ನಾನು ಬಾಸಾಗುವೆ

ನಾನು ಬಾಸಾಗುವೆ

ನನ್ನ ಬಾಸು ದೈವಸ್ವರೂಪಿ
ಮನದಲಿ ಅಂದುಕೊಳ್ಳಲು ಪ್ರತ್ಯಕ್ಷ
ಬೆಳಗಾಗಲು ಕಾಲೋನಿಯ ವಾಕಿಂಗು ಅವನಿಗೆ
ಅವನ ಮನೆಯ ಕಾಯಕ ನನಗೆ
ಕೊಡುವ ಒಂದು ಕೈಗೆ ಹಾಲಿನ ಖಾಲೀ ಬಾಟಲು
ಇನ್ನೊಂದು ಕೈಗೆ ತರಕಾರಿಯ ಚೀಲ

ಕರೆಯದಿದ್ದರೂ ನನ್ನ ಮುಂದೆ ಹಾಜರು
ನಡೆವುದು ಪ್ರತಿನಿತ್ಯವೂ ನನ್ನ ಮಹಜರು
ಡೊಗ್ಗು ಸಲಾಮು ನಿರೀಕ್ಷಿಸುವ
ಅವನ ಪತ್ನಿಯಂತೂ ಉತ್ಸವ ದೈವ
ನಾ ಅವಳಿಗೆ ತಲೆ ಬಾಗದಿರಲು
ಹಿಡಿವಳು ನನ್ನ ಬಾಸಿನ ಜುಟ್ಟು
ಆಫೀಸಿನಲಿ ಚೀರಾಡುವನಿವನು ತಲೆಕೆಟ್ಟು
ನಾನ್ಯಾರ ಮೇಲೆ ತೋರಲಿ ನನಗಾಗುವ ಸಿಟ್ಟು

ಅಡಕೊತ್ತಿಯಲಿ ಸಿಕ್ಕ ಅಡಕೆ
ಯಂತಾಗಿದೆ ನನ್ನ ಜೀವನ
ರೋಸ್ಟಿಸಿದ ರೊಟ್ಟಿಯಂತೆ
ಕಾದು ರೋಸಿ ಹೋಗಿದೆ ನನ್ನ ಮೈಮನ
ಮನೆಯಲಿ ಹಾಲು ಒಡೆದು ಹೋಗೆ
ಮಹಾಭಾರತ ಕಾಳಗ ನಡೆಸಿದಳು ಬಾಸುಪತ್ನಿ
ಮನೆಯಲಿ ಸುಂಡಿಲಿ ಬಾಸು ಪತ್ನಿಯ ಎದುರಿಸಿದರೂ
ತಿಳಿದಿಹದವನಿಗೆ ಮರುಪ್ರಯೋಗಕೆ
ಇನ್ನೊಂದು ಪಶು ಸಿದ್ಧವಾಗಿಹುದು

ಬಾಸಿಗೆ ನನ್ನ ಕಂಡರೆ ಬಲು ಪ್ರೀತಿ
ಘಂಟೆಗೊಮ್ಮೆ ನನ್ನ ಮುಖ ಕಾಣುತ್ತಲೇ ಇರಬೇಕು
ಅದಕಾಗಿ ನಾನವನ ಕ್ಯಾಬಿನ್ನಿನ ಮುಂದೆ ಕೂತಿರಬೇಕು
ಮನೆಯಲಿ ಪತ್ನಿಯ ಮೇಲಿನ ಸಿಟ್ಟು
ತೀರಿಸಿಕೊಳ್ಳಲು ಅವನಿಗೆ ನಾನೇ ಬೇಕು
ಈ ಕುರಿಗೆ ತಿನ್ನಿಸಿ ಕೊಬ್ಬಿಸಬೇಕಿಲ್ಲ
ಅವರ ಮನೆ ನಾಯಿಗೆ ಚಕ್ಕಳ ಒಂದೇ ಸಾಕಲ್ಲ

ತಿಳಿಯಿತೇ, ಬಾಸಿನ ಮನೆಯವರಿಗೆಲ್ಲ
ನನ್ನ ಕಂಡರೆ ಬಲು ಪ್ರಾಣ
ಬಾಸಿನ ತಲೆ ಬಿಸಿ ಆರಿಸಲು ನಾನೇ ಬೇಕಿದೆ
ಬಾಸು ಪತ್ನಿಗೆ ಕೆಲಸದವ ಪುಕ್ಕಟೆ ಸಿಕ್ಕಿದೆ
ಜೊಲ್ಲು ಸುರಿಸುತಿಹ ನಾಯಿ ಎನಬಾರದ ಪ್ರಾಣಿಗೆ
ಎದ್ದು ಕಾಣುವ ನನ್ನ ಮೈಯ ಚಕ್ಕಳ

ನನ್ನ ಕಣ್ಣೆಲ್ಲಾ ಬಾಸು ಕೊಡುವ ರಿಪೋರ್ಟಿಗೆ
ಅದರಿಂದ ಮುಂದೆ ಸಿಗುವ ಬಡ್ತಿಗೆ
ದಪ್ಪನಾದ ಸಂಬಳ ಪ್ಯಾಕೆಟ್ಟಿಗೆ
ಮುಂದೆ ನಾನೂ ಬಾಸಾಗುವ ಕನಸಿನ ಮನೆಗೆ

ಕಷ್ಟ ಕಾಲದಲಿ ನನಗೆ ನಾನೇ ಸಮಾಧಾನಿಸಿಕೊಳುವೆ
ನಾನೂ ಒಮ್ಮೆ ಬಾಸಾಗುವೆ - ನನ್ನ ಜ್ಯೂನಿಯರ್ರಿಗೆ ಬಾಸಾಗುವೆ

Rating
No votes yet