ಮುಂಗೋಪಿ ಗುಂಡ
ಇತ್ತೀಚೆಗೆ ಉಮ್ ರಾಜ್ ಜಾನ್.ಕಾಮ್ ಪ್ರಕಟಿಸಿದ ಒಂದು ಚಿಕ್ಕ ನೀತಿ ಕಥೆ ನನಗೆ ತುಂಬಾ ಇಷ್ಟವಾಯಿತು. ಅದರ ಕನ್ನಡ ಅನುವಾದವನ್ನು ಈ ಕೆಳಗೆ ಕೊಡುತ್ತಿದ್ದೇನೆ. ಸಂಪದದ ಓದುಗರು ಇಷ್ಟಪಡುವರೆಂದು ಭಾವಿಸಿದ್ದೇನೆ.
ಗುಂಡ ತುಂಬಾ ಮುಂಗೋಪಿ. ಯಾವಾಗಲೂ ಅವನು ಮುಖ ಸಿಂಡರಿಸಿಕೊಂಡೇ ಇರುತ್ತಿದ್ದ. ಅದರಿಂದಾಗಿ ಅವನಿಗೆ ಸ್ನೇಹಿತರೂ ಇರಲಿಲ್ಲ, ಶಾಲೆಯಲ್ಲೂ, ಮನೆಯಲ್ಲೂ ಒಬ್ಬಂಟಿಯಾಗಿ ಇರುತ್ತಿದ್ದ. ಒಂದು ದಿನ ಹೀಗೆ ಏನೋ ಯೋಚಿಸುತ್ತಾ ಕುಳಿತಿದ್ದಾಗ, ಅವನಿಗೆ ತನಗೂ ತನ್ನ ಸ್ನೇಹಿತರಿಗೂ ಇರುವ ವ್ಯತ್ಯಾಸವೇನೆಂದು ಹೊಳೆಯಿತು. ಅದರ ಪರಿಹಾರಕ್ಕಾಗಿ ಅವನು ತಕ್ಷಣ ಎದ್ದು ತನ್ನ ತಂದೆಯ ಬಳಿಗೋಡಿದ. ತನ್ನ ಕಷ್ಟವನ್ನು ಹೇಳಿಕೊಂಡ. ಅವನ ತಂದೆ ಅವನಿಗೆ ಒಂದು ಕೇಜಿಯಷ್ಟು ಮೊಳೆಗಳನ್ನು ಕೊಟ್ಟು, "ನಿನಗೆ ಕೋಪ ಬಂದಾಗ, ಯಾರ ಮೇಲೂ ತೋರಿಸಿಕೊಳ್ಳಬೇಡ, ಬದಲಾಗಿ ಇಲ್ಲಿರುವ ಮೊಳೆಗಳಲ್ಲಿ ನಿನಗೆ ಬೇಕಾದಷ್ಟನ್ನು ನಮ್ಮ ಮನೆಯ ಕಾಂಪೌಂಡ್ ಗೋಡೆಗೆ ಹೊಡಿ. ಕೋಪ ಶಮನವಾದಮೇಲೆ ನಿನ್ನ ಬೇರೆ ಕೆಲಸ ನೋಡಿಕೊ" ಎಂದರು. ಅವನು ಅದನ್ನೇ ಪಾಲಿಸುತ್ತಾ ಬಂದ. ಮೊದಲು ಮೊದಲು ಹತ್ತಾರು ಮೊಳೆಗಳನ್ನು ಹೊಡೆಯುತ್ತಿದ್ದವನು, ದಿನ ಕಳೆದಂತೆ ಅದರ ಸಂಖ್ಯೆ ಕಮ್ಮಿ ಮಾಡುತ್ತಾ ಬಂದ. ಅವನ ಕೋಪವೂ ಇಳಿಯುತ್ತಾ ಹೋಯಿತು. ಒಂದು ದಿನ ಕೋಪ ಬರುತ್ತಿದೆ ಎನಿಸುತ್ತಿದ್ದಂತೆಯೇ ಮೊಳೆಯ ಬಳಿಗೋಡಿದ. ಆದರೆ ಅವನಿಗೇ ನಗು ಬಂತು. ಹಿಂದಿರುಗಿ ಬಂದು ತಂದೆಗೆ "ಅಪ್ಪಾ, ನಾನು ಎಂತಹ ಮೂರ್ಖನಾಗಿದ್ದೆ. ಸುಮ್ಮ ಸುಮ್ಮನೆ ಕೋಪ ಮಾಡಿಕೊಳ್ಳುತ್ತಿದ್ದೆ, ಈಗ ನೋಡು ನಾನು ಕೋಪವನ್ನು ಜಯಿಸಿದ್ದೇನೆ" ಎಂದ. ಅವನ ತಂದೆ "ತುಂಬಾ ಸಂತೋಷ ಗುಂಡ. ಆದರೆ, ನೀನು ಕೋಪದಿಂದ ಹೊಡೆದಿರುವ ಮೊಳೆಗಳನ್ನು ಈಗ ಕಿತ್ತು ಹಾಕಿ ಬಾ" ಎಂದರು. ಹಾಗೆಯೇ ಮಾಡಿದ ಗುಂಡ ಮತ್ತೆ ತಂದೆಯ ಎದುರು ನಿಂತ. ಅವನ ತಂದೆ "ಗುಂಡಾ, ನೀನು ಮೊಳೆಯನ್ನೇನೋ ಕಿತ್ತೆ, ಆದರೆ ಆ ಮೊಳೆಗಳು ಕಾಂಪೌಂಡಿಗೆ ಮಾಡಿರುವ ಗಾಯಗಳನ್ನು ಅಳಿಸಲು ಸಾಧ್ಯವೇ ನೋಡು" ಎಂದರು. ಆಗ ಗುಂಡ "ಇಲ್ಲಾಪ್ಪ, ನನ್ನಿಂದ ಅದು ಸಾಧ್ಯವಿಲ್ಲ" ಎಂದ. ಅವನ ತಂದೆ "ಮಗೂ ಹಾಗೆಯೇ ನಾವು ಸಿಟ್ಟಿಗೆದ್ದು ಇನ್ನೊಬ್ಬರ ಮನಸ್ಸಿಗೆ ಗಾಯ ಮಾಡುವುದಕ್ಕೂ ಪರಿಹಾರವಿರುವುದಿಲ್ಲ. ಆದ್ಡರಿಂದ ಇನ್ನೊಬ್ಬರ ಮನಸ್ಸಿಗೆ ಗಾಯವಾಗದ ಹಾಗೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ" ಎಂದರು. ಗುಂಡ ಸಂತೃಪ್ತನಾದ.
ಎ.ವಿ. ನಾಗರಾಜು