ಭಾರತದ ಬಡವರ ಮೇಲೆ ಹೊಸ ಔಷಧಗಳ ಪ್ರಯೋಗ
[:http://wired.com/|ಅಮೇರಿಕದ ವೈರ್ಡ್ ಮ್ಯಾಗಜೀನ್] ಭಾರತದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ನಡೆಸುವ ಔಷದ ಪ್ರಯೋಗಗಳ ಬಗ್ಗೆ ಒಂದು ಲೇಖನವನ್ನು ಪ್ರಕಟಿಸಿದೆ. ಹೊರ ದೇಶಗಳಲ್ಲಿ ಹೊಸ ಔಷಧ ಪ್ರಯೋಗಗಳನ್ನು ನಡೆಸುವುದಕ್ಕಿಂತ ಭಾರತದಲ್ಲಿ ಖರ್ಚು ಕಡಿಮೆಯಾಗುವುದರಿಂದ ಈಗ "clinical trials" ಭಾರತಕ್ಕೆ ಔಟ್ ಸೌರ್ಸ್ ಆಗುತ್ತಿದೆಯಂತೆ. ಭಾರತದಲ್ಲಿ ಅವರಿಗೆ ಕಡಿಮೆ ಖರ್ಚಿಗೆ ಔಷಧವನ್ನು ಬಳಸುವ "ರೋಗಿಗಳು" ಸಿಗುತ್ತಾರಲ್ಲದೆ, ಇಲ್ಲಿನ ಸರಕಾರ ಅಮೇರಿಕ ಅಥವಾ ಯೂರೋಪ್ ದೇಶಗಳಂತೆ ಪ್ರಯೋಗಗಳ ನಿರ್ದಿಷ್ಟಮಾನ ಗೊತ್ತುಪಡಿಸಿ ಶಿಸ್ತು ರೂಪಿಸಿಲ್ಲದಿರುವುದರಿಂದ ಬಹುರಾಷ್ಟ್ರೀಯ ಕಂಪೆನಿಗಳಿಗೆ ಇಲ್ಲಿ ಸುಗ್ಗಿಯಂತೆ!
"ರಿಸರ್ಚ್ ಮಾಡಲು ಖರ್ಚು ಭಾರತದಲ್ಲಿ ಕಡಿಮೆಯಷ್ಟೇ ಅಲ್ಲದೆ, ಭಾರತದಲ್ಲಿ ಪ್ರಯೋಗ ನಡೆಸಲು ನುರಿತ ಕೆಲಸಗಾರರು ಕೂಡ ದೊರಕುತ್ತಾರೆ" ಎಂದು [:http://www.bioethics.net/|The American Journal of Bioethics]ನ ಸೀನ್ ಫಿಲ್ಪಾಟ್ ಹೇಳಿದರಂತೆ. "ಬಡತನ ಹೇಗೆ ತಿಳುವಳಿಕೆಯ ಒಪ್ಪಿಗೆ ನೀಡಿಸುತ್ತದೆ ಎಂಬ ಸೂಕ್ಷ್ಮತೆ ಕಂಪೆನಿಗಳಿಗೆ ಅರಿವಾಗದೇ ಹೋಗಬಹುದು" ಎಂದೂ ಅವರು ಎಚ್ಚರ ನೀಡಿದ್ದಾರಂತೆ.
೨೦೦೪ರಲ್ಲಿ ಭಾರತ ಮೂಲದ ಬಹುರಾಷ್ಟ್ರೀಯ ಕಂಪೆನಿಗಳಾದ ಶಾಂತ ಬಯೋಟೆಕ್ ಮತ್ತು ಬಯೋಕಾನ್ ಹೊಸ ಔಷದ ಪ್ರಯೋಗಗಳಿಂದ ಎಂಟು ಜನರ ಸಾವಿಗಾಗಿ ಕಾನೂನು ಕ್ರಮಕ್ಕೊಳಗಾಗಿದ್ದರಂತೆ. ಹೃದಯ ರೋಗಕ್ಕೆ ಔಷದ ಪ್ರಯೋಗ ನಡೆಸುವಾಗ ರೋಗಿಗಳಿಂದ ಸರಿಯಾಗಿ ಅನುಮತಿಯೇ ಪಡೆದಿರಲಿಲ್ಲವಂತೆ! ಹಲವಾರು ವರ್ಷಗಳಿಂದ pfizer, Eli Lilly ಮುಂತಾದ ಕಂಪೆನಿಗಳು ಭಾರತದಲ್ಲೇ ಪ್ರಯೋಗಗಳನ್ನು ನಡೆಸಿಕೊಳ್ಳುತ್ತ ಬಂದಿವೆಯಂತೆ.
ಎಡಿನ್ಬರ್ಗ್ ನಲ್ಲಿ ಉಪನ್ಯಾಸಕರಾಗಿರುವ ಸ್ಟೀಫನ್ ಎಕ್ಸ್ "ವೈದರು ಅಲ್ಲಿ ಕೆಲಸಕ್ಕೆ ಸುಲಭವಾಗಿ ಸಿಗುತ್ತಾರೆ... ಏಕೆಂದರೆ ಪಾಶ್ಚಿಮಾತ್ಯ ದೇಶಗಳಲ್ಲಿರುವ ಅವರ ಸಹೋದ್ಯೋಗಿಗಳು ನಡೆಸಿಕೊಂಡು ಹೋಗುವ ನೀತಿನಿಯಮಗಳು ಇವರೇನೂಪಾಲಿಸಬೇಕಿಲ್ಲ. ಅಲ್ಲದೆ, ರೋಗಿಗಳೂ ಕೂಡ 'ಏನು ನಡೆಯುತ್ತಿದೆ' ಎಂಬುದರ ಬಗ್ಗೆ ಬಹಳ ಕಡಿಮೆ ಪ್ರಶ್ನೆಗಳನ್ನ ಹಾಕ್ತಾರೆ" ಎಂದರಂತೆ.
ಪ್ರಯೋಗಗಳನ್ನು ಭಾರತದಲ್ಲಿ ನಡೆಸುವುದರಿಂದ ಔಷಧಿ ಉತ್ಪಾದನೆಯಲ್ಲಿ ಶೇ. ೬೦ ರಷ್ಟು ಉಳಿತಾಯವಾಗುತ್ತದಂತೆ. ಅಮೇರಿಕ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಈಗ ಬೆಲೆ ತುಟ್ಟಿಯಾಗುತ್ತಿರುವಾಗ ಅಲ್ಲಿನ ಖರ್ಚಿನ ಕೆಲವೇ ಭಾಗವನ್ನುಪಯೋಗಿಸಿ ಭಾರತ ಮುಂತಾದ ಡೆವಲಪಿಂಗ್ ದೇಶಗಳಲ್ಲಿ ಪ್ರಯೋಗ ನಡೆಸಲು ಸಾಧ್ಯವಾಗುತ್ತಿದೆಯಂತೆ.
"ಥರ್ಡ್ ವರ್ಲ್ಡ್ ನಲ್ಲಿರುವ ಜೀವಗಳು ಪಾಶ್ಚಾತ್ಯ ಜೀವಗಳಿಗಿಂತ ಕಡಿಮೆ ಮೌಲ್ಯದವು, ಕಲೋನಿಯಲಿಸ್ಮ್ ಎಂಬುದು ಇದೇ ಅಲ್ವೆ?" ಎಂದರಂತೆ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ವಿಸಿಟಿಂಕ್ ಪ್ರೊಫೆಸರ್ ಆಗಿರುವ ಶ್ರೀರೂಪ ಪ್ರಸಾದ್.
ಅಂಗ್ಲ ಭಾಷೆಯಲ್ಲಿರುವ ಮೂಲ ಲೇಖನ ಇಲ್ಲಿದೆ. ನನಗೆ ಸಾಧ್ಯವಾದಷ್ಟು ಮಟ್ಟಿಗೆ ಮೂಲ ಲೇಖನದ ಅರ್ಥಗೆಡದಂತೆ ಸಂಪದ ಓದುಗರಿಗಾಗಿ ತರ್ಜುಮೆ ಮಾಡಿದ್ದೇನೆ. ತಪ್ಪುಗಳಿದ್ದಲ್ಲಿ ತಿಳಿಸಿ :)
- ಹೆಚ್ ಪಿ