ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

ಬರಹ

 (ಇ-ಲೋಕ-66)(17/3/2008)
    ಜಗತ್ತಿನಲ್ಲಿ ಈಗಿರುವ ಅಣೆಕಟ್ಟುಗಳ ಸಂಖ್ಯೆ ಎಷ್ಟು ಎನ್ನುವುದನ್ನು ಊಹಿಸಬಲ್ಲಿರಾ?ಸಾವಿರದ ಒಂಭೈನೂರನೆಯ ಇಸವಿಯ ನಂತರ ಕಟ್ಟಿರುವ ಅಣೆಕಟ್ಟುಗಳ ಸಂಖ್ಯೆ ಇಪ್ಪತ್ತೊಂಭತ್ತು ಸಾವಿರದ ನಾಲ್ಕುನೂರ ಎಂಭತ್ತ ನಾಲ್ಕು. ಇವುಗಳಲ್ಲಿ ಹಿಡಿದಿರ ಬಹುದಾದ ನೀರಿನ ಪ್ರಮಾಣ,ಎರಡು ಸಾವಿರದ ಆರುನೂರು ಮೈಲು ಘನ ಮೈಲುಗಳಷ್ಟು!ಇಷ್ಟು ನೀರು ಅಣೆಕಟ್ಟು ಇಲ್ಲವಾಗಿದ್ದಲ್ಲಿ ಸಮುದ್ರ ಸೇರುತ್ತಿತ್ತು. ಆಗ ಸಮುದ್ರದ ನೀರಿನ ಮಟ್ಟ 1.2 ಅಂಗುಲ ಹೆಚುತ್ತಿತ್ತು. ಇದನ್ನು ಲೆಕ್ಕ ಹಾಕಿದವರು ತೈವಾನಿನ ನ್ಯಾಶನಲ್ ಸೆಂಟ್ರಲ್ ವಿವಿಯ ಸಂಶೋಧಕರು.ಅಂದ ಹಾಗೆ ಕಳೆದ ಅರ್ಧ ಶತಮಾನದಲ್ಲಿ ಸಮುದ್ರಮಟ್ಟದಲ್ಲಿ ಆದ ಏರಿಕೆ ಹತ್ತು ಸೆಂಟಿಮೀಟರುಗಳು. ಅಣೆಕಟ್ಟುಗಳಿಲ್ಲವಾದರೆ,ಮಟ್ಟ ಇನ್ನೂ ಮೂರು ಸೆಂಟಿಮೀಟರ್ ಹೆಚ್ಚುತ್ತಿತ್ತು.ಅಂದ ಹಾಗೆ ಸಮುದ್ರದ ನೀರಿನ ಮಟ್ಟ ಏರಲು ಭೂಮಿಯ ವಾತಾವರಣದ ಉಷ್ಣತೆಯಲ್ಲಿ ಆಗಿರುವ ಏರಿಕೆಯೇ ಕಾರಣ. ತಾಪ ಹೆಚ್ಚಿದಂತೆ ನೀರು ಹಿಗ್ಗುತ್ತದೆ.ಅದರೊಂದಿಗೆ ಕರಗುವ ಹಿಮಗಡ್ಡೆಗಳ ಕಾಟ ಬೇರೆ.ಅಂಟಾರ್ಕ್ಟಿಕಾ ಮತ್ತು ಗ್ರೀನ್‍ಲ್ಯಾಂಡಿನಂತಹ ಧ್ರುವ ಪ್ರದೇಶಗಳ ಹಿಮಗಡ್ಡೆ ಕರಗುವ ಪರಿಣಾಮ ನೀರಿನ ಮಟ್ಟ ಹೆಚ್ಚಲು ಕಾರಣವಾಗುತ್ತದೆ.
ಕ್ಯಾಮರಾ ಖರೀದಿಸಿದಾಗ ಉಚಿತ ಕೊಡುಗೆ!
    ಡಿಜಿಟಲ್ ಕ್ಯಾಮರಾ,ಐಪಾಡ್ ಇಂತಹ ಆಧುನಿಕ ಸಾಧನ ಖರೀದಿಸಿದಾಗ ಸಿಗುವ ಉಚಿತ ಕೊಡುಗೆಗಳು ಆಕರ್ಷಕವಾಗಿರುತ್ತವೆ.ಆದರೆ ಕೇಳದೆ ಅವುಗಳ ಸಿಗುವ ಇನ್ನೊಂದು ಕೊಡುಗೆ ಅಂದರೆ ವೈರಸ್‍ಗಳು!ಡಿಜಿಟಲ್ ಸಾಧನಗಳನ್ನು ಕಂಪ್ಯೂಟರಿಗೆ ಸಂಪರ್ಕಿಸಿ,ಕ್ಯಾಮರಾದಂತಹ ಸಾಧನವಾದರೆ ಚಿತ್ರಗಳನ್ನು,ಐಪಾಡ್ ಅಂತಹ ಸಾಧನವಾದರೆ ಹಾಡುಗಳನ್ನು ವರ್ಗಾಯಿಸಿಕೊಳ್ಳುವ ಕ್ರಿಯೆ ನಡೆಸುವುದು ಸ್ವಾಭಾವಿಕ. ಕಂಪೆನಿಯಿಂದ ಹೊಸದಾಗಿ ಬಂದಿರುವ ಸಾಧನವನ್ನು ಕಂಪ್ಯೂಟರಿಗೆ ಸಂಪರ್ಕಿಸಿದಾಗ,ವೈರಸ್ ಬಂದರೆ ಹೇಗಾಗಬೇಡ? ಹೀಗಾಗಲು ಕಾರಣವೇನು? ಸಾಧನವನ್ನು ಮಾರುಕಟ್ಟೆಗೆ ಕಳುಹಿಸುವ ಮೊದಲು ಪರೀಕ್ಷಾ ಕಾರ್ಯ ನಡೆಯುತ್ತದೆ. ಅ ವೇಳೆಗೆ ಬಳಕೆಯಾಗುವ ಕಂಪ್ಯೂಟರುಗಳು ಕಂಪೆನಿಯ ಉದ್ಯೋಗಿಗಳ ಅಜಾಗರೂಕತೆಯ ಕಾರಣ ವೈರಸ್‍ಪೀಡಿತವಾದರೆ ನಂತರ ಸಾಧನವನ್ನು ಅದಕ್ಕೆ ಸಂಪರ್ಕಿಸಿ ಪರೀಕ್ಷಿಸಿದಾಗ ಸಾಧನವೂ ವೈರಸ್ ಬಾಧಿತವಾಗುತ್ತದೆ.ಕಂಪೆನಿಗಳ ಕಂಪ್ಯೂಟರುಗಳನ್ನು ಉದ್ಯೋಗಿಗಳು ಅನಧಿಕೃತವಾಗಿ ಬಳಸುವುದಕ್ಕೆ ತೆರೆಯೆಳೆದರೆ, ಈ ಸಮಸ್ಯೆಯನ್ನು ನಿವಾರಿಸಬಹುದು. ಸಾಧನದಿಂದಾಗಿ ನಿಮ್ಮ ಕಂಪ್ಯೂಟರ್ ಬಾಧಿತವಾದರೆ, ಅದನ್ನು ನಿವಾರಿಸಿಕೊಳ್ಳಲು ಕಷ್ಟವೇನಿಲ್ಲ. ಉತ್ತಮ ಗುಣಮಟ್ಟದ ವೈರಸ್ ಲಸಿಕೆ ತಂತ್ರಾಂಶ ಕಂಪ್ಯೂಟರಿನಲ್ಲಿ ಹಾಕಿಕೊಂಡಿದ್ದರೆ,ಅದು ವೈರಸ್ ತಂತ್ರಾಂಶವನ್ನು ಗುರುತಿಸಿ,ಅದನ್ನು ಕಿತ್ತೆಸೆಯುತ್ತದೆ.ಕೆಲವೊಮ್ಮೆ ಸಾಧನಗಳಲ್ಲಿ ಬರುವ ವೈರಸ್‍ಗಳು ಪಾಸ್‍ವರ್ಡ್ ಕದಿಯುವ ತಂತ್ರಾಂಶಗಳು ಎನ್ನುವುದು ಗಾಬರಿ ಪಡಿಸುವ ವಿಷಯ. ಅಂತೂ ಹೊಸ ಸಾಧನ ಕೊಂಡು,ಅದನ್ನು ಮೊದಲ ಬಾರಿಗೆ ಕಂಪ್ಯೂಟರಿಗೆ ಸಂಪರ್ಕಿಸುವಾಗ ಇರಲಿ ಎಚ್ಚರ. ಹೊಸ ಹಾರ್ಡ್‍ಡಿಸ್ಕ್ ಹಾಕಿಕೊಂಡಾಗ,ಅದು ಖಾಲಿಯಿರುವುದು ಬಿಟ್ಟು ವೈರಸ್ ತುಂಬಿಕೊಂಡಿದ್ದರೆ ತಾಪತ್ರಯ ಕಟ್ಟಿಟ್ಟ ಬುತ್ತಿ.
ಮೈಕ್ರೊಸಾಫ್ಟ್‍ನಿಂದ ಕಿದಾರೊ ಖರೀದಿ
    ಒಂದು ಕಂಪ್ಯೂಟರ್‌ನಲ್ಲೇ ಹಲವು ಕಂಪ್ಯೂಟರುಗಳ ಅನುಭವ ನೀಡುವ ಮಿಥ್ಯಾಯಂತ್ರಗಳ ತಂತ್ರಾಂಶ ಅಭಿವೃದ್ಧಿಯಲ್ಲಿ ಪರಿಣತ ಕಂಪೆನಿಯಾದ ಕಿದಾರೋವನ್ನು ಮೈಕ್ರೋಸಾಫ್ಟ್ ಖರೀದಿಸಿದೆ.ಸದ್ಯ ನಿಮ್ಮ ಕಂಪ್ಯೂಟರಿನಲ್ಲಿ ಒಂದೇ ಕಾರ್ಯನಿರ್ವಹಣ ತಂತ್ರಾಂಶ ವ್ಯವಸ್ಥೆಯಿರುತ್ತದೆ.ಎರಡನೆಯದ್ದನ್ನು ಹಾಕಿಕೊಳ್ಳಲು ಪ್ರತ್ಯೇಕ ಭಾಗ ಅಗತ್ಯ. ಒಂದು ಹೊತ್ತು ಒಂದು ಕಾರ್ಯನಿರ್ವಹಣ ತಂತ್ರಾಂಶದ ವಶವಿರುವ ಕಂಪ್ಯೂಟರು ಮಾಮೂಲಿ. ಆದರೆ ವರ್ಚುವಲೈಸೇಶನ್ ತಂತ್ರಾಂಶ ಬಳಸಿದಾಗ,ಇನ್ನೊಂದು ಕಂಪ್ಯೂಟರಿನ ಅನುಭವವನ್ನು ವರ್ಚುವಲೈಸೇಷನ್ ತಂತ್ರಾಶದ ಮೂಲಕ ಪಡೆದು,ಆ ಯಂತ್ರದಲ್ಲಿ ಇನ್ಯಾವ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಅಳವಡಿಸಿ,ಉತ್ಕೃಷ್ಟ ಅನುಭವ ಪಡೆಯಬಹುದು.ತಂತ್ರಾಂಶದ ವೆಚ್ಚದಿಂದ ಯಂತ್ರಾಂಶದ ಪ್ರಯೋಜನ ಉಚಿತ!ಇಂತ್ರಹ ತಂತ್ರಜ್ಞಾನ ಅಳವಡಿಸಿ ದುಡ್ಡು ಮಾಡಿರುವ ವಿ ಎಂ ವೇರ್‍ ಕಂಪೆನಿಯ ಹಾದಿ ಹಿಡಿಯಲು ಮೈಕ್ರೋಸಾಫ್ಟ್ ಕೂಡಾ ತಯಾರಾಗಿದೆ.ಆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಾಧನೆಗೋಸ್ಕರ ಕಿದಾರೋವನ್ನು ಬಗಲಿಗೆ ಹಾಕಿಕೊಂಡಿದೆ ಎನ್ನುವುದು ಸ್ಪಷ್ಟ.
ತಂತ್ರಾಂಶ ಕೈಕೊಟ್ಟು ಪ್ರಯೋಗ ಭಗ್ನ!
    ನಾಸಾ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ ಕ್ಯಾಸಿನಿ ಬಾಹ್ಯಾಕಾಶ ವಾಹನವು ಶನಿಗ್ರಹದ ಉಪಗ್ರಹವಾದ ಎನ್ಸಿಲ್ಯಾಡಸ್‍ನ ಮೇಲಿನ ಉಗಿಬುಗ್ಗೆಯನ್ನು ಅಧ್ಯಯನ ಮಾಡುವ ಹೊತ್ತಿಗೆ ಅದರ ವಿಶ್ಲೇಷಣ ಸಾಧನದ ತಂತ್ರಾಂಶ ಕೈಕೊಟ್ಟು ಬಿಡಬೇಕೇ? ಹೀಗಾಗಿ ಈ ಉಗಿಬುಗ್ಗೆಯ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಿ,ಈ ಶನಿಯ ವಿಶಿಷ್ಟ ಉಪಗ್ರಹದ ಮೇಲೆ ನೀರು ಲಭ್ಯವೇ ಎಂದು ತಿಳಿದುಕೊಳ್ಳುವ ವಿಜ್ಞಾನಿಗಳ ಉತ್ಸಾಹಕ್ಕೆ ಭಂಗವುಂಟಾಯಿತು.ಈ ತಂತ್ರಾಂಶದಲ್ಲಿ ಉಂಟಾದ ಅಡಚಣೆ ಯಾವುದು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದ ಮಟ್ಟಿಗೆ ಗೊತ್ತಿಲ್ಲ.
ಬಟ್ಟೆಯೊಳಗಿಣುಕುವ ಕ್ಯಾಮರಾ
    ವಿಮಾನ ನಿಲ್ದಾಣಗಳಂತಹ ಜಾಗಗಳಲ್ಲಿ ಜನರನ್ನು ಪರೀಕ್ಷಿಸಿ,ಅವರು ಬಾಂಬಿನಂತಹ ವಸ್ತುವನ್ನು ಬಚ್ಚಿಟ್ಟುಕೊಂಡಿದ್ದಾರೋ,ಎಂದು ಕಂಡುಹಿಡಿಯುವ ಕ್ಯಾಮರಾವನ್ನು ತ್ರೂವಿಷನ್ ಎಂಬ ಕಂಪೆನಿ ಅಭಿವೃದ್ಧಿ ಪಡಿಸಿದೆ.ಈ ಕ್ಯಾಮರಾವನ್ನು ಟೆರಾಹರ್ಟ್ಸ್ ಎನ್ನುವ ತರಂಗವನ್ನು ಬಳಸಿ ತಯಾರಿಸಲಾಗಿದೆ.ಈ ತರಂಗವು ಲೋಹ,ನೀರಿನ ಮೂಲಕ ಸಾಗದು,ಆದರೆ ಕಾಗದ,ಪಿಂಗಾಣಿ,ಮರದ ಮೂಲಕ ಸಾಗುತ್ತದೆ.ಇದರ ಮೂಲಕ ತೆಗೆದ ಚಿತ್ರ ದೇಹದ ವಿವರಗಳನ್ನು ಕಾಣಿಸದು ಎನ್ನುವುದು ಅನುಕೂಲ.ಈ ತರಂಗ ಎಕ್ಸ್ ಕಿರಣಗಳಂತೆ ದೇಹಕ್ಕೆ ಹಾನಿ ಮಾಡದು.

UDAYAVANI

ASHOKWORLD

*ಅಶೋಕ್‍ಕುಮಾರ್ ಎ