ಹಣವೇ ಗುಣವೆ?
ಹಣವಿಲ್ಲದೇ ಈ ಜಗದಲ್ಲಿ ಬಾಳಲಾರೆವು ಎಂಬುದೇನು ಸುಳ್ಳಲ್ಲ. ಅಂದಹಾಗೆ, ಇದೇನು ಇವತ್ತಿನ ಮಾತೂ ಅಲ್ಲ - ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿರುವಂತಹದ್ದೇ. ವೇದಗಳಲ್ಲೇ, ಹಣವನ್ನು ಜೂಜಾಡಿ ಕಳೆದುಕೊಂಡ ವ್ಯಕ್ತಿ ಹೇಗೆ ತನ್ನ ಕುಟುಂಬದವರಿಂದಲೇ ಅನಾದರಕ್ಕೆ ಒಳಗಾಗುತ್ತಾನೆ ಅನ್ನುವುದರ ಪ್ರಸ್ತಾಪ ಬಂದಿದೆ.
ಹಣದ ಗುಣವನ್ನು ತಿಳಿಸುವ ಒಂದು ಸಂಸ್ಕೃತ ಸುಭಾಷಿತವನ್ನು ಇಲ್ಲಿ ನೋಡೋಣ.
यस्यास्ति वित्तम् स नरः कुलीनः
स पंडितः सः श्रुतवान् गुणज्ञः
स एव वक्ता स च दर्शनीयः
सर्वॆ गुणाः काञ्चनं आश्रयंति
ದುಡ್ಡೊಂದು ಇದ್ದಲ್ಲಿ ಅವ ಜನಿಸಿದುದೆ ಸತ್ಕುಲವು
ಭಾರಿ ಕಲಿತವನವನು; ಕೇಳಿ ಅರಿತವನು!
ಮಾತುಗಾರನು ಅವನು, ಬಲು ಸೊಗಸುಗಾರ
ಹಣವಿರುವಲ್ಲಿ ತಾನೆ ಗುಣಗಳು ಸೇರುವುವು !
ಸ್ವಲ್ಪ ವ್ಯಂಗ್ಯ ಹೆಚ್ಚು ಎನ್ನಿಸುವಷ್ಟೇ ಇದ್ದರೂ, ಲೋಕದ ರೀತಿ ನೀತಿಯನ್ನು ಹೇಳುವುದರಲ್ಲಿ ಈ ನಲ್ನುಡಿ ಯಶಸ್ವಿಯಾಗಿದೆ ಅನ್ನಿಸುತ್ತೆ.
ಒಟ್ಟಿನಲ್ಲಿ ಹೇಳುವುದಾದರೆ, ನಮ್ಮ ಗುಣಗಳನ್ನು ಹೆಚ್ಚಿಸಿಕೊಳ್ಳೋಣ - ಆದರೆ ಈ ಜಗತ್ತಿನಲ್ಲಿ ನಮಗೆ ಬದುಕಲು ಅಗತ್ಯವಾದಷ್ಟು ಹಣವನ್ನು ಗಳಿಸುವುದರಲ್ಲಿ ಹಿಂದೆ ಬಿದ್ದರೆ, ಈ ಕೆಳಗೆ ಇನ್ನೊಬ್ಬ ಸುಭಾಷಿತಕಾರ ಕೊರಗುತ್ತಿರುವಂತೆ ನಮ್ಮ ಗತಿಯಾಗಬಹುದು!
एको हि दोषो गुणसन्निपाते निमज्जतींदोः इति यो बभाषे
नूनम् न द्रुष्टं कविनापि तेन दारिद्रय दोषो गुणराशिनाशी
ಗುಣಗಳ ಗುಂಪಲಿ ಒಂದೇ ಕೊರತೆ
ಚಂದ್ರನ ಬೆಳಕಲಿ ಕಲೆಯಂತೆ
ಮುಚ್ಚೀತೆಂದ ಕವಿ ತಾ ಕಾಣನು
ಲೋಕದ ನಿಜರೂಪದ ಮೋರೆ;
ಸಾವಿರ ಗುಣಗಳ ಮುಚ್ಚಿ ಹಾಕದೆ
ಒಂದೇ ಬಡತನವೆಂಬ ಕೊರೆ ?
-ಹಂಸಾನಂದಿ