ಬಂತಿದೋ ಚುನಾವಣೆಯ ಕಾಲ.ತಂತಿದೊ ಸುಭಿಕ್ಷ(ದುರ್ಭಿಕ್ಷ) ಕಾಲ!
ಬಂತಿದೋ ಚುನಾವಣೆಯ ಕಾಲ. ಯಾರಿಗೆ ಎಂಥವರಿಗೆ ಸುಭಿಕ್ಷ ಕಾಲ...? ಇನ್ಯಾರಿಗೆ ಇನ್ನೆಂಥ ಪಾಪದ ಜನರಿಗೆ ದುರ್ಭಿಕ್ಷ ಕಾಲವೋ ಏನೋ... ನೋಡಿರಿ ನೋಡುತ್ತಿರಿ ಪಕ್ಷಗಳ ಪ್ರಣಾಳಿಕೆ!! ಇಂದು ಮೊದಲನೆಯದಾಗಿ ಪತ್ರಿಕೆಯ ಮುಖಪುಟದ ಹೆಡ್ ಲೈನ್ಸ್ ನಲ್ಲಿ ಕಾಂಗ್ರೇಸ್ ತಾನೇ ಅಧಿಕಾರಕ್ಕೆ ಬರಲೇ ಬೇಕೆಂದು ಹಠತೊಟ್ಟಂತೆ ಹಠಾತ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ! ಅದರ ಸಪ್ತ ಭರವಸೆಗಳಲ್ಲಿ ಎಂಥೆಂಥ ಅತ್ಯಮೊಲ್ಯವಾದವುಗಳು!! ೨ ಕೆ.ಜಿ. ಅಕ್ಕಿ-ತಿಂಗಳಿಗೆ ೨೫ ಕೆ.ಜಿ! ಶೇ ೩% ಬಡ್ಡಿದರದಲ್ಲಿ ಸಾಲ ಸಾಲ! ಕೊನೆಗೆ ಯಾವ ಮಗಾನೂ ತೀರಿಸ್ಬೇಕಿಲ್ಲ. ಯಾಕೆಂತಿರಾ.. ಅವರು ಉದ್ಯೋಗದ ಬಗ್ಗೆ ಅಷ್ಟೇನೂ ಚಿಂತೆ ಮಾಡ್ಬೇಕಾಗಿಲ್ಲ! ಯಾಕಂದ್ರೇ ಅವ್ರ ಭರವಸೆಗಳಲ್ಲಿ ಅತ್ಯಂತ ಗಮನಿಸಬೇಕಾದದ್ದೆಂದರೆ- ಎಸ್ಸೆಸ್ಸೆಲ್ಸಿ ಪಾಸಾದ (ಸಧ್ಯ ಅಷ್ಟಾದರೂ ವಿದ್ಯಾವಂತನಾಗಲೇ ಬೇಕು) ನಿರುದ್ಯೋಗಿ ಯುವಕರಿಗೆ ಮಾಸಿಕ ೧,೨೦೦ ರೂ. ಶಿಷ್ಯವೇತನ! ಇನ್ನು ಮುಂದೆ ನಮ್ಮ ನಾಡಿನ ಮಕ್ಕಳು ಅದರಲ್ಲೂ ಯುವಕರು ಹೆಚ್ಚು ಓದುವುದೇ ಬೇಡಾ... ಜಸ್ಟ್ ಎಸ್ಸೆಸ್ಸೆಲ್ಸಿ ಪಾಸೇ ಸಾಕು. ಬರೀ ಓಟು ಹಾಕಲಿಕ್ಕಷ್ಟೇ ಅಲ್ಲ;ರಾಜಕೀಯ ಮಾಡಲು, ವಾಹ್ !ಯುವ ಕಾರ್ಯ ಕರ್ತನಾಗಲು. (ಯವತಿಯರಿಗಿಲ್ಲ! ಪಾಪ;ಅವರೇನು ಅನ್ಯಾಯ ಮಾಡಿದ್ದಾರೋ.... ಅಥವಾ ಅವರೇ ಪುಣ್ಯವಂತರು ಬಿಡಿ,ಚೆನ್ನಾಗಿ ಓದಿಯೆ ಇಂಥ ದುರ್ಭಿಕ್ಷ ಅಲ್ಲಲ್ಲ ಸುಭಿಕ್ಷ ಕಾಲದಲ್ಲೂ ಹಠತೊಟ್ಟು ಮುಂದೆ ಬರಲೀ).
ಏನಂತೀರಿ? ನೀವೂ ನಮ್ಮ ನಾಣ್ಣುಡಿಯೊಂದನ್ನು ಕೇಳಿರಲೇ ಬೇಕಲ್ಲ...! "ನಿನಗೇನೂ ಉದ್ಯೋಗ ಮಾಡಾಕೆ ಬರದಿದ್ದರೆ, ರಾಜಕೀಯ ಮಾಡು." ಅಂತ. ಹೌದ್ಹೌದು, ಓದಾಕೆ ಆಗದಿರೇ ಹೋಗಲಿ ಬಿಡಲಾ, ಹೆಂಗೂ ನಮ್ಮ ಮನೆಗೆ ಪುಕ್ಕಟ್ಟೆ ಕಲರ್ ಟಿ.ವಿ. ಬರ್ತದೇ.. ನೀನು ಉಂಡುಂಡು ಅದರ ಮುಂದೆ ಕೂತ್ಕೋಭೋದು. ನಿಂಗೆ ನಮ್ಮ ಸರ್ಕಾರ ಕುತ್ಮಂಡೇ ತಿನ್ನೋಕೆ ಅಟೀಟೂ ತಿರುಗಾಡ್ತಾ ನಮ್ಮ ರಾಜಕಾರಣಿ ನಾಯಕರ್ಗಳಿಗೆ ಭೋ ಪರಾಕು, ಜೈ ಜೈ ಕಾರ ಮಾಡಾಕೆ ಶಿಷ್ಯವೇತನ ಕೊಡ್ತೈತೆ..! ಇನ್ನೇನು ಬೇಕಲಾ ಮಗಾ.. ಹೆಂಗಾರೆ ಮಾಡಿ ಎಸ್ಸೆಸ್ಸೆಲ್ಸಿ ಪ್ಯಾಸ್ ಮಾಡ್ಕಳ್ಲಾ...ಎಂದು ಇನ್ಮುಂದೆ ಹಳ್ಳಿಗಳಲ್ಲಿ ಹಾಗೂ ನಮ್ಮ ನಗರಗಳ ಸ್ಲಮ್ ಗಳಲ್ಲಿ ಡೈಲಾಗ್ ಕೇಳಿ ಬಂದ್ರೆ... ನಾವೂ ನೀವೂ ಯಾರೂ ಅಚ್ಚರಿ ಪಡೋದೇನಿಲ್ಲ; ಅಲ್ವರಾ...
[http://ritertimes.com/|ರೈಟರ್ ಟೈಮ್ಸ್]