"ಭಾರ" (ಭಾಗ - ೨)

"ಭಾರ" (ಭಾಗ - ೨)

ಬರಹ

"ಭಾರ" (ಭಾಗ - ೨)

ರಾತ್ರಿ ಊಟವಾದ ಮೇಲೆ, ಆರ್ಯನನ್ನು ಮಲಗಿಸಿದ ನಂತರ ಅಂಜಲಿ ತನ್ನ ಗಂಡ ಮತ್ತು ಮಾವನವರ ಬಳಿ, ಆರ್ಯ ಬೆಳಿಗ್ಗೆ ಹೇಳಿದ ಘಟನೆಗಳನ್ನು ವಿವರಿಸುತ್ತಿದ್ದಂತೆ, ಅವಳ ಧ್ವನಿ ದು:ಖದಿಂದ ಕುಗ್ಗಿತು. ಅವನ ತರಗತಿಯ ಬೇರೆ ಯಾವುದಾದರೂ ಸಹಪಾಠಿಗಳ ಹೆತ್ತವರ ಬಳಿ ಈ ಎಲ್ಲಾ ವಿಷಯಗಳನ್ನು ವಿಶದವಾಗಿ ಚರ್ಚಿಸಿ, ಮುಂದಿನ ದಾರಿ ಹುಡುಕುವ ಅವರೆಲ್ಲರೂ ತೀರ್ಮಾನಿಸಿದರು. "ಯಾಕೀ ಮುಗ್ಧ ಜೀವಗಳು, ಇಷ್ಟೆಲ್ಲಾ ಹಿಂಸೆಗಳನ್ನು ಅನುಭವಿಸಬೇಕು? ಗೌರವಯುತವಾದ ಟೀಚಿಂಗ್ ಪ್ರೊಫೆಶನ್ಗೆ ಇಂಥ ಕೆಲವೇ ಕೆಲವು ಅಧ್ಯಾಪಕರ ಹೀನ ನಡವಳಿಕೆಯಿಂದ ಮುಜುಗರವಾಗುತ್ತಿದೆ. ತಪ್ಪು ಮಾಡದ ಮಕ್ಕಳಿಗೂ, ಶಿಕ್ಷೆ ಕೊಟ್ಟು ಬುದ್ಧಿ ಕಲಿಸುವ ದಾರಿಯೂ ಎಂಥದ್ದು? ಮೊಸ್ಟ್ಲಿ ಅವರೆಲ್ಲಾ ಮಾನವರೂಪದಲ್ಲಿರುವ ವಿಷಜಂತುಗಳು. ಅವರಿಗೆಲ್ಲಾ ಪ್ರೀತಿಯ ಪಾಠ ನಾನು ಕಲಿಸಲೇಬೇಕು" ಎಂದೆಲ್ಲಾ ಯೋಚಿಸುತ್ತಾ, ಇಡೀರಾತ್ರಿ ನಿದ್ರೆ ಬಾರದೆ ಒದ್ದಾಡುತ್ತಾ ಅಂಜಲಿ ಕಳೆದಳು. ಮುಂದಿನ ದಾರಿ ಎಷ್ಟು ಕಠಿಣವಾದದೆಂದು ಚಿಂತಿಸುತ್ತಾ ಅವಳ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತಿತ್ತು.
ಮರುದಿನ ಜುಲೈ ೨೧ರ ಹೊಸಸೂರ್ಯ ಮೂಡುತ್ತಿದ್ದಂತೆಯೇ ಮಗನನ್ನು ಎಬ್ಬಿಸಿದ ಅಂಜಲಿ, ಸಾಂತ್ವನ ನೀಡಿ ಅವನ ತೊಂದರೆಗಳು ನೀಗುವವರೆಗೆ, ಅವನು ಸ್ಕೂಲಿಗೆ ಹೋಗುವುದು ಬೇಡವೆಂದಳು. ತನ್ನ ಆಫೀಸಿನ ಮ್ಯಾನೇಜರಿಗೆ ಫೋನ್ ಮಾಡಿ, ಒಂದು ವಾರದ ಮಟ್ಟಿಗೆ ತನಗೆ ರಜೆ ಬೇಕೆಂದಳು ಅಂಜಲಿ. ಧಾವಂತದಲ್ಲಿ ಅಡ್ದಾಡಿ ತನ್ನೆಲ್ಲಾ ಕೆಲಸವನ್ನು ಬೇಗನೇ ಮುಗಿಸಿಕೊಂಡ ಅವಳು, ಆರ್ಯನಿಗೆ ತಿಳಿದಿರುವ ಸಹಪಾಠಿಗಳ ಫೋನ್-ನಂಬರ್ ಗಳನ್ನು ದಾಖಲಿಸಿಕೊಂಡಳು. ಸಮರ್ಥನನ್ನು ಕರೆದು, ಇವತ್ತಿನ ದಿನದಿಂದ ಲೆಕ್ಕ ಹಿಡಿದು ಇನ್ನು ಒಂದು ವಾರದೊಳಗೆ ಆರ್ಯನ ಸ್ಕೂಲಿನ ತೊಂದರೆಗಳನ್ನು ತಾನೇ ಸರಿಪಡಿಸುತ್ತೇನೆಂದು ಹೇಳಿ, ಅಂಜಲಿ ಅವನಿಗೆ ತನ್ನ ಯೋಜನೆಯನ್ನು ವಿವರಿಸಿದಳು. ಅವಳ ಮಾತನ್ನು ಕೇಳಿ, ಪಡಸಾಲೆಗೆ ಬಂದ ರಾಮರಾಯರು, ಅಂಜಲಿಯ ಬೆನ್ನು ತಟ್ಟಿ ತಾನೂ ಸಹ ಅವಳ ಸಹಾಯಕ್ಕೆ ಬರುವುದಾಗಿ ಹೇಳಿದಾಗ, ಸಮರ್ಥ ಅವರಿಬ್ಬರನ್ನು ಗೇಲಿ ಮಾಡಿದನು. ಅಂಜಲಿ ಮುನಿಸು ತೋರಲು, ಸಮರ್ಥನೂ ಹುಸಿಮುನಿಸು ತೋರಿಸುತ್ತಾ ಚಿಕ್ಕ ಮಕ್ಕಳಂತೆ ತನ್ನ ಮುಖ ಊದಿಸಿಕೊಂಡನು. ಅದನ್ನು ನೋಡಿ ಆಂಜಲಿ ಜೋರಾಗಿ ನಕ್ಕು ಬಿಟ್ಟು, "ಮುಂದಿನ ಕೆಲಸ ಇನ್ನು ಹೂವಿನಂತೆ ಹಗುರ ಅಪ್ಪ. ನೀವು ಮತ್ತು ಸಮರ್ಥ ಹೀಗೆ ನನ್ನ ಜೊತೆಗಿದ್ದರೆ, ನಾನು ಉರಿಯುವ ಸೂರ್ಯನನ್ನೇ ತಂಪು ಮಾಡುತ್ತೇನೆ" ಎಂದಳು. ಮನಸಾರೆ ನಕ್ಕರೂ, ಅವಳ ಮನಸ್ಸಿನೊಳಗಿದ್ದ ಸಿಟ್ಟು, ಕಸಿವಿಸಿಯೆಲ್ಲವೂ ಒಟ್ಟಾಗಿ, ಅವಳ ಹಣೆಯಲ್ಲಿ ದಟ್ಟ ನೆರಿಗೆಗಳಾಗಿ ಕಾಣಿಸತೊಡಗಿದವು.
ಅದೇ ದಿನ ಮಾವ ಮತ್ತು ಸೊಸೆ ತಮ್ಮ "ಮಿಷನ್ ಆಫ್ ಟೀಚರ್‍ಸ್"ನ ಕೆಲಸ ಪ್ರಾರಂಭಿಸಿದರು. ಆರ್ಯನ ಸ್ನೇಹಿತರ ಮನೆಗಳಿಗೆ ಫೋನ್ ಕರೆ ಮಾಡಿ, ಆರ್ಯ ಹೇಳಿದ ವಿಷಯಗಳನ್ನು ಖಚಿತ ಪಡಿಸಿಕೊಂಡರು. ಯಾರಿಗೆ ಮಕ್ಕಳ ಅಸಹಾಯಕ ಪರಿಸ್ಥಿತಿಗಳಿಗೆ ಸ್ಪಂದಿಸುವ ಆಸಕ್ತಿಯಿದೆಯೋ, ಆ ಹೆತ್ತವರನ್ನೆಲ್ಲಾ ತಮ್ಮ ಮನೆಗೆ ಆ ದಿನವೇ ಸಂಜೆ ಐದು ಘಂಟೆಗೆ ಬರಲು ಹೇಳಿದರು. ಅಂಜಲಿ ಮತ್ತು ತನ್ನ ಅಪ್ಪಯ್ಯನ ತರಾತುರಿ ನೋಡಿ ಸಮರ್ಥ ಅವರಿಬ್ಬರ ಮೇಲೂ ಎಗರಾಡಿದ. "ಕಬ್ಬಿಣ ಕಾದಿರುವಾಗಲೇ ಉಳಿಪೆಟ್ಟು ಹೊಡೆಯಬೇಕೆಂದು", ಅಂಜಲಿ ಅವನಿಗೆ ಬಿರುಸಾಗಿ ಮರುನುಡಿದಳು. ಆರ್ಯನ ಸಹಪಾಠಿಗಳ ಹೆತ್ತವರು ತಮ್ಮ ಮಾತಿಗೆ ಓಗೊಟ್ಟು ಬರುತ್ತಾರೋ ಇಲ್ಲವೋ? ಎಂಬ ಸಂಶಯ ಅವಳನ್ನು ಬೆಂಬಿಡದ ಬೇತಾಳನಂತೆ ಕಾಡುತ್ತಲೇ ಇತ್ತು. ಏನೇ ಆಗಲಿ ಮಾವ ತನ್ನ ಬೆಂಬಲಕ್ಕೆ ನಿಂತಿದ್ದಾರಲ್ಲ, ತಾನು ಒಂಟಿಯಲ್ಲ ಅಂದುಕೊಂಡು ಅವಳು ದುರ್ಬಲವಾಗುತ್ತಿರುವ ತನ್ನ ಆಲೋಚನೆಗಳನ್ನು ಗಟ್ಟಿ ಮಾಡಿಕೊಂಡಳು. ಆದರೆ ಆ ದಿನದ ಸಂಜೆ ನಡೆದಿದ್ದು ಬೇರೆಯೇ ಕಥೆ, ಆರ್ಯನ ಮನೆಯವರ ಊಹೆಗೂ ನಿಲುಕದಂತಾಗಿತ್ತು ಮುಂದೆ ನಡೆದ ಘಟನೆ ಮತ್ತು ಅದರ ಪರಿಣಾಮ........... ಸಂಜೆ ಘಂಟೆ ನಾಲ್ಕೂವರೆ ಆಗುತ್ತಲೇ, ಅಂಜಲಿಯ ಮನೆಯಲ್ಲಿ ಮೂವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಸೇರಿದ್ದರು. ಎಲ್ಲರೂ ಏರುದನಿಯಲ್ಲಿ ಮಾತಾಡುವವರೇ. "ಆ ಅಧ್ಯಾಪಕಿಯರೇನಾದರೂ, ಇಂಥಾ ಹೊತ್ತಿನಲ್ಲಿ ಇವರೆಲ್ಲರ ಕೈಗೆ ಸಿಕ್ಕಿದರೆ, ಮೊಸ್ಟ್ಲಿ ಅವರ ಹೆಣಗಳೆಲ್ಲಾ ಬೀದಿಯಲ್ಲಿ ಬೀಳುತ್ತವೆ" ಎಂದು ರಾಮರಾಯರು ಅವಳ ಕಿವಿಯಲ್ಲಿ ಪಿಸುನುಡಿದರು. ಅವರ ಮಾತುಗಳನ್ನು ಕೇಳಿ ಅಂಜಲಿ ನಗು ತಡೆಯಲಾರದೆ ಜೋರಾಗಿ ನಕ್ಕಳು. ಆವಳ ನಗುವಿನ ಶಬ್ಧಕ್ಕೆ ಮನೆ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ಧವಾಯಿತು. ಅದನ್ನು ನೋಡಿ ಪೆಚ್ಚಾದ ಅಂಜಲಿ, ತುಸುಕ್ಷಣದಲ್ಲೇ ಸಾವರಿಸಿಕೊಂಡು ತನ್ನ ಮಾತು ಶುರುಮಾಡಿದಳು.
"ನನ್ನ ಪ್ರೀತಿಯ ಸ್ನೇಹಿತರೇ, ನನ್ನ ಮಾತು ಕೇಳಿ ನೀವೆಲ್ಲಾ ಇವತ್ತು ಇಲ್ಲಿ ಸೇರಿದ್ದೀರಿ. ನಿಮಗೆಲ್ಲಾ ನನ್ನ ಕೃತಜ್ಞತೆಗಳು. ನಮಗೆಲ್ಲರಿಗೂ ನಮ್ಮ ಮಕ್ಕಳು, ಭವಿಷ್ಯದಲ್ಲಿ ಚೆನ್ನಾಗಿರಬೇಕೆಂಬ ಆಸೆ ಇದ್ದೇ ಇದೆ. ಅವರು ಓದಿ, ಚೆನ್ನಾಗಿರುವ ಕೆಲಸಕ್ಕೆ ಸೇರಿ, ಒಳ್ಳೆ ಹೆಸರು ಮತ್ತು ಹಣ ಗಳಿಸಲಿ ಎಂಬ ಆಸೆಯೂ ಇದ್ದೇ ಇದೆ. ನಾವೆಲ್ಲಾ ಕಷ್ಟಪಟ್ಟು ದುಡಿದ ಹಣದಿಂದ, ತಿಂಗಳಿಗೆ ಸಾವಿರದ ಇನ್ನೂರು ಫೀಸ್ ಕಟ್ಟಿ, ಮಕ್ಕಳನ್ನು ಓದಿಸುತ್ತಿರುವುದಲ್ಲವೇ ............! ಆದರೆ ನೋಡಿ, ನಮ್ಮ ಮಕ್ಕಳು ಸ್ಕೂಲೆಂದರೆ ಭಯ ಪಡುವ ಕಾಲ ಬಂದಿದೆ. ಈ ವರ್ಷ ಕೆಲವು ಅಧ್ಯಾಪಕಿಯರು ಮಕ್ಕಳಿಗೆ ಯಾತನೆ ನೀಡುತ್ತಿರುವ ವಿಷಯ ನಿಮಗೆಲ್ಲಾ ತಿಳಿದೇ ಇದೆ. ಯಾರಾದರೂ ಇನಿಶಿಯೇಟಿವ್ ತೆಗೆದುಕೊಂಡು ಈ ಹಿಂಸೆಗಳನ್ನು ನಿಲ್ಲಿಸಲು ಪ್ರಯತ್ನಿಸೋಣ. ಯಾಕೆಂದರೆ ಅವರೆಲ್ಲಾ ತೊಂದರೆ ಕೊಡುತ್ತಿರುವುದು ನಿಮ್ಮ ಮಕ್ಕಳಿಗೆ.............., ನಮ್ಮ ಮಕ್ಕಳಿಗೆ. ಆದರೆ ನೆನಪಿರಲಿ, ನಮ್ಮ ಅರಳುತ್ತಿರುವ ಕರುಳಿನ ಕುಡಿಗಳು ದಿನಾ ಹೀಗೆಯೇ ತೊಂದರೆ ಅನುಭವಿಸಿದರೆ, ಗ್ಯಾರಂಟಿ ಮುಂದೆ ಅವರು ಸಧ್ಯದಲ್ಲಿಯೇ, ನಮ್ಮ ಕಣ್ಣಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುವುದನ್ನೂ ನಾವು ನೋಡಬೇಕಾಗುತ್ತದೆ. ಇಲ್ಲವಾದರೆ ಮಾನಸಿಕ ಸಮತೋಲನ ಕಳೆದುಕೊಂಡ ಮಕ್ಕಳನ್ನು ಹಿಡಿದುಕೊಂಡು, ನಮ್ಮ ಆಯುಷ್ಯ ಪೂರ್ತಿ ನಾವೆಲ್ಲಾ ಆಸ್ಪತ್ರೆಗಳ ಮೆಟ್ಟಿಲುಗಳನ್ನು ಸವೆಸಬೇಕಾಗುತ್ತದೆ", ಎಂದು ಅಂಜಲಿಯು ವಸ್ತುಸ್ಥಿತಿಯನ್ನು ಅಲ್ಲಿ ನೆರೆದಿದ್ದ ಹೆತ್ತವರಿಗೆ ಮನದಟ್ಟು ಮಾಡಿಸಿದಳು. ಅವಳ ಮಾತುಗಳನ್ನು ಕೇಳಿ ಅಲ್ಲಿ ಸೇರಿದ್ದವರೆಲ್ಲರ ಕಣ್ಣುಗಳು ತೇವಗೊಂಡವು. ಅವರೆಲ್ಲರೂ ಅಂಜಲಿಗೆ ಈ ಹೋರಾಟದಲ್ಲಿ ಬೆಂಬಲ ನೀಡುವುದಾಗಿ ಹೇಳಿದರು. ಎಲ್ಲರೂ ಸೇರಿ ಒಂದು ಪತ್ರ ಬರೆದು, ರುಜುಮಾಡಿ, ಮಕ್ಕಳಿಗೆ ಅಧ್ಯಾಪಕಿಯರು ನೀಡುತ್ತಿರುವ ಶಿಕ್ಷೆಗಳನ್ನು ವಿವರಿಸಿ, ಮರುದಿನ ಆ ಸ್ಕೂಲಿನ ಮುಖ್ಯ ಆಡಳಿತಾಧಿಕಾರಿಗೆ ಒಪ್ಪಿಸುವ ನಿರ್ಧಾರವನ್ನು ಕೈಗೊಂಡರು. ನಾಳಿನ ದಿನದಲ್ಲಿ, ಸ್ಕೂಲಿನ ಮುಖ್ಯ ಆಡಳಿತಾಧಿಕಾರಿಗೆ, ಎಲ್ಲಾ ಹೆತ್ತವರು ಬಿಚ್ಚಿದ ಮನಸ್ಸಿದಿಂದ ವಿಷಯಗಳನ್ನು ತಿಳಿಸಲು, ಒಕ್ಕೊರಲಿಂದ ಒಪ್ಪಿಗೆ ಸೂಚಿಸಿದ ಮೇಲೆ, ಅಲ್ಲಿನ ಬಿಗು ವಾತಾವರಣ ಸ್ವಲ್ಪ ತಿಳಿಯಾಯಿತು. ಆ ಶಿಕ್ಷಕಿಯರ ವಿರುದ್ಧ ಯಾವುದೇ ಒಂದು ಕಠಿಣ ಕ್ರಮ ಕೈಗೊಳ್ಳುವವರೆಗೆ ತಮ್ಮ ಮಕ್ಕಳನ್ನು ಸ್ಕೂಲಿಗೆ ಕಳುಹಿಸದಿರುವ ಒಮ್ಮತದ ತೀರ್ಮಾನಕ್ಕೆ ಆ ಸಭೆ ಸಮ್ಮತಿಸಿತು. ಎಲ್ಲರೂ ಭಾರವಾದ ಹೃದಯಗಳಿಂದ ಬೀಳ್ಕೊಂಡರು. ಅವರೆಲ್ಲರ ಸಹಕಾರ ಪಡೆದ ಅಂಜಲಿಯ ಮನಸ್ಸಿನ ಒತ್ತಡ ಈಗ ಕೊಂಚ ಕಮ್ಮಿಯಾಯಿತು. ನಿರಾಳವಾಗಿ ಆ ರಾತ್ರಿ ಅವಳು ಕಣ್ತುಂಬ ನಿದ್ರಿಸಿದಳು.
ಜುಲೈ ೨೨ರ ನಾಳೆ ಓಡೋಡಿ ಬಂತು. ನಸುಕಿನ ಐದುವರೆ ಘಂಟೆಯ ಹೊತ್ತಿಗಾಗಲೇ ಅವರ ಮನೆಯಲ್ಲಿ ಗಡಿಬಿಡಿ. ತಡಬಡಿಸಿ ಅವರೆಲ್ಲರೂ ರೆಡಿಯಾಗಿ ಬೆಳಗ್ಗಿನ ಏಳುಮುಕ್ಕಾಲು ಘಂಟೆಯಷ್ಟರಲ್ಲೇ ಆರ್ಯನ ಸ್ಕೂಲಿನ ಬಳಿ ಹಾಜರಿದ್ದರು. ಬೇರೆ ಹೆತ್ತವರು ಕೆಲವರು, ಅಷ್ಟೊತ್ತಿಗಾಗಲೇ ಅಂಜಲಿಯ ದಾರಿ ಕಾಯುತ್ತಿದ್ದರು. ಆರ್ಯನ ತರಗತಿ ಪ್ರಾರಂಭವಾಗುವುದು ಬೆಳಗ್ಗಿನ ಎಂಟುವರೆ ಘಂಟೆಗೆ. ಆದರೆ ಯಾರೂ ಕ್ಲಾಸಿನ ಒಳಗೆ ಹೋಗಲೇ ಇಲ್ಲ, ಎಲ್ಲಾ ಮಕ್ಕಳು ಗೇಟಿನ ಬಳಿಯೇ ಸೇರಿದ್ದರು. ಅವರನ್ನು ನೋಡಿ, ಹೊರಗಿನಿಂದ ಇನ್ನಷ್ಟು ಜನರು ಬಂದು ಯಾಕೆ?ಏನು?ಎತ್ತ? ಎಂದೆಲ್ಲಾ ವಿಚಾರಿಸತೊಡಗಿದರು. ಆ ಸ್ಕೂಲಿನಲ್ಲಿ ನಡೆಯುತ್ತಿದ್ದ ಘಟನೆಗಳು ಅಲ್ಲಿ ನೆರೆದಿದ್ದ ಎಲ್ಲರಿಗೂ ತಿಳಿಯುವಷ್ಟರಲ್ಲಿ ನೂರು ಮಂದಿಯ ಗುಂಪು ಇನ್ನೂರಕ್ಕಿಂತ ಜಾಸ್ತಿಯಾಯಿತು. ಇದನ್ನು ನೋಡಿದ ಸ್ಕೂಲಿನ ಮುಖ್ಯಸ್ಥರು ಅಲ್ಲಿಗೆ ಏದುಸಿರು ಬಿಡುತ್ತಾ ಓಡೋಡಿ ಬಂದರು. ವಿಷಯ ಅವರಿಗೆ ತಿಳಿದಾಗ ಅವರ ಮುಖ ಅವಮಾನದಿಂದ ಕಪ್ಪಿಟ್ಟಿತು. ಹೆತ್ತವರೆಲ್ಲಾ ಆಕ್ರೋಶಗೊಂಡು, ತಪ್ಪಿತಸ್ಠ ಅಧ್ಯಾಪಕಿಯರನ್ನು ತಮ್ಮ ಮುಂದೆಯೇ ಕರೆಸಿ ವಿಚಾರಣೆ ಕೈಗೊಳ್ಳಲು ಶಾಲಾಮುಖ್ಯಸ್ಥರನ್ನು ಒತ್ತಾಯಿಸಿದರು. ನೆರೆದ ಗುಂಪು, ದಾಂಧಲೆ ನಡೆಸಿತೆಂಬ ಭಯದಿಂದ ಮುಖ್ಯಸ್ಥರು ಪೋಲಿಸರ ಸಹಾಯಕೋರಿ ಕರೆಮಾಡಿದರು. ಆ ವಲಯದ ಸೂಪರಿಡೆಂಟ್ ಆಫ್ ಪೋಲಿಸ್, ಖುದ್ದಾಗಿ ಸ್ಥಳಕ್ಕೆ ಧಾವಿಸಿ ಬಂದರು.
ಶಾಲಾಗೇಟ್ ಬಳಿ ನೆರೆದಿದ್ದ ಹೆತ್ತವರ ರಣಕಹಳೆ, ಅಲ್ಲಿಗೆ ಬಂದ ಪೋಲಿಸರನ್ನು ಕಂಡು ಇನ್ನೂ ಜೋರಾಯಿತು. ಕದನಕ್ಕೆ ಹೆಚ್ಚಿನ ರಂಗೇರಿತು. ಸ್ಕೂಲಿನ ಸಭಾಂಗಣದಲ್ಲಿ ಮುಖಾಮುಖಿ ಸಭೆಯನ್ನು ನಡೆಸುವ ತೀರ್ಮಾನವನ್ನು ಆಡಳಿತಮಂಡಳಿ ಕೂಡಲೇ ನಿರ್ಧರಿಸಿ, ೯.೩೦ ಘಂಟೆ ಹೊತ್ತಿಗೆಲ್ಲಾ ಸಭಾ ರಂಗಮಂಚ ರೆಡಿಯಾಯಿತು. ತಪ್ಪಿತಸ್ಥ ಎಲ್ಲಾ ಅಧ್ಯಾಪಿಕೆಯರನ್ನೂ ಕರೆಸಲಾಯಿತು. ಬಹಿರಂಗವಾಗಿ ಎಲ್ಲರ ಬಳಿ ಕ್ಷಮೆಯಾಚಿಸಲು ಅವರಿಗೆ, ಆಡಳಿತಮಂಡಳಿ ಆಗ್ರಹಿಸಿತು. ಮಾಡಬಾರದ ಅಸಹ್ಯಕೃತ್ಯಗಳಿಗೆ, ನೆರೆದ ಜನರಲ್ಲಿ ಆ ಎಲ್ಲಾ ತಪ್ಪಿತಸ್ಠ ಅಧ್ಯಾಪಿಕೆಯರು ಕ್ಷಮೆಯಾಚಿಸಿ ತಮ್ಮ ಮುಖಗಳನ್ನು ಯಾರಿಗೂ ತೋರಿಸಲಾಗದೆ ಅವಮಾನದಿಂದ ಕುಗ್ಗಿಹೋದರು. ಆಡಳಿತಮಂಡಳಿಯ ಮುಖ್ಯಸ್ಥರು ಖುದ್ದಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ತರಹದ ಹೇಯ ಕೃತ್ಯಗಳಿಗೆ ಮುಂದೆ ಅವಕಾಶ ಕೊಡದೆ ಎಚ್ಚರಿಕೆ ವಹಿಸುವುದಾಗಿ ಹೇಳಿ, ಎಲ್ಲಾ ಹೆತ್ತವರಿಂದ ಮತ್ತು ಘಾಸಿಗೊಂಡ ಪುಟ್ಟ ಮಕ್ಕಳಿಂದ ತಾವೂ ಕ್ಷಮೆ ಯಾಚಿಸಿದರು. ಸಭೆಯನ್ನು ಕೊನೆಗೊಳಿಸುತ್ತಾ ಹೀನ ಅಧ್ಯಾಪಿಕೆಯರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಿರುವುದನ್ನು ಘೋಷಿಸಿ, ಪೋಲಿಸ್ ಅಧಿಕಾರಿಗಳಿಗೆ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ಎಲ್ಲವೂ ಅಂಜಲಿ ಯೋಚಿಸಿದ್ದಕ್ಕಿಂತಲೂ ಸುಗಮವಾಗಿ ಕ್ಷಣಾರ್ಧದಲ್ಲೇ ನಡೆದುಹೋದವು. ತಪ್ಪಿತಸ್ಥ ಅಧ್ಯಾಪಕಿಯರನ್ನು ಕೆಲಸದಿಂದ ವಜಾಗೊಳಿಸಿದ ಸುದ್ದಿ ಮುಖ್ಯಸ್ಥರು ಓದುತ್ತಿದ್ದಂತೆಯೇ ಸಭೆಯಲ್ಲಿ ನೆರೆದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಮಕ್ಕಳೆಲ್ಲವು ಬಿಸಿನೀರಿನ ಬುಗ್ಗೆಗಳಂತೆ ಖುಷಿಯಿಂದ ಚಟಪಟಿಸತೊಡಗಿದವು, ಕುಣಿದು ಕುಪ್ಪಳಿಸತೊಡಗಿದವು. ಮಕ್ಕಳಂತೆ ಅಂಜಲಿಯೂ ಕುಣಿದು ಕುಪ್ಪಳಿಸಿದಳು. ಅಷ್ಟರವರೆಗೆ ಅಮ್ಮನ ಕೈಯನ್ನು ಬಿಗಿಯಾಗಿ ಹಿಡಿದಿದ್ದ ಆರ್ಯ, ನಿಧಾನವಾಗಿ ಅವಳ ಕೈ ಬಿಟ್ಟು, ತಿಳಿಯಂಚಿನ ನಗೆ ಮೂಡಿಸಿಕೊಂಡು, ಹಿಗ್ಗತೊಡಗಿದ. ಶಾಲಾಮುಖ್ಯಸ್ಥರು ಇದಕ್ಕೆ ಕಾರಣಳಾದ ಅಂಜಲಿಯನ್ನು ಕರೆದು ಸಭೆಯನ್ನು ಉದ್ದೇಶಿಸಿ ಮಾತನಾಡಲು ಹೇಳಿದರು. ತನ್ನ ಬೆಂಬಲಕ್ಕೆ ನಿಂತ ಎಲ್ಲಾ ಹೆತ್ತವರಿಗೂ ಕೃತಜ್ಞತೆ ಸಲ್ಲಿಸಿದ ಅಂಜಲಿ, ತಪ್ಪಿತಸ್ಥ ಶಿಕ್ಷಕಿಯರ ವಿರುದ್ಧ ಕಾನೂನುಕ್ರಮ ಜರುಗಿಸದೆ, ಮಾನವೀಯತೆಯಿಂದ ಅವರನ್ನು ಬಿಟ್ಟು ಬಿಡುವಂತೆ ಕೋರಿಕೊಂಡಳು. ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಪಡುವ ಗುಣ ಬೆಳೆಸಿಕೊಂಡು, ನೋವುಗಳನ್ನು ಕೊಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಾರದೆಂದು ಅಲ್ಲಿ ನೆರೆದಿದ್ದವರಲ್ಲಿ ವಿನಂತಿ ಮಾಡಿದಳು. ಅವಳ ಮಾತುಗಳನ್ನು ಕೇಳಿಸಿಕೊಂಡ ಹೆತ್ತವರು, ಆ ಅಧ್ಯಾಪಕಿಯರನ್ನು ಎಚ್ಚರಿಕೆ ಕೊಟ್ಟು ಬಿಡುವಂತೆ ಪೋಲಿಸ್ ಮುಖ್ಯಸ್ಥರನ್ನು ಆಗ್ರಹಿಸಿದರು. ಮಕ್ಕಳೆಲ್ಲಾ ಈ ಸಂತಸದ, ಬಿಡುಗಡೆಯ ಅಮೃತಘಳಿಗೆಗೆ ಕಾರಣಳಾದ "ಅಂಜಲಿ ಆಂಟಿ"ಯನ್ನು ಮುದ್ದಿಸಿ ಕುಣಿದಾಡಿದವು. ಸಮರ್ಥ ದೂರದಲ್ಲಿ ನಿಂತು ವೀಕ್ಷಿಸುತ್ತಿದ್ದ, ಸಭೆ ಮುಗಿಯುತ್ತಿದ್ದಂತೆ ಅಂಜಲಿಯ ಬಳಿಗೆ ಅವನು ಬಂದು ನಿಂತು ಪ್ರ್‍ಈತಿಯಿಂದ ಅವಳ ತಲೆ ಮೊಟಕಿದ. ಮಾವ ತಮ್ಮ ಮುದ್ದಿನ ಸೊಸೆಗೆ "ಝಾನ್ಸಿರಾಣಿಗೆ ಜೈ" ಎಂದು ಹೇಳುತ್ತಾ, ಅವಳ ಸುತ್ತ ನೆರೆದಿದ್ದ ಮಕ್ಕಳ ಹಿಂಡಿನಿಂದಲೂ ಜೈಕಾರ ಹಾಕಿಸಿದರು.

---------------- -------------------- -----------------------