ನಮ್ಮಜ್ಜಿ ಹೇಳಿದ ಕಥೆ: ಏಸ್ಗೆ ಕ್ರಿಷ್ಣನ ಕಥೆ.

ನಮ್ಮಜ್ಜಿ ಹೇಳಿದ ಕಥೆ: ಏಸ್ಗೆ ಕ್ರಿಷ್ಣನ ಕಥೆ.

ಬರಹ

ನಾವು ಚಿಕ್ಕವರಿದ್ದಾಗ ನಮ್ಮನ್ನೆಲ್ಲ ಸುತ್ತಾ ಕೂರಿಸಿಕೊಂಡು ನಮ್ಮಜ್ಜಿ ಹೇಳುತ್ತಿದ ಕಥೆಗಳಲ್ಲಿ ಇದೂ ಒಂದು. ಕಥೇನ ನಿಮ್ಮ ಜೊತೆ ಹಂಚಿಕಳ್ಳೋ ಮೊದಲು ನಮ್ಮಜ್ಜಿಯ ಪರಿಚಯ ಮಾಡಿಸಿಬಿಡ್ತೀನಿ:

ಆಗ, ಅಂದರೆ ಚೀನಾ ಯುದ್ಧದ ಸಂದರ್ಭ ಅಂತ ಕಾಣುತ್ತೆ. ಯಾಕಂದ್ರೆ ಮನೇಲಿ ಸಕ್ಕರೆ ಬದಲು ಬೆಲ್ಲ ಬಳಸುತ್ತಿದ್ದುದು ನೆನಪಿದೆ. ಆಗ, ಮೈಸೂರಿನ ಶಿವರಾಮ ಪೇಟೆ ಅನ್ನೋ ಪ್ರದೇಶ ಒಂದು ಕಾಸ್ಮಾಪೊಲಿಟನ್ ಪ್ರದೇಶ ಆಗಿತ್ತು ಅಂದ್ಕೊ ಬಹುದು. ಒಂದು ಚದರ ಕಿಲೋಮೀಟರ್‍ಗೂ ಕಡಿಮೆ ಇದ್ದ ಆ ಪ್ರದೇಶದಲ್ಲಿ ಕನ್ನಡ, ಉರ್ದು, ತಮಿಳು, ತೆಲುಗು, ಮರಾಠಿ, ಮಾರವಾಡಿ ಭಾಷೆಗಲೆಲ್ಲ ಚಾಲ್ತೀಲಿದ್ವು. ಈ ನಮ್ಮಜ್ಜಿ, ಅನಕ್ಷರಸ್ಥೆ ಆಗಿದ್ರೂ ಆ ಭಾಷೆಗಳ್ನೆಲ್ಲ ಮಾತಾಡ್ತಿದ್ರು. ಅದೂ ಶೆಟ್ರ ಜೊತೆ ಅವರ ತೆಲುಗುನ್ನ ಶೆಟ್ರ ತರಾನೇ ಮಾತಾಡೋರು. ಬೀದಿ ಕಸ ಗುಡಿಸೋರ ಜೊತೆ ಅವರ ತೆಲುಗು, ಮಾರವಾಡಿಗಳ ಜೊತೆ ಅವರ ತರಾನೇ ಮಾರವಾಡಿ, ಬೂಸದ ಅಂಗಡಿ ಮುರುಗನ ಜೊತೆ ಅವನ ತಮಿಳು, ಐಯ್ಯಂಗಾರ್‍ ಜೊತೆ ಅವರ ತಮಿಳು, ದರ್ಜಿಯವರ ಜೊತೆ ಅವರ ಮರಾಠಿ, ಸಾಮನ್ಯ ಮರಾಠಿಯವರ ಜೊತೆ ಅವರ ಮರಾಠಿ. ನಮ್ಮ ಚಿಕ್ಕಪ್ಪಂದಿರ ವ್ಯಾಪಾರದ ಸಲುವಾಗಿ ಮನೆಗೆ ಬರ್ತಿದ್ದ ವ್ಯಾಪಾರಿ ಸಾಬರು ಮತ್ತು ಅವರ ಹೆಂಗಸರ ಜೊತೆ ಬಹುವಚನದ ರಾಜ ಉರ್ದು, ಜಟಕಾ ಸಾಬರ ಜೊತೆ ನೀನು ತಾನು ಅನ್ನುವ ಏಕವಚನದ ಉರ್ದು ಮಾತನಡುತ್ತಿದ್ದರು. ಆಗ ನಮಗೆಲ್ಲ ನಮ್ಮಜ್ಜಿಗೆ ಗೊತ್ತಿಲ್ಲದ ಭಾಷೇನೇ ಇಲ್ಲ ಅನ್ನಿಸ್ತಿತ್ತು. ಮುವ್ವತ್ತಕ್ಕೂ ಹೆಚ್ಚು ಜನ ಇದ್ದ ಮನೇಗೆ ಯಜಮಾನ್ತಿ. ಅವ್ರೇ ಹೇಳ್ತಿದ್ದ ಕಥೇಲಿ ಬರೋ ಕೃಷ್ಣ, ಚಾಣಕ್ಯ ಮತ್ತೆ ಶಕುನಿಗಳನ್ನ ಅರೆದು ಎರಕ ಹೊಯ್ದಂತ ಚಾಣಾಕ್ಷ ವ್ಯಕ್ತಿತ್ವ. ಮನೆಯ ಕಿರಿಯ ಮಹಿಳಾ ಸದಸ್ಯರು, ವಿಶೇಷವಾಗಿ ಸೊಸೇದೀರು ತಮ್ಮ ಬಿಡುವಿನ ಸಮಯದ ಬೆಕ್ಕಿಗೆ ಗಂಟೆ ಕಟ್ಟುವ ಮೀಟಿಂಗ್ ಗಳಲ್ಲಿ ಅವರನ್ನು ’ಮೇಡಿ’ ಎಂದು ಪಿಸ ಪಿಸ ಮಾತಿನಲ್ಲಿ ರೆಫರ್‍ ಮಾಡುತ್ತಿದ್ದರು. ಮೇಡಿ ಅನ್ನೋದು ಮೇಡಂ ಎಂಬುದರ ಕೋಡ್! ಆದ್ರೆ ನಮ್ಮಜ್ಜಿ ಎಲ್ರನ್ನೂ ಜೋಪಾನ ಮಾಡ್ತಿದ್ರು. ನಮಗೆ ಮೊಮ್ಮಕ್ಕಳುಗಳಿಗಂತೂ ಜ್ಜಿ ಅಂದ್ರೆ ಬಹಳ ಇಷ್ಟ.

ನಾನು ಈಗ ನಿಮ್ಮ ಜೊತೆ ಹಂಚಿಕೋತಾ ಇರೋ ಕಥೆ ರಾಜಾ ವಿಕ್ರಮನ ಕಥೆ ಹೇಳುವಾಗ ಪ್ರಾಸಂಗಿಕವಾಗಿ ಶನಿ ಮಹಾತ್ಮನ ಪವರ್‍ ಎಷ್ಟು ಅನ್ನೋದನ್ನ ನಮಗೆಲ್ಲ ಅರ್ಥ ಮಾಡಿಸೋಕೆ ಹೇಳ್ತಿದ್ರು.
ಆ ಕಥೇನ ನಾನು ನನ್ ಮಾತಲ್ಲೇ ಹೇಳ್ತೀನಿ.

ಶನಿ ಯಾರ ಮನೇಗಾದ್ರೂ ಹೊಕ್ಕುವ ಹಕ್ಕು ಅವನಿಗೆ ಹಿಂದೂ ಸಂವಿಧಾನ ಬದ್ಧವಾದ್ದು. ಹಾಗೆ ನರಮನುಷ್ಯರ ಮನೆಗೆ ಮಾತ್ರವಲ್ಲ. ಅವನು ಪ್ರಾಣಿ ಪಕ್ಷಿಗಳು ಮತ್ತು ದೇವ ದಾನವರ ಮನೆಗಳನ್ನೂ ಹೊಕ್ಕುತ್ತಾನೆ. ಎಲ್ಲಾ ದೇವತೆಗಳ ರೌಂಡ್ ಮುಗಿಸಿದರೂ ಗಣೇಶ ಮತ್ತು ಕೃಷ್ಣರ ಮನೆಗೆ ಮಾತ್ರ ಪ್ರವೇಶಿಸಲು ಅವನಿಗೆ ಆಗಿರಲಿಲ್ಲ. ದೇವತೆಗಳಲ್ಲವಾ. ನನಗೆ ಯಾವಾಗ ಅನುಕೂಲವಪ್ಪ. ನಾನು ನಿನ್ನ ಮನೆಗೆ ಎಂದು ಬರಲಿ ಎಂದು ವಿಚಾರಿಸಿಕೊಂಡು ಹೋಗುತ್ತಿದ್ದ ಎನಿಸುತ್ತದೆ. ಆದರೆ ಗಣೇಶ ಮಹಾನ್ ಕಿಲಾಡಿ ಏನಾದರೂ ನೆವ ಮಾಡಿ ಆಗ ಬಾ ಈಗ ಬಾ ಎಂದು ಸತಾಯಿಸುತ್ತಲೇ ಇದ್ದ. ಕೃಷ್ಣನೂ ಅದೇ ತಂತ್ರವನ್ನು ಬಳಸುತ್ತಿದ್ದನಂತೆ.

ಈ ಗಣೇಶ ದೇವತೆಗಳಲ್ಲೇ ಮಹಾನ್ ಬುದ್ದಿವಂತ. ಇವನನ್ನು ಆಮೇಲೆ ನೋಡಿಕಳ್ಳುವ. ಈಗ ಕೃಷ್ಣನ ಮನೆಗೆ ಪ್ರವೇಶಿಸುವ ಕೆಲಸ ಮೊದಲು ಮುಗಿಸಿ ಬಿಡುವ ಅಂದುಕೊಂಡವನು ಕೃಷ್ಣನನ್ನು ಕೇಳಿದನಂತೆ. "ಏನಪ್ಪಾ. ನಾನು ಎಲ್ಲಾರ ಮನೆ ಹೊಕ್ಕಾಯ್ತು. ನಿನ್ನ ಮನೆ ಮತ್ತೆ ಆ ಗಣೇಶನ ಮನೆಗಳು ಬಾಕಿ ಇವೆ. ನಿನ್ನ ಮನೆಗೆ ಯಾವಾಗ ಬರಲಿ. ಏನೂ ನಿವಾ ಗಿವಾ ಹೇಳ್ಬೇಡಾ" ಎಂದು ಕೇಳಿದನಂತೆ. ಅತಿಥಿಯಾಗೇ ಬರ್‍ಲಿ. ಅಭ್ಯಾಗತನಾಗೇ ಬರ್‍ಲಿ. ಆ ಶನಿ ಮಹಾತ್ಮ ಫ್ರಂಡ್ ಆಗೇ ಮನೇಗೆ ಬಂದ್ರೂ ಯಾರು ಸಹಿಸಿಕೊಳ್ಳೊಕೆ ಆಗುತ್ತೆ? ಸರಿ ಕೃಷ್ಣ ಏನು ಕಡಿಮೇನಾ. "ಆಯ್ತಪ್ಪಾ ನಾನು ಯಾವಾಗಹೊಟ್ಟೆ ಹಸಕೊಂಡಿರ್‍ತೀನೋ ಆವಾಗ ನೀನು ನನ್ನ ಮನೆಗೆ ಬಾ" ಎಂದು ಕಂಡೀಷನ್ ಹಾಕಿ ಒಪ್ಪಿಕೊಂಡನಂತೆ.

ಸರಿ. ಶನಿ ಮಹಾತ್ಮ ಕಾದಿದ್ದೇ ಕಾದಿದ್ದು. ಯಾವಾಗ ಈ ಕೃಷ್ಣನ ಹೊಟ್ಟೆ ಹಸಿಯುತ್ತೆ, ನನ್ನ ಡ್ಯೂಟಿ ಒಂದು ಸಲ ಮಡಿ ಮುಗಿಸಿ ಬಿಡೋಣ ಅಂತ. ಆದ್ರೆ ಕೃಷ್ಣ ಯಾವಾಗಲೂ ಹೊಟ್ಟೆ ತುಂಬಿರೋ ಹಾಗೆ ನೋಡ್ಕೊಂಡು ಶನಿಗೆ ಪ್ರವೇಶದ ಅವಕಾಶಾನೇ ಕೊಡ್ಡಿರಲಿಲ್ಲವಂತೆ. ಶನಿ ಕಯ್ತಾನೇ ಇದ್ದ.

ಆದ್ರೆ ಒಂದು ದಿನ ಹಸೀ ಸೌದೆ ದೆಸೆಯಿಂದಾಗಿ ನೀರು ಕಾಯೋದು ನಿಧಾನ ಆಗಿ ನಾಷ್ಠಾ ಟೈಮ್ ಮೀರೋಷ್ಟ್ ಹೊತ್ಗೆ ಸ್ನಾನಕ್ಕೆ ಕೂತ್ಕೋ ಬೇಕಾಯ್ತು. ನೀರನ್ನ ಹದ ಮಾಡಿ ಕೃಷ್ಣನ ತಲೆ ಮೇಲೆ ಒಂದೆರಡು ತಂಬಿಗೆ ನೀರು ಹುಯ್ದು, ರುಕ್ಮಿಣಿ ಸೀಗೇ ಕಾಯಿ ಪುಡಿಗೆ ನೀರು ಬೆರಸಿ ತಲೆಗೆ ಹಚ್ಚೋಕೆ ಕಲಸ್ತಾ ಇದ್ದಳಂತೆ. ಅಷ್ಟೊತ್ತಿಗೆ ಕೃಷ್ಣನ ಹೊಟ್ಟೆ ಹಸಿಯೋಕೆ ಶುರುವಾಯ್ತು. ಇದನ್ನೇ ಕಾಯ್ತಿದ್ದ ಶನಿ ಕೃಷ್ಣನ ಮನೆ ಕಡೆ ಹೊರಟನಂತೆ. ಅಲ್ಲೆಲ್ಲೋ ಶನಿ ಮಹಾತ್ಮ ತನ್ನ ಮನೆ ಕಡೆ ತಿರುಗಿದ್ದು ಕೃಷ್ಣನ ದಿವ್ಯ ದೃಷ್ಟಿಗೆ ಗೋಚರ ಆಗುತ್ತೆ. ತಕ್ಷಣ ಅವನು ತನ್ನ ಬೊಗಸೆ ಒಡ್ಡಿ, ರುಕ್ಮಿಣಿಗೆ "ಬೇಗ ಕಲಸಿರೋ ಸೀಗೆಪುಡಿ ಪೇಸ್ಟನ್ನ ಇಲ್ಲಿ ಹಾಕು" ಎನ್ನುತ್ತಾನೆ. ಅವಳು ಯಾಕೆ ಏನು ಅಂತಾ ಕೇಳೋದ್ರಲ್ಲಿ ತಾನೇ ತಗೊಂಡು ತಿಂದ್ ಬಿಡ್ತಾನೆ. ಅಲ್ಲಿಗೆ ಅವನ ಹೊಟ್ಟ ಹಸಿವು ಶಮನ ಆಗೋಯ್ತು.

ಅಷ್ಟೊತ್ಗೆ ಶನಿ ಬಚ್ಚಲು ಮನೆಯೊಳಕ್ಕೆ ಒಂದು ಕಾಲಿರಿಸಿದ್ದ. ಬಹಳ ದಿನ ಕಾದು, ಈಗ ಸುವರ್ಣಾವಕಾಶ ಸಿಕ್ಕೇ ಬಿಡ್ತು ಅಂತ ಬಂದ್ರೆ, ಈ ರೀತಿ ಮೋಸದಿಂದ ಕೃಷ್ಣ ತಪ್ಪಿಸಿಕೊಂಡಿದ್ದು ನೋಡಿ ಶನಿ ಮಹಾತ್ಮನಿಗೆ ತಡಕಪಳ್ಳಕಾಗದಷ್ಟು ಕೋಪ ಬಂತು. "ಈ ತರ ಆಟ ಕಾಯಿಸ್ತೀಯ? ಇರ್‍ಲಿ. ತಗೋ ಶಾಪ" ಅಂತ ಹೇಳಿ ಶಾಪ ಕೊಡ್ತಾನೆ.

"ನೀನು ಈ ತರಾ ತಿನ್ನ ಬಾರದ ಏಸ್ಗೆ ತಿಂದು ನನ್ನ ಕೈಯಿಂದ ತಪ್ಪಿಸಿಕೊಂಡಿದ್ರಿಂದ ಮುಂದೆ ಒಂದು ಜನ್ಮದಲ್ಲಿ ಏಸ್ಗೆ ಕೃಷ್ಣ ಅನ್ನೋ ಅವತಾರದಲ್ಲಿ ಹುಟ್ಟುತ್ತೀಯ. ಆಗ ನಿನು ನನ್ನ ಕೈಯಿಂದ ತಪ್ಪಿಸಿಕೊಳ್ಳೋಕೆ ಆಗಲ್ಲ. ಕೊಡಬಾರದ ಕಾಟ ಕೊಡ್ತೀನಿ. ನಿನ್ನ ಶಿಲುಬೇನ ನೀನೇ ಹೊತ್ಕೊಂಡು ಬೆಟ್ಟ ಹತ್ತಬೇಕಾಗುತ್ತೆ. ನಿನ್ನ ಸುತ್ತ ರಾಜನ ಭಟರು ಚಾವಟಿಯಿಂದ ಹೊಡೀತಾ ಬೆಟ್ಟ ಹತ್ತಿಸ್ತಾರೆ. ತಲೆಗೆ ಮುಳ್ಳಿನ ಕಿರೀಟ ಹಾಕ್ತಾರೆ. ಬೆಟ್ಟದ ತುದೀನಲ್ಲಿ ಶಿಲುಬೆ ಮೇಲೆ ನಿನಗೆ ಮೊಳೆ ಹೊಡದು ನೇತಾಕ್ತಾರೆ. ಪಡಬಾರದ ಹಿಂಸೆ ಅನುಭವಿಸಿ ಸಾಯ್ತೀಯ. ಅದೇ ನನ್ನ ಕಾಟ ನಿನಗೆ." ಅಂತ ಶಾಪ ಕೊಟ್ಟು, ಮನಸ್ಸಿನೊಳಗೇ, ಇವನು ಪ್ರಳಯಾಂತಕ. ಇನ್ನೂ ಇಲ್ಲೇ ಇದ್ರೆ ಏನದ್ರೂ ಉಪಾಯಮಾಡಿ ಕನ್ಸೆಷನ್ ತಗೊಂಡ್ ಬಿಡ್ತಾನೆ, ಅಂದುಕೊಂಡು ಅಲ್ಲಿಂದ ಸರಸರನೆ ಮರಳಿ ಹೊರಟ್ ಬಿಡ್ತಾನೆ.

ಮುಂದೆ ಕೃಷ್ಣ, ಏಸ್ಗೆ ಕೃಷ್ಣ ಆಗಿ ಹುಟ್ಟಿ ಶಾಪಾನ ಅನುಭವಿಸ್ತಾನೆ. ಏಸ್ಗೆ ಕೃಷ್ಣ ಅನ್ನೋ ಹೆಸ್ರು ಜನರ ಬಾಯಲ್ಲಿ ಏಸು ಕ್ರಿಸ್ತ ಆಗಿದೆ ಅಷ್ಟೆ. ಬೇರೆಯವರಿಗೆಲ್ಲ ಶಾಪ ಸಿಕ್ಕಾಗೆಲ್ಲ ಅವರು ಬೇಡ್ಕೊಂಡೋ ಗೋಗರ್‍ಕೊಂಡೋ ಕನ್ಸೆಷನ್ ತಗೊಂಡಿದ್ದಾರೆ. ಶಾಪ ಕೊಟ್ಟೋರು ಕೋಪ ಇಳಿದ ಮೇಲೆ ಉಶ್ಶಾಪ ಕೊಟ್ಟವ್ರೆ. ಆದ್ರೆ ಶನಿ ಮಹಾತ್ಮ ಉಶ್ಶಾಪ ಕೊಡ್ಬೇಕಾತ್ತೇಂತಾನೆ ಬೇಗ ಹೊರ್‍ಟೋಗ್ ಬಿಡ್ತಾನೆ. ಆದ್ದರಿಂದಾನೆ ಕೃಷ್ಣ ಏಸು ಕ್ರಿಸ್ತನ ಜನ್ಮದಲ್ಲಿ ಕನ್ಸೆಷನ್ ಇಲ್ಲದೆ ಶನಿ ಕಾಟಾನ ಅನುಭವಿಸಬೇಕಾಯ್ತು.