ಹಕ್ಕಿಗಳ ಗ್ಯಾರೇಜು

ಹಕ್ಕಿಗಳ ಗ್ಯಾರೇಜು

ಬರಹ

ಈ ಗ್ಯಾರೇಜಿನಲ್ಲಿ ಗಾಯಗೊಂಡ ಹಕ್ಕಿಗಳನ್ನೂ ರೆಪೇರಿ ಮಾಡಲಾಗುತ್ತದೆ.
ಶಿವಮೊಗ್ಗದ ಹರ್ಷ ಸರ್ವಿಸ್ ಸೆಂಟರಿನಲ್ಲಿ ಹಾಳಾದ ಗಾಡಿಗಳ ಜೊತೆಗೆ ಗಾಯಗೊಂಡ ಪಕ್ಶಿಗಳು ಆರೈಕೆ ಪಡೆಯುತ್ತವೆ. ಮಾಲಿಕ ಕೆನಿತ್ ಹರ್ಷ ಕೊಟ್ಯಾನ್ ಕಳೆದ ಹತ್ತು-ಹನ್ನೊಂದು ವರ್ಷಗಳಿಂದಲೂ ಇಂಥ ಹಕ್ಕಿಗಳಿಗೆ ಚಿಕಿತ್ಸೆ ನೀಡಿ ಅವು ಸ್ವತಂತ್ರವಾಗಿ ಹಾರಿ ತಮ್ಮ ನೈಸರ್ಗಿಕ ನಿವಾಸ ಸೇರಲು ಸಹಾಯ ಮಾಡುತ್ತಿದ್ದಾರೆ. ಶಾಶ್ವತ ಅಂಗವೈಕಲ್ಯಕ್ಕೊಳಗಾದ ಹಕ್ಕಿಗಳಿಗೆ ಗ್ಯಾರೇಜೇ ಗೂಡು.
ಏಳನೆ ತರಗತಿಯಲ್ಲಿದ್ದಾಗಲೇ ಈ ಹಕ್ಕಿ ಸಾಕುವ ಚಟ ಅಂಟಿಸಿಕೊಂಡ ಕೆನಿತ್, ಇಲ್ಲಿ ತನಕ ಸಾವಿರಾರು ಹಕ್ಕಿಗಳಿಗೆ ಜೀವದಾನ ಮಾಡಿದ್ದಾರೆ. ಹಾರಲಾಗದ ಹದ್ದೊಂದು ಕಳೆದ ಎಂಟು ವರ್ಷಗಳಿಂದಲೂ ಕೆನಿತ್ ಅವರ ಜೀವದ ಗೆಳೆಯ. ಯಾವುದೇ ಜಾತಿಯ ಹಕ್ಕಿಯಾದರೂ ಸರಿ, ಗಾಯಗೊಂಡಿದ್ದರೆ ಅದನ್ನು ತುಂಬ ಪ್ರೀತಿಯಿಂದ ಸ್ವೀಕರಿಸುತ್ತಾರೆ, ದುಡ್ಡು ಇಸಿದುಕೊಳ್ಳದೆ. ಪಕ್ಷಿಪ್ರಿಯರು ಪಕ್ಕದ ಜಿಲ್ಲೆಗಳಿಂದಲೂ ಹಕ್ಕಿಗಳನ್ನು ಈ ಗ್ಯಾರೇಜಿಗೆ ತಂದು ಬಿಡುತ್ತಾರೆ. ಅವುಗಳಿಗೆ ಮನೆ ಮಕ್ಕಳ ರೀತಿಯ ಅರೈಕೆ ಗ್ಯಾರಂಟಿ. ರೊಬಿನ್, ಯೋಗೇಶ್ ಮತ್ತು ಟಿಂಕರ್ ಶಫಿ ಹಕ್ಕಿಗಳ ಪಾಲಿಗೂ ಮೆಕ್ಯಾನಿಕ್ ಗೆಳೆಯರು. ಕಾಡುಬೆಕ್ಕು, ಅಳಿಲು, ವಿದೇಶಿ ಕೋಳಿಗಳೂ ಇಲ್ಲಿವೆ.
ಮುಂದೊಂದು ದಿನ ತೋಟ ಖರೀದಿಸಿ, ಹಕ್ಕಿಗಳ ಹಸಿರಿನ ಹಸಿವು ತೀರಿಸುವ ಆಸೆ ಕೆನಿತ್ ಅವರಿಗಿದೆ. ಅಂದಹಾಗೆ ಕೆನಿತ್ ಬಣ್ಣ ಬಣ್ಣದ ಪ್ರೇಮಪಕ್ಷಿಗಳನ್ನ ಮತ್ತು ಜಾತಿ ನಾಯಿಗಳನ್ನ ಮಾರುತ್ತಾರೆ. ಆ ಹಣ ಪೆಟ್ಟು ತಿಂದ ಹಕ್ಕಿಗಳ ಚಿಕಿತ್ಸೆಗೆ.
ಜೀವ ಉಳಿಸುವ ಆಸೆ ಎಲ್ಲರಿಗೂ ಇರುತ್ತದೆ, ಆದರೆ ಹಾರಲಾಗದೆ ಒದ್ದಾಡುವ ಹಕ್ಕಿ ಕಣ್ಣಿಗೆ ಬಿದ್ದರೆ ಸಹಾಯ ನೀಡುವ ದಾರಿ ಕಾಣೋದು ಕಷ್ಟ. ಮುಂದಿನ ಸಲ ಗಾಯಗೊಂಡ ಹಕ್ಕಿ ಭೇಟಿಯಾದರೆ ಕೆನಿತ್ (೯೮೮೬೨ ೧೨೧೧೧) ಅವರನ್ನ ನೆನಪಿಸಿಕೊಳ್ಳಿ.