ಕಾಪಾಡುವ ತಾಯಿಯರು
ಅವನು ಆ ಊರಿನಲ್ಲಿ ಕಾಲಿಟ್ಟು ಹೆಚ್ಚು ಕಾಲ ಆಗಿರಲಿಲ್ಲ. ಒಂದೆರಡು ತಿಂಗಳಿರಬಹುದು. ಅಥವಾ ಮೂರುನಾಕೇ ಇದ್ದಿರಬಹುದು.
ಹೊರಗೆ ಓಡಾಡುವ ಅವಕಾಶ ಕಡಿಮೆಯೇ, ಆದ್ದರಿಂದ ಆ ಊರಿನ ಭಾಷೆ ಇನ್ನೂ ಸರಿಯಾಗಿ ಬರುತ್ತಿದ್ದಿಲ್ಲ ಅವನಿಗೆ. ಪ್ರಯತ್ನವೇನೋ ಇತ್ತು. ಆದರೂ, ಬಾಯಿಬಿಟ್ಟರೆ ಬಣ್ಣಗೇಡೇನೋ ಅನ್ನುವ ಕಳವಳ. ಯಾರಾದರೂ ನಕ್ಕರೆ? ಅದಕ್ಕೆ ಬರುವ ಮಾತನ್ನೂ ಆಡದೆ ಇಂಗ್ಲಿಷ್ ಮೊರೆ ಹೋಗುತ್ತಿದ್ದಿದ್ದೇ ಹೆಚ್ಚು.
ಅಷ್ಟರಲ್ಲಿ ನ್ಯಾಯ ಮಂಡಲಿಯ ಮಧ್ಯಂತರ ತೀರ್ಪು ಹೊರಬಿದ್ದಿತ್ತು. ಜನರೆ ಸಹನೆಯ ಕಟ್ಟೆಯೂ ಒಡೆದಿತ್ತೇನೋ. ಊರಿನಲ್ಲೆಲ್ಲ ಗಲಭೆಯಂತೆ. ಬಸ್ ಗಳಿಗೆ ಕಲ್ಲು ಬಿದ್ದವೆಷ್ಟೋ. ಗಾಜುಗಳು ಒಡೆದವೆಷ್ಟೋ. ರಸ್ತೆ ತಡೆಯೂ ಆಯಿತು. ಹನಿ ಹನಿ ನೀರಿಗಾಗಿ, ಬವಣೆ ಪಟ್ಟಿದ್ದ ಅವನಿಗೆ, ಈ ಗಲಭೆಗಳ ಹಿಂದೆ ಇರುವ ಆಕ್ರೋಶ ಅರ್ಥವಾಗಿತ್ತು. ಆದರೂ, ಅದು ಸರಿಯೇ ತಪ್ಪೇ? ಅಷ್ಟರಲ್ಲಿ, ಯಾರೋ ಪಾಪದವರ ಮೇಲೂ ಹಲ್ಲೆಯಾಯಿತಂತೆ. ಇದೆಲ್ಲ ಕೇಳಿದ ಇಲ್ಲಿನವರು ಸುಮ್ಮನಿರುತ್ತಾರೆಯೇ?
ಸರಿ. ಮಾರನೆ ದಿನವೇ ಇಲ್ಲಿನ್ನ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿ. ಈ ಹೋಟೆಲ್ ನ ಮೇಲೆ ದಾಳಿ. ಆ ಬೇಕರಿಯನ್ನು ಸುಟ್ಟರಂತೆ.
ರೆಸ್ಟುರಾಗಳನ್ನೂ, ಬೇಕರಿಗಳನ್ನೂ ನಡೆಸುವವರು ಎಲ್ಲಿಯವರು ಎಂಬುದು ತೆರೆದಿಟ್ಟ ಪುಸ್ತಕ. ಹೆಚ್ಚಿನ ಬೇಕರಿಯವರೋ, ಅವನ ಊರಿನ ಸುತ್ತಮುತ್ತಲವರೇ.
ಇವೆಲ್ಲ ಪತ್ರಿಕೆಗಳಲ್ಲಿ ನೋಡಿದಾಗ ಅಷ್ಟು ಮನಸ್ಸಿಗೆ ತಟ್ಟದೇ ಹೋಗಬಹುದು. ಆದರೆ, ಸುಟ್ಟುಹೋದ ಬೇಕರಿಯ ಮೇಲಿನ ಮಸಿ ಕಣ್ಣಿಗೆ ರಾಚುವಂತೆ ಕಂಡಾಗ? ಅದರಲ್ಲೂ, ಆ ಬೇಕರಿಯ ಮಾಲೀಕನೂ, ತನ್ನ ಊರಿನವನೇ ಎಂದು ನೆನ್ನೆ ಮೊನ್ನೆ ಪರಿಚಯವಾಗಿದ್ದಾಗ...? ಯೋಚನೆ ಯಾರಿಗೆ ತಾನೇ ಆಗುವುದಿಲ್ಲ?
ಈ ಯೋಚನೆಯಲ್ಲಿದ್ದಾಗಲೇ ಆಕೆ ಬಂದದ್ದು. ನೆರೆಯಾಕೆ. ಶಾಲೆಯಲ್ಲಿ ಟೀಚರ್ ಆಗಿ, ನಿವೃತ್ತಿ ಹೊಂದಿದಾಕೆ.
"ಸ್ವಲ್ಪ ಗಲಾಟೆ ನಡೆಯುತ್ತಿದೆ ಅಂತ ಕೇಳಿದೆ. ನೀನು ಊರಿಗೆ ಹೊಸಬ. ಭಾಷೆಯೂ ಬರದು. ಮಾತು ಕೇಳಿದರೆ, ಎಲ್ಲಿಯವನು ಅಂತ ಸುಲಭವಾಗಿ ತಿಳಿಯುತ್ತೆ. ಸ್ವಲ್ಪ ಜೋಪಾನವಾಗಿರಪ್ಪ. ಅಂಗಡಿ-ಪಂಗಡಿಗೆ ಹೋದಾಗ ಯಾರ ಹತ್ತಿರವೂ ಮಾತಾಡಬೇಡ. ಯಾರಾದರೂ, ಏನಾದರೂ ಕೇಳಿದರೆ, ನಮ್ಮ ಹೆಸರನ್ನೋ, ಪಕ್ಕದ ಮನೆಯವರ ಹೆಸರನ್ನೋ ಹೇಳಪ್ಪ. ಬೇಕಾದರೆ, ನಮ್ಮ ಮನೆಯವನು, ಈ ಕಡೆ ಪಕ್ಕದ ರಾಜ್ಯದವನು, ಇನ್ನೊಂದು ಭಾಷೆ ಮಾತಾಡುವವನು ಅಂತ ಹೇಳಿಬಿಡು. ನಾಕಾರು ದಿನ ಗಲಾಟೆ ಕಮ್ಮಿ ಆಗುವ ವರೆಗೂ ಆದಷ್ಟೂ ನಮ್ಮ ಮನೆಯಲ್ಲೇ ಇದ್ದುಬಿಡು."
ಆಕೆ ತೋರಿದ ಮಮತೆಗೆ ಅವನು ಬೆರಗಾದದ್ದರಲ್ಲಿ ಅಚ್ಚರಿಯೇನಿತ್ತು?
ಯಾವ ಜನ್ಮದ ಯಾವ ನಂಟೋ? ತಾಯಿ ಹತ್ತಿರದಲ್ಲಿಲ್ಲದಿದ್ದರೇನು? ತಾಯ ಭಾವವನ್ನು ಎಲ್ಲೆಲ್ಲಿ ಕಾಣಬಹುದೋ ಬಲ್ಲವರು ಯಾರು?
***
ಹದಿನೈದು ಹದಿನಾರು ವರುಷಗಳ ನಂತರ - ಮತ್ತೆ ಅದೇ ಬಗೆಯ ಒಂದು ದಿನ.
ಅದೇ ನದಿಯಲ್ಲಿ ಹರಿದು ಹೋದ ನೀರೆಷ್ಟೋ.
ಅವರನ್ನು ಒದೀಬೇಕು. ಇವರನ್ನು ಬಡೀಬೇಕು ಅಂದವರೆಷ್ಟೋ ಮಂದಿ.
ಆದರೂ, ಅವನ ಮನಸ್ಸಿನಲ್ಲಿ ಒಂದು ನಂಬಿಕೆ ಇದೆ.
ನಮ್ಮೂರಲ್ಲೂ ತಾಯಿಯರಿದ್ದಾರಲ್ಲ? ತಮ್ಮ ಅಕ್ಕ-ಪಕ್ಕದವರಿಗೆ ತೊಂದರೆಯಾಗಬಹುದು ಎಂದು ಕಂಡರೆ, ಅವರನ್ನು ಕಾಪಾಡಬಲ್ಲರು ಅವರು. ಅಲ್ಲವೇ?
ಸದ್ಯಕ್ಕೇನೋ ನಿಲುಗಡೆ ಕಂಡಿದೆ. ಮತ್ತೆ ಹತ್ತಿ ಉರಿದರೆ?
ತಾಯಂದಿರ ಮೇಲಿನ ಅವನ ನಂಬಿಕೆ ಹುಸಿಯಾಗದಿದ್ದರೆ ಸಾಕು. ಮುಗ್ಧ ಜನ ಸಾಮಾನ್ಯರಿಗೆ ತೊಂದರೆ ಆಗದಿದ್ದರೆ ಸಾಕು.
ಇಷ್ಟು ದೂರದಲ್ಲಿ ನಿಂತು, ಅವನು ಇನ್ನೇನು ತಾನೇ ಹಾರೈಸಬಲ್ಲ?
---------------------------------------------------------------------------------------
-ಹಂಸಾನಂದಿ