ಶ್ವಾನ ಮಹಾಸಭೆಗೆ ಕರೆಯೋಲೆ
ನಮ್ಮದು ಬನಶಂಕರಿ ಮೂರನೆ ಹಂತದ ಶ್ವಾನ ಕ್ಷೇಮಾಭಿವೃದ್ಧಿ ಸಂಘ. ನಾವಿಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದು, ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಅದನ್ನು ವಿವರವಾಗಿ ಚರ್ಚಿಸಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲು ಈ ಸಭೆಯನ್ನು ಕರೆದಿದ್ದೇವೆ.
ಸಮಯ: ಮಧ್ಯರಾತ್ರಿ, ಎಂದರೆ ಸುಮಾರು ಹನ್ನೆರಡು ಗಂಟೆ
ಸ್ಥಳ: ಬನಶಂಕರಿ ಮೂರನೆ ಹಂತದ ಯಾವುದಾದರೊಂದು ಬೀದಿ
ಕಾರ್ಯಕ್ರಮ ವಿವರ: ಮೊಟ್ಟ ಮೊದಲಾಗಿ ನಮ್ಮ ಅತಿ ಚಿಕ್ಕ ಸದಸ್ಯರೊಬ್ಬರಿಂದ ಪ್ರಾರ್ಥನಾ ಗೀತೆ. (ಸದಸ್ಯರು ಅತಿ ಆರೋಹಣದಲ್ಲಿ ಹಾಡಿ ಪೊಲೀಸರನ್ನು ಆಕರ್ಶಿಸುವ ಪ್ರಯತ್ನ ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಏಕೆಂದರೆ ಅದು ನಮ್ಮ ಮುಂದಿನ ಕಾರ್ಯಕ್ರಮಗಳ ಮೇಲೆ ವಿರುದ್ಧ ಪರಿಣಾಮ ಬೀರಬಹುದು)
ಎರಡನೆಯದಾಗಿ ನಮ್ಮ ನಾಯಿಕರಿಂದ ಎಂದರೆ ಮಿ. ಗಡವರಿಂದ ಸ್ವಾಗತ ಭಾಷಣ. ಇವರು ಹೆಚ್ಚು ಸಮಯ ತೆಗೆದುಕೊಳ್ಳದೆ ಎಲ್ಲರನ್ನೂ ಸ್ವಾಗತಿಸುವರು. ಅಕ್ಕ ಪಕ್ಕದ ಬಡಾವಣೆಯ ಶ್ವಾನ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಗೂ ಆಹ್ವಾನವನ್ನು ಈಗಾಗಲೇ ಕಳುಹಿಸಲಾಗಿದೆ. ಅತಿ ಹೆಚ್ಚು ಸದಸ್ಯರು ಸಕಾಲಕ್ಕೆ ಆಗಮಿಸಿ ಸಭೆಗೆ ಕಳೆಯನ್ನು ತರಬೇಕೆಂದು ಪ್ರಾರ್ಥನೆ.
ಮೂರನೆಯದಾಗಿ ನಮ್ಮ ಮುಂದಿರುವ ತೊಂದರೆಗಳ ಬಗ್ಗೆ ವಿವರವಾದ ಚರ್ಚೆ, ನಿವಾರಣೆಗೆ ಸೂಕ್ತ ನಿರ್ಧಾರಗಳು. ತೊಂದರೆಗಳು -
(೧)ನಮಗೆ ನಮ್ಮದೆ ಆದ ಸ್ಥಳಾವಕಾಶವಿಲ್ಲ. ಬೆಳಗಿನ ಹೊತ್ತು ನಾವು ತಲೆ ಎತ್ತಿ ತಿರುಗಲಾಗುತ್ತಿಲ್ಲ. ರಾತ್ರಿಯಲ್ಲಿ ಪೊಲೀಸರ ಕಾಟ. ಚಿಕ್ಕವರು ದೊಡ್ಡವರೆನ್ನದೆ ನಮ್ಮ ಸದಸ್ಯರುಗಳಿಗೆ ಒದೆತ ಬೀಳುತ್ತಿರುವುದನ್ನು ನಾವುಗಳು ತೀವ್ರವಾಗಿ ಖಂಡಿಸಬೆಕು.
(೨) ಯಾವುದೇ ಭೀತಿ ಇಲ್ಲದೆ ನಡು ಮಧ್ಯಾನ್ಹದಲ್ಲಿಯೂ ಹೆಣ್ಣು ನಾಯಿ ತಲೆ ಎತ್ತಿ ತಿರುಗುವಂತಾಗಬೇಕು. ಇದಕ್ಕಾಗಿ ನಾವು ನಮ್ಮ ಬದ್ಧ ದ್ವೇಶಿಗಳಾದ ಎಸ್.ಪಿ.ಸಿ.ಎ, ಕೃಪಾ ಇತ್ಯಾದಿ ಸರಕಾರೇತರ ಸಂಸ್ಥೆಗಳ ವಿರುದ್ಧ ಹೋರಾಡಬೇಕು.
(೩) ಬಡಾವಣೆಯ ಉದ್ದಾರದ ಹೆಸರಿನಲ್ಲಿ ನಮಗೆ ಸಿಕ್ಕುತ್ತಿದ್ದ ಅನ್ನಕ್ಕೆ ಕಲ್ಲು ಹಾಕುತ್ತಿರುವುದನ್ನು ಖಂಡಿಸಬೇಕು. ಬೆಂಗಳೂರು ಮಹಾನಗರ ಪಾಲಿಕೆಯವರು ನಡೆಸುತ್ತಿರುವ ಮನೆ ಮನೆ ಬಾಗಿಲಿಂದ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯವನ್ನು ವಿರೋಧಿಸಬೇಕು. ಮನೆಯ ಹೆಂಗಸರು ಮನೆಯ ಕಸ ಕಡ್ಡಿಗಳನ್ನು ಬೀದಿ ಬದಿಯಲ್ಲಿ ಎಸೆಯಲು ಪ್ರೋತ್ಸಾಹಿಸಬೇಕು. ಮಕ್ಕಳು ಮನೆಯೊಳಗಿನ ಟಾಯ್ಲೆಟ್ಟಿಗೆ ಹೋಗದೆ ಬೀದಿ ಬದಿಯಲ್ಲಿ ತಮ್ಮ ಕೆಲಸ ಮುಗಿಸಲು ಹೆಚ್ಚು ಹೆಚ್ಚು ಪ್ರೋತ್ಸಾಹಿಸಬೇಕು. ಇದಕ್ಕೆ ಕೊಳಚೆ ಪ್ರದೇಶಗಳಲ್ಲಿ ನಮ್ಮ ಸದಸ್ಯರು ಹೆಚ್ಚು ಹೆಚ್ಚಾಗಿ ತಿರುಗಿ ಅರಿವು ಮೂಡಿಸಬೇಕು. ಮಕ್ಕಳ ಮೈ ನೆಕ್ಕಿ ಪ್ರೀತಿ ಗಳಿಸಬೇಕು.
(೪) ನಮ್ಮ ಸದಸ್ಯ ಸಂಖ್ಯೆಯ ಬೆಳವಣಿಗೆಯಾಗಬೇಕಾದರೆ, ಸಂತಾನೋತ್ಪತ್ತಿಯತ್ತ ನಮ್ಮ ಸದಸ್ಯರುಗಳು ಹೆಚ್ಚಿನ ಗಮನ ಹರಿಸಬೇಕು. ನಮ್ಮ ಸಂತಾನ ಹರಣ ನಡೆಸಿ, ಕಿವಿ ಕೊಚ್ಚುವ ಕಾರ್ಯವನ್ನು ತೀವ್ರವಾಗಿ ವಿರೋಧಿಸಬೇಕು. ಸಾಧ್ಯವಾದಲ್ಲಿ ಈ ಬಗ್ಗೆ ಸುಪ್ರೀಮ್ ಕೋರ್ಟಿಗೂ ಹೋಗುವ ತಯಾರಿ ನಡೆಸಬೇಕು.
(೫) ಇನ್ನೂ ಯಾವುದಾದರೂ ವಿಷಯವಿದ್ದರೆ, ಅಧ್ಯಕ್ಷರ ಅಪ್ಪಣೆಯ ಮೇರೆಗೆ ಚರ್ಚಿಸಬಹುದು.
ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ.