ನಯಸೇನನ ಸಲೀಸಾದ ಸಾಲುಗಳು - ಬಿಡಿ ೮ - ಕೆಟ್ಟವರ/ಸಿತಗರ ಒಡನಾಟ
ಕೆಟ್ಟವರ ಒಡನಾಟವನ್ನು ಬಲ್ ಚೆನ್ನಾಗಿ ಹೋಲಿಕೆಗಳ ಮೂಲಕ ಬಣ್ಣಿಸಿದ್ದಾನೆ.
ಮೊದಲಿಂ ಪಂದಿಗಳೊಡನಾ
ಡಿದ ಕಱುವುಂ ಪಂದಿಯಂತೆ ಪೇಲಂ ತಿಂಗೆಂ
ಬುದು ನಾಣ್ಣುಡಿ ತಾನದು ತ
ಪ್ಪದು ಸಿತಗರ ಕೂಟದಿಂದೆ ಕೆಡದವರೊಳರೇ
ತಿರುಳು: ಹೇಗೆ ಮೊದಲಿಂದಲೂ ಹಂದಿಗಳೊಡನೆ ಆಡಿದ ಕರುವು(ಹಸುವಿನ) ಹಂದಿಯಂತೆ ಹೇಲನ್ನು ತಿನ್ನುವುದು ಹಾಗೆ ಕೆಟ್ಟವರೊಡನೆ(ಸಿತಗರೊಡನೆ) ಇದ್ದವರು ಕೆಡದೆ ಇರುವರೆ?
ಆರಯ್ದು ನೋಡೆ ತೊಱೆಗಳ
ನೀರುಂ ವಾರಿದಿಯ ನೀರ ಪೊರ್ದುಗೆಯಿಂದಂ
ಸಾರಂಗೆಟ್ಟುಪ್ಪಪ್ಪವೊ
ಲಾರುಂ ದುರ್ಜನ ಕೂಟದಿಂದಂ ಕೆಡರೇ
ತಿರುಳು: ಹೇಗೆ ತೊರೆಗಳ ನೀರು ಕಡಲ ನೀರ ಸೇರಿಕೆಯಿಂದ ಉಪ್ಪಾಗುವುದೊ ಹಾಗೆ ಹುಡುಕಿ ನೋಡಿದರೂ ಕೂಡ ಕೆಟ್ಟವರ ಕೂಟದಿಂದ ಕೆಡದೇ ಇರುವವರು ಸಿಗರು.
ಕಡುತಣ್ಪು ಕೆಟ್ಟು ಕಿಚ್ಚಿನೊ
ಳೊಡಗೂಡಿದ ನೀರ್ ಬಳಿಕ್ಕೆ ತೀವ್ರತೆಯಿಂ ಕಯ್
ಸುಡುವಂತೆ ನೋಡೆ ದುರ್ಜನ
ರೊಡಗೂಡಿದ ಮಾನಿಸರ್ಗೆ ಸದ್ಗುಣಮುಂಟೇ
ತಿರುಳು : ಕಡು ತಣ್ಣಗಿರುವ ನೀರು ಬೆಂಕಿಯಿಂದ ಕಾದ ಬಳಿಕ ಕಯ್ ಸುಡುವಂತಾಗುತ್ತದೊ ಹಾಗೆ ದುರ್ಜನರ ಒಡಗೂಡಿದ ಮಾನಿಸರಲ್ಲಿ ಸದ್ಗುಣವಿರಲು ಉಂಟೇ/ಸಾದ್ಯವೆ?
ಪೇಲಂ= ಹೇಲು
ಸಿತಗ = ಕೆಟ್ಟವ, ಜಾರ, ದುಶ್ಟ
ಆರಯ್ದು = ಹುಡುಕಿ, ಅನ್ವೇಶಿಸಿ
ತಣ್ಪು = ತಣ್ಣನೆಯ
ಪೊರ್ದುಗೆ = ಹೊದ್ದುಗೆ, ಹೊದ್ಕೆ,ಸೇರಿಕೆ , ಕೂಟ
ಬಳಿಕ್ಕೆ = ಬಳಿಕ
ಇಲ್ಲಿ ನಯಸೇನ 'ಕೆಟ್ಟು' ಒರೆಯನ್ನು ಚೆನ್ನಾಗಿ ಬಳಸಿದ್ದಾನೆ.
ಕೆಟ್ಟು = ಬಿಟ್ಟು, ಸಾರಂಗೆಟ್ಟು= ಸಾರವನ್ನು ಬಿಟ್ಟು