ಕೆರೆ
ಅದೊಂದು ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಹೆಚ್ಚುಕಡಿಮೆ ಸಮುದ್ರವೇ ಎನ್ನಬಹುದಾದಂಥ, ಆ ಪುಟ್ಟ ಹಳ್ಳಿಯನ್ನೂ ಮೀರಿಸುವಂತ ಒಂದು ಬೃಹದಾಕಾರದ ಕೆರೆ. ಅದು ಹಳ್ಳಿಯಾದರೂ ತಿರುಪತಿ ತಿಮ್ಮಪ್ಪನಿಗೆ ದಿನನಿತ್ಯ ಬರುವ ವರಮಾನಕ್ಕಿಂತ ದ್ವಿಗುಣವಾಗಿ ಸುರಿಯುವ ಹಣದ ಮಳೆ. ಕೆರೆಯ ತುಂಬಾ ತೆಪ್ಪಗಳು, ತೆಪ್ಪಗಳ ತುಂಬಾ ನಾವಿಕರು ಅಥವಾ ಬೆಸ್ತರು. ಅವರ ಕಾಲಕೆಳಗೆ ವಿಲಿವಿಲಿ ಒದ್ದಾಡುವ ಲೆಖ್ಖಕ್ಕೆ ಸಿಗದಷ್ಟು ಮೀನುಗಳು. ಆ ಬೆಸ್ತರು ಸದಾ ಕೆರೆಯೊಳಗೆ ಮನೆ ಮಾಡಿದ್ದಾರೇನೋ ಎಂಬಂತೆ ಭಾಸವಾಗುತ್ತಿತ್ತು. ಬತ್ತಲಾರದ ಕೆರೆ, ಖಾಲಿಯಾಗದ ಮೀನುಗಳು, ಸದಾ ಸುರಿಯುತ್ತಲೇ ಇರುವ ಹಣದ ಮಳೆ, ಇನ್ನೇನು ಬೇಕು ಆ ಪುಟ್ಟ ಹಳ್ಳಿಗೆ ನೆಮ್ಮದಿಯಿಂದ ಇರಲು. ಆದರೆ ಈಗ ಅಲ್ಲಿ ಬೆಸ್ತರಿಲ್ಲ, ತೆಪ್ಪಗಳಿಲ್ಲ.
* * *
ಸುಮಾರು ನೂರು ಇನ್ನೂರು ಎಕರೆಯಷ್ಟು ಸ್ಥಳದಲ್ಲಿ ಎದ್ದು ನಿಂತಿರುವ, ಆಗಸಕ್ಕೆ ಮುತ್ತಿಕ್ಕುತ್ತಿರುವಂತ ಕಟ್ಟಡಗಳು, ಸಮುಚ್ಛಯಗಳು, ಹೊಟೇಲ್, ಸಿನೆಮಾ ಥೇಟರ್‍ಗಳು, ಹತ್ತಾರು ಈಜು ಕೊಳಗಳು, ಪಬ್ ಹಾಗೂ ಡ್ಯಾನ್ಸ್ ಬಾರುಗಳು. ಸದಾ ಮದ್ದು ಗುಂಡಿನ ಮತ್ತಿನಲ್ಲಿರುವ ಗಂಡು ಮಕ್ಕಳು. ಅರೆಬೆತ್ತಲೆ ಲಲನಾಮಣಿಯರು. ಮೃತ್ಯು ಕೂಪಗಳು, ಪೊಲೀಸರ ಕೈಗಳು ಮತ್ತೂ ಹಣದ ಹೊಳೆ. ಇವಿಷ್ಟನ್ನೂ ಮೀರಿ ಇರದ ನೆಮ್ಮದಿ. ಆದರೆ ಇಲ್ಲಿರುವವರು ಸಾಫ್ಟ್‍ವೇರ್ ಇಂಜಿನಿಯರುಗಳು, ಸಿನೆಮಾ ನಟರು, ಪೊಲೀಸರು, ರಾಜಕಾರಣಿಗಳು ಮತ್ತು ಅವರ `ಕುಟುಂಬಗಳು'.
* * *
``ನಿಮ್ಮೂರಲ್ಲಿ ಹೇರಳವಾಗಿ ಹಣ ಸಂಪಾದನೆ ಮಾಡ್ತಿರೋ ಒಂದು ಕೆರೆ ಇದೆಯಂತೆ?'' ಕೇಳಿದ್ದ ವಿದೇಶಿ ವ್ಯಾಪಾರಿ.
``ಹೂಂ... ಇದೆ...'' ಎಂದ ವಿದೇಶಕ್ಕೆ ಹೋಗಿದ್ದ ಹಣಕಾಸಿನ ಸಚಿವ.
``ನಾನದನ್ನ ನೋಡಬೇಕಲ್ಲ''
``ನೋಡಿ ಏನ್ ಮಾಡ್ತೀರಿ?''
``ಎಷ್ಟು ಹಣ ಬೇಕು? ಸಂಕೋಚ ಬೇಡ ಕೇಳಿ''
ಆಗ ಹೊರಟಿತ್ತು ಇಬ್ಬರ ಮೊಗದಲ್ಲೂ ಒಂದು ಕ್ರೂರವಾದ ಮಂದಹಾಸ. ಇಬ್ಬರೂ ಗಾಜಿನ ಲೋಟಗಳಿಗೆ ವಿಸ್ಕಿ ಮತ್ತು ಸೋಡಾ ಬೆರೆಸಿಕೊಂಡು
``ಚಿಯರ್‍ಸ್'' ಎಂದಿದ್ದರು.
Comments
ಉ: ಕೆರೆ