ಮನದಾಳದಲ್ಲಿ ಇದ್ದೇ ಇದೆ. ಇನ್ನು ನಮ್ಮ ಮನೆಯ ಕೆಲಸದವನು. ನಾನು ಚಿಕ್ಕಂದಿನಾಗಿದ್ದನಿಂದಲೂ ಎತ್ತಿ ಆಡಿಸಿದವನು. ಪ್ರತಿದಿನ ಶಾಲೆಗೆ ಕರೆದೊಯ್ಯುವಾಗ ಹೆಗಲ ಮೇಲೆ ಕೂರಿಸಿಕೊಂಡು ಜಂಬೂಸವಾರಿ ಮಾಡಿಸಿಕೊಂಡು ಹೋಗುತ್ತಿದ್ದವನು. ಒಂದು ರೀತಿಯಲ್ಲಿ ನನ್ನ ಪೋಷಕ ಎಂದರೆ ತಪ್ಪಾಗಲಾರದು. ಅವನೊಬ್ಬನಿಗೇ ನನ್ನ ಕಂಡು ಬಹಳ ಸಂತೋಷವಾಗಿ ಬಾಯಲ್ಲಿ ಮಾತೇ ಹೊರಡುತ್ತಿಲ್ಲ. ಕಣ್ಣೆವೆ ಮುಚ್ಚದೆ ನನ್ನನ್ನೇ ನೋಡುತ್ತಿರುವನು.
ಇನ್ನೊಬ್ಬಳಿದ್ದಾಳೆ, ಚೆಂಗುಳ್ಳಿ. ಅದೇ ಆಗ ನನ್ ಗುರು ಅಂತ ಅಂದಳಲ್ಲ ಸ್ವಾಮಿ. ಅವಳೇ! ನನ್ನ ಅತ್ತಿಗೆಯ ತಂಗಿ. ನನಗಿಂತ ೩ ವರ್ಷಕ್ಕೆ ಚಿಕ್ಕವಳು. ನಾನು ಅವಳನ್ನು ಆದಷ್ಟೂ ಅವಾಯ್ಡ್ ಮಾಡ್ತಿದ್ದೀನಿ. ಬೇಕೂಂತ ಕಿರುಗಣ್ಣಿನಲ್ಲೇ ಏನೋ ಸನ್ನೆ ಮಾಡ್ತಿದ್ದಾಳೆ. ಅಲ್ಲ, ಅವಳಿಗೆ ಬಾ ಅಂತ ಹೇಳಿದವರ್‍ಯಾರು. ಎಲ್ಲ ನಮ್ಮತ್ತಿಗೆಯದ್ದೇ ಕರಾಮತ್ತು. ಒಳ್ಳೆಯ ಕೆಲಸದಲ್ಲಿದ್ದೀನಿ ಅಂತ ನನ್ನ ಕುತ್ತಿಗೆಗೆ ಅವಳನ್ನು ಕಟ್ಟಲು ಹವಣಿಸುತ್ತಿದ್ದಾರೆ.
ಒಂದು ಘಂಟೆಯ ಪ್ರಯಾಣದ ನಂತರ ಮನೆಯನ್ನು ತಲುಪಿದೆವು. ಆಗಲೇ ಮನೆಯ ಮುಂದೆ ಊರಿನ ಜನರೆಲ್ಲಾ ಬಂದು ಕಾಯ್ತಿದ್ದಾರೆ. ಇದೇನು ನಾನು ಈ ಊರಿನ ವಿ.ಐ.ಪಿ.ಯಾ? ಎಷ್ಟೊಂದು ಜನರ ಮನ್ನಣೆ ನನಗೆ. ನಾನು ಸುಮೊದಿಂದ ಇಳಿಯುತ್ತಿದ್ದಾಗ ಒಬ್ಬ ವಯಸ್ಸಾದ ಗಂಡಸು ಮುಂದೆ ಬಂದು ಕುತ್ತಿಗೆಗೆ ಹಾರ ಹಾಕಿದರು. ನನಗೆ ವಿಪರೀತ ಮುಜುಗರವಾಯಿತು. ಅಷ್ಟರಲ್ಲಿ ನನ್ನಮ್ಮ ಬಂದು ಕಿವಿಯಲ್ಲಿ ಪಿಸುಗುಟ್ಟಿ ಅವರ ಕಾಲ್ಮುಟ್ಟಿ ನಮಸ್ಕರಿಸಲು ಹೇಳಿದಳು. ಏನೂ ತಿಳಿಯದ ನಾನು ಹಾಗೆ ಮಾಡಲು, ನನ್ನಣ್ಣ ಮತ್ತು ಅತ್ತಿಗೆ ನನ್ನನ್ನು ತಿಂದು ಹಾಕುವವರಂತೆ ನೋಡುತ್ತಿದ್ದರು. ಇನ್ನು ಅತ್ತಿಗೆಯ ತಂಗಿ ಮುಸು ಮುಸು ಅಳುತ್ತಾ ಒಳಗೆ ಓಡಿದಳು. ಅಯ್ಯೋ! ಇದೇನು ಕರ್ಮ ನನಗೆ, ಎಂದುಕೊಳ್ಳುತ್ತಿರುವಷ್ಟರಲ್ಲಿ, ಅಪ್ಪ ಪಕ್ಕದಲ್ಲಿ ಬಂದು ಹೇಳಿದರು. ಆತ ನನ್ನ ತಾಯಿಯ ಹತ್ತಿರದ ಸಂಬಂಧಿಯೆಂದೂ, ಒಬ್ಬ ಮಗಳು ಮದುವೆಗೆ ಇರುವಳೆಂದೂ, ಅವಳನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಇರುವರಂತೆ. ಆ ಹುಡುಗಿ ಹಳ್ಳಿಯಲ್ಲಿ ಬೆಳೆದವಳೆಂದು ಸ್ವಲ್ಪವೂ ನಯ ನಾಜೂಕು ಇಲ್ಲವೆಂದೂ, ಬೆಂಗಳೂರಿನಲ್ಲೂ ಬಾಳ್ವೆ ಮಾಡಲು ಲಾಯಕ್ಕಿಲ್ಲವೆಂದೂ ಅಣ್ಣ ಹೇಳಿದ್ದ. ಆದರೆ ನನ್ನ ಅತ್ತಿಗೆಗೆ ಅವರ ತಂಗಿಯನ್ನೇ ಮದುವೆ ಮಾಡಿಕೊಡಬೇಕೆಂಬ ಛಲ. ಅವಳು ಮಾತ್ರ ಮಾಡರ್ನ್ ಹುಡುಗಿಯರ ಥರ ಡ್ರೆಸ್ ಮಾಡಿಕೊಂಡು, ಮುಂಗೂದಲನ್ನು ಕತ್ತರಿಸಿಕೊಂಡು ಮದುವೆಗೆ ಸಿದ್ಧಳಾಗಿದ್ದಾಳೆಂಬುದನ್ನೂ ಅವನೇ ನನಗೆ ತಿಳಿಸಿದ್ದ. ಇದರ ಬಗ್ಗೆ ಹಿಂದಿನ ದಿನ ಮನೆಯಲ್ಲಿ ದೊಡ್ಡ ರಾದ್ಧಾಂತವಾಗಿತ್ತಂತೆ. ಅದು ಈಗ ಮರುಕಳಿಸುತ್ತಿದೆ.
ನಾನಿನ್ನೂ ೪-೫ ವರ್ಷಗಳು ಒಂಟಿಯಾಗಿ ಜೀವನವನ್ನು ಆನಂದಿಸಬೇಕೆಂದಿದ್ದರೆ, ಇವರುಗಳು ನನ್ನನ್ನು ಸಂಸಾರವೆಂಬ ಸೆರೆಮನೆಗೆ ಸಾಗಿಸಲು ಯೋಚಿಸುತ್ತಿದ್ದಾರೆ. ಈಗ ನಾನೇನಾದರೂ ಚಿತಾವಣೆ ಮಾಡಲೇಬೇಕೆಂದು ನನಗನ್ನಿಸಿತು. ಸ್ವಲ್ಪ ಸಮಯದ ಬಳಿಗ ಎಲ್ಲರೂ ಊಟಕ್ಕೆ ಕೂತಿದ್ದಾಗ ನಾನು ಹೇಳಿದೆ. ನೋಡಿ ನನ್ನ ಸ್ನೇಹಿತನನ್ನೂ ಕರೆತಂದಿದ್ದೇನೆ. ನಾವು ಬಂದಿರುವುದು ನಮ್ಮ ಕಂಪನಿಯ ಕೆಲಸದ ಮೇಲೆ. ಎರಡು ದಿನಗಳಿಗಿಂತ ಹೆಚ್ಚಿಗೆ ನಾನಿಲ್ಲಿರಲಾಗುವುದಿಲ್ಲ. ನಾಳೆ ಬೆಳಗ್ಗೆಯೇ ಬೆಂಗಳೂರಿಗೆ ಹೋಗಿ ಅಳಿದುಳಿದ ವೈಯಕ್ತಿಕ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ನನ್ನ ಸ್ನೇಹಿತನಂತೂ ತನ್ನ ಮನೆಗೂ ಹೋಗುತ್ತಿಲ್ಲ. ಇಷ್ಟು ಹೇಳಿದವನೇ ಉಟ ಮುಗಿದ ಕುಡಲೇ ಎಲ್ಲ ಹಿರಿಯರಿಗೂ ಕಾಲ್ಮುಟ್ಟಿ ನಮಸ್ಕರಿಸಿ ವಾಪಸ್ಸು ಬೆಂಗಳೂರಿಗೆ ಬಂದು ಒಂದು ಹೊಟೆಲ್‍ನಲ್ಲಿ ತಂಗಿದ್ದು, ಅಮೆರಿಕೆಗಾಗಿ ಕಾಯ್ದಿರಿಸಿದ್ದ ತಿಕೀಟನ್ನು ಪ್ರೀಪೋನ್ ಮಾಡಿಸಿಕೊಂಡು ಹೊರಟು ಬಂದೆ.
ನಮ್ಮೂರಿಗಿಂತ ದೂರದೂರಿನಲ್ಲಿದ್ದರೇ ಒಳಿತಲ್ಲವೇ? ಎಲ್ಲರಿಗೂ ಅವರವರದ್ದೇ ಚಿಂತೆ. ನೀವೇನಂತೀರಿ.