ಸೆಕ್ಯುಲರ್ ರಾಜಕಾರಣದ ಅವಾಂತರಗಳು...

ಸೆಕ್ಯುಲರ್ ರಾಜಕಾರಣದ ಅವಾಂತರಗಳು...

ಬರಹ

ಸೆಕ್ಯುಲರ್ ರಾಜಕಾರಣದ ಅವಾಂತರಗಳು...

ಕಳೆದ ವಾರ ಕರ್ನಾಟಕ ಸಮಾಜವಾದಿ ಅಧ್ಯಯನ ವೇದಿಕೆ ಆಶ್ರಯದಲ್ಲಿ ಹಾಸನದಲ್ಲಿ ಎರಡು ದಿನಗಳ 'ಸಂಸ್ಕೃತಿ ಶಿಬಿರ'ವೊಂದು ಆಯೋಜಿಸಿತ್ತು. ಕಳೆದ ಡಿಸೆಂಬರ್ನಲ್ಲಿ ಕುಪ್ಪಳಿಯಲ್ಲಿ ನಡೆದ ಸಮಾಜವಾದಿ ಅಧ್ಯಯನ ಶಿಬಿರಕ್ಕೆ ಶಿಬಿರಾರ್ಥಿಯಾಗಿ ಬಂದಿದ್ದ ಬಿ.ಶಿವಕುಮಾರ್ ಕುಪ್ಪಳಿ ಶಿಬಿರದಿಂದ ಸ್ಫೂರ್ತಿಗೊಂಡು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಾವು ನಡೆಸುವ 'ವಿವೇಕ ಬ್ಯೂರೋ' ಎಂಬ ಪಾಠದ ಮನೆಯ ತಮ್ಮ ವಿದ್ಯಾರ್ಥಿಗಳಿಗಾಗಿ ಈ ಶಿಬಿರ ಏರ್ಪಡಿಸಿದ್ದರು. ಶಿಬಿರವನ್ನು ಕಿ.ರಂ.ನಾಗರಾಜ ಅವರು ಉದ್ಘಾಟಿಸಿದರೆ, ಕೆ.ವಿ.ನಾರಾಯಣ ಅವರದು ಸಮಾರೋಪ. ಎರಡು ದಿನಗಳ ಒಟ್ಟು ಎಂಟು ಗೋಷ್ಠಿಗಳಲ್ಲಿ ವಿವಿಧ ಕ್ಷೇತ್ರಗಳ ಪರಿಣತರು ಧರ್ಮ, ಇತಿಹಾಸ, ಸಾಹಿತ್ಯ, ಸಮೂಹ ಮಾಧ್ಯಮಗಳು, ವಿಜ್ಞಾನ, ಜಾಗತೀಕರಣ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿ ಚರ್ಚೆಗಳನ್ನು ನಡೆಸಿಕೊಟ್ಟರು. ಬಿ.ಶಿವಕುಮಾರರ ಒತ್ತಾಯಕ್ಕೆ ಮಣಿದೆಂಬಂತೆ ಶುಲ್ಕ ನೀಡಿ ಶಿಬಿರಕ್ಕೆ ಬಂದಿದ್ದ ಸುಮಾರು ನಲವತ್ತು ಜನ ಶಿಬಿರಾರ್ಥಿಗಳು, ಶಿಬಿರದ ಕೊನೆಯ ಹೊತ್ತಿಗೆ ತಂತಮ್ಮ ಪಠ್ಯಗಳ ಹೊರತಾಗಿಯೂ ಕಲಿಯಬೇಕಾದ ಎಷ್ಟೊಂದು ವಿಷಯಗಳಿವೆ, ಪ್ರತಿಯೊಂದು ವಿಷಯಕ್ಕೂ ಎಷ್ಟೊಂದು ಮಗ್ಗುಲುಗಳಿವೆ ಎಂದು ಆಶ್ಚರ್ಯ ಪಡುತ್ತಾ, ಮುಗ್ಧ ಪ್ರಶ್ನೆಗಳನ್ನು ಕೇಳುತ್ತಾ ಕುತೂಹಲ, ಶ್ರದ್ಧೆ, ಆಸಕ್ತಿಗಳಿಂದ ಚರ್ಚೆಯಲ್ಲಿ ಪಾಲ್ಗೊಂಡರು.

ಈ ಶಿಬಿರದಿಂದ ಬಿ.ಶಿವಕುಮಾರರ ವಿದ್ಯಾರ್ಥಿಗಳಿಗೆ ನಿಜವಾಗಿಯೂ ಎಷ್ಟು ಪ್ರಯೋಜನವಾಯಿತೋ ತಿಳಿಯದು. ಆದರೆ, ಶಿಬಿರದ ನಿರ್ದೇಶಕನಾಗಿದ್ದ ನನಗೆ ಮತ್ತು ಇತರೆ ಸಂಪನ್ಮೂಲ ವ್ಯಕ್ತಿಗಳಿಗೆ ಈ ಶಿಬಿರ, ನಮ್ಮ ಯುವಜನರ ಮನೋಲೋಕದ ಬಗ್ಗೆ ನಮಗೊಂದು ಹೊಸ ತಿಳುವಳಿಕೆ ನೀಡುವ, ಆ ಮೂಲಕ ಹೊಸ ಜವಾಬ್ದಾರಿಯೊಂದನ್ನು ನಮಗೆ ಅರಿವು ಮಾಡಿಕೊಡುವ ಕೆಲಸದಲ್ಲಂತೂ ಯಶಸ್ವಿಯಾಯಿತು. ನಮ್ಮ ಯುವಜನರ ತಲೆಗಳಲ್ಲಿ ನಮ್ಮ ಧರ್ಮ, ಇತಿಹಾಸ ಮತ್ತು ವರ್ತಮಾನಗಳ ಬಗ್ಗೆ ಎಂತೆಂತಹ ವಿಷ ಬೀಜಗಳನ್ನು ಬಿತ್ತಲಾಗಿದೆ ಎಂಬ ಅರಿವುಂಟಾಗಿ ನಾವು ಕೆಲವರು ತತ್ತರಿಸಿದೆವು. ಶಿಬಿರದ ಉದ್ಘಾಟನೆಯ ನಂತರದಲ್ಲೇ ಆರಂಭವಾದ ಧರ್ಮ ಕುರಿತ ಗೋಷ್ಠಿಗೆ ಪ್ರಾಸ್ತಾವಿಕವಾಗಿ, ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯದಲ್ಲಿ ರಾಮಾಯಣದ ಬಹುಮುಖತೆ ಕುರಿತ ಪಠ್ಯವನ್ನು ಕೆಲವರು ಇತಿಹಾಸ ಪ್ರಾಧ್ಯಾಪಕರ ಮೇಲೆ ಹಲ್ಲೆ ಮಾಡುವ ಮೂಲಕ ವಿರೋಧಿಸಿದ್ದರ ಬಗ್ಗೆ ನಾನು ಮಾತನಾಡುತ್ತಿದ್ದಂತೆಯೇ, ಮೊದಲ ಪ್ರಶ್ನೆಗೆ ವೇದಿಕೆ ಸಿದ್ಧವಾಯಿತು! ಲಕ್ಷೀಶ ತೋಳ್ಪಾಡಿಯವರ ಮುಖ್ಯ ಭಾಷಣ ಕೇಳಿದ ನಂತರ ಪ್ರಶ್ನೆಗಳು ಎಂದು ಅವರನ್ನು ಸುಮ್ಮನಿರಿಸಲಾಯಿತಾದರೂ, ಭಾಷಣ ಮುಗಿದ ತಕ್ಷಣ ಪ್ರಶ್ನೆ ಬಾಣದಂತೆ ಬಂತು:'ಬಹುಜನರ ಭಾವನೆಗೆಳನ್ನು ನೋಯಿಸುವಂತಹ ಪಠ್ಯಗಳನ್ನು ಇಟ್ಟವರನ್ನೇಕೆ ಹೊಡೆಯಬಾರದು?'

ಆತ ತೋಳ್ಪಾಡಿಯವರ ಭಾಷಣವನ್ನು ಕೇಳಿದ್ದರೆ, ಇಂತಹ ಪ್ರಶ್ನೆಯನ್ನೇ ಕೇಳುತ್ತಿರಲಿಲ್ಲ. ಆದರೆ ಆತ ಕೇಳಲು ಬಂದಂತಿರಲಿಲ್ಲ, ತಾನು ಈಗಾಗಲೇ ತುಂಬಿಕೊಂಡಿರುವುದನ್ನು ಹೇಳಲು ಮಾತ್ರ ಬಂದಂತಿತ್ತು. ವೇದೋಪನಿಷತ್ತುಗಳ ಜೊತೆಗೆ ಆಧುನಿಕ ಸಾಹಿತ್ಯ - ವಿಚಾರಗಳನ್ನೂ ಕರತಲಾಮಲಕ ಮಾಡಿಕೊಂಡಿರುವ ಲಕ್ಷೀಶರು ಧರ್ಮ ಎಂದರೆ, ಮನುಷ್ಯನಿಗೆ ತನಗೆ ಗೊತ್ತು ಎಂಬುದು ಗೊತ್ತಾಗುವ ಮುನ್ನ ಇದ್ದ ಸ್ಥಿತಿಯ ಅರಿವು; ಅದೊಂದು ಪದ್ಧತಿ - ಸವೆದ ಹಾದಿ - ಅಲ್ಲ; ನಿರಂತರ ಹುಡುಕಾಟ ಎಂದು, ಒಂದೂವರೆ ತಾಸು ಹಲವು ನೆಲೆಗಳಲ್ಲಿ ಅದನ್ನು ಅತ್ಯದ್ಭುತವಾಗಿ ವಿವರಿಸಿದ್ದನ್ನು ಕೇಳುವ ವ್ಯವಧಾನವಾಗಲಿ, ಸಂಯಮವನ್ನಾಗಲಿ, ಕುತೂಹಲವಾಗಲಿ, ಶ್ರದ್ಧೆಯಾಗಲೀ ತೋರದ ಈತ 'ಉದ್ವಿಗ್ನತೆಯ ರಾಜಕಾರಣ ಇಲ್ಲಿ ಬೇಡ' ಎಂಬ ನನ್ನ ಮನವಿಗೆ ಪ್ರತಿಕ್ರಿಯಿಸಿದ್ದು ಹೀಗೆ: 'ನಮ್ಮದು ಉದ್ವಿಗ್ನತೆಯ ರಾಜಕಾರಣವಾದರೆ ನಿಮ್ಮದು ವೈಚಾರಿಕ ರಾಜಕಾರಣವಷ್ಟೆ'! ರಾಜಕಾರಣ ಮಾಡಬೇಕಾದದ್ದೇ ವೈಚಾರಿಕ ನೆಲೆಯಲ್ಲಿ - ಚರ್ಚೆಯ ಮೂಲಕ - ಅಲ್ಲವೇ ಎಂಬ ನಮ್ಮ ಮಾತನ್ನು ಕಿವಿಗೇ ಹಾಕಿಕೊಳ್ಳದ ಈತ ತನ್ನ ಬೆಂಬಲಕ್ಕೆ ಪಕ್ಕದಲ್ಲಿದ್ದ ತನ್ನ ಗೆಳೆಯನನ್ನು ಪ್ರಚೋದಿಸಿದ್ದು ಈ ಪ್ರಶ್ನೆಯ ಮೂಲಕ: 'ಹಿಂದೂ ಧರ್ಮ ರಕ್ಷಣೆಗಾಗಿ ಹಿಂಸೆಗೆ ಇಳಿದರೆ ತಪ್ಪೇನು?' ಈತನೊಬ್ಬ ಕಾಲೇಜು ಅಧ್ಯಾಪಕ ಎಂದು ಕೇಳಿ ನನ್ನೆದೆ ಝಲ್ಲೆಂದಿತು...

ಅದೇನೇ ಇರಲಿ, ತಮ್ಮ ಉದ್ಘಾಟನಾ ಭಾಷಣದಲ್ಲಿ, ಸಂಸ್ಕೃತಿ ಎಂದರೆ ಸ್ಥಗಿತಗೊಂಡಿದ್ದನ್ನು ಚಲನಶೀಲಗೊಳಿಸುವ ಕ್ರಿಯಾಶಕ್ತಿ ಎಂದೂ ವ್ಯಾಖ್ಯಾನಿಸಿದ್ದ ಕಿ.ರಂ., ಈ ಹೊತ್ತಿಗೆ ಇವರು ಯಾರು ಎಂದು ಅರ್ಥ ಮಾಡಿಕೊಂಡವರಂತೆ; ಬಹುಸಂಖ್ಯಾತರು ಎಂದರೆ ಯಾರು, ಹಲವು ರಾಮಾಯಣಗಳನ್ನು ಸೃಷ್ಟಿಸಿದವರು ಯಾರು, ಈ ಹಲವು ರಾಮಾಯಣಗಳು ಹೇಳುವ ಸತ್ಯ ಯಾರನ್ನು ಯಾಕೆ ನೋಯಿಸುತ್ತದೆ ಎಂಬ ಪ್ರಶ್ನೆಗಳನ್ನೆತ್ತಿಕೊಂಡು, ಹಿಂಸೆ ಹೇಗೆ ವಿವೇಚನೆ ಕಳೆದುಕೊಂಡವರ ಅಸ್ತ್ರ ಎಂಬುದನ್ನು ಸಾವಧಾನವಾಗಿ ವಿವರಿಸಲು ಯತ್ನಿಸಿದರು. ಕಲಿಯಲೆಂದೇ ಮುಕ್ತ ಮನಸ್ಸಿಟ್ಟು ಬಂದಿದ್ದ ಇತರ ಶಿಬಿರಾರ್ಥಿಗಳು ಕಿ.ರಂ. ಮಾತುಗಳನ್ನು ಶಾಂತರಾಗಿ ಕೇಳಿದರಾದರೂ, ಮನಸ್ಸನ್ನು ಪೂರ್ತಿ ಮುಚ್ಚಿಕೊಂಡು ಬಂದಿದ್ದ ಆ ಇಬ್ಬರು ಮುವ್ವರು 'ಹಿಂದೂ ಧರ್ಮ ಮುಸ್ಲಿಮರ ದಾಳಿಗೆ ಸಿಕ್ಕಿ ತತ್ತರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಈ ಚರ್ಚೆಯೆಲ್ಲ ಅನಗತ್ಯ' ಎಂಬ ಧಾಟಿಯಲ್ಲಿ ಮಾತನಾಡತೊಡಗಿದಾಗ, ಸ್ವತಃ 'ಹಿಂದೂವಾದಿ'ಗಳೊಂದಿಗೆ ಸಾಂಸ್ಕೃತಿಕವಾಗಿಯಾದರೂ ಗುರುತಿಸಲ್ಪಟ್ಟಿರುವ ಲಕ್ಷ್ಮೀಶರು ತಳಮಳಿಸಿ ಹೇಳಿದ್ದು: 'ದಯವಿಟ್ಟು ಹಿಂದೂ ಧರ್ಮವನ್ನು ಇಸ್ಲಾಮೀಕರಿಸಿ ಹಾಳು ಮಾಡಬೇಡಿ!' ಅಂದರೆ, ಧರ್ಮ ಬೆಳೆಯುವುದು ಮತ್ತು ಆ ಮೂಲಕ ಉಳಿಯುವುದು ತನ್ನನ್ನು ಸದಾ ವಿಮರ್ಶೆಗೆ ತೆರೆದುಕೊಂಡಿರುವ ಮೂಲಕ; ಸತ್ಯದ ಬಹುಮುಖತೆಯನ್ನು ಸಹಾನುಭೂತಿಯೊಡನೆ ಅರಿಯುವ ಮೂಲಕ. ಇದನ್ನು ಲಕ್ಷ್ಮೀಶರು ಪಕ್ರು ಎಂಬ ನಾಗರೀಕ ಲೋಕಕ್ಕೇ ತೆರೆದುಕೊಳ್ಳದ ಅನಕ್ಷರಸ್ಥ ತುಳುವನೊಬ್ಬ ತನ್ನದೇ ರಾಮಾಯಣವನ್ನು ಹೇಳಿದ್ದನ್ನೂ, ಅದು 'ಪಕ್ರು ರಾಮಾಯಣ'ವೆಂದೇ ದಾಖಲಾಗಿರುವುದನ್ನೂ ವಿವರಿಸಿ ಹೇಳುತ್ತಾ; ಆ ಪಕ್ರುವನ್ನೂ ಒಬ್ಬ ಗೌರವಾನ್ವಿತ ಹಿಂದೂ ಎಂದು ಪರಿಗಣಿಸದ ಹಿಂದೂ ಧರ್ಮಕ್ಕೆ ಭವಿಷ್ಯವಿಲ್ಲವೆಂದು ಎಚ್ಚರಿಸಿದಾಗ, ಅವರು ಛೀಮಾರಿ ಹಾಕಿಸಿಕೊಂಡವರಂತೆ ಸುಮ್ಮನೆ ಕೂತರಾದರೂ, ಇದರಿಂದಾಗಿ ಅವರಿಗೆ ತಮ್ಮ ರಾಜಕೀಯ ನಂಬಿಕೆ ಬಗ್ಗೆ ಅನುಮಾನಗಳೆದ್ದಂತೇನೂ ತೋರಲಿಲ್ಲ.

ಇದು ಇನ್ನಷ್ಟು ಸ್ಪಷ್ಟವಾದದ್ದು, ಮಾರನೆಯ ದಿನ ಖ್ಯಾತ ಇತಿಹಾಸ ಸಂಶೋಧಕರಾದ ಡಾ|| ರಾಜಾರಾಮ ಹೆಗಡೆಯವರು ಇತಿಹಾಸ ಎಂದರೇನು ಎಂಬ ಬಗ್ಗೆ ಉಪನ್ಯಾಸ ನೀಡಿ, ಪಾಶ್ಚಾತ್ಯರ ಸಾಕ್ಷ್ಯಾಧಾರಿತ ಇತಿಹಾಸದ ಕಲ್ಪನೆ ಹಾಗೂ ಭಾರತೀಯರ ಪೌರಾಣಿಕ ಇತಿಹಾಸದ ಕಲ್ಪನೆಗಳು ಆಧುನಿಕ ಕಾಲದಲ್ಲಿ ಹೇಗೆ ಮುಖಾಮುಖಿಯಾಗಿ ಗೊಂದಲಗಳನ್ನು ಸೃಷ್ಟಿಸುತ್ತಿವೆ ಎಂಬುದನ್ನು ವಿಷದೀಕರಿಸುತ್ತಾ, ರಾಮಾಯಣದ ಸತ್ಯಾಸತ್ಯತೆಯನ್ನು ಕುರಿತ ಸದ್ಯದ ಚರ್ಚೆಯೇ ಅಸಂಗತ ಎಂದಾಗ. ಕೂಡಲೇ, ಹಿಂದಿನ ದಿನದ ಇಬ್ಬರ ಪ್ರಶ್ನೆಗಳು ಇಂದು ಹಲವರ ಪ್ರಶ್ನೆಗಳಾಗಿ ಮಾರ್ಪಾಡಾದವು! ಹಲವು ಶಿಬಿರಾರ್ಥಿಗಳಲ್ಲಿ 'ರಾಮಾಯಣ ಹಾಗಾದರೆ ಸುಳ್ಳೋ?' ಎಂಬ ಪ್ರಶ್ನೆ ಎದ್ದು, ಒಂದಿಬ್ಬರು ಹೆಗ್ಗಡೆಯವರ 'ಭಾರತೀಯತೆ'ಯನ್ನೇ ಪ್ರಶ್ನಿಸಲು ಯತ್ನಿಸಿದರು! ಹೆಗಡೆಯವರು 'ರಾಮಾಯಣ ಮಹಾಭಾರತಗಳ ಬಗ್ಗೆ ಇಂತಹ ಪ್ರಶ್ನೆ ಕೇಳುವುದೇ ಅಸಂಗತ. ನಮ್ಮ ಪೂರ್ವೀಕರು ಅವು ನಿಜವೋ ಸುಳ್ಳೋ ಎಂಬ ಪ್ರಶ್ನೆಯ ಪರಿವೆಯೇ ಇಲ್ಲದೆ ಅವನ್ನು ಗೌರವಿಸುತ್ತಾ, ಅವುಗಳಿಂದ ಸ್ಫೂರ್ತಿ ಪಡೆಯುತ್ತಾ ತಮ್ಮ ಬದುಕಿಗಾಗಿ ಮೌಲ್ಯ ನಿರ್ಮಾಣ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಇಂತಹ ಪ್ರಶ್ನೆಗಳೆದ್ದಿರುವುದು ಪಾಶ್ಚಾತ್ಯ ಇತಿಹಾಸ ಕಲ್ಪನೆಯನ್ನೇ ಇತಿಹಾಸ ಕಲ್ಪನೆಯ ಏಕೈಕ ಹಾಗೂ ನಿಜವಾದ ಮಾದರಿ ಎಂದು ನಂಬಿರುವವರಿಂದ' ಎಂದು ಎಷ್ಟೇ ಸ್ಪಷ್ಟಪಡಿಸಿದರೂ, ರಾಮಾಯಣ ವಾಸ್ತವಿಕವಾಗಿ ನಡೆಯದೇ ಇದ್ದರೂ ಇರಬಹುದು - ಅಂದರೆ ಸುಳ್ಳಿರಬಹುದು - ಎಂಬ ಅನುಮಾನದಿಂದ ಆಘಾತಗೊಂಡವರಂತೆ ಕಂಡುಬಂದ ಈ ಎಳೆಯರು, ರಾಮಾಯಣ ನಡೆದೇ ಇದೆಯೆಂದು ತಾವು ನಂಬಲು ಇರುವ ಸಾಕ್ಷ್ಯಗಳ ಕಡೆ ಹೆಗಡೆಯವರ ಗಮನ ಸೆಳೆಯತೊಡಗಿದರು!

ಸಮುದ್ರದಲ್ಲಿ ರಾಮಸೇತು ಕಣ್ಣಿಗೆ ಕಾಣುವಂತೆಯೇ ಇದೆಯಲ್ಲಾ? ಅಯೋಧ್ಯೆಯಲ್ಲಿ ಬಿದ್ದ ಮಸೀದಿಯ ಕೆಳಗೆ ದೇವಸ್ಥಾನದ ಅವಶೇಷಗಳು ಸಿಕ್ಕಿವೆ ಎಂದು ಸರ್ಕಾರ ನೇಮಿಸಿದ್ದ ಆಯೋಗವೇ ಹೇಳುತ್ತಿದೆಯಲ್ಲವೇ? ರಾವಣನ ಅರಮನೆ ಇದೆಯೆಂದು ಶ್ರೀಲಂಕಾದವರೇ ಒಪ್ಪಿಕೊಂಡಿದ್ದಾರೆ! ಈ ಎಲ್ಲ 'ಸಾಕ್ಷ್ಯ'ಗಳನ್ನು ಕೇಳಿ, ಇವೆಲ್ಲ ಮೂಲತಃ 'ಸುದ್ದಿ'ಗಳೇ ಹೊರತು ನಂಬಲರ್ಹವಾದ ಸಾಕ್ಷ್ಯಗಳು ಏಕಲ್ಲ ಎಂದು ವಿವರಿಸಿದ ಹೆಗಡೆಯವರು, ಇತಿಹಾಸದ ವಿಷಯದಲ್ಲಿ ಇತಿಹಾಸ ಶಾಸ್ತ್ರವನ್ನು ಅಧ್ಯಯನ ಮಾಡಿದ ಇತಿಹಾಸಕಾರರನ್ನು ನೀವು ನಂಬುತ್ತೀರೋ ಅಥವಾ ಬೀದಿ ಬದಿ ಭಾಷಣ ಮಾಡುವ ರಾಜಕಾರಣಿಯ ಹಾಗೂ ಮಾರುಕಟ್ಟೆಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಪ್ರಕಟವಾಗುವ ಪತ್ರಿಕೆಗಳ ವರದಿಗಳನ್ನು ನಂಬುತ್ತೀರೋ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ, ಇತಿಹಾಸಕಾರನ ಬದಲಾಗಿ ರಾಜಕಾರಣಿಗಳನ್ನೂ, ಪತ್ರಿಕೆಗಳನ್ನೂ ನಂಬಲು ಸಿದ್ಧರಿರುವ ಸಂಖ್ಯೆಯೇನೂ ಕಡಿಮೆಯಲ್ಲ ಎಂಬ ಸೂಚನೆ ನಮಗೆ ದೊರೆತು ನಾವು ತಲ್ಲಣಗೊಂಡೆವು!

ಒಂದಷ್ಟು ಜನ ವಿಚಾರವಾದಿಗಳು ಮತ್ತು ಬುದ್ಧಿಜೀವಿಗಳೆನಿಸಿಕೊಂಡವರು ನಮ್ಮ ಹೆಮ್ಮೆಯ ಸಂಸ್ಕೃತಿಗೆ ಅಪಚಾರವೆಸಗುವ ಪಿತೂರಿ ನಡೆಸಿದ್ದಾರೆ ಎಂಬ ರಾಜಕೀಯ ಪ್ರಚಾರಕ್ಕೆ ಇವರೆಲ್ಲ ಬಲಿಯಾಗಿದ್ದಾರೆ ಎನಿಸಿದರೂ, ನಾವು ಎಷ್ಟೆಲ್ಲ ಆಧಾರ - ವಿಚಾರಗಳೊಂದಿಗೆ ಸ್ಪಷ್ಟಪಡಿಸಿದರೂ ಇವರೇಕೆ ನಮ್ಮ ಮಾತುಗಳನ್ನು ನಂಬಲು ಹಿಂಜರಿಯುತ್ತಿದ್ದಾರೆ ಎಂಬ ಆಶ್ಚರ್ಯ ಮತ್ತು ಪ್ರಶ್ನೆಗಳು ನಮ್ಮನ್ನು ಕಾಡದಿರಲಿಲ್ಲ. ಶಿಬಿರ ಮುಗಿಯುವವರೆಗೂ ತಮ್ಮ ಹಿಂದೆ ಬಿದ್ದ ಇಂತಹವರ ಶಂಕೆ - ಸಂದೇಹ - ಪ್ರಶ್ನೆಗಳಿಗೆ ಉತ್ತರಿಸಿ, ವಿವರಣೆ ನೀಡಿ ಸುಸ್ತಾಗಿದ್ದ ಹೆಗಡೆಯವರಿಗೆ ಕೊನೆಗೆ ಅನಿಸಿದ್ದು:'ಇವರೊಂದಿಗೆ ಮಾತಾಡುವುದೇ ಮೂರ್ಖತನ'. ನಂತರ ತಮ್ಮ ಅನ್ನಿಸಿಕೆಯನ್ನು ತಿದ್ದಿಕೊಂಡಿದ್ದು ಹೀಗೆ: 'ಇದು ನಮ್ಮ ಕಾಲೇಜುಗಳಲ್ಲಿ ಪಾಠ ಮಾಡುವ ಇತಿಹಾಸದ ಅಧ್ಯಾಪಕರು ಸೃಷ್ಟಿಸಿರುವ ಮೂರ್ಖತನ'. ತದನಂತರ ತಮ್ಮೊಳಗೆ ತಾವೇ ಯೋಚಿಸಿದವರಂತೆ ಆತಂಕದಿಂದ ಹೇಳಿದ್ದು:'ಇವರ ಮನಸ್ಸಿಗೆ ಒಪ್ಪುವಂತೆ ಹೇಳುವ ವಿಧಾನವನ್ನು ಆದಷ್ಟು ಬೇಗ ನಾವು ರೂಪಿಸಿಕೊಳ್ಳದಿದ್ದರೆ, ಯಾವುದೇ ವಿಷಯದ ಅಧ್ಯಯನವೆಂಬುದಕ್ಕೇ ಉಳಿಗಾಲವಿಲ್ಲದಾಗುತ್ತದೆ.'

ನನಗೂ ಹಾಗೆ ಅನಿಸಿದ್ದು ನಾನು ಗಾಂಧೀಜಿಯವರ 'ಹಿಂದ್ ಸ್ವರಾಜ್' ಬಗ್ಗೆ ಮಾತಾಡಿ ಕೂತ ನಂತರ. ಆವರೆಗೆ ಬಾಯಿ ಬಿಚ್ಚದೆ ಕೂತಿದ್ದ ಹುಡುಗಿಯೊಬ್ಬಳು ಮೆಲ್ಲಗೆ, 'ನೀವು ಏನೇ ಹೇಳಿದರೂ ಗಾಂಧಿಯನ್ನು ಒಪ್ಪಲು ಸಾಧ್ಯವಿಲ್ಲ' ಎಂದಾಗ! ಆಕೆ ಇತರರೆಲ್ಲಿ ಇವರ ಮಾತು ಕೇಳಿ ಗಾಂಧಿಯನ್ನು ಒಪ್ಪಿಕೊಂಡು ಬಿಡುವರೋ ಎಂಬ ಆತಂಕದಲ್ಲಿದ್ದಂತಿತ್ತು... ಹಾಗಾಗಿಯೇ ಆಕೆ 'ಸುಭಾಷ್ ಚಂದ್ರಬೋಸರು ಎಲ್ಲಿ ಹೋದರು ಸರ್?' ಎಂಬ ಪ್ರಶ್ನೆಯನ್ನೂ ಎಸೆದಳು. ಆಕೆಯ ಈ ಪ್ರಶ್ನೆಯ ಹಿಂದೆ ಸುಭಾಷ್ ಕಣ್ಮರೆಯಾಗಲು ಗಾಂಧೀಜಿಯೇ ಕಾರಣ ಎಂಬ ನಂಬಿಕೆ ಇದ್ದಂತಿತ್ತು. ಹಾಗೇ ಹುಡುಗನೊಬ್ಬ 'ಭಗತ್ ಸಿಂಗರನ್ನು ಕೊಂದ ಇಂಗ್ಲಿಷರು ಗಾಂಧಿಯನ್ನೇಕೆ ಕೊಲ್ಲಲಿಲ್ಲ?' ಎಂದು ಕೇಳಿದ. ಆತನ ಅನುಮಾನ: ಗಾಂಧೀಜಿ ಇಂಗ್ಲಿಷರೊಂದಿಗೆ ಶಾಮೀಲಾಗಿದ್ದುದರಿಂದ ಅವರನ್ನು ಕೊಲ್ಲಲಿಲ್ಲ! ಇಂತಹ ಪ್ರಶ್ನೆಗಳಿಂದ ಸ್ಫೂರ್ತಿಗೊಂಡ ಮತ್ತೊಬ್ಬ ಹುಡುಗ ತನ್ನೊಳಗಿನ ಅನುಮಾನವನ್ನು ಮುಗ್ಧವಾಗಿ ಹೊರಹಾಕಿದ: 'ಮುಸ್ಲಿಮರೆಲ್ಲ ಭಯೋತ್ಪಾದಕರಾಗಿ ಹಿಂದೂಗಳನ್ನೆಲ್ಲ ಕೊಲ್ಲುತ್ತಿರುವಾಗ, ಗಾಂಧೀಜಿಯ ಹಿಂದೂ - ಮುಸ್ಲಿಂ ಐಕ್ಯತೆಯ ಸಂದೇಶವನ್ನು ಇಂದು ಒಪ್ಪಿಕೊಳ್ಳುವುದಾದರೂ ಹೇಗೆ?'

ಈ ಎಲ್ಲ ಪ್ರಶ್ನೆಗಳಿಗೆ ನಾವು ಆಯಾ ಪ್ರಶ್ನೆಗಳ ಹಿಂದಿದ್ದ ವ್ಯಂಗ್ಯ ಹಾಗೂ ಅನುಮಾನಗಳನ್ನನುಸರಿಸಿ ಚುರುಕು ಮುಟ್ಟುವಂತೆ, ಅನುಮಾನಗಳು ಪರಿಹಾರವಾಗುವಂತೆ ಉತ್ತರ ಕೊಟ್ಟೆವಾದರೂ ಮತ್ತು ಸಮಾರೋಪ ಭಾಷಣ ಮಾಡಿದ ಕೆ.ವಿ.ನಾರಾಯಣರು,'ನಿಮ್ಮದಲ್ಲದ ಸಾಂಸ್ಕೃತಿಕ ವಾರಸುದಾರಿಕೆಯನ್ನು ನಿಮ್ಮದೆಂಬಂತೆ ನಂಬಿಸಿ, ಅದನ್ನು ಆತ್ಮಹತ್ಯಾ ಬಾಂಬ್ನಂತೆ ನಿಮ್ಮ ಸೊಂಟಕ್ಕೆ ಕಟ್ಟಲಾಗಿದೆ. ಅದರ ರಿಮೋಟ್ ಕಂಟ್ರೋಲ್ ಕೂಡಾ ಅವರ ಕೈಯಲ್ಲೇ ಇದೆ ಎಂಬುದನ್ನು, ಅವರು ಸ್ವಿಚ್ ಒತ್ತುವ ಮುನ್ನ ನೀವು ತಿಳಿದರೆ ಒಳ್ಳೆಯದು!' ಎಂದು ಎಚ್ಚರಿಸಿದರಾದರೂ, ನಮ್ಮ ಮಾತುಗಳ ಪರಿಣಾಮದ ಬಗ್ಗೆ ನಮಗೇ ಪೂರ್ಣ ನಂಬಿಕೆ ಬರದಂತಹ ವಾತಾವರಣ ಅಲ್ಲಿ ಸೃಷ್ಟಿಯಾಗುತ್ತಿದ್ದುದು ನಮ್ಮ ಗಮನಕ್ಕೆ ಬರತೊಡಗಿತ್ತು. ನಮ್ಮನ್ನು ಪ್ರಚೋದಿಸಿದಂತಹ ಪ್ರಶ್ನೆಗಳನ್ನು ಕೇಳಿದವರು ಕೆಲವರೇ ಆದರೂ, ಮಿಕ್ಕವರನ್ನು ಪ್ರಭಾವಿಸುವ ಅವರ ತಂತ್ರ, ರೊಚ್ಚು, ಕೆಚ್ಚು, ಮುನ್ನೋಟ, ಬದ್ಧತೆಗಳು ನಮ್ಮ ಕಣ್ಣಿಗೆ ರಾಚುವಂತಿದ್ದವು. ಕೋಮುವಾದಿ ರಾಜಕಾರಣ ಅಷ್ಟೇನೂ ಬೇರೂರಿರದ ಹಾಸನದಲ್ಲೇ ಪರಿಸ್ಥಿತಿ ಹೀಗಿದ್ದರೆ, ಇತರ ಕಡೆ?

ಒಂದಂತೂ ನಿಜ. ಈ ಹಿಂದೆ ಎಡಪಂಥೀಯ ಅಥವಾ ಪ್ರಗತಿಪರ ರಾಜಕೀಯ ಚಟುವಟಿಕೆಗಳ ಕಡೆ ಒಲಿಯುತ್ತಿದ್ದ ಯುವಜನ ಇಂದು ಬಹು ಸುಲಭವಾಗಿ ಕೋಮುವಾದಿ ರಾಜಕಾರಣದ ತೆಕ್ಕೆಗೆ ಜಾರುತ್ತಿದ್ದಾರೆ. ಯಾಕೆ? ಎಡಪಂಥೀಯರು ತಮ್ಮ ತಾತ್ವಿಕ ಶ್ರೇಷ್ಠತೆಯ ಅಹಂಕಾರದಲ್ಲಿ, ನಮ್ಮ ಇತಿಹಾಸ - ಪರಂಪರೆಯ ಬಗ್ಗೆ ಸಂಪೂರ್ಣ ಸಿನಿಕರಾಗಿ, ಅದನ್ನು ಸಾರಾಸಗಟಾಗಿ ಅವಹೇಳನ ಮಾಡುವುದೇ ಪ್ರಗತಿಪರತೆ ಎಂಬ ಅಭಿಪ್ರಾಯ ಕ್ರಮೇಣ ಜನ ಸಾಮಾನ್ಯರಲ್ಲಿ ಮೂಡುವಂತಹ ಉಡಾಫೆ ರಾಜಕಾರಣದಲ್ಲಿ ಮೈಮರೆತಿದ್ದೇ ಹೊಸತಲೆಮಾರು ನಮ್ಮ ಮಾತುಗಳನ್ನು ಅನುಮಾನದಿಂದ ನೋಡುವಂತೆ ಮಾಡಿದೆಯಲ್ಲವೇ? ಉದಾಹರಣೆಗೆ, ಸಮಾಜವಾದಕ್ಕೆ ಒದಗಿರುವ ಗತಿ ನೋಡಿ. ಅದು ಮೂಲತಃ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನೂ ತನ್ನ ಸ್ಫೂರ್ತಿ ಕೇಂದ್ರವೊಂದನ್ನಾಗಿ ಮಾಡಿಕೊಂಡು ಕಟ್ಟಿಕೊಂಡ ಸಾಮಾಜಿಕ ನ್ಯಾಯದ ಸಂಕೀರ್ಣ ರಾಜಕಾರಣ. ಆದರೆ ನಾವು ಕಳೆದ ಮುವ್ವತ್ತು ವರ್ಷಗಳಲ್ಲಿ ಅದಕ್ಕೆ ಪೆರಿಯಾರ್ವಾದ, ಹಾವನೂರ್ವಾದ, ಅಹಿಂದವಾದ ಇತ್ಯಾದಿ ನಮ್ಮದೇ ಬಣ್ಣಗಳನ್ನು ಬಳಿದು ಅದರ ಸಂಕೀರ್ಣತೆಯನ್ನೆಲ್ಲ ಕಳೆದು, ಅದನ್ನೊಂದು ಅಗ್ಗದ ಜಾತಿ ರಾಜಕಾರಣದ ಸಾಧನವನ್ನಾಗಿ ಮಾರ್ಪಡಿಸಿ ಅದರ ವಿಶ್ವಾಸಾರ್ಹತೆಯನ್ನೇ ಕಳೆದಿದ್ದೇವೆ.

ಹೀಗಾಗಿ, ತನ್ನೆಲ್ಲ ಅಧ್ಯಾತ್ಮಿಕತೆಯನ್ನು (ಅಂದರೆ ತನ್ನ ಆವೃತ ದೃಷ್ಟಿಕೋನವನ್ನು) ಕಳೆದುಕೊಂಡ ಈ ಜಾತಿವಾದಿ ರಾಜಕಾರಣದ ಹಿಂದಿನ ಫಲಾನುಭವಿಗಳೇ ಇಂದು ಕೋಮುವಾದಿ ರಾಜಕಾರಣದ ಬೆನ್ನೆಲುಬಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಎಡಪಂಥೀಯ ಪ್ರಗತಿಪರತೆ ಅದರ ಈ ಅನುಯಾಯಿಗಳನ್ನು ಅರ್ಧ ಮನುಷ್ಯರನ್ನಾಗಿ ಮಾಡಿ ಕೈಬಿಟ್ಟಿದೆ. ಇನ್ನರ್ಧಕ್ಕಾಗಿ ಅವರ ಮುಂದಿರುವ ಏಕೈಕ ಹಾಗೂ ಸುಲಭ ಆಯ್ಕೆ, ತಮ್ಮ ಸಾಂಸ್ಕೃತಿಕ ಅಹಂಕಾರದ ಅಗತ್ಯವನ್ನು ತಣಿಸಬಲ್ಲ 'ಭವ್ಯ' ಭೂತವೊದನ್ನು ಕಟ್ಟಿಕೊಡುವ ಕೋಮುವಾದಿ ರಾಜಕಾರಣವೇ ಆಗಿರುವಂತೆ ತೋರುತ್ತದೆ. ಏಕೆಂದರೆ ಇಂದಿನ ನಮ್ಮ 'ಸೆಕ್ಯುಲರ್' ರಾಜಕಾರಣ ತನ್ನೆಲ್ಲ ಉದಾತ್ತ ಆಶಯಗಳನ್ನು ಕಳೆದುಕೊಂಡು, ಬರೀ ಹೇಗಾದರೂ ಗಳಿಸಿ, ತಿಂದು, ಕುಡಿದು ನಲಿದು ಸಾಯುವ ಪ್ರಭಾಹೀನವಾದ ರಾಜಕಾರಣವಾಗಿ ಮಾರ್ಪಟ್ಟಿದೆ. ಯಾರಾದರೂ ಇದರ ಬಗ್ಗೆ ಯೋಚಿಸುವ ವ್ಯವಧಾನ ತೋರಬಲ್ಲರಾ?

ಅಂದಹಾಗೆ: ವರ್ಣಾಶ್ರಮ ಧರ್ಮದಲ್ಲೂ, ಜಾತಿಪದ್ಧತಿಯಲ್ಲೂ ಅಚಲ ನಂಬಿಕೆಯಿಟ್ಟ ಆರ್.ಎಸ್.ಎಸ್.ನ ನಿಯಂತ್ರಣಕ್ಕೊಳಪಟ್ಟೇ ರಾಜಕಾರಣ ಮಾಡುವ ಬಿ.ಜೆ.ಪಿ.ಗೆ ಪಕ್ಷಾಂತರ ಮಾಡುವ ಮೂಲಕ; ಕರ್ನಾಟಕದಲ್ಲಿ ತಮ್ಮ ವರದಿಯ ಮೂಲಕವೇ ಸಾಕಾರಗೊಂಡ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಮಯ ಸಾಧಕ ರಾಜಕೀಯ ಸಾಧನದ ಮಟ್ಟಕ್ಕೆ ಇಳಿಸಿ, ತಮ್ಮ ಗುರು ದೇವರಾಜ ಅರಸರ ರಾಜಕಾರಣಕ್ಕೆ ದ್ರೋಹ ಬಗೆದ ಮೊದಲ ಕಾಂಗ್ರೆಸ್ಸಿಗರಲ್ಲಿ ಒಬ್ಬರಾದ ಎಲ್.ಜಿ.ಹಾವನೂರರ ನೆನಪಿನಲ್ಲಿ 'ಜಾತಿರಹಿತ ನ್ಯಾಯಾಂಗ' ಕುರಿತು ವಿಚಾರ ಸಂಕಿರಣವಂತೆ! ಇದರ ಸಹ ಪ್ರಾಯೋಜಕತ್ವ ಡಾ|| ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಟ್ರಸ್ಟಿನದಂತೆ... ಹಾಗೆಂದು ಇತ್ತೀಚಿನ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ತಕ್ಕಂತೆ, ಕನ್ನಡ ಪತ್ರಿಕೆಯಲ್ಲಿ ಹೊರಡಿಸಿರುವ ಇಂಗ್ಲಿಷ್ ಜಾಹೀರಾತು ಹೇಳುತ್ತಿದೆ!

ನಮ್ಮ ರಾಜ್ಯದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಇನ್ನು ನಮ್ಮ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಪರಿಶಿಷ್ಟ ಜಾತಿಗೆ ಸೇರಿದವರು. ಆದರೂ ಈಗ 'ಜಾತಿ ರಹಿತ ನ್ಯಾಯಾಂಗ'ದ ಕೂಗೇಕೆ? ಏಕೆಂದರೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಹಿಂದುಳಿದವರೆನಿಸಿಕೊಂಡವರಿಗೆ ಶೇ.27ರ ಮೀಸಲಾತಿಯನ್ನು, ಯಾವುದೇ ಪ್ರಶ್ನೆ ಕೇಳದೆ ಎತ್ತಿ ಹಿಡಿಯುವ ನ್ಯಾಯಾಧೀಶರು ಸದ್ಯಕ್ಕೆ ಕೆಲವರಿಗೆ ಬೇಕಾಗಿದೆ! ಇವರ ಪ್ರಕಾರ 'ಜಾತಿರಹಿತ' ನ್ಯಾಯಾಂಗ ಎಂದರೆ, ಪ್ರಶ್ನೆಗಳನ್ನು ಕೇಳುವ ವಿವೇಚನೆಯನ್ನೇ ಕಳೆದುಕೊಂಡ ನ್ಯಾಯಾಂಗ ಎಂದು ಕಾಣುತ್ತದೆ!

ಇದರ ಮುಖ್ಯ ಅತಿಥಿ ಯಾರು ಗೊತ್ತೆ? ಕೇಂದ್ರ ಮಂತ್ರಿ ಡಾ|| ಎಸ್.ರಾಮದಾಸ್. ತಮಿಳ್ನಾಡಿನಲ್ಲಿ ವಣ್ಣಿಯಾರ್ ಜಾತಿಗೆಂದೇ ಒಂದು ಪಕ್ಷ ಕಟ್ಟಿಕೊಂಡು, ಪ್ರತಿ ಚುನಾವಣೆಯಲ್ಲೂ ತನ್ನ ಅನುಕೂಲಕ್ಕೆ ತಕ್ಕಂತೆ ಮೈತ್ರಿ ಬದಲಾಯಿಸಿಕೊಂಡು ರಾಜಕೀಯ ಮಾಡುತ್ತಾ ಬಂದಿರುವವರು ಇವರು. ಈ ವಣ್ಣಿಯಾರರಾದರೂ ಯಾರು? ತಾವಿದ್ದ ಯಾವ ಹಳ್ಳಿಯಲ್ಲೂ ಮೀಸಲಾತಿಯ ಪ್ರಕಾರವೇ ದಲಿತರ್ಯಾರೂ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗದಂತೆ ನೋಡಿಕೊಂಡ 'ಹಿಂದುಳಿದ' ಶಕ್ತಿಗಳು!

ಹಿಂದುಳಿದವರ ರಾಜಕಾರಣವೆಂದರೆ ಇದೇ ಅಲ್ಲವೇ!