ಸವಾಲೊಡ್ಡುತ್ತಿದ್ದಾಳೆ ಮಹಿಳೆ...!
ಹೌದು... ಮತ್ತೆ ಬಂದಿದೆ ಮಹಿಳೆಯರಿಗೊಂದು ದಿನ. ಮಡುಗಟ್ಟಿಹೋಗಿರುವ ಮತ್ತು ಒತ್ತಾಯಪೂರ್ವಕವಾಗಿ ಹತ್ತಿಕ್ಕಿಕೊಂಡಿರುವ ತಮ್ಮೆಲ್ಲಾ ನೋವು ನರಳಿಕೆ, ಯಾತನೆಗಳನ್ನು ಹೊರಗೆಡಹಲೊಂದು ವೇದಿಕೆಯಾಗಬಲ್ಲ ದಿನ ಅಂತ ಸಂಭ್ರಮಿಸಬಹುದು.
ಆದರೆ ಕಾಲ ಬದಲಾಗಿದೆ ಅಂತ ಅನ್ನಿಸೋದಿಲ್ವೇ? ಹೆಣ್ಣು ಇಂದು ಗಂಡಿಗೆ ಸರಿಸಾಟಿಯಾಗಿ ಸ್ವಸಾಮರ್ಥ್ಯದಿಂದಲೇ ಲಿಂಗಸಮಾನತೆ ಸಾಧಿಸುವತ್ತ ದೃಢ ಹೆಜ್ಜೆಯಿಟ್ಟಿಲ್ಲವೇ?
ಇದು ನಿಜ. ಹೆಣ್ಣಿನ ಸ್ಥಿತಿ ಬದಲಾಗಿದೆ. ಹಿಂದಿನಂತಿಲ್ಲ. ಹಿಂದೆ ಎಂದರೆ ತೀರಾ ಹಿಂದೆ ಅಂತ ಹೇಳಬೇಕಿಲ್ಲ. ಕೇವಲ ಒಂದೆರಡು ದಶಕದ ಹಿಂದಕ್ಕೆ ಮನಸ್ಸು ಆಡಿಸಿ ನೋಡಿ ಸಾಕು. ಗಂಡು ಹೇಳಿದ ದನಿಗೆ ತಲೆಯಾಡಿಸುತ್ತಾ, ತನ್ನತನವನ್ನೇ ಕಳೆದುಕೊಂಡಂತೆ, ಬೆಚ್ಚನೆಯ ಆಸೆ ಆಕಾಂಕ್ಷೆಗಳನ್ನು ಮನದ ಮೂಲೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಾ ಮನೆಯ ಮೂಲೆಯಲ್ಲಿ ಕೂತಿರುತ್ತಿದ್ದ ಹೆಂಗಸರೆಲ್ಲಿ? ಕೈಯಲ್ಲೊಂದು ಲ್ಯಾಪ್ಟಾಪ್, ಸದಾ ರಿಂಗಿಣಿಸುತ್ತಿರುವ ಮೊಬೈಲ್, ಜತೆಗೆ ವಿಶ್ವವಿಖ್ಯಾತ ಕಂಪನಿಗಳ ಉನ್ನತ ಹುದ್ದೆ ತನ್ನದಾಗಿಸಿಕೊಳ್ಳುತ್ತಿರುವ ಆಧುನಿಕ ದುಡಿಯುವ ಮಹಿಳೆಯೆಲ್ಲಿ?
ನಿಮಗೊಂದು ವಿಷಯ ಗೊತ್ತೇ? ಈಗಾಗಲೇ ಹೆಚ್ಆರ್ (Human Resource) ಚಟುವಟಿಕೆಗಳ ಬಗ್ಗೆ ಹಲವು ಕಂಪನಿಗಳ ಸಂಪರ್ಕದಿಂದಾಗಿ ಕೊಂಚ ಕೊಂಚ ಅನುಭವ ಗಿಟ್ಟಿಸಿಕೊಳ್ಳಲಾರಂಭಿಸಿದ ನನಗೇ ಗೊತ್ತಾಗಿದೆ. ಹೆಚ್ಚಿನ ಕಂಪನಿಗಳು ಮಹಿಳೆಯರನ್ನೇ ನೇಮಕ ಮಾಡಿಕೊಳ್ಳಲು ಹೆಚ್ಚು ಹೆಚ್ಚು ಉತ್ಸುಕತೆ ತೋರಿಸುತ್ತಿವೆ! ಇದು ಬದಲಾವಣೆ. ಇದುವೇ ಜಗದ ನಿಯಮವೂ ಅಲ್ಲವೇ?
ಯಾಕೆ ಹೀಗಾಗುತ್ತಿದೆ?
ಇವತ್ತು ಮಹಿಳೆ ಉತ್ತಮ ಶಿಕ್ಷಣ ಪಡೆಯುತ್ತಿದ್ದಾಳೆ. ಒಳಮನೆ ಮಾತ್ರವೇ ಅಲ್ಲ ಹೊರ ಜಗತ್ತಿನ ಅರಿವೂ ಆಕೆಗೆ ಆಗಿದೆ. ಯಾರನ್ನು ಹೇಗೆ ಎಲ್ಲಿ ನಿಭಾಯಿಸಬೇಕೆಂಬ ಕಲೆಯೂ ಕರಗತವಾಗಿದೆ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ತಾಳ್ಮೆ ಮತ್ತು ಚಾಕಚಕ್ಯತೆ ಆಕೆಯ ರಕ್ತದಲ್ಲೇ ಇದೆ. ಅದಕ್ಕೀಗ ವೇದಿಕೆ ದೊರಕುತ್ತಿದೆಯಷ್ಟೆ.
ಪೈಪೋಟಿಯೇ ಏಕೈಕ ಗುರಿಯಾಗಿರುವ ಆಧುನಿಕ ವ್ಯಾವಹಾರಿಕ ಜಗತ್ತಿನಲ್ಲಿ ಜನರಿಗೆ ಕ್ವಾಲಿಟಿ ಬೇಕು. ಜನರಿಗೆ ಕ್ವಾಲಿಟಿ ಉತ್ಪನ್ನ ನೀಡುವುದನ್ನೇ ಕಂಪನಿಗಳು ಕೂಡ ನೆಚ್ಚಿಕೊಳ್ಳತೊಡಗಿವೆ. ಕ್ವಾಲಿಟಿ ಬೇಕಿದ್ದರೆ, ಕ್ವಾಲಿಟಿ ಜನ ಬೇಕು. ಹಾಗಾಗಿ ಕಂಪನಿಗಳ ಮೊದಲ ಒಲವು ಕ್ವಾಲಿಟಿ ನೀಡಬಲ್ಲ, ತಾಳ್ಮೆಯುಳ್ಳ, ಚಾಕಚಕ್ಯತೆಯುಳ್ಳ, ಎಲ್ಲಕ್ಕಿಂತ ಮಿಗಿಲಾಗಿ ಅಚ್ಚುಕಟ್ಟಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಒಪ್ಪಿಸಬಲ್ಲ ಪ್ರತಿಭಾನ್ವಿತ ಮಹಿಳೆಯತ್ತ! ಹೆಣ್ಣು ಚಂಚಲೆ ಅಂತನೂ ಓದಿದ್ದೇವೆ, ಓದುತ್ತಲೇ ಇದ್ದೇವೆ, ಕೇಳಿದ್ದೇವೆ, ಕೇಳುತ್ತಲೇ ಇರುತ್ತೇವೆ. ಕಾಲ ಬದಲಾಗಿದೆ ಅಂತ ಮತ್ತೊಮ್ಮೆ ಹೇಳಬೇಕಾಗಿದೆ. ಯಾಕೆ? ನೀವೇ ಒಮ್ಮೆ ಯೋಚಿಸಿ ನೋಡಿ... ಈ ಮುಂದುವರಿದ ಯುಗದಲ್ಲಿ ಅತೀ ಹೆಚ್ಚು ಬಾರಿ ಉದ್ಯೋಗ ಬದಲಾಯಿಸುತ್ತಿರುವವರು ಯಾರು? ಗಂಡೋ? ಹೆಣ್ಣೋ? ಉತ್ತರ ಸಿಗುತ್ತದೆ.
ಈಗಿನ ಪರಿಸ್ಥಿತಿ ಬಗ್ಗೆ ಹೀಗೆಯೂ ಹೇಳಬಹುದು.... "ಒಂದು ಕಾಲವಿತ್ತು, ಹೆಣ್ಣು ಹುಟ್ಟಿದರೆ ಮೊದಲು ಪರಿತಪಿಸುತ್ತಿದ್ದುದು ಹೆಣ್ಣೇ. ಗಂಡು ಮಕ್ಕಳೇ ಆಗಬೇಕು ಎಂಬುದು ಆಕೆಯ ಬಯಕೆಯೂ, ತಾಯ್ತನದ ಗುರಿಯೂ ಆಗಿತ್ತು. ಆದರೆ ಈಗ ಹೀಗಿಲ್ಲ". ಕಾಲ ಬದಲಾಗಿದೆ. ಗಂಡೇ ಹುಟ್ಟಬೇಕು ಅಂತ ಹೆಣ್ಣು ಕೂಡ ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಆಕೆ ಸುಶಿಕ್ಷಿತಳು. ಹೆಣ್ಣಿಗೇ ಸಮಾಜದಲ್ಲಿ ಹೆಚ್ಚು ದೊಡ್ಡ ಮಣೆ ಅನ್ನುವ ಅರಿವು ಆಕೆಗಿದೆ.
ಹಾಗಾಗಿಯೇ ಬುದ್ಧಿವಂತ ಮಹಿಳೆಯರು ಸಂಸತ್ತು, ವಿಧಾನಸಭೆ ಮುಂತಾದ ಶಾಸನಸಭೆಗಳಲ್ಲಿ ಮೀಸಲಾತಿ ಕೊಡಿ ಅಂತ ಹೋರಾಟ ಮಾಡುವುದರತ್ತ ಗಮನ ಹರಿಸುತ್ತಿಲ್ಲ. ಇದರಲ್ಲಿ ಓಟುಗಳೇ ಪ್ರಧಾನ ಉದ್ದೇಶವಾಗಿರುವ ರಾಜಕೀಯ ಪಕ್ಷಗಳಿಗಷ್ಟೇ ಲಾಭವಾಗುವುದರಿಂದ ಮಹಿಳೆಯ ಉದ್ಧಾರ ಮೀಸಲಾತಿಯಿಂದ ಮಾತ್ರವೇ ಸಾಧ್ಯವಿಲ್ಲ, ಸ್ವಸಾಮರ್ಥ್ಯದಿಂದಲೇ ನಮ್ಮ ಉದ್ಧಾರ ಎಂಬುದನ್ನು ಆಕೆ ಮನಗಾಣುತ್ತಿದ್ದಾಳೆ.
ಮೇಲೆ ಹೇಳಿದ್ದೆಲ್ಲಾ ಬಹುಶಃ ಪಟ್ಟಣದ ಹೆಣ್ಣಿಗೆ ಸೀಮಿತವಾಯ್ತೇನೋ.... ಆದರೆ.... ಗ್ರಾಮಗಳತ್ತ ಗಮನ ಹರಿಸಿ... ತಮ್ಮೆಲ್ಲ ಬಯಕೆಗಳ ಗಂಟು ಮೂಟೆ ಕಟ್ಟಿಕೊಂಡು ಮನೆಯಲ್ಲಿ ಪತಿಯೇ ಪರದೈವ, ಅತ್ತೆ ಮಾವಂದಿರೇ ತಂದೆ ತಾಯಿ ಅಂತನ್ನುತ್ತಾ ಜೀವನ ಸವೆಸುತ್ತಿದ್ದಾರೆ. ಅಂಥ ಮಾತೆಯರಿಗೇ ಹೇಳಿದ್ದು ಕ್ಷಮಯಾ ಧರಿತ್ರಿ ಅಂತ. ಇಂಥವರೂ ಇದ್ದಾರಲ್ಲ... ಅಂಥವರ ಉದ್ಧಾರವಾಗಲಿ. ಗುಣಮಟ್ಟದ ಕೆಲಸಕ್ಕಾಗಿ ಗಂಡು-ಹೆಣ್ಣಿನ ಮಧ್ಯೆ ಏರ್ಪಟ್ಟಿರುವ ಆರೋಗ್ಯಕರ ಸ್ಪರ್ಧೆ ಮುಂದುವರಿಯಲಿ. ಈ ಮೂಲಕ ದೇಶವೂ ಉದ್ಧಾರವಾಗಲಿ.