ನಯಸೇನನ ಸಲೀಸಾದ ಸಾಲುಗಳು- ಬಿಡಿ ೪ - ಸಹಜಮಿಲ್ಲದಾತನ ಕಬ್ಬಂ

ನಯಸೇನನ ಸಲೀಸಾದ ಸಾಲುಗಳು- ಬಿಡಿ ೪ - ಸಹಜಮಿಲ್ಲದಾತನ ಕಬ್ಬಂ

ನಯಸೇನ ಕಬ್ಬಕ್ಕೆ ಸಹಜತನ ಯಾಕಿರಬೇಕು ಎಂಬುದನ್ನ ಒತ್ತಿ ಹೇಳಲು  ಮಳೆ ನೀರು ಮತ್ತು ಪನ್ನೀರು(ಪೊಯ್ನೀರ್) ಎಂಬ ಉಪಮೆಗಳನ್ನು ಬಳಸಿಕೊಂಡು ಚೆನ್ನಾಗಿ ಬಣ್ಣಿಸಿದ್ದಾನೆ. ಸಕ್ಕತ್

ಮೞೆಯಿಲ್ಲದೆ ಪೊಯ್ನೀರಿಂ
ಬೆಳಗುಮೆ ಧರೆ ಮಱುಗಿ ಕುದಿದು ಶಾಸ್ತ್ರದ ಬಲದಿಂ
ದಳಿಪಿಂ ಪೇೞ್ವೊಡಮದು ಕೋ
ಮಳಮಕ್ಕುಮೆ ಸಹಜಮಿಲ್ಲದಾತನ ಕಬ್ಬಂ

ಹೇಗೆ  ಮಳೆಯಿಲ್ಲದೆ ಉರಿದು/ಬಿಸಿಯಾಗಿರುವ ದರೆ(ಬುವಿ)ಬರೀ ಎರಚಿದ ನೀರಿನಿಂದ ತಣ್ಣಗಾಗುವುದಿಲ್ಲವೊ ಹಾಗೆ ಕೇವಲ ಶಾಸ್ತ್ರಬಲದ ಚಟಕ್ಕೆ ಬಿದ್ದು(ಎರಚಿದ ನೀರಿನಂತೆ) ಸಹಜತನವನ್ನು(ಮಳೆ) ಕಳೆದುಕೊಂಡ ಕಬ್ಬಿಗನ ಕಬ್ಬ ಕೋಮಳವಾಗುವುದಿಲ್ಲ
ಒಟ್ಟಿನಲ್ಲಿ ಕಬ್ಬಕ್ಕೆ ಸಹಜತನ ಬಲು ಮುಕ್ಯ.

ಮೞೆ = ಮಳೆ
ಪೊಯ್ನೀರ್ = ಎರಚುವ ನೀರು, ಎರಗಿದ ನೀರು
ಮಱುಗಿ = ಉರಿದು, ಬಿಸಿಯಾಗು
ಅಳಿಪಿಂ = ಚಟಕ್ಕೆ ಬಿದ್ದು ಬಯಸು, ನಲ್ಮೆಗೆ ಒಳಗಾಗು

ಗಮನಿಕೆ:
೧) ಈಗಲೂ ನಾವು ಮದುವೆ ಮನೆಗಳಿಗೆ ಹೋದರೆ ಬಾಗಿಲಲ್ಲಿ ಪನ್ನೀರನ್ನು ಎರಚುವ ವಾಡಿಕೆಯಿದೆ. ಅದು ದಿಟವಾಗಲೂ ಪೊಯ್ನೀರ್ ಅಂದರೆ 'ಎರಗುವ ನೀರು'. ಮಾತಿನಲ್ಲಿ ಪೊಯ್ನೀರ್ => ಪನ್ನೀರ್ ಆಗಿದೆ.
೨) ಅಳಿಪು = ಕೂರ್, ಪ್ರೀತಿ, ನಲ್ಮೆ ,ಈ ಹಿಂದೆ 'ಅಳಿಯ' ಪದದ ಬಗ್ಗೆ ಹೇಳಿದ್ದಾಗ ಇದರ ಬಗ್ಗೆ ಹೇಳಿದ್ದೆ.
೩) ಮಱುಗಿ - ಇದನ್ನು ಕವಿರಾಜಮಾರ್ಗದಲ್ಲಿ ಕೂಡ ಬಳಸಲಾಗಿದೆ
  ಕವಿರಾಜಮಾರ್ಗ ಬಿಡಿ-೧ , ೫೮ ನೇ ಪದ್ಯ
  ತಱಿಸಂದಾ ಸಕ್ಕದಮುಮ
  ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್
  ಕುಱಿತು ಬೆರೆಸಿದೊಡೆ ವಿರಸಂ
  ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೋಲ್

Rating
No votes yet